
ಶಿವಮೊಗ್ಗ: ಏಕವಚನದಲ್ಲಿ ಮಾತನಾಡುವುದಕ್ಕೆ ನಮಗೂ ಬರುತ್ತದೆ. ಆದರೆ ಸಾರ್ವಜನಿಕ ಜೀವನದಲ್ಲಿದ್ದಾಗ ಯಾರನ್ನು ಹೇಗೆ ಟೀಕಿಸಬೇಕೆನ್ನುವ ಅರಿವು ಜನಪ್ರತಿನಿಧಿಗಳಾದವರಿಗೆ ಇರಬೇಕೆಂದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರನ್ನು ಏಕವಚನದಲ್ಲಿ ಟೀಕಿಸಿದ ಸಂಸದ ಬಿ.ವೈ.ರಾಘವೇಂದ್ರ ಅವರ ವಿರುದ್ಧ ಶಾಸಕ ಗೋಪಾಲಕೃಷ್ಣ ಬೇಳೂರು ಕಿಡಿಕಾರಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಮೂರ್ನಾಲ್ಕು ದಿನಗಳ ಹಿಂದೆ ಸಂಸದರು, ಶಿಕಾರಿಪುರದಲ್ಲಿ ಮಾತನಾಡಿ, ತಾವೇ ವೀರ, ಧೀರ ಎನ್ನುವಂತೆ ಪೋಸು ಕೊಟ್ಟಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರನ್ನು ಏಕವಚನದಲ್ಲಿ ಟೀಕಿಸಿದ್ದಾರೆ.
ಈ ತರಹದ ವೀರಾವೇಷದ ಮಾತುಗಳನ್ನಾಡುವುದಕ್ಕೆ ನಮಗೂ ಬರುತ್ತದೆ. ಆದರೆ, ಸಾರ್ವಜನಿಕ ಕ್ಷೇತ್ರದಲ್ಲಿರುವವರು ಜವಾಬ್ದಾರಿಯಿಂದ ನಡೆದುಕೊಳ್ಳಬೇಕೆನ್ನುವ ಅರಿವಿರಬೇಕೆಂದು ಕುಟಕಿದರು.
ಮಧು ಬಂಗಾರಪ್ಪ ಅವರಿಗೆ ಈ ಬಾರಿ ಸೊರಬದಲ್ಲಿ ಗೆದ್ದು ಬಾ ಎಂದು ಸಂಸದರು ಸವಾಲು ಹಾಕಿದ್ದಾರೆ. ಈ ಬಾರಿ ಶಿಕಾರಿಪುರದಲ್ಲಿ ಅವರ ಸಹೋದರ ಗೆಲ್ಲುವುದರ ಬಗ್ಗೆಯೇ ಅವರು ಮೊದಲು ನೋಡಿಕೊಳ್ಳಲಿ. ಕಳೆದ ಲೋಕಸಭಾ ಚುನಾವಣೆಯಲ್ಲಿ ಕುಮಾರ ಬಂಗಾರಪ್ಪ ಅವರಿಗೆ ಕಾಂಗ್ರೆಸ್ ಟಿಕೆಟ್ ಕೊಟ್ಟಿದ್ದರೆ ಇವರೆಲ್ಲಿ ಇರುತ್ತಿದ್ದರು? ಕೆಲವು ತಾಂತ್ರಿಕ ಕಾರಣಕ್ಕೆ ಕಾಂಗ್ರೆಸ್ ಅಭ್ಯರ್ಥಿಗೆ ಸೋಲಾಯಿತು. ಮುಂದೆ ಇದು ನಡೆಯಲ್ಲ ಎಂದು ಹರಿಹಾಯ್ದರು.
ರಾಜ್ಯದಲ್ಲಿ ಮಳೆಯ ಕೊರತೆಯಿಂದ ಕೃಷಿ ಕ್ಷೇತ್ರಕ್ಕೆ ತೀವ್ರ ಹೊಡೆತ ಬಿದ್ದಿದೆ. ಮಳೆ ಆಶ್ರಿತ ಪ್ರದೇಶಗಳಾಗಿ ಹಲವು ತಾಲೂಕುಗಳನ್ನು ಘೋಷಿಸಲಾಗಿದ್ದು, ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ರೈತರಿಗೆ ಅಗತ್ಯ ಆರ್ಥಿಕ ನೆರವು ಒದಗಿಸುವುದು ಸರ್ಕಾರದ ಜವಾಬ್ದಾರಿಯಾಗಿದೆ ಎಂದು ತಿಳಿಸಿದರು.
