ಮೈಸೂರು ದಸರಾ ಮಾದರಿಯಲ್ಲಿ ಗವಿಮಠ ಜಾತ್ರೆ?

By Kannadaprabha News  |  First Published Dec 25, 2020, 1:16 PM IST

ಸರಳವಾಗಿ ದಸರಾ, ಧರ್ಮಸ್ಥಳದಲ್ಲಿ ಲಕ್ಷ ದೀಪೋತ್ಸವವೂ ನಡೆದಿದೆ| ಇದೇ ಮಾದರಿ ಅನುಸರಿಸಿ ಜಾತ್ರೆ ಆಚರಣೆಗೆ ಚಿಂತನೆ| ಸುಮಾರು 200 ವರ್ಷಗಳಿಂದ ನಡೆದುಕೊಂಡು ಬಂದಿರುವ ಆಚರಣೆಗೆ ಬ್ರೇಕ್‌ ಹಾಕುವ ಬದಲು ಅದನ್ನು ಮುಂದುವರಿಸಿಕೊಂಡು ಹೋಗುವುದು ಸೂಕ್ತ| 


ಸೋಮರಡ್ಡಿ ಅಳವಂಡಿ

ಕೊಪ್ಪಳ(ಡಿ.25): ದಕ್ಷಿಣ ಭಾರತದ ಕುಂಭಮೇಳ ಖ್ಯಾತಿಯ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವದ ಮೇಲೆ ಕೋವಿಡ್‌ ಕರಿನೆರಳು ಬಿದ್ದಿದ್ದು, ಆಚರಣೆಯ ಕುರಿತು ಪರ- ವಿರೋಧದ ಚರ್ಚೆ ನಡೆಯುತ್ತಿವೆ. ಜಿಲ್ಲಾಧಿಕಾರಿ ವಿಕಾಸ್‌ ಕಿಶೋರ್‌ ಸುರಳ್ಕರ್‌ ಜಾತ್ರೆಗೆ ಅನುಮತಿ ಇಲ್ಲ ಎಂದಿದ್ದಾರೆ. ಇದರ ನಡುವೆಯೂ ರಾಜ್ಯಾದ್ಯಂತ ಮಹತ್ವದ ಉತ್ಸವಗಳು, ದಸರಾ ಹಾಗೂ ಲಕ್ಷ ದೀಪೋತ್ಸವಗಳು ನಾನಾ ಷರತ್ತಿನಲ್ಲಿ ನಡೆದಿವೆ. ಹೀಗಾಗಿ ಅದೇ ಮಾದರಿಯಲ್ಲಿ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವ ಆಚರಣೆ ಮಾಡಬೇಕು ಎನ್ನುವ ಭಕ್ತರ ಒತ್ತಾಸೆ ಕೇಳಿ ಬರುತ್ತಿದೆ.

Tap to resize

Latest Videos

ವಿಶ್ವಪ್ರಸಿದ್ಧ ಮೈಸೂರು ದಸರಾ ಹಲವಾರು ಷರತ್ತುಗಳೊಂದಿಗೆ ನೆರವೇರಿತು. ಸಾರ್ವಜನಿಕರಿಗೆ ಪ್ರವೇಶ ನೀಡದೆ ಸುತ್ತಲು ಬ್ಯಾರಿಕೇಡ್‌ ಅಳವಡಿಸಿ ಅರಮನೆಯಲ್ಲಿನ ಸಂಪ್ರದಾಯವನ್ನು ನೆರವೇರಿಸಿದರು. ಚಾಮುಂಡಿ ಬೆಟ್ಟದಲ್ಲಿಯೂ ಸಾರ್ವಜನಿಕರಿಗೆ ಪ್ರವೇಶ ನೀಡದೇ ಸರ್ಕಾರದಿಂದಲೇ ಶಾಸೊತ್ರೕಕ್ತವಾಗಿ ಆಚರಣೆ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಭಾಗವಹಿಸುವ ಪ್ರತಿಯೊಬ್ಬ ಕಲಾವಿದರ ಹಾಗೂ ಅಧಿಕಾರಿಗಳ ಮತ್ತು ಸಂಪ್ರದಾಯದಲ್ಲಿ ಪಾಲ್ಗೊಳ್ಳುವವರ ಕೊರೋನಾ ಟೆಸ್ಟ್‌ ಮಾಡಿಸಿ ವರದಿ ನೆಗೆಟಿವ್‌ ಬಂದವರಿಗೆ ಮಾತ್ರ ಪ್ರವೇಶ ನೀಡಲಾಯಿತು. ಯಾವುದೇ ಸಂಪ್ರದಾಯಕ್ಕೂ ಬ್ರೇಕ್‌ ಹಾಕಲೇ ಇಲ್ಲ. ಎಲ್ಲವೂ ಸುಸೂತ್ರವಾಗಿ ನಡೆಯಿತು. ಅಲ್ಲದೆ ಯಾವುದೇ ಆಚರಣೆಗಳನ್ನು ಸಹ ಕೈಬಿಡದೆ ಮಾಡಿದ್ದು ವಿಶೇಷ.

