
ತುಮಕೂರು (ಜ.13): ಜಿಲ್ಲಾ ಕೇಂದ್ರದ ಮಹಾತ್ಮ ಗಾಂಧಿ ಕ್ರೀಡಾಂಗಣದ ಆವರಣದಲ್ಲಿರುವ ಒಳಾಂಗಣ ಕ್ರೀಡಾ ಸಂಕೀರ್ಣಕ್ಕೆ ಹೆಸರು ಮರುನಾಮಕರಣ ಮಾಡುವ ವಿಚಾರ ಈಗ ರಾಜಕೀಯ ಜಿದ್ದಾಜಿದ್ದಿಗೆ ಕಾರಣವಾಗಿದೆ. ರಾಷ್ಟ್ರಪಿತ ಮಹಾತ್ಮ ಗಾಂಧಿಯವರ ಹೆಸರು ತೆಗೆದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರ ಹೆಸರು ಇಡಲಾಗುತ್ತಿದೆ ಎಂದು ಆರೋಪಿಸಿ ಬಿಜೆಪಿ ಕಾರ್ಯಕರ್ತರು ಬೃಹತ್ ಪ್ರತಿಭಟನೆ ನಡೆಸಿದ್ದು, ಪೊಲೀಸರು ಅನೇಕರನ್ನು ವಶಕ್ಕೆ ಪಡೆದಿದ್ದಾರೆ.
ನಗರದ ಶಿವಕುಮಾರ ಸ್ವಾಮೀಜಿ ಸರ್ಕಲ್ ಬಳಿಯಿರುವ ಕ್ರೀಡಾಂಗಣದ ಎದುರು ಜಮಾಯಿಸಿದ ಬಿಜೆಪಿ ಕಾರ್ಯಕರ್ತರು, ಜಿಲ್ಲಾಡಳಿತದ ವಿರುದ್ಧ ಘೋಷಣೆಗಳನ್ನು ಕೂಗಿದರು. 'ಮಹಾತ್ಮ ಗಾಂಧಿಯವರ ಹೆಸರನ್ನು ಬದಲಿಸಿ ಪರಮೇಶ್ವರ್ ಅವರ ಹೆಸರು ಇಟ್ಟಿರುವುದು ಗಾಂಧೀಜಿಯವರಿಗೆ ಮಾಡಿದ ಅವಮಾನ' ಎಂದು ಆಕ್ರೋಶ ವ್ಯಕ್ತಪಡಿಸಿದರು. ಇಂದು ಮಧ್ಯಾಹ್ನ ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯು 'ಡಾ. ಜಿ. ಪರಮೇಶ್ವರ್ ಇಂಡೋರ್ ಸ್ಪೋರ್ಟ್ಸ್ ಕಾಂಪ್ಲೆಕ್ಸ್' ಎಂಬ ನಾಮಫಲಕ ಅಳವಡಿಸಿದ್ದರಿಂದ ಸಿಟ್ಟಿಗೆದ್ದ ಕಾರ್ಯಕರ್ತರು, ಬ್ಯಾರಿಕೇಡ್‌ಗಳನ್ನು ತಳ್ಳಿ ಬೋರ್ಡ್ ತೆರವುಗೊಳಿಸಲು ಯತ್ನಿಸಿದರು. ಈ ವೇಳೆ ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ಭಾರೀ ನೂಕಾಟ-ತಳ್ಳಾಟ ನಡೆಯಿತು. ಅಂತಿಮವಾಗಿ ಪೊಲೀಸರು ಎರಡು ಕೆಎಸ್ಆರ್‌ಪಿ (KSRP) ತುಕಡಿ ವಾಹನಗಳಲ್ಲಿ ಕಾರ್ಯಕರ್ತರನ್ನು ವಶಕ್ಕೆ ಪಡೆದರು.
ಮಹಾತ್ಮ ಗಾಂಧಿ ಸ್ಟೇಡಿಯಂ ಹೆಸರು ಬದಲಾವಣೆ ವಿಚಾರಕ್ಕೆ ಬಿಜೆಪಿ ಪ್ರತಿಭಟನೆ ವಿಚಾರವಾಗಿ ಗೃಹ ಸಚಿವ ಪರಮೇಶ್ವರ್ ಮಾತನಾಡಿ, ಮಹಾತ್ಮ ಗಾಂಧಿ ಸ್ಟೇಡಿಯಂ ಹೆಸರನ್ನ ಯಾರಾದರೂ ತೆಗಿತಾರೇನ್ರೀ..? ನಾವು ಮಹಾತ್ಮ ಗಾಂಧಿಯವರ ಹೆಸರು ಇರಬೇಕು ಅಂತ ನರೇಗಾ ವಿಚಾರದಲ್ಲಿ ಹೋರಾಟ ಮಾಡುತ್ತಿದ್ದೇವೆ. ಗಾಂಧಿ ಹೆಸರು ತೆಗೆಯುತ್ತಿದ್ದೇವೆ ಅಂತ ಯಾರಾದರೂ ಹುಚ್ಚರು ಹೇಳಬೇಕು ಅಷ್ಟೇ. ಅದು ಇಂಡೋರ್ ಕಾಂಪ್ಲೆಕ್ಸ್ , ಅಲ್ಲಿನ ಕ್ರೀಡಾಪಟುಗಳು ಪರಮೇಶ್ವರ್ ಅವರ ಹೆಸರಿಡಬೇಕು ಅಂತ ಪತ್ರ ಕೊಟ್ಟಿದ್ದಾರೆ. ಅದು ನನಗೆ ಗೊತ್ತಿರಲಿಲ್ಲ ಮೊನ್ನೆ ನನಗೆ ಹೇಳಿದರು. ನನಗೆ ಅದಕ್ಕೂ ಸಂಬಂಧ ಇಲ್ಲ ನೀವೇ ನೋಡಿಕೊಳ್ಳಿ ಅಂತ ಹೇಳಿದ್ದೆ ಎಂದು ಸ್ಪಷ್ಟನೆ ನೀಡಿದರು.
