Lokayukta: ಸಾವಿನಲ್ಲೂ ಲಂಚದ ಆಸೆ! ಕೆಜಿಐಡಿ ಅಧಿಕಾರಿ ಕಂಬಿ ಎಣಿಸುವಂತೆ ಮಾಡಿದ ಮಹಿಳೆಯ ಧೈರ್ಯ! ಲೋಕಾಯುಕ್ತ ಬಲೆಯಲ್ಲಿ ಆಫೀಸರ್‌!

Published : Oct 05, 2026, 06:11 PM IST
Lokayukta

ಸಾರಾಂಶ

ಪೊಲೀಸ್ ಸಿಬ್ಬಂದಿಯ ಕುಟುಂಬಕ್ಕೆ ಬರಬೇಕಾಗಿದ್ದ ವಿಮಾ (KGID) ಹಣ ಬಿಡುಗಡೆ ಮಾಡಲು ಭಾರಿ ಪ್ರಮಾಣದ ಲಂಚಕ್ಕೆ ಬೇಡಿಕೆಯಿಟ್ಟಿದ್ದ ಜಿಲ್ಲಾ ವಿಮಾ ಅಧಿಕಾರಿಯೊಬ್ಬರು ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿರುವ ಘಟನೆ ಮಡಿಕೇರಿಯಲ್ಲಿ ನಡೆದಿದೆ.

ಮಡಿಕೇರಿ; ಸೇವೆ ಸಲ್ಲಿಸಿ ಮೃತಪಟ್ಟ ಪೊಲೀಸ್ ಸಿಬ್ಬಂದಿಯ ಕುಟುಂಬಕ್ಕೆ ಬರಬೇಕಾಗಿದ್ದ ವಿಮಾ (KGID) ಹಣ ಬಿಡುಗಡೆ ಮಾಡಲು ಭಾರಿ ಪ್ರಮಾಣದ ಲಂಚಕ್ಕೆ ಬೇಡಿಕೆಯಿಟ್ಟಿದ್ದ ಜಿಲ್ಲಾ ವಿಮಾ ಅಧಿಕಾರಿಯೊಬ್ಬರು ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿರುವ ಘಟನೆ ಮಡಿಕೇರಿಯಲ್ಲಿ ನಡೆದಿದೆ. ಮಡಿಕೇರಿಯ ಮಹದೇವಪೇಟೆಯಲ್ಲಿರುವ ಜಿಲ್ಲಾ ವಿಮಾ (KGID) ಕಚೇರಿಯ ಜಿಲ್ಲಾ ವಿಮಾ ಅಧಿಕಾರಿ ಹೇಮಕುಮಾರ್ ಎಂಬವರೇ ಬರೋಬ್ಬರಿ 25,000 ರೂಪಾಯಿ ಲಂಚ ಪಡೆಯುತ್ತಿದ್ದಾಗ ಲೋಕಾಯುಕ್ತ ಪೊಲೀಸರಿಗೆ ರೆಡ್‌ಹ್ಯಾಂಡ್‌ ಆಗಿ ಸಿಕ್ಕಿಬಿದ್ದು ಕಂಬಿ ಎಣಿಸುತ್ತಿರುವ ಭ್ರಷ್ಟ ಅಧಿಕಾರಿಯಾಗಿದ್ದಾರೆ.

ಘಟನೆಯ ವಿವರ!

ಮೃತಪಟ್ಟ ಪೊಲೀಸ್ ಪೇದೆಯೊಬ್ಬರ ಕರ್ನಾಟಕ ಸರ್ಕಾರಿ ನೌಕರರ ವಿಮೆ (KGID) ಹಣವನ್ನು ನಿಯಮಾವಳಿಗಳ ಪ್ರಕಾರ ಅವರ ವಾರಸುದಾರರಿಗೆ ಬಿಡುಗಡೆ ಮಾಡಬೇಕಾಗಿತ್ತು. ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ ವಿಮಾ ಮೊತ್ತವನ್ನು ನೀಡಲು ಜಿಲ್ಲಾ ವಿಮಾ ಅಧಿಕಾರಿ ಹೇಮಕುಮಾರ್ ಅವರು ಮೃತ ಪೇದೆಯ ಕುಟುಂಬಸ್ಥರಾದ ರೋಹಿಣಿ ಎಂಬವರಿಂದ ಲಂಚಕ್ಕೆ ಬೇಡಿಕೆ ಇಟ್ಟಿದ್ದರು.

ಸವಿಸ್ತಾರವಾಗಿ ದೂರು ನೀಡಿದ ರೋಹಿನಿ!

ಹಣ ನೀಡದೆ ವಿಮಾ ಮೊತ್ತ ಬಿಡುಗಡೆ ಮಾಡಲು ಸಾಧ್ಯವಿಲ್ಲ ಎಂದು ಅಧಿಕಾರಿ ಸತಾಯಿಸುತ್ತಿದ್ದ ಹಿನ್ನೆಲೆಯಲ್ಲಿ, ನೊಂದ ರೋಹಿಣಿ ಅವರು ಭ್ರಷ್ಟಾಚಾರದ ವಿರುದ್ಧ ಧ್ವನಿ ಎತ್ತಲು ನಿರ್ಧರಿಸಿದರು. ತಕ್ಷಣವೇ ಅವರು ಮಡಿಕೇರಿ ಲೋಕಾಯುಕ್ತ ಪೊಲೀಸ್ ಠಾಣೆಗೆ ತೆರಳಿ ಅಧಿಕಾರಿ ಹೇಮಕುಮಾರ್ ಅವರ ಲಂಚದ ಬೇಡಿಕೆ ಕುರಿತು ಸವಿಸ್ತಾರವಾಗಿ ದೂರು ನೀಡಿದ್ದರು.

