ಮದುವೆಯಾದ ಮಹಿಳೆ ಹುಡುಕಿಕೊಂಡು ಬಂದ ಮಹಾರಾಷ್ಟ್ರ ಯುವಕನನ್ನು ಹೊಡೆದುಕೊಂದ ಬೀದರ್ ಮಂದಿ!

Published : Oct 26, 2025, 12:03 PM IST
Maharashtra Young Man

ಸಾರಾಂಶ

ಬೀದರ್ ಜಿಲ್ಲೆಯ ಔರಾದ್ ತಾಲೂಕಿನ ನಾಗನಪಲ್ಲಿಯಲ್ಲಿ, ಅಕ್ರಮ ಸಂಬಂಧದ ಶಂಕೆಯ ಮೇಲೆ ಮಹಾರಾಷ್ಟ್ರ ಮೂಲದ ಯುವಕನನ್ನು ಮಹಿಳೆಯ ಕುಟುಂಬಸ್ಥರು ಕೊಲೆ ಮಾಡಿದ್ದಾರೆ. ಈ ಘಟನೆಯ ವಿಡಿಯೋ ವೈರಲ್ ಆಗಿದ್ದು, ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ.

ಬೀದರ್ (ಅ.26): ಅಕ್ರಮ ಸಂಬಂಧದ ಶಂಕೆ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಮೂಲದ ಯುವಕನೊಬ್ಬನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಕೊಲೆ ಮಾಡಿರುವ ಭೀಕರ ಘಟನೆ ಬೀದರ್ ಜಿಲ್ಲೆಯ ಔರಾದ್ ತಾಲೂಕಿನ ನಾಗನಪಲ್ಲಿ ಗ್ರಾಮದಲ್ಲಿ ನಡೆದಿದೆ. ಈ ಸಂಬಂಧ ಹಲ್ಲೆ ನಡೆಸಿದ ಮಹಿಳೆಯ ತಂದೆ ಮತ್ತು ಸಹೋದರನನ್ನು ಚಿಂತಾಕಿ ಪೊಲೀಸರು ಬಂಧಿಸಿದ್ದಾರೆ. ಹಲ್ಲೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಪ್ರಕರಣದ ಗಂಭೀರತೆ ಹೆಚ್ಚಿಸಿದೆ.

ಏನಿದು ಘಟನೆ?

ಮಹಾರಾಷ್ಟ್ರದ ನಾಂದೇಡ್ ಜಿಲ್ಲೆ ಗೌಣಗಾಂವ್ ಗ್ರಾಮದ ನಿವಾಸಿ ವಿಷ್ಣು (27) ಮೃತ ಯುವಕ. ವಿಷ್ಣು ಕಳೆದ ಒಂದು ವರ್ಷದಿಂದ ನಾಗನಪಲ್ಲಿ ಗ್ರಾಮದ ವಿವಾಹಿತ ಮಹಿಳೆ ಪೂಜಾ ಎಂಬುವವರೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಎನ್ನಲಾಗಿದೆ. ಅಕ್ಟೋಬರ್ 21ರಂದು ವಿಷ್ಣು ತನ್ನ ಇಬ್ಬರು ಸ್ನೇಹಿತರೊಂದಿಗೆ ಮಹಿಳೆಯ ಮನೆಗೆ ಬಂದಿದ್ದ ವೇಳೆ, ಆಕೆಯ ಕುಟುಂಬಸ್ಥರಿಂದ ಆಕ್ಷೇಪ ವ್ಯಕ್ತವಾಗಿದೆ. ಈ ಸಂದರ್ಭದಲ್ಲಿ ಮಾತಿನ ಚಕಮಕಿ ನಡೆದು, ಮಹಿಳೆಯ ತಂದೆ ಅಶೋಕ್ ಮತ್ತು ಸಹೋದರ ಗಜಾನನ ಸೇರಿ ವಿಷ್ಣುವಿನ ಕೈ-ಕಾಲುಗಳನ್ನು ಕಟ್ಟಿ ದೊಣ್ಣೆಗಳಿಂದ ಮನಬಂದಂತೆ ಬರ್ಬರ ಹಲ್ಲೆ ನಡೆಸಿದ್ದಾರೆ. ಯುವಕನನ್ನು ಕಂಬಕ್ಕೆ ಕಟ್ಟಿ ಈ ಕೃತ್ಯ ಎಸಗಲಾಗಿದೆ.

ವಿಡಿಯೋ ವೈರಲ್, ಚಿಕಿತ್ಸೆ ಫಲಿಸದೇ ಸಾವು:

ಯುವಕನ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸುತ್ತಿರುವ ದೃಶ್ಯಗಳನ್ನು ಯಾರೋ ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದು, ಈ ವಿಡಿಯೋ ಪ್ರಸ್ತುತ ವೈರಲ್ ಆಗಿದೆ. ಹಲ್ಲೆಯ ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಚಿಂತಾಕಿ ಪೊಲೀಸರು, ಗಂಭೀರವಾಗಿ ಗಾಯಗೊಂಡಿದ್ದ ವಿಷ್ಣುವನ್ನು ಚಿಕಿತ್ಸೆಗಾಗಿ ತಕ್ಷಣವೇ ಆಸ್ಪತ್ರೆಗೆ ರವಾನಿಸಿದರು. ಆದರೆ, ತೀವ್ರವಾಗಿ ಗಾಯಗೊಂಡಿದ್ದ ವಿಷ್ಣು ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲೇ ಕೊನೆಯುಸಿರೆಳೆದಿದ್ದಾನೆ.

ಕೊಲೆ ಆರೋಪ, ಪ್ರತಿದೂರು ದಾಖಲು:

ಮಗನನ್ನು ಕೊಲೆ ಮಾಡುವ ಉದ್ದೇಶದಿಂದಲೇ ಥಳಿಸಲಾಗಿದೆ ಎಂದು ಆರೋಪಿಸಿ ಮೃತ ವಿಷ್ಣು ಅವರ ತಾಯಿ ಲಕ್ಷ್ಮೀ ಅವರು ಚಿಂತಾಕಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ದೂರಿನನ್ವಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಅದೇ ಸಮಯದಲ್ಲಿ, ಅಕ್ರಮ ಸಂಬಂಧದ ಶಂಕೆ ಇರುವ ಮಹಿಳೆ ಸಹ ತನ್ನ ಕುಟುಂಬಸ್ಥರ ಪರವಾಗಿ ಚಿಂತಾಕಿ ಠಾಣೆಯಲ್ಲಿ ಪ್ರತಿದೂರು ದಾಖಲಿಸಿದ್ದಾರೆ. ಎರಡೂ ದೂರುಗಳನ್ನು ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.

ಇಬ್ಬರು ಆರೋಪಿಗಳ ಬಂಧನ

ಸದ್ಯ ಲಭ್ಯವಿರುವ ಮಾಹಿತಿ ಹಾಗೂ ಸಾಕ್ಷ್ಯಗಳ ಆಧಾರದ ಮೇಲೆ ಹಲ್ಲೆ ನಡೆಸಿ ಕೊಲೆಗೈದ ಆರೋಪದ ಮೇಲೆ ಮಹಿಳೆಯ ತಂದೆ ಅಶೋಕ್ ಮತ್ತು ಆಕೆಯ ಸಹೋದರ ಗಜಾನನ ಎಂಬ ಇಬ್ಬರನ್ನು ಚಿಂತಾಕಿ ಪೊಲೀಸರು ಬಂಧಿಸಿದ್ದಾರೆ. ಯುವಕನ ಕೊಲೆಗೆ ನಿಖರ ಕಾರಣಗಳೇನು? ಹಲ್ಲೆಗೂ ಮುನ್ನ ಸ್ನೇಹಿತರು ಎಲ್ಲಿಗೆ ಹೋದರು? ಎಂಬಿತ್ಯಾದಿ ವಿಷಯಗಳ ಕುರಿತು ಪೊಲೀಸರು ತೀವ್ರ ವಿಚಾರಣೆ ಮುಂದುವರಿಸಿದ್ದಾರೆ. ನಾಗನಪಲ್ಲಿ ಗ್ರಾಮದಲ್ಲಿ ಬಿಗಿಯಾದ ವಾತಾವರಣ ನಿರ್ಮಾಣವಾಗಿದ್ದು, ಪೊಲೀಸರು ಸೂಕ್ತ ಬಂದೋಬಸ್ತ್ ಏರ್ಪಡಿಸಿದ್ದಾರೆ.

PREV
Read more Articles on
click me!

Recommended Stories

ದಾವಣಗೆರೆ ರಾಟ್‌ವೀಲರ್ ನಾಯಿಗಳ ಡೆಡ್ಲಿ ಅಟ್ಯಾಕ್; 50ಕ್ಕೂ ಹೆಚ್ಚು ಕಡೆ ಕಚ್ಚಿಸಿಕೊಂಡ ಮಹಿಳೆ ದುರ್ಮರಣ
ಅಂಗನವಾಡಿ, ಆಶಾ ನೌಕರರ ಗೌರವಧನ ಹೆಚ್ಚಿಸಿ: ಸಂಸದ ಡಾ.ಕೆ.ಸುಧಾಕರ್‌ ಮನವಿ