'ಜೆಡಿಎಸ್‌ನಲ್ಲಿ ನಿಷ್ಠಾವಂತರಿಗೆ ಕಡೆಗಣನೆ'

By Kannadaprabha NewsFirst Published Dec 25, 2020, 2:49 PM IST
Highlights

ಕುಟುಂಬ ರಾಜಕಾರಣಕ್ಕೆ ಒತ್ತು, ಆರೋಪ| ಜೆಡಿ​ಎಸ್‌ ತೊರೆದು ಕಾಂಗ್ರೆಸ್‌ ಸೇರಿದ ಲಿಂಗಪ್ಪ ದಢೇಸುಗೂರು| ಜೆಡಿಎಸ್‌ ಪಕ್ಷವನ್ನು ಸರ್ವನಾಶ ಮಾಡಿ, ಕೊನೆ ಘಟ್ಟದಲ್ಲಿ ಬಿಜೆಪಿ ಸೇರ್ಪಡೆ ಆಗಲಿದ್ದಾರೆ: ಲಿಂಗಪ್ಪ ದಢೇಸುಗೂರು| 

ಸಿಂಧನೂರು(ಡಿ.25): ಜೆಡಿಎಸ್‌ ಪಕ್ಷದಲ್ಲಿ ನಿಷ್ಠಾವಂತ ಕಾರ್ಯಕರ್ತರನ್ನು ಶಾಸಕ ವೆಂಕಟರಾವ್‌ ನಾಡಗೌಡ ಕಡೆಗಣಿಸಿ ಕುಟುಂಬ ರಾಜಕಾರಣಕ್ಕೆ ಒತ್ತು ನೀಡಿದ್ದಾರೆ ಎಂದು ಜೆಡಿಎಸ್‌ ತಾಲೂಕು ಘಟಕದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿ ಕಾಂಗ್ರೆಸ್‌ ಪಕ್ಷಕ್ಕೆ ಸೇರ್ಪಡೆಯಾಗಿರುವ ಎಂ.ಲಿಂಗಪ್ಪ ದಢೇಸುಗೂರು ಆರೋಪಿಸಿದರು.

ಮಾಜಿ ಶಾಸಕ ಹಂಪನಗೌಡ ಬಾದರ್ಲಿ ನಿವಾಸದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 2006-07 ರಲ್ಲಿ ನಾಡಗೌಡರೊಂದಿಗೆ ತಾವು ಜೆಡಿಎಸ್‌ ಪಕ್ಷ ಸೇರಿದೆವು. ಆಗ ಸಿಂಧನೂರಿನಲ್ಲಿ ಎಷ್ಟು ವಾರ್ಡುಗಳಿವೆ, ಅವು ಎಲ್ಲಿ ಬರುತ್ತವೆ ಎಂಬ ಅರಿವು ನಾಡಗೌಡರಿಗೆ ಇರಲಿಲ್ಲ. ತಾವು ಹಳ್ಳಿ ಹಳ್ಳಿಗೆ ಕರೆದುಕೊಂಡು ಹೋಗಿ ಅನೇಕ ಮುಖಂಡರು, ಕಾರ್ಯಕರ್ತರನ್ನು ಜೆಡಿಎಸ್‌ಗೆ ಸೇರ್ಪಡಿಸಿ ಪಕ್ಷ ಸಂಘಟಿಸಿದ್ದೇನೆ. 2008 ರಲ್ಲಿ ಕೆಲವರ ಹಿಂಬದಿಯ ಬೆಂಬಲದಿಂದ ಶಾಸಕರಾದರು. 2018 ರಲ್ಲಿ ನೀರಿನ ರಾಜಕೀಯದ ದೊಂಬರಾಟದಿಂದ ಶಾಸಕರಾಗಿ, ಮಂತ್ರಿಯಾದರು. ಇದರಿಂದ ಪಕ್ಷದಲ್ಲಿ ದುಡಿದ ತನ್ನಂಥ ಅನೇಕ ನಿಷ್ಠಾವಂತರಿಗೆ ಉನ್ನತ ಸ್ಥಾನಮಾನಗಳು ದೊರೆಯುತ್ತವೆಂಬ ನಿರೀಕ್ಷೆಗಳಿದ್ದವು. ಅವೆಲ್ಲವೂ ಹುಸಿಯಾಗಿದ್ದು, ಪಕ್ಷಕ್ಕೆ ಹೊಸದಾಗಿ ಬಂದವರನ್ನು ನಾಮನಿರ್ದೇಶನ ಮಾಡಿದರೆ ಹೊರತು, ಪಕ್ಷದ ಮೂಲ ಕಾರ್ಯಕರ್ತರನ್ನು ಕಡೆಗಣಿಸಿದರು. ಅವರ ಇಂಥಹ ವರ್ತನೆಯನ್ನು ಖಂಡಿಸಿಯೇ ಅವರು ಮಂತ್ರಿಯಿದ್ದಾಗ್ಯೂ ಜಿಪಂ ಸದಸ್ಯ ಎನ್‌.ಶಿವನಗೌಡ ಗೊರೇಬಾಳ, ಸಾಯಿರಾಮಕೃಷ್ಣ ಪಕ್ಷ ತೊರೆದಿದ್ದಾರೆ ಎಂದು ಟೀಕಿಸಿದರು.