ಕಸ್ತೂರಿ ರಂಗನ್ ವರದಿ ಕುರಿತು ಅಧಿವೇಶನದಲ್ಲಿ ಸಮಗ್ರವಾಗಿ ಚರ್ಚಿಸಲಾಗಿದೆ. ಕೇಂದ್ರಕ್ಕೆ ಸರ್ವ ಪಕ್ಷ ನಿಯೋಗ ತೆಗೆದುಕೊಂಡು ಹೋಗಲು ನಿರ್ಧರಿಸಲಾಗಿದೆ. ಹಾಗೆಯೇ ವರದಿ ತಿರಸ್ಕಾರಕ್ಕೆ ಸರ್ವಾನುಮತದಿಂದ ನಿರ್ಣಯ ಕೈಗೊಳ್ಳಲಾಗಿದೆ. ಈ ವಿಚಾರದಲ್ಲಿ ಬಿಜೆಪಿ ನಾಯಕರ ಹೊಣೆಗಾರಿಕೆಯೂ ಇದೆ. ಕೇಂದ್ರದ ತಮ್ಮದೇ ಸರ್ಕಾರಕ್ಕೆ ಮನವರಿಕೆ ಮಾಡಿಕೊಡ ಬೇಕಿದೆ. ಆ ಮೂಲಕ ಕಸ್ತೂರಿ ರಂಗನ್ ವರದಿ ವಿಚಾರದಲ್ಲಿ ತಮ್ಮ ನಿಲುವು ಸ್ಪಷ್ಟಪಡಿಸಬೇಕಿದೆ ಎಂದು ಒತ್ತಾಯಿಸಿದರು.
ಕಾಂಗ್ರೆಸ್ ಮುಖಂಡ ಎಚ್.ಎಸ್.ಸುಂದರೇಶ್ ಅವರ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಬೇಳೂರು ಗೋಪಾಲಕೃಷ್ಣ ಅವರು ಜಿಲ್ಲಾಧ್ಯಕ್ಷ ಸ್ಥಾನ ಸಿಗಲಿಲ್ಲ ಎಂಬ ಬೇಸರದಿಂದ ಈ ರೀತಿ ಮಾತನಾಡಿರಬಹುದು. ಅವರ ಆರೋಗ್ಯದಲ್ಲೂ ಏರುಪೇರಾಗಿದೆ. ಏನೇ ಇದ್ದರೂ ಯಾರೂ ಕೂಡ ನೇರವಾಗಿ ಪಕ್ಷದ ವಿರುದ್ಧ ಮಾತನಾಡಬಾರದು ಎಂದು ಕಿವಿಮಾತು ಹೇಳಿದರು.
ಬಿ.ವೈ.ರಾಘವೇಂದ್ರ ಅವರ ಕುಟುಂಬದ ರಾಜಕೀಯ ಹಿನ್ನೆಲೆಯನ್ನು ನನ್ನ ರಾಜಕೀಯ ಜೀವನದಿಂದಲೂ ಗಮನಿಸಿಕೊಂಡು ಬಂದಿದ್ದೇನೆ. ಅವರು ಯಾರೆಲ್ಲರಿಗೆ ಹೇಗೆ ಮಾತನಾಡಿದ್ದಾರೆಂಬುದು ಗೊತ್ತಿದೆ. ವೈಯಕ್ತಿಕ ದ್ವೇಷಕ್ಕಿಂತ ಜನರ ಸಮಸ್ಯೆಗಳು ಮತ್ತು ರೈತರ ಹಿತವೇ ಮುಖ್ಯ. ರಾಜಕೀಯ ಭಿನ್ನಾಭಿಪ್ರಾಯಗಳಿದ್ದರೂ ಜನರ ಸಮಸ್ಯೆಗಳ ವಿಚಾರದಲ್ಲಿ ಎಲ್ಲರೂ ಒಟ್ಟಾಗಿ ಧ್ವನಿ ಎತ್ತಬೇಕು.
-ಗೋಪಾಲಕೃಷ್ಣ ಬೇಳೂರು, ಶಾಸಕ.