21 ಸಬ್‌ ರಿಜಿಸ್ಟ್ರಾರ್‌ ಕಚೇರಿಗೆ ಲೋಕಾ ಶಾಕ್‌: ಏಕಕಾಲದಲ್ಲಿ 50 ಅಧಿಕಾರಿಗಳ ದಾಳಿ

By Kannadaprabha News  |  First Published Nov 4, 2022, 8:00 AM IST

ಬೆಂಗಳೂರು ನೆರೆಹೊರೆ ಜಿಲ್ಲೆಗಳ 21 ಸಬ್‌ ರಿಜಿಸ್ಟ್ರಾರ್‌ ಕಚೇರಿಗಳ ಮೇಲೆ ದಿಢೀರ್‌ ದಾಳಿ, ಸ್ವಯಂ ಪ್ರೇರಿತ 21 ಎಫ್‌ಐಆರ್‌ ದಾಖಲಿಸಿಕೊಂಡು ತನಿಖೆ


ಬೆಂಗಳೂರು(ನ.04): ಅಕ್ರಮ ಭೂ ವ್ಯವಹಾರ ದಂಧೆ, ಮಧ್ಯವರ್ತಿಗಳ ಹಾವಳಿ ಹಾಗೂ ಭ್ರಷ್ಟಾಚಾರದ ಆರೋಪಗಳ ಹಿನ್ನೆಲೆಯಲ್ಲಿ ಬೆಂಗಳೂರು ಹಾಗೂ ನೆರೆಹೊರೆ ಜಿಲ್ಲೆಗಳ 21 ಸಬ್‌ ರಿಜಿಸ್ಟ್ರಾರ್‌ (ಉಪ ನೊಂದಣಾಧಿಕಾರಿ) ಕಚೇರಿಗಳ ಮೇಲೆ ಗುರುವಾರ ಲೋಕಾಯುಕ್ತ ಪೊಲೀಸರು ದಿಢೀರ್‌ ದಾಳಿ ನಡೆಸಿ ಬಿಸಿ ಮುಟ್ಟಿಸಿದ್ದಾರೆ.

ಬೆಂಗಳೂರು ನಗರ ಜಿಲ್ಲೆ- ದೇವನಹಳ್ಳಿ, ಬನ್ನೇರುಘಟ್ಟ, ಯಲಹಂಕ, ಕಾಚಕರನಹಳ್ಳಿ, ಬಸವನಗುಡಿ, ಮಹದೇವಪುರ, ಕೆಂಗೇರಿ, ದೊಮ್ಮಲೂರು, ವರ್ತೂರು, ಬೊಮ್ಮನಹಳ್ಳಿ, ಬೇಗೂರು, ಜೆ.ಪಿ.ನಗರ, ಬನಶಂಕರಿ, ಬಾಣಸವಾಡಿ, ನಾಗರಬಾವಿ, ಬೆಂಗಳೂರು ಗ್ರಾಮಾಂತರ ಜಿಲ್ಲೆ-ನೆಲಮಂಗಲ, ಆನೇಕಲ್‌, ದೊಡ್ಡಬಳ್ಳಾಪುರ, ಹೊಸಕೋಟೆ, ರಾಮನಗರ ಜಿಲ್ಲೆ- ಕನಕಪುರ ಹಾಗೂ ರಾಮನಗರ ಸೇರಿ 21 ಸಬ್‌ ರಿಜಿಸ್ಟ್ರಾರ್‌ ಕಚೇರಿಗಳ ಮೇಲೆ ಲೋಕಾಯುಕ್ತ ಪೊಲೀಸರ ದಾಳಿ ನಡೆದಿದೆ. ಈ ವೇಳೆ 6.5 ಲಕ್ಷ ರು. ಹಣ ಹಾಗೂ ಕೆಲ ದಾಖಲೆಗಳನ್ನು ಜಪ್ತಿ ಮಾಡಿದ್ದು, ದಾಖಲೆಗಳ ಪರಿಶೀಲನೆ ಬಳಿಗ ಶುಕ್ರವಾರ ದಾಳಿಯ ಸ್ಪಷ್ಟಚಿತ್ರಣ ಸಿಗಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Tap to resize

Latest Videos

ರಾಜ್ಯದ ಚೆಕ್‌ಪೋಸ್ಟ್‌ಗಳ ಮೇಲೆ ಲೋಕಾಯುಕ್ತ ದಾಳಿ: ಭ್ರಷ್ಟ ಅಧಿಕಾರಿಗಳಿಗೆ ಶಾಕ್‌..!