ವಿದೇಶಗಳಿಂದಲೂ ಗವಿಮಠ ಅಜ್ಜನ ಜಾತ್ರೆಯ ವೈಭವ ವೀಕ್ಷಿಸಿದ ಭಕ್ತರು

ಇದೇ ತಿಂಗಳು ಧರ್ಮಸ್ಥಳದಲ್ಲಿ ಲಕ್ಷ ದೀಪೋತ್ಸವವನ್ನು ಆಚರಿಸಲಾಯಿತು. ಹತ್ತಾರು ಸಾವಿರ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಿದ್ದರು. ಇಲ್ಲಿ ಅಂಥ ಕಟ್ಟಳೆಗಳು ಇರಲಿಲ್ಲವಾದರೂ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿತ್ತು. ಲಕ್ಷ ದೀಪೋತ್ಸವದ ನಂತರವೂ ಯಾವುದೇ ಕೋವಿಡ್‌ ಪರಿಣಾಮ ಆಗಲಿಲ್ಲ ಎನ್ನುವುದು ಸಮಾಧಾನಕರ ಸಂಗತಿಯಾಗಿದೆ.

ಮೈಸೂರು ಮಾದರಿ ಉತ್ತಮ:

ಜನವರಿ 30ರಂದು ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವದ ರಥೋತ್ಸವ ನಡೆಯಬೇಕಿದೆ. ಆದರೆ, ಕೋವಿಡ್‌ ಇರುವುದರಿಂದ ಮಾಡಬೇಕೋ ಅಥವಾ ಬೇಡವೋ ಎನ್ನುವ ಚರ್ಚೆಯಲ್ಲಿಯೇ ಸಾಗಿದೆ. ಸುಮಾರು 35 ದಿನಗಳ ಕಾಲ ಇರುವುದರಿಂದ ಗವಿಸಿದ್ಧೇಶ್ವರ ಮಹಾಸ್ವಾಮಿಗಳು ಕಾದು ನೋಡುವ ತಂತ್ರಕ್ಕೆ ಮೊರೆ ಹೋಗಿದ್ದಾರೆ. ಇನ್ನು ಸ್ಪಷ್ಟನಿರ್ಧಾರವನ್ನು ತೆಗೆದುಕೊಂಡಿಲ್ಲ. ಆದರೂ ಜಾತ್ರೆಗೆ ಬೇಕಾಗಿರುವ ತಯಾರಿ ಸದ್ದಿಲ್ಲದೇ ನಡೆದಿದೆ. ಅಲ್ಲದೆ ಪ್ರತಿವರ್ಷವೂ ನಡೆಯುವ ಎಲ್ಲ ಸಂಪ್ರದಾಯದ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಈಗಾಗಲೇ ಭಕ್ತರು ಸಹ ಜಾತ್ರೆ ನಡೆಯಬಹುದು ಎನ್ನುವ ನಂಬಿಕೆಯ ಮೇಲೆ ದವಸ-ಧಾನ್ಯಗಳನ್ನು ಕೊಡುತ್ತಿದ್ದಾರೆ. ಹಳ್ಳಿಯ ಭಕ್ತರು ಬಂದು ಜಾತ್ರೆಯನ್ನು ಆಚರಿಸುವಂತೆ ಶ್ರೀಗಳಲ್ಲಿ ಮನವಿ ಮಾಡುತ್ತಿದ್ದಾರೆ. ಆದರೆ, ಶ್ರೀಗಳು ಮಾತ್ರ ಯಾವುದೇ ನಿರ್ಧಾರ ತಿಳಿಸಿಲ್ಲ.