ಅಂಕಲಿಮಠಕ್ಕೆ ಸಿದ್ದರಾಮಯ್ಯ ಭೇಟಿ: ಅಡವೀಶ ನಿರುಪಾಧೀಶ್ವರರ ಗದ್ದುಗೆ ದರ್ಶನ ಪಡೆದ ಮಾಜಿ ಸಿಎಂ

ಈಗಾಗಲೇ ಬಿಜೆಪಿ ಪಕ್ಷ ಸೇರುವ ಬಗ್ಗೆ ಮಾತುಕತೆ ನಡೆಸಿದ್ದಾರೆ. ಅದಕ್ಕಾಗಿಯೇ ಜೆಡಿಎಸ್‌ ಪಕ್ಷವನ್ನು ಸರ್ವನಾಶ ಮಾಡಿ, ಕೊನೆ ಘಟ್ಟದಲ್ಲಿ ಬಿಜೆಪಿ ಸೇರ್ಪಡೆ ಆಗಲಿದ್ದಾರೆ. ಇದಕ್ಕೆ ಪೂರಕ ಎಂಬಂತೆ ಬಂಗಾಲಿ ಕ್ಯಾಂಪ್‌ಗಳಲ್ಲಿ ಚಂದ್ರಭೂಪಾಲ ನಾಡಗೌಡ ಕೇಸರಿ ಶಾಲು ಹಾಕಿಕೊಂಡು ಗ್ರಾಪಂ ಚುನಾವಣೆ ಪ್ರಚಾರ ನಡೆಸಿದ್ದಾರೆ. ತಾಲೂಕಿನ 636 ಗ್ರಾಪಂ ಅಭ್ಯರ್ಥಿಗಳಲ್ಲಿ ಹಲವಾರು ಕಡೆ ಜೆಡಿಎಸ್‌ ಬೆಂಬಲಿತ ಅಭ್ಯರ್ಥಿಗಳೇ ಇಲ್ಲ. ನಿಜಕ್ಕೂ ಜೆಡಿಎಸ್‌ ಬಗ್ಗೆ ಅಭಿಮಾನವಿದ್ದರೆ ಎಲ್ಲ ಕಡೆಗೂ ಅಭ್ಯರ್ಥಿಗಳನ್ನು ಸ್ಪರ್ಧಿಸಲು ಅವಕಾಶ ನೀಡುತ್ತಿದ್ದರು ಎಂದರು. ಪಕ್ಷದ ಮುಖಂಡರು, ಕಾರ್ಯಕರ್ತರು ಇದ್ದರು.
 

click me!