ಯಕ್ಷಗಾನ ಕಲಾವಿದರ ಬಗ್ಗೆ ನಾಲಿಗೆ ಹರಿಬಿಟ್ಟ ಮಹೇಶ್ ಶೆಟ್ಟಿ ತಿಮರೋಡಿ; ಆಡಿಯೋ ಆಧರಿಸಿ ಮಹಿಳಾ ಠಾಣೆಯಲ್ಲಿ ಎಫ್‌ಐಆರ್!

Published : Apr 17, 2026, 02:30 PM IST
Mahesh Shetty Thimarodi

ಸಾರಾಂಶ

ಸಾಮಾಜಿಕ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ವಿರುದ್ಧ ಯಕ್ಷಗಾನ ಕಲಾವಿದರೊಬ್ಬರ ತಾಯಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ ಆರೋಪದ ಮೇಲೆ ಪುತ್ತೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ವೈರಲ್ ಆದ ಆಡಿಯೋ ಸಂಭಾಷಣೆಯನ್ನು ಆಧರಿಸಿ 73 ವರ್ಷದ ವೃದ್ಧೆ ದೂರು ನೀಡಲಾಗಿದೆ.

ದಕ್ಷಿಣ ಕನ್ನಡ (ಏ.17): ಸಾಮಾಜಿಕ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ವಿರುದ್ಧ ಕಾನೂನು ಕುಣಿಕೆ ಮತ್ತಷ್ಟು ಬಿಗಿಯಾದಂತಿದೆ. ಯಕ್ಷಗಾನ ಕಲಾವಿದರೊಬ್ಬರ ತಾಯಿಯ ಬಗ್ಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ ಆರೋಪದ ಮೇಲೆ ಈಗ ಪುತ್ತೂರು ಮಹಿಳಾ ಪೊಲೀಸ್ ಠಾಣೆಯಲ್ಲೂ ತಿಮರೋಡಿ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಈ ಬೆಳವಣಿಗೆಯಿಂದಾಗಿ ತಿಮರೋಡಿ ಅವರಿಗೆ ಮತ್ತೊಂದು ಸುತ್ತಿನ ಸಂಕಷ್ಟ ಎದುರಾಗಿದೆ.

ಪ್ರಕರಣದ ಹಿನ್ನೆಲೆ ಏನು?

ಬಂಟ್ವಾಳ ನಿವಾಸಿ, 73 ವರ್ಷದ ವೃದ್ಧೆ ಲೀಲಾವತಿ ಎಂಬುವವರು ನೀಡಿದ ದೂರಿನ ಮೇರೆಗೆ ಈ ಕ್ರಮ ಕೈಗೊಳ್ಳಲಾಗಿದೆ. ಲೀಲಾವತಿ ಅವರು ಯಕ್ಷಗಾನ ಕಲಾವಿದ ದಿನೇಶ್ ಶೆಟ್ಟಿಗಾರ್ ಅವರ ತಾಯಿ. ಇತ್ತೀಚೆಗೆ ಮಹೇಶ್ ಶೆಟ್ಟಿ ತಿಮರೋಡಿ ಅವರು ಮತ್ತೊಬ್ಬ ಯಕ್ಷಗಾನ ಕಲಾವಿದ ಪ್ರಜ್ವಲ್ ಎಂಬುವವರಿಗೆ ಕರೆ ಮಾಡಿ ಮಾತನಾಡಿದ್ದರು ಎನ್ನಲಾದ ಆಡಿಯೋ ತುಣುಕೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿತ್ತು. ಈ ಸಂಭಾಷಣೆಯ ವೇಳೆ ತಿಮರೋಡಿ ಅವರು ದಿನೇಶ್ ಶೆಟ್ಟಿಗಾರ್ ಹಾಗೂ ಅವರ ತಾಯಿ ಲೀಲಾವತಿ ಅವರ ಬಗ್ಗೆ ಅತ್ಯಂತ ಕೆಟ್ಟದಾಗಿ, ಅವಾಚ್ಯ ಶಬ್ದಗಳಿಂದ ನಿಂದಿಸಿ, ತೇಜೋವಧೆ ಮಾಡಿದ್ದಾರೆ ಎಂಬುದು ದೂರಿನ ಮುಖ್ಯ ಅಂಶವಾಗಿದೆ.

