ಲೋಕಾ ಪೇದೆ ಬರೆದ ಪುಸ್ತಕ ಲೋಕಾಯುಕ್ತರಿಂದ ಬಿಡುಗಡೆ

By Web DeskFirst Published Jan 24, 2019, 10:09 AM IST
Highlights

ಪೇದೆ ಮಂಜು ತರೀಕೆರೆ ವಿರಚಿತ ‘24 ಸೆಕೆಂಡ್ಸ್‌- ಸಿನಿಮಾಗಾಗೊಂದು ಕ್ರೈಂ ಥ್ರಿಲ್ಲರ್‌ ಕಥೆ’| ಕನ್ನಡಪ್ರಭ- ಸುವರ್ಣ ನ್ಯೂಸ್‌ ಕಚೇರಿಯಲ್ಲಿ ಲೋಕಾರ್ಪಣೆ

ಬೆಂಗಳೂರು[ಜ.24]: ಯಾವುದೇ ಕ್ಷೇತ್ರದಲ್ಲಿ ಹಣದಿಂದ ಯಶಸ್ಸು ಗಳಿಸಲು ಸಾಧ್ಯವಿಲ್ಲ. ಪ್ರತಿಭೆ ಇದ್ದವರು ಮಾತ್ರ ಯಶಸ್ಸು ಗಳಿಸುತ್ತಾರೆ. ಸಮಾಜ ಅಂತಹ ಪ್ರತಿಭಾವಂತರನ್ನು ಗುರುತಿಸಿ ಪ್ರೋತ್ಸಾಹಿಸಬೇಕು ಎಂದು ಲೋಕಾಯುಕ್ತ ಪಿ.ವಿಶ್ವನಾಥ ಶೆಟ್ಟಿಹೇಳಿದರು.

ತಮ್ಮ ಭದ್ರತಾ ಸಿಬ್ಬಂದಿ​ಯಾಗಿ ಕಾರ್ಯ ನಿರ್ವ​ಹಿ​ಸು​ತ್ತಿ​ರುವ ಪೊಲೀಸ್‌ ಪೇದೆ ಮಂಜು ತರೀ​ಕೆರೆ ಅವರು ರಚಿ​ಸಿದ ‘24 ಸೆಕೆಂಡ್ಸ್‌- ಸಿನಿಮಾಗಾಗೊಂದು ಕ್ರೈಂ ಥ್ರಿಲ್ಲರ್‌ ಕಥೆ’ ಕೃತಿಯನ್ನು ಕನ್ನಡಪ್ರಭ-ಸುವರ್ಣ ನ್ಯೂಸ್‌ ಕಚೇರಿಯಲ್ಲಿ ಬುಧವಾರ ಬಿಡು​ಗಡೆ ಮಾಡಿ ಅವರು ಮಾತ​ನಾ​ಡಿ​ದ​ರು.

ಒಂದು ದೇಶಕ್ಕೆ ಖನಿಜ, ಅರಣ್ಯದಂತಹ ನೈಸರ್ಗಿಕ ಸಂಪನ್ಮೂಲಗಳಷ್ಟೇ ಸಂಪತ್ತಲ್ಲ. ಬರಹಗಾರರು, ಸಾಹಿತಿಗಳು, ಕಲಾವಿದರು, ಸಂಗೀತಗಾರರು ಕೂಡ ಈ ದೇಶದ ಸಂಪತ್ತೇ. ಯಾವುದೇ ವೃತ್ತಿಯಲ್ಲಿದ್ದರೂ ಅವರಿಗೆ ಅವರದ್ದೇ ಆದ ಪ್ರತಿಭೆ ಇರುತ್ತದೆ. ವ್ಯವಸ್ಥೆಯಲ್ಲಿ ಉನ್ನತ ಸ್ಥಾನದಲ್ಲಿರುವವರು ಇಂತಹ ಪ್ರತಿಭೆಗಳನ್ನು ಪ್ರೋತ್ಸಾಹಿಸಿ ಬೆಳವಣಿಗೆಗೆ ಸಹಕರಿಸಬೇಕು. ಇದರಿಂದ ಮುಂದೊಂದು ದಿನ ಸಮಾಜಕ್ಕೆ ಒಳಿತಾಗುತ್ತದೆ ಎಂದರು.

ಪೊಲೀಸ್‌ ಪೇದೆ ಹಾಗೂ ಕೃತಿಯ ಲೇಖಕ ಮಂಜು ತರೀಕೆರೆ ಕಳೆದ ಎರಡು ವರ್ಷಗಳಿಂದ ತಮಗೆ ಭದ್ರತಾ ಸಿಬ್ಬಂದಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಬಿಡುವಿನ ವೇಳೆಯಲ್ಲಿ ಬರವಣೆಗೆ ಮಾಡಿ ಇದೀಗ ಅವರ ಎರಡನೇ ಪುಸ್ತಕವನ್ನು ಸಮಾಜಕ್ಕೆ ಅರ್ಪಿಸಿದ್ದಾರೆ. ಬಹಳ ಶ್ರದ್ಧೆಯಿಂದ ಸಾಹಿತ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಇದು ತಮಗೆ ಬಹಳ ಸಂತೋಷ ನೀಡಿದೆ. ಮುಂದಿನ ದಿನಗಳಲ್ಲಿ ಮಂಜು ಅವರ ಲೇಖನಿಯಿಂದ ಇನ್ನೂ ಉತ್ತಮ ಕೃತಿಗಳು ಹೊರಬರಲಿ ಎಂದು ಶುಭ ಹಾರೈಸಿದರು.

ಮಂಜು ರೀತಿ ಪೊಲೀಸ್‌ ಇಲಾಖೆಯಲ್ಲಿ ಬಹಳಷ್ಟುಮಂದಿ ಸ್ನಾತಕೋತ್ತರ ಪದವಿ ಪಡೆದು ಸಾಹಿತ್ಯ, ಬರವಣಿಗೆಯಲ್ಲಿ ಆಸಕ್ತಿಯಿರುವವರು ಇದ್ದಾರೆ. ಅವರನ್ನು ಪ್ರೋತ್ಸಾಹಿಸಿ ಬೆಳೆಸುವ ಅಗತ್ಯವಿದೆ. ಮಂಜು ತರೀಕೆರೆ ಅವರ ಪ್ರತಿಭೆ ಗುರುತಿಸಿ ಅವರ ಪುಸಕ್ತ ಬಿಡುಗಡೆಗೆ ಅವಕಾಶ ನೀಡಿದ ಕನ್ನಡಪ್ರಭ ಮತ್ತು ಸುವರ್ಣ ನ್ಯೂಸ್‌ ಉತ್ತಮ ಕೆಲಸ ಮಾಡಿವೆ ಎಂದು ಲೋಕಾಯುಕ್ತರು ಮೆಚ್ಚುಗೆ ವ್ಯಕ್ತಪಡಿಸಿದರು.

ಕನ್ನಡಪ್ರಭ-ಸುವರ್ಣ ನ್ಯೂಸ್‌ ಪ್ರಧಾನ ಸಂಪಾದಕ ರವಿ ಹೆಗಡೆ ಮಾತನಾಡಿ, ಲೋಕಾಯುಕ್ತ ಪಿ.ವಿಶ್ವನಾಥ ಶೆಟ್