ಕಾರಿನ ಫಾಸ್ಟ್‌ಟ್ಯಾಗ್ ತೋರಿಸಿ ಟೋಲ್ ದಾಟಲು ಲಾರಿ ಯತ್ನ!| ಮಂಗಳೂರಲ್ಲಿ 4 ಪ್ರಕರಣ ಪತ್ತೆ
ಮಂಗಳೂರು[ಡಿ.18]: ದೇಶದಲ್ಲಿ ಫಾಸ್ಟ್‌ಟ್ಯಾಗ್ ಅಳವಡಿಕೆ ಕಾರ್ಯ ತ್ವರಿತವಾಗಿ ನಡೆಯುತ್ತಿರುವ ಹಂತದಲ್ಲೇ ಅದರ ದುರುಪಯೋಗ ನಡೆಸಿರುವ ಪ್ರಕರಣಗಳೂ ಬೆಳಕಿಗೆ ಬಂದಿವೆ.
ಮರಳು ಲಾರಿ ನಿರ್ವಾಹಕರು ಕಾರಿನ ಫಾಸ್ಟ್ಯಾಗ್ ತೋರಿಸಿ ಟೋಲ್ ಗೇಟು ದಾಟಲು ವಿಫಲ ಯತ್ನ ನಡೆಸಿದ ನಾಲ್ಕು ಪ್ರಕರಣ ದಕ್ಷಿಣ ಕನ್ನಡ ಜಿಲ್ಲೆಯ ಸುರತ್ಕಲ್ ಟೋಲ್‌ಪ್ಲಾಜಾದಲ್ಲಿ ಮಂಗಳವಾರ ನಡೆದಿದೆ. ಇಲ್ಲಿ ಕಾರಿನ ಏಕಮುಖ ಪ್ರಯಾಣಕ್ಕೆ 50 ರೂ ಶುಲ್ಕವಿದ್ದು, ಲಾರಿಗೆ 175 ರೂ ನಿಗದಿಪಡಿಸಲಾಗಿದೆ.
125 ಉಳಿಸುವ ಸಲುವಾಗಿ ಮರಳು ಲಾರಿಗಳ ನಿರ್ವಾಹಕರು ಫಾಸ್ಟ್‌ಟ್ಯಾಗ್ ಅನ್ನು ಲಾರಿ ಮುಂದಿನ ಗಾಜಿಗೆ ಅಂಟಿಸದೆ ಕೈಯಲ್ಲಿ ತೋರಿಸಿ ಟೋಲ್ ದಾಟುತ್ತಿದ್ದರು. ಈ ಸಂದರ್ಭ ಸ್ಥಳದಲ್ಲಿದ್ದ ಟೋಲ್ ನಿರ್ವಾಹಕರ ಸೂಕ್ಷ್ಮ ತಪಾಸಣೆ ಸಂದರ್ಭ ವಂಚಕರು ಸಿಕ್ಕಿಬಿದ್ದಿದ್ದಾರೆ. ಅಲ್ಲದೆ ಸ್ಥಳೀಯ ನೋಂದಣಿ ಹೊಂದಿರುವ ವಾಹನಗಳಿಗೆ ಟೋಲ್‌ಗಳಲ್ಲಿ ವಿನಾಯಿತಿ ಇದ್ದು, ಕೆಲವರು ಸುಳ್ಳು ದಾಖಲೆ ತೋರಿಸಿ ಟೋಲ್ ದಾಟಲು ಪ್ರಯತ್ನಿಸಿ ಸಿಕ್ಕಿಬಿದ್ದಿದ್ದಾರೆ.