ಸಾಮಾಜಿಕ ಜಾಲತಾಣದಲ್ಲಿ ಆಡಿಯೋ ವೈರಲ್:

ತಿಮರೋಡಿ ಅವರು ಪ್ರಜ್ವಲ್ ಅವರೊಂದಿಗೆ ಮಾತನಾಡುತ್ತಾ ಕಲಾವಿದರ ಕುಟುಂಬದ ವಿರುದ್ಧ ಹರಿಹಾಯ್ದಿದ್ದರು. ಈ ಫೋನ್ ಕರೆಯ ಆಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದಂತೆ ಯಕ್ಷಗಾನ ಅಭಿಮಾನಿಗಳು ಹಾಗೂ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಒಬ್ಬ ಹಿರಿಯ ಮಹಿಳೆಯ ಬಗ್ಗೆ ಈ ರೀತಿ ಅವಮಾನಕಾರಿಯಾಗಿ ಮಾತನಾಡಿರುವುದು ಸರಿಯಲ್ಲ ಎಂಬ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ, ಲೀಲಾವತಿ ಅವರು ಪುತ್ತೂರು ಮಹಿಳಾ ಠಾಣೆಯ ಮೆಟ್ಟಿಲೇರಿದ್ದಾರೆ.

ದಾಖಲಾದ ಸೆಕ್ಷನ್‌ಗಳು ಯಾವುವು?

ಪುತ್ತೂರು ಮಹಿಳಾ ಠಾಣೆಯ ಪೊಲೀಸರು ಈ ದೂರನ್ನು ಗಂಭೀರವಾಗಿ ಪರಿಗಣಿಸಿ, ಭಾರತೀಯ ನ್ಯಾಯ ಸಂಹಿತೆ (BNS) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ತಿಮರೋಡಿ ವಿರುದ್ಧ ಬಿಎನ್ಎಸ್ ಸೆಕ್ಷನ್ 196(1) (ಧರ್ಮ, ಜಾತಿ, ಜನ್ಮಸ್ಥಳದ ಆಧಾರದ ಮೇಲೆ ದ್ವೇಷ ಪ್ರಚೋದನೆ), 352 (ಶಾಂತಿ ಭಂಗ ತರುವ ಉದ್ದೇಶದ ಅವಮಾನ), 351(2) (ಅಪರಾಧಿಕ ಬೆದರಿಕೆ) ಹಾಗೂ ಸೆಕ್ಷನ್ 79 (ಮಹಿಳೆಯ ಘನತೆಗೆ ಧಕ್ಕೆ ತರುವ ಪದಗಳ ಬಳಕೆ ಅಥವಾ ಸನ್ನೆ) ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.

ಸರಣಿ ಎಫ್‌ಐಆರ್ ದಾಖಲು:

ಕೇವಲ ಮಹಿಳಾ ಠಾಣೆ ಮಾತ್ರವಲ್ಲದೆ, ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲೂ ಮಹೇಶ್ ಶೆಟ್ಟಿ ತಿಮರೋಡಿ ವಿರುದ್ಧ ಇದೇ ವಿಚಾರವಾಗಿ ಮತ್ತೊಂದು ಪ್ರಕರಣ ದಾಖಲಾಗಿದೆ. ಯಕ್ಷಗಾನ ಕಲಾವಿದ ಸುಂದರ್ ರೈ ಮಂದಾರ ಅವರು ನೀಡಿದ ದೂರಿನ ಅನ್ವಯ ಅಲ್ಲಿಯೂ ಎಫ್‌ಐಆರ್ ದಾಖಲಾಗಿದೆ.

PREV
Read more Articles on
click me!

Recommended Stories

ಯಾದಗಿರಿ ಭೀಕರ ಅಪಘಾತದಲ್ಲಿ ಮೃತಪಟ್ಟವರ ಗುರುತು ಪತ್ತೆ, ರಾಯಚೂರು ಪಟ್ಟಣದ ಪಂಚಾಯತ್ ಸದಸ್ಯನ ಇಡೀ ಕುಟುಂಬ ನಾಶ!
ಈ ಆಲದ ಮರ ಕಡಿಯಲೆತ್ನಿಸಿದಾಗಲೆಲ್ಲಾ ನಡೆಯುತ್ತೆ ದುರಂತ: ಈ ಸ್ಮಶಾನದ ಗಾಳಿ ನಿಮ್ಮ ಉಸಿರು ಕಟ್ಟಿಸುತ್ತೆ: ಬೆಂಗಳೂರಿನ ಭಯಾನಕ ಸ್ಥಳಗಳಿವು