
ಕಾರವಾರ/ಚಿಕ್ಕೋಡಿ: ರಾಜ್ಯದಲ್ಲಿ ಲೋಕಾಯುಕ್ತ ಪಡೆ ತನ್ನ ಕಟ್ಟುನಿಟ್ಟಿನ ಕ್ರಮಗಳನ್ನು ಮುಂದುವರಿಸಿದ್ದು, ಒಂದೆಡೆ ಉಪಲೋಕಾಯುಕ್ತರು ಸ್ಥಳೀಯ ಸಮಸ್ಯೆಗಳಿಗೆ ಸ್ಪಂದಿಸಿ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದರೆ, ಇನ್ನೊಂದೆಡೆ ಅಕ್ರಮ ಆಸ್ತಿ ಗಳಿಕೆ ಆರೋಪದಡಿ ತಹಶೀಲ್ದಾರ್ ನಿವಾಸದ ಮೇಲೆ ದಾಳಿ ನಡೆಸಿ ಶಾಕ್ ನೀಡಿದ್ದಾರೆ.
ಬೆಳಗಾವಿ ಜಿಲ್ಲೆಯಲ್ಲಿ ಲೋಕಾಯುಕ್ತ ಅಧಿಕಾರಿಗಳು ಭ್ರಷ್ಟ ಅಧಿಕಾರಿಗಳಿಗೆ ತೀವ್ರ ಚಾಟಿ ಬೀಸಿದ್ದಾರೆ. ಆದಾಯಕ್ಕಿಂತ ಹೆಚ್ಚು ಆಸ್ತಿ ಗಳಿಕೆ (ಅಕ್ರಮ ಆಸ್ತಿ ಗಳಿಕೆ) ಆರೋಪದ ಹಿನ್ನೆಲೆಯಲ್ಲಿ ನಿಪ್ಪಾಣಿ ತಹಶೀಲ್ದಾರ್ ಸುರೇಶ ಮುಂಜೆ ಅವರಿಗೆ ಬೆಳಿಗ್ಗೆಯೇ ಲೋಕಾಯುಕ್ತ ಪಡೆ ಶಾಕ್ ನೀಡಿದೆ.
ಬೆಳಗಾವಿ ಲೋಕಾಯುಕ್ತ ಎಸ್ಪಿ ಪ್ರಸನ್ನ ದೇಸಾಯಿ ಅವರ ಮಾರ್ಗದರ್ಶನ ಹಾಗೂ ನೇತೃತ್ವದಲ್ಲಿ ಅಧಿಕಾರಿಗಳ ತಂಡವು ನಿಪ್ಪಾಣಿ, ಅಥಣಿ ಹಾಗೂ ಮೂಡಲಗಿ ಸೇರಿದಂತೆ ವಿವಿಧ ಭಾಗಗಳಲ್ಲಿ ಏಕಕಾಲಕ್ಕೆ ದಾಳಿ ನಡೆಸಿ ದಾಖಲೆಗಳ ಪರಿಶೀಲನೆ ನಡೆಸಿದೆ.
ತಹಶೀಲ್ದಾರ್ ಸುರೇಶ ಮುಂಜೆ ಅವರ ಮನೆ ಮತ್ತು ನಿಪ್ಪಾಣಿ ಕಚೇರಿಯಷ್ಟೇ ಅಲ್ಲದೆ, ಮೂಡಲಗಿಯಲ್ಲಿರುವ ಅವರ ಪತ್ನಿ ಸ್ವಾತಿ ಅವರ ತವರು ಮನೆ (ಶಿವಬಸು ಬಾಳಪ್ಪ ಹಂದಿಗುಂದ ಅವರ ನಿವಾಸ) ಮೇಲೆಯೂ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಇದಲ್ಲದೆ, ಸುರೇಶ ಮುಂಜೆ ಕುಟುಂಬಸ್ಥರು ಸಂಪರ್ಕ ಹೊಂದಿರುವ 'ಶ್ರೀ ನಾಗಲಿಂಗೇಶ್ವರ ಅರ್ಬನ್ ಕೋ-ಆಪರೇಟಿವ್ ಕ್ರೆಡಿಟ್ ಸೊಸೈಟಿ' ಮೇಲೆಯೂ ಲೋಕಾಯುಕ್ತ ತಂಡ ದಾಳಿ ನಡೆಸಿ, ಮಹತ್ವದ ಆಸ್ತಿ ಪಾಸ್ತಿ ದಾಖಲೆಗಳನ್ನು ವಶಕ್ಕೆ ಪಡೆದು ತನಿಖೆ ಮುಂದುವರಿಸಿದೆ.
ಬುಧವಾರ ಬೆಳಂಬೆಳಗ್ಗೆ ಉಪಲೋಕಾಯುಕ್ತ ನ್ಯಾಯಮೂರ್ತಿ ಕೆ.ಎನ್. ಫಣೀಂದ್ರ ಅವರು ಕಾರವಾರ ನಗರಸಭೆಯ ಅಧಿಕಾರಿಗಳಿಗೆ ದಿಢೀರ್ ಶಾಕ್ ನೀಡಿದರು. ಕಾರವಾರ ತಾಲೂಕಿನ ಶಿರವಾಡ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಘನತ್ಯಾಜ್ಯ ವಿಲೇವಾರಿ ಘಟಕಕ್ಕೆ ಪ್ರತ್ಯಕ್ಷವಾಗಿ ಭೇಟಿ ನೀಡಿ, ಸ್ಥಳ ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಲಕ್ಷ್ಮೀ ಪ್ರಿಯಾ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ (CEO) ದಿಲೀಶ್ ಸಸಿ ಹಾಗೂ ನಗರಸಭೆ ಆಯುಕ್ತ ಜಗದೀಶ್ ಹುಲಗಜ್ಜಿ ಉಪಸ್ಥಿತರಿದ್ದರು.
