
ಬೆಂಗಳೂರು (ಜ.13): ಸಿಲಿಕಾನ್ ಸಿಟಿಯಲ್ಲಿ ಅಕ್ರಮವಾಗಿ ನೆಲೆಸಿರುವ ವಿದೇಶಿಯರ ಪತ್ತೆ ಹಚ್ಚುವ ಕಾರ್ಯಾಚರಣೆ ತೀವ್ರಗೊಂಡಿರುವ ಬೆನ್ನಲ್ಲೇ, 'ಜೈ ಬಾಂಗ್ಲಾ' ಎಂದು ಘೋಷಣೆ ಕೂಗಿ ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಸಿದ್ದ ಬಾಂಗ್ಲಾದೇಶದ ಮೂಲದ ಮಹಿಳೆಯನ್ನು ಹೆಬ್ಬಗೋಡಿ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಮಹಿಳೆಯನ್ನು ಶರ್ಬಾನು ಖತನ್ ಎಂದು ಗುರುತಿಸಲಾಗಿದೆ. ಈಕೆ ಎಲೆಕ್ಟ್ರಾನಿಕ್ ಸಿಟಿ ಸಮೀಪದ ಹುಲಿಮಂಗಲ ಪ್ರದೇಶದಲ್ಲಿ ವಾಸವಾಗಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.
ಇತ್ತೀಚೆಗೆ ಬೆಂಗಳೂರಿನ ಹೊರವಲಯದ ವಿವಿಧೆಡೆ ಅಕ್ರಮ ವಲಸಿಗರನ್ನು ಪತ್ತೆಹಚ್ಚಲು ಮತ್ತು ಅವರನ್ನು ತೆರವುಗೊಳಿಸಲು ಪೊಲೀಸ್ ಇಲಾಖೆ ವಿಶೇಷ ಕಾರ್ಯಾಚರಣೆ ಹಮ್ಮಿಕೊಂಡಿತ್ತು. ಹುಲಿಮಂಗಲ ವ್ಯಾಪ್ತಿಯಲ್ಲಿ ಪೊಲೀಸರು ತಪಾಸಣೆ ನಡೆಸುತ್ತಿದ್ದ ಸಂದರ್ಭದಲ್ಲಿ, ಈಕೆ ಹಠಾತ್ತಾಗಿ 'ಜೈ ಬಾಂಗ್ಲಾ' ಎಂದು ಘೋಷಣೆ ಕೂಗಿದ್ದಾಳೆ. ಈ ವರ್ತನೆಯು ಸ್ಥಳೀಯರಲ್ಲಿ ಗೊಂದಲ ಮೂಡಿಸಿದ್ದಲ್ಲದೆ, ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವ ಸಾಧ್ಯತೆ ಇತ್ತು. ತಕ್ಷಣ ಎಚ್ಚೆತ್ತುಕೊಂಡ ಹೆಬ್ಬಗೋಡಿ ಪೊಲೀಸ್ ಠಾಣೆಯ ಅಧಿಕಾರಿಗಳು ಮಹಿಳೆಯ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದರು. ಆಕೆಯ ವಾಸಸ್ಥಳದ ದಾಖಲೆಗಳನ್ನು ಪರಿಶೀಲಿಸಿದಾಗ ಆಕೆ ಅಕ್ರಮವಾಗಿ ಭಾರತಕ್ಕೆ ಪ್ರವೇಶಿಸಿರುವುದು ಮತ್ತು ಯಾವುದೇ ಅಧಿಕೃತ ದಾಖಲೆಗಳಿಲ್ಲದೆ ನಗರದಲ್ಲಿ ನೆಲೆಸಿರುವುದು ಬೆಳಕಿಗೆ ಬಂದಿದೆ.
ಬಂಧಿತ ಶರ್ಬಾನು ಖತನ್ ಅಕ್ರಮವಾಗಿ ಗಡಿ ದಾಟಿ ಬಂದಿದ್ದಾಳೋ ಅಥವಾ ನಕಲಿ ದಾಖಲೆಗಳನ್ನು ಸೃಷ್ಟಿಸಿದ್ದಾಳೋ ಎಂಬ ಬಗ್ಗೆ ಪೊಲೀಸರು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ಈಕೆಯ ಹಿಂದೆ ದೊಡ್ಡ ಜಾಲವೇನಾದರೂ ಕೆಲಸ ಮಾಡುತ್ತಿದೆಯೇ ಎಂಬ ಸಂಶಯವನ್ನೂ ಪೊಲೀಸರು ವ್ಯಕ್ತಪಡಿಸಿದ್ದಾರೆ. ಸದ್ಯ ಮಹಿಳೆಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ಹೆಬ್ಬಗೋಡಿ ಪೊಲೀಸರು ಈ ಕುರಿತು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ. ಬೆಂಗಳೂರಿನಲ್ಲಿ ಇನ್ನು ಎಷ್ಟು ಮಂದಿ ಇಂತಹ ಅಕ್ರಮ ವಲಸಿಗರಿದ್ದಾರೆ ಎಂಬ ಬಗ್ಗೆ ಶೋಧ ಕಾರ್ಯ ಚುರುಕುಗೊಂಡಿದೆ.