ಮಡಿಕೇರಿ (ಆ.12): ಇಲ್ಲಿನ ಮದೆನಾಡು ಭಾಗದಲ್ಲಿ ಮತ್ತೆ ಭೂಮಿ ಬಾಯ್ತೆರೆದಿದ್ದು, ಸ್ಥಳೀಯರಲ್ಲಿ ಮತ್ತೆ ಆತಂಕ ಮೂಡುವಂತೆ ಮಾಡಿದೆ. ಕಾರ್ತೋಜಿ ಎಂಬಲ್ಲಿ ಹತ್ತಾರು ಮೀಟರ್ ಉದ್ದ ಭೂಮಿ ಬಿರುಕು ಬಿಟ್ಟಿದ್ದು, ಮನೆಯೊಂದಕ್ಕೆ ಹಾನಿಯಾಗಿದೆ.
ಎರಡು ವಾರದ ಹಿಂದೆ ಮಡಿಕೇರಿ-ಮಂಗಳೂರು ಹೆದ್ದಾರಿ ಬದಿ ಭೂಕುಸಿತವಾಗಿತ್ತು. ಇದೀಗ ಅದರ ಮೇಲ್ಭಾಗದ ಗುಡ್ಡದಲ್ಲಿ ಈ ಬಿರುಕು ಕಾಣಿಸಿಕೊಂಡಿದೆ. ಖಾದರ್ ಎಂಬವರ ಮನೆಯ ಗೋಡೆಯಲ್ಲಿ ಬಿರುಕು ಕಾಣಿಸಿದ್ದು, ಅಪಾಯದ ಆತಂಕದಿಂದ ಇಲ್ಲಿನ ನಿವಾಸಿಗಳು ಮನೆ ಖಾಲಿ ಮಾಡಿದ್ದಾರೆ. ಮಳೆ ಕಡಿಮೆ ಇದ್ದರೂ ಭೂಮಿ ಬಿರುಕಿನಿಂದ ಆತಂಕ ಉಂಟಾಗಿದೆ.
ಕೊಡಗಿನಲ್ಲಿ ಮಳೆಯಬ್ಬರ : ಧರೆ ಕುಸಿತ
2018ರಿಂದೀಚೆಗೆ ಮದೆನಾಡು ವ್ಯಾಪ್ತಿಯ ಹಲವು ಕಡೆ ಭೂಕುಸಿತವಾಗಿತ್ತು. ಇದೀಗ ಮತ್ತೆ ಬಿರುಕು ಕಾಣಿಸಿಕೊಂಡಿರುವುದು ಸ್ಥಳೀಯರ ನಿದ್ದೆಗೆಡಿಸಿದೆ. ಸದ್ಯ ಬಿರುಕಿನಿಂದ ಆತಂಕಗೊಂಡ ನಿವಾಸಿಗಳು ಸಂಬಂಧಿಕರ ಮನೆಗೆ ಸ್ಥಳಾಂತರಗೊಂಡಿದ್ದಾರೆ. ಪ್ರತಿ ಮಳೆಗಾಲದಲ್ಲೂ ಇಲ್ಲಿನ ಐದು ಕುಟುಂಬಗಳು ಅಪಾಯದ ಭೀತಿಯಲ್ಲಿ ದಿನದೂಡುವಂತಾಗಿದೆ. ಪರ್ಯಾಯ ವಸತಿ ವ್ಯವಸ್ಥೆಗೆ ಮನವಿ ಮಾಡಿದ್ದರೂ ಸ್ಪಂದನೆ ಸಿಕ್ಕಿಲ್ಲ. ಈ ಭಾಗದಲ್ಲಿ ಹಿಂದೆ ಕೂಡಾ ಸಣ್ಣ ಬಿರುಕು ಕಾಣಿಸಿಕೊಂಡು ಬಳಿಕ ಭೂಕುಸಿತವಾಗಿತ್ತು.