ಘಟಕದ ಬಳಿ ನೆರೆದಿದ್ದ ಸ್ಥಳೀಯರು, "ತ್ಯಾಜ್ಯ ವಿಲೇವಾರಿಯಿಂದಾಗಿ ಸುತ್ತಮುತ್ತಲಿನ ಮನೆಗಳ ಬಾವಿ ನೀರು ಕಲುಷಿತಗೊಂಡು ಕುಡಿಯಲು ಯೋಗ್ಯವಿಲ್ಲದಂತಾಗಿದೆ" ಎಂದು ಉಪಲೋಕಾಯುಕ್ತರ ಬಳಿ ತಮ್ಮ ಅಳಲು ತೋಡಿಕೊಂಡರು. ಸಾರ್ವಜನಿಕರ ದೂರುಗಳನ್ನು ತಾಳ್ಮೆಯಿಂದ ಆಲಿಸಿದ ಉಪಲೋಕಾಯುಕ್ತರು, ತಕ್ಷಣವೇ ಸ್ಪಂದಿಸಿ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ವಿಶೇಷ ಸಮಿತಿ ರಚಿಸಿ, ಸಂಪೂರ್ಣ ತನಿಖೆ ನಡೆಸಿ ಶೀಘ್ರವೇ ವರದಿ ಸಲ್ಲಿಸುವಂತೆ ಸ್ಥಳದಲ್ಲೇ ನಿರ್ದೇಶನ ನೀಡಿದರು.
ಕಾರವಾರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಉಪಲೋಕಾಯುಕ್ತ ಕೆ.ಎನ್. ಫಣೀಂದ್ರ, ಲೋಕಾಯುಕ್ತ ಸಂಸ್ಥೆಯು ಎದುರಿಸುತ್ತಿರುವ ಸವಾಲುಗಳ ಕುರಿತು ಮುಕ್ತವಾಗಿ ಚರ್ಚಿಸಿದರು.
ಪ್ರಸ್ತುತ ಲೋಕಾಯುಕ್ತ ಕಾಯ್ದೆಯಡಿ ಅಪರಾಧಿಗಳಿಗೆ ಶಿಕ್ಷೆಯಾಗುವ ಪ್ರಮಾಣ ಕೇವಲ ಶೇ. 10 ರಿಂದ 15 ರಷ್ಟು ಮಾತ್ರ. ದೂರು ನೀಡುವಾಗ ತೋರುವ ಉತ್ಸಾಹವನ್ನು ದೂರುದಾರರು ಸಾಕ್ಷ್ಯ ನುಡಿಯುವಾಗ ತೋರುವುದಿಲ್ಲ. ಇದರಿಂದಾಗಿ ಪ್ರಕರಗಳು ದುರ್ಬಲಗೊಳ್ಳುತ್ತವೆ.
ಅಧಿಕಾರಿಗಳು ತಪ್ಪು ಮಾಡಿದ್ದು ಕಣ್ಣೆದುರೇ ಕಂಡರೂ ಅವರನ್ನು ತಕ್ಷಣ ಸಸ್ಪೆಂಡ್ ಮಾಡುವ ಅಧಿಕಾರ ಲೋಕಾಯುಕ್ತಕ್ಕೆ ಇಲ್ಲ. ನಾವು ಸರ್ಕಾರಕ್ಕೆ ಕೇವಲ ಶಿಫಾರಸು ಮಾಡಬಹುದಷ್ಟೇ. ತಾತ್ಕಾಲಿಕವಾಗಿಯಾದರೂ ಅಮಾನತುಗೊಳಿಸುವ ಹಾಗೂ ಸ್ವತಂತ್ರವಾಗಿ ತನಿಖೆ ನಡೆಸುವ ಅಧಿಕಾರ ಸಿಗಬೇಕಿದೆ.
ಸಿಬ್ಬಂದಿ ಅಭಾವ ಮತ್ತು ತಿದ್ದುಪಡಿ ಪ್ರಸ್ತಾವನೆ ಲೋಕಾಯುಕ್ತದಲ್ಲಿ ಪ್ರಸ್ತುತ 300 ರಿಂದ 400 ಹುದ್ದೆಗಳ ಕೊರತೆಯಿದೆ. ಪ್ರಸ್ತುತ ಸಿಬ್ಬಂದಿಗಳನ್ನು ಪೊಲೀಸ್ ಇಲಾಖೆಯಿಂದಲೇ ನಿಯೋಜನೆ ಮೇಲೆ ಪಡೆಯಬೇಕಾಗಿದೆ. ಸ್ವತಂತ್ರವಾಗಿ ನೇಮಕಾತಿ ಮಾಡಿಕೊಳ್ಳಲು ಅವಕಾಶವಿಲ್ಲ. ಈ ವ್ಯವಸ್ಥೆಯಲ್ಲಿ ಬದಲಾವಣೆ ತರಲು ಕಾಯ್ದೆಗೆ ಸೂಕ್ತ ತಿದ್ದುಪಡಿ ತರುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಜೊತೆಗೆ ಶೇ. 50 ರಷ್ಟು ನಿವೃತ್ತ ಯೋಧರನ್ನು ನೇಮಿಸಿಕೊಂಡು ಕಾರ್ಯನಿರ್ವಹಿಸಿದರೆ ತನಿಖಾ ಸಂಸ್ಥೆ ಮತ್ತಷ್ಟು ಸಶಕ್ತವಾಗಲಿದೆ.