ಮಿಂಚಿನ ದಾಳಿ ನಡೆಸಿದ ಲೋಕಾಯುಕ್ತ ಪಡೆ!

ದೂರು ದಾಖಲಿಸಿಕೊಂಡ ಲೋಕಾಯುಕ್ತ ಪೊಲೀಸರು, ಭ್ರಷ್ಟ ಅಧಿಕಾರಿಯನ್ನು ಕಾಯ್ದೆಯಡಿ ಹಿಡಿಯಲು ಪಕ್ಕಾ ಯೋಜನೆ ರೂಪಿಸಿದರು. ಯೋಜನೆಯಂತೆ ರೋಹಿಣಿ ಅವರು ಸೋಮವಾರ ಮಹದೇವಪೇಟೆಯಲ್ಲಿರುವ ಜಿಲ್ಲಾ ವಿಮಾ ಕಚೇರಿಯಲ್ಲಿ ಅಧಿಕಾರಿ ಹೇಮಕುಮಾರ್ ಅವರಿಗೆ ₹25,000 ಲಂಚದ ಹಣವನ್ನು ನೀಡುತ್ತಿದ್ದರು. ಅದೇ ಸಮಯದಲ್ಲಿ ಲೋಕಾಯುಕ್ತ ಡಿವೈಎಸ್ಪಿ ದಿನಕರ್ ಶೆಟ್ಟಿ ಅವರ ನೇತೃತ್ವದಲ್ಲಿ ಕಾಯುತ್ತಿದ್ದ ಲೋಕಾಯುಕ್ತ ಸಿಬ್ಬಂದಿ ಕಚೇರಿಯ ಮೇಲೆ ದಿಢೀರ್ ದಾಳಿ ನಡೆಸಿದರು. ಲಂಚದ ಹಣವನ್ನು ಸ್ವೀಕರಿಸುತ್ತಿದ್ದಂತೆಯೇ ಹೇಮಕುಮಾರ್ ಅವರನ್ನು ರೆಡ್‌ಹ್ಯಾಂಡ್‌ ಆಗಿ ವಶಕ್ಕೆ ಪಡೆದರು.

ತನಿಖೆ ತೀವ್ರಗೊಳಿಸಿದ ಪೊಲೀಸರು!

ದಾಳಿಯ ವೇಳೆ ಲಂಚದ ಹಣವನ್ನು ಜಪ್ತಿ ಮಾಡಿರುವ ಲೋಕಾಯುಕ್ತ ಪೊಲೀಸರು, ಅಧಿಕಾರಿ ಹೇಮಕುಮಾರ್ ಅವರನ್ನು ಬಂಧಿಸಿ ತನಿಖೆಗೆ ಒಳಪಡಿಸಿದ್ದಾರೆ. ಕಚೇರಿಯಲ್ಲಿದ್ದ ಸಂಬಂಧಪಟ್ಟ ಕಡತಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಅಧಿಕಾರಿ ಹಿಂದೆ ಕೂಡ ಇತರ ಸಾರ್ವಜನಿಕರು ಹಾಗೂ ಸರ್ಕಾರಿ ನೌಕರರ ಕುಟುಂಬಗಳಿಂದ ಇದೇ ರೀತಿ ಲಂಚ ಪಡೆದಿದ್ದಾರೆಯೇ ಎಂಬ ಕೋನದಲ್ಲೂ ತನಿಖೆ ಮುಂದುವರಿದಿದೆ. ಕರ್ತವ್ಯದಲ್ಲಿದ್ದಾಗ ಮೃತಪಟ್ಟ ನೌಕರನ ಕುಟುಂಬಕ್ಕೆ ನೆರವಾಗಬೇಕಿದ್ದ ಅಧಿಕಾರಿಯೇ ಈ ರೀತಿ ಲಂಚಕ್ಕೆ ಬೇಡಿಕೆಯಿಟ್ಟು ಸಿಕ್ಕಿಬಿದ್ದಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಧೈರ್ಯವಾಗಿ ದೂರು ನೀಡಿ ಭ್ರಷ್ಟ ಅಧಿಕಾರಿಯನ್ನು ಕಂಬಿ ಎಣಿಸುವಂತೆ ಮಾಡಿದ ರೋಹಿಣಿ ಅವರ ನಡೆಗೆ ಸಾರ್ವಜನಿಕರಿಂದ ಶ್ಲಾಘನೆ ವ್ಯಕ್ತವಾಗಿದೆ.

PREV
Read more Articles on
click me!

Recommended Stories

ಮೈಸೂರು ದಸರಾ ಆಗಮಿಸುವ ಜನರಿಗೆ ಗುಡ್ ನ್ಯೂಸ್, ವಾಯುಪಡೆಯ ಏರೋಬ್ಯಾಟಿಕ್ ಶೋಗೆ ಗ್ರೀನ್ ಸಿಗ್ನಲ್
ಮಂಗಳೂರು-ಮಡ್ಗಾಂವ್ ರೈಲು ವೇಳಾಪಟ್ಟಿ ದಿಡೀರ್ ಬದಲಾವಣೆ, ಸೇವೆಗಳು ಭಾಗಶಃ ರದ್ದು, ಇಲ್ಲಿದೆ ಮಾಹಿತಿ