ಕಾರ್ಯಕರ್ತರು ನನ್ನೊಂದಿಗೆ ಈ ಬಗ್ಗೆ ಮಾತನಾಡುವಾಗ, ತುಮಕೂರಿಗೆ ಕ್ರಿಕೆಟ್ ಸ್ಟೇಡಿಯಂ ತರ್ತಾ ಇದ್ದೀರಿ. ನೀವು ಕೂಡ ಕ್ರೀಡಾಪಟು ಆಗಿದ್ದೀರಾ. ತುಮಕೂರು ಸ್ಟೇಡಿಯಂ ಅನ್ನ ನೀವೇ ಮುಂದೆ ನಿಂತು ದೊಡ್ಡ ಪ್ರಮಾಣದಲ್ಲಿ ಚೆನ್ನಾಗಿ ಮಾಡಿದ್ದೀರಿ. ಟೆನ್ನಿಸ್ ಕೋರ್ಟ್ ಮಾಡಿದ್ದೀರಾ, ಕ್ರಿಕೆಟ್ ಸ್ಟೇಡಿಯಂ ತರ್ತಿದ್ದೀರಾ. ಹಾಗಾಗಿ ನಿಮ್ಮ ಹೆಸರನ್ನ ಇಡ್ತೀವಿ ಅಂತ ಹೇಳಿದರು. ಅದಕ್ಕೆ ಬಿಜೆಪಿಯವರು ರಾಜಕೀಯ ಮಾಡಕ್ಕೆ ಹೋಗ್ತಿದ್ದಾರೆ. ಮಹಾತ್ಮ ಗಾಂಧಿ ಹೆಸರಿನ ಚೇಂಜ್ ಮಾಡೋಕೆ ಹೋಗಿದಾರೆ ಅಂತ ಹೇಳ್ತಿರೋದು ಅವರ ತಪ್ಪು ಕಲ್ಪನೆ. ನಾನ್ ಮಾಡಿರುವ ಕೆಲಸಕ್ಕೆ ಅಲ್ಲಿ ಹೆಸರು ಇಡ್ತಿವಿ ಅಂತ ಹೋಗಿದ್ದಾರೆ ಎಂದು ಹೆಸರು ಬದಲಾವಣೆಯ ಕುರಿತಾದ ಚರ್ಚೆಯ ವಿಷಯವನ್ನು ಬಹಿರಂಗಪಡಿಸಿದರು.
ಸಚಿವರು ಸ್ಪಷ್ಟನೆ ನೀಡಿದರೂ ಸಹ, ಜಿಲ್ಲಾ ಬಿಜೆಪಿ ಘಟಕವು ನಾಮಫಲಕ ತೆರವುಗೊಳಿಸುವವರೆಗೆ ಹೋರಾಟ ಮುಂದುವರಿಸುವುದಾಗಿ ಎಚ್ಚರಿಸಿದೆ. ಪ್ರಸ್ತುತ ಕ್ರೀಡಾಂಗಣದ ಸುತ್ತಮುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಮುಂದುವರಿದಿದ್ದು, ಪರಿಸ್ಥಿತಿ ಉದ್ವಿಗ್ನವಾಗಿದೆ. ಒಟ್ಟಾರೆಯಾಗಿ ತುಮಕೂರಿನಲ್ಲಿ ಈಗ 'ನೇಮ್ ಬೋರ್ಡ್ ಪಾಲಿಟಿಕ್ಸ್' ರಂಗೇರಿದೆ. ಪೊಲೀಸರು ಈಗಾಗಲೇ ಕೆಲವು ಬಿಜೆಪಿ ಕಾರ್ಯಕರ್ತರನ್ನು ವಶಕ್ಕೆ ಪಡೆದಿದ್ದಾರೆ. ಉಳಿದಂತೆ ಬಿಜೆಪಿ ಜಿಲ್ಲಾ ಘಟಕದ ನಾಯಕರು ಸುದ್ದಿಗೋಷ್ಠಿ ನಡೆಸುತ್ತಿದ್ದಾರೆ.