ಮೈಸೂರು ಮಾದರಿಯಲ್ಲಿಯೇ ಷರತ್ತುಗಳನ್ನು ಅನುಸರಿಸಿ ಸೀಮಿತ ಭಕ್ತರ ಸಮ್ಮುಖದಲ್ಲಿ ಜಾತ್ರೆಯ ಸಂಪ್ರದಾಯಗಳನ್ನು ಮಾಡುವ ಚಿಂತನೆಯನ್ನು ನಡೆಸಲಾಗಿದೆ. ಮಠದ ಕಾಲೇಜಿನ ವಿದ್ಯಾರ್ಥಿಗಳು ಮತ್ತು ಟ್ರಸ್ಟ್‌ ವ್ಯಾಪ್ತಿಯ ಅಧಿಕಾರಿಗಳು, ಸಿಬ್ಬಂದಿ ಸೇರಿದಂತೆ ಕೆಲವೇ ಕೆಲವರನ್ನೊಳಗೊಂಡು ಸಂಪ್ರದಾಯವನ್ನು ಪಾಲಿಸುವ ಸಾಧ್ಯತೆಯೂ ನಡೆಯುತ್ತಿದೆ. ಸುಮಾರು 200 ವರ್ಷಗಳಿಂದ ನಡೆದುಕೊಂಡು ಬಂದಿರುವ ಆಚರಣೆಗೆ ಬ್ರೇಕ್‌ ಹಾಕುವ ಬದಲು ಅದನ್ನು ಮುಂದುವರಿಸಿಕೊಂಡು ಹೋಗುವುದು ಸೂಕ್ತ ಎನ್ನುವುದು ಭಕ್ತರ ಆಶಯವಾಗಿದೆ.

ಅದ್ಧೂರಿ ಮತ್ತು ಕೈಲಾಸಮಂಟಪದ ಕಾರ್ಯಕ್ರಮಗಳನ್ನು ಕೈಬಿಟ್ಟು ಕೇವಲ ರಥೋತ್ಸವವನ್ನು ನೂರಾರು ಜನರ ಸಮ್ಮುಖದಲ್ಲಿ ಆಚರಣೆಗೆ ಪ್ರಯತ್ನ ನಡೆದಿದೆ. ಇಡೀ ಮಠದ ಆವರಣ ವ್ಯಾಪ್ತಿಯುದ್ದಕ್ಕೂ ಬಂದೋಬಸ್‌್ತ ಮಾಡಿಕೊಂಡು ಅನುಮತಿ ಇದ್ದವರಿಗೆ ಮಾತ್ರ ಅವಕಾಶ ನೀಡಿ ರಥೋತ್ಸವ ಸೇರಿದಂತೆ ಸಂಪ್ರದಾಯಗಳನ್ನು ಮಾಡಬಹುದು ಎನ್ನುವುದು ಈಗಿರುವ ಆಶಾಭಾವನೆ.
ಯಾವುದಕ್ಕೂ ಫೈನಲ್‌ ಆಗಿಲ್ಲ. ಜನವರಿಯಲ್ಲಿ ಮೊದಲ ವಾರದಲ್ಲಿ ಮೊದಲ ಸಭೆಯನ್ನು ನಡೆಸಿ ಮುಂದಿನ ತೀರ್ಮಾನ ತೆಗೆದುಕೊಳ್ಳುತ್ತಿರುವ ಗವಿಮಠದ ಶ್ರೀಗಳ ಮುಂದೆ ಇಂಥ ಹಲವು ದಾರಿಗಳಂತೂ ಇದ್ದೇ ಇವೆ.

ನಿಮ್ಮ ಅಭಿಪ್ರಾಯ ತಿಳಿಸಿ..

ಈ ಬಾರಿಯ ಕೊಪ್ಪಳ ಗವಿಸಿದ್ಧೇಶ್ವರ ಜಾತ್ರೆ ಬಗ್ಗೆ ಸಾರ್ವಜನಿಕರು ತಮ್ಮ ಅಭಿಪ್ರಾಯವನ್ನು ಮುಕ್ತ ಮನಸ್ಸಿನಿಂದ ಬರೆದು ಮೊ. 9742152171 ವಾಟ್ಸ್‌ಆ್ಯಪ್‌ಗೆ ಕಳಿಸಬಹುದು. ಆಯ್ದ ಬರಹಗಳನ್ನು ಪ್ರಕಟಿಸಲಾಗುವುದು.
 

click me!