ಸಬ್‌ ರಿಜಿಸ್ಟ್ರಾರ್‌ ಕಚೇರಿಗಳಲ್ಲಿ ಅಕ್ರಮ ಭೂ ಮಾಫಿಯಾ ದಂಧೆಕೋರರು ಮತ್ತು ಮಧ್ಯವರ್ತಿಗಳ ಹಾವಳಿ ಹಾಗೂ ವಿಪರೀತ ಲಂಚ ನಡೆದಿದೆ ಎಂಬ ದೂರುಗಳು ಬಂದಿದ್ದವು. ಈ ದೂರುಗಳನ್ನು ಗಂಭೀರವಾಗಿ ಪರಿಗಣಿಸಿದ ಲೋಕಾಯುಕ್ತ ಪೊಲೀಸರು, ಸ್ವಯಂ ಪ್ರೇರಿತರಾಗಿ 21 ಎಫ್‌ಐಆರ್‌ಗಳನ್ನು ದಾಖಲಿಸಿಕೊಂಡ ತನಿಖೆ ಆರಂಭಿಸಿದ್ದಾರೆ. ಅಂತೆಯೇ ಏಕಕಾಲಕ್ಕೆ ಸಬ್‌ ರಿಜಿಸ್ಟ್ರಾರ್‌ ಕಚೇರಿಗಳ ಮೇಲೆ ದಾಳಿ ನಡೆಸಲು ಯೋಜಿಸಿದ ಪೊಲೀಸರು, ಬೆಂಗಳೂರು ನಗರ, ಗ್ರಾಮಾಂತರ ಹಾಗೂ ರಾಮನಗರ ಜಿಲ್ಲೆಗಳಲ್ಲಿ ಗುರುವಾರ ಸಂಜೆ 4.30ಕ್ಕೆ ಒಂದೇ ಸಮಯಕ್ಕೆ ಕಾರ್ಯಾಚರಣೆ ನಡೆಸಿದ್ದಾರೆ. ಈ ದಾಳಿ ವೇಳೆ ಮೂವರು ಎಸ್ಪಿಗಳು, 8 ಡಿವೈಎಸ್ಪಿಗಳು ಹಾಗೂ 10 ಇನ್ಸ್‌ಪೆಕ್ಟರ್‌ಗಳು ಸೇರಿದಂತೆ 50ಕ್ಕೂ ಹೆಚ್ಚಿನ ಅಧಿಕಾರಿಗಳು ಪಾಲ್ಗೊಂಡಿದ್ದರು ಎಂದು ತಿಳಿದು ಬಂದಿದೆ.

ಎಲ್ಲೆಲ್ಲಿ ಹಣ ಜಪ್ತಿ?:

ವರ್ತೂರು- 2.5 ಲಕ್ಷ ರು., ಬೇಗೂರು-1 ಲಕ್ಷ ರು., ಬಸವನಗುಡಿ- 1.2 ಲಕ್ಷ ರು., ಕೆಂಗೇರಿ- 40 ಸಾವಿರ ರು., ಕಾಚಕರನಹಳ್ಳಿ-22 ಸಾವಿರ ರು ಹಾಗೂ ಬಾಣಸವಾಡಿ 50 ಸಾವಿರ ರು. ಸೇರಿದಂತೆ ಒಟ್ಟು 6.5 ಲಕ್ಷ ರು. ನಗದು ಜಪ್ತಿ ಮಾಡಲಾಗಿದೆ. ಈ ಹಣದ ಕುರಿತು ಸಂಬಂಧಿಸಿದ ಅಧಿಕಾರಿಗಳಿಗೆ ಪುರಾವೆ ಸಲ್ಲಿಸುವಂತೆ ಸೂಚಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಮಧ್ಯವರ್ತಿಗಳೇ ಪೊಲೀಸರ ಟಾರ್ಗೇಟ್‌

ಸಬ್‌ ರಿಜಿಸ್ಟ್ರಾರ್‌ ಕಚೇರಿಗಳಲ್ಲಿ ಮಧ್ಯವರ್ತಿಗಳ ಹಾವಳಿ ಬಗ್ಗೆ ಲೋಕಾಯುಕ್ತರಿಗೆ ನಿರಂತರ ದೂರುಗಳು ಬಂದಿದ್ದವು. ನಿವೇಶನ ಅಥವಾ ಜಮೀನು ಪರಭಾರೆ ಸಂಬಂಧ ಮಧ್ಯವರ್ತಿಗಳ ಇಲ್ಲದೆ ನೇರವಾಗಿ ಹೋದರೆ ಸಬ್‌ ರಿಜಿಸ್ಟ್ರರ್‌ ಕಚೇರಿಗಳಲ್ಲಿ ಸಾರ್ವಜನಿಕರಿಗೆ ಕೆಲಸಗಳಾಗುತ್ತಿರಲಿಲ್ಲ. ಅಕ್ರಮವಾಗಿ ಹಣ ಸಂಪಾದನೆ ಸಲುವಾಗಿ ಮಧ್ಯವರ್ತಿಗಳ ಮೂಲಕವೇ ಅಧಿಕಾರಿಗಳು ವ್ಯವಹರಿಸುತ್ತಾರೆ. ಇದರಿಂದ ಸಾರ್ವಜನಿಕರು ತೊಂದರೆಗಳಾಗುತ್ತಿದ್ದವು. ಹೀಗಾಗಿ ಮಧ್ಯವರ್ತಿಗಳ ಜಾಲವನ್ನು ಭೇದಿಸುವ ಸಲುವಾಗಿಯೇ ದಾಳಿ ನಡೆಸಲಾಯಿತು ಎಂದು ಲೋಕಾಯುಕ್ತ ಪೊಲೀಸರು ತಿಳಿಸಿದ್ದಾರೆ.
 

click me!