
ಶಿಗ್ಗಾಂವಿ:(ಸೆ.23) ತಾಲೂಕಿನ ಬಂಕಾಪುರ ಪಟ್ಟಣದ ಬಸ್ ನಿಲ್ದಾಣ ಬಳಿ ನೆಹರೂ ಪಾರ್ಕ್ ನಲ್ಲಿ ಪ್ರತಿಷ್ಠಾಪಿಸಲಾಗಿದ್ದ ಹಿಂದೂ ಮಹಾಗಣಪತಿ ವಿಸರ್ಜನಾ ಮೆರವಣಿಗೆಯು ಸಾವಿರಾರು ಜನರ ಸಮ್ಮುಖದಲ್ಲಿ ಭಾನುವಾರ ಅದ್ಧೂರಿಯಾಗಿ ನೆರವೇರಿತು.
ಬೆಳಗ್ಗೆ 11 ಗಂಟೆಗೆ ಬಂಕಾಪುರ ಅರಳಲೆಮಠದ ರೇವಣಸಿದ್ದೇಶ್ವರ ಶ್ರೀಗಳ ನೇತೃತ್ವದಲ್ಲಿ ಕೆಂಡದಮಠದ ಬಸಯ್ಯ ಮತ್ತು ಸಿದ್ದಯ್ಯ ಶ್ರೀಗಳು ಗಣೇಶ ಮೂರ್ತಿ ವಿಸರ್ಜನಾ ಮೆರವಣಿಗೆಗೆ ಚಾಲನೆ ನೀಡಿದರು.
ಬಳಿಕ ಆಸಾರ ರಸ್ತೆ ಮೂಲಕ ಹೊರಟು ಪಟ್ಟಣದ ವಿವಿಧ ಗಲ್ಲಿಗಳ ಮೂಲಕ ಮೆರವಣಿಗೆ ಸಾಗಿತು. ಸೋಮವಾರ ಬೆಳಗ್ಗೆ ಗುಡ್ಡದಚನ್ನಾಪುರ ಕೆರೆಯಲ್ಲಿ ಮೂರ್ತಿ ವಿಸರ್ಜನೆಯೊಂದಿಗೆ ಮೆರವಣಿಗೆ ಸಂಪನ್ನಗೊಳ್ಳಲಿದೆ. ಮೆರವಣಿಗೆ ಉದ್ದಕ್ಕೂ ರಾರಾಜಿಸಿದ ಬೃಹತ್ ಗಾತ್ರದ ಕೇಸರಿ ಬಾವುಟಗಳು ಗಮನ ಸೆಳೆದವು.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಬಂಕಾಪುರ ಹಿಂದೂ ಮಹಾಗಣಪತಿ ಸಮಿತಿ ಪ್ರತಿಷ್ಠಾಪಿಸಿದ ಗಣೇಶ ಮೂರ್ತಿ ವಿಸರ್ಜನೆಯು ಪ್ರತಿ ವರ್ಷ ಅದ್ಧೂರಿಯಾಗಿ ನಡೆಯುವುದರಿಂದ ಈ ಬಾರಿಯೂ ಜಿಲ್ಲೆಯ ನಾನಾ ಭಾಗಗಳಿಂದ ಸಾವಿರಾರು ಜನರು ಆಗಮಿಸಿದ್ದರು. ಡಿಜೆ ಹಾಡಿಗೆ ಬೃಹತ್ ಗಾತ್ರದ ಕೇಸರಿ ಬಾವುಟಗಳನ್ನು ಹಿಡಿದು ಮೆರವಣಿಗೆಯಲ್ಲಿ ಯುವಕರು ಕುಣಿದು ಕುಪ್ಪಳಿಸಿ ಸಂಭ್ರಮ ಪಟ್ಟರು.
ದಾರಿ ಉದ್ದಕ್ಕೂ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಸ್ವಯಂ ಪ್ರೇರಿತರಾಗಿ ನೀರು, ಊಟ, ಉಪಾಹಾರದ ವ್ಯವಸ್ಥೆ ಕಲ್ಪಿಸಿದ್ದರು. ತಲೆಗೆ ಕೇಸರಿ ಟೋಪಿ, ಹಣೆಗೆ ಕುಂಕುಮ ತಿಲಕವಿಟ್ಟು ಡಿಜೆ ತಾಳಕ್ಕೆ ಹೆಜ್ಜೆ ಹಾಕುತ್ತಲೆ ಮುಂದೆ ಸಾಗುತ್ತಿರುವ ಯುವಕರ ದೃಶ್ಯ ಗಮನ ಸೆಳೆಯಿತು.
ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು ಮೆರವಣಿಗೆಯಲ್ಲಿ ಪಾಲ್ಗೊಂಡು ಯುವಕರಿಗೆ ಪ್ರೇರಣೆ ನೀಡಿದರು.
ಭಾರಿ ಬಂದೋಬಸ್ತ್
ಎಸ್ಪಿ ದೇವರಾಜ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ನೇತೃತ್ವದಲ್ಲಿ 7 ಡಿವೈಎಸ್ಪಿ, 23 ಸಿಪಿಐ, 44 ಪಿಎಸ್‌ಐ, 81 ಎಎಸ್‌ಐ, 841 ಪೊಲೀಸ್, 105 ಗೃಹ ರಕ್ಷಕ ದಳ, 16 ಜಿಲ್ಲಾ ಮೀಸಲು ಪಡೆ ತುಕಡಿ, 4 ಕೆಎಸ್‌ಆರ್‌ಪಿ ತುಕಡಿಗಳು ಜತೆಗೆ 5 ಪೊಲೀಸ್ ವೀಕ್ಷಣಾ ಗೋಪುರ, 3 ಸಂಚಾರಿ ವೀಕ್ಷಣಾ ಗೋಪುರ, ಎರಡು ದ್ರೋಣ ಕ್ಯಾಮೆರಾ, 3 ದಿವ್ಯ ದೃಷ್ಟಿಕ್ಯಾಮೆರಾ, 6 ಹೈವೆ ಪೆಟ್ರೋಲ್ ವಾಹನ, 6 ಇಂಟರ್‌ಸೆಪ್ಟರ್ ವಾಹನ, 4 ಕ್ಯಾಮರಾಮನ್, 40ಕ್ಕೂ ಅಧಿಕ ಸಿಸಿ ಕ್ಯಾಮೆರಾ ಸೇರಿದಂತೆ ಭಾರಿ ಬಂದೋಬಸ್ತ್ ನಿಯೋಜಿಸಲಾಗಿತ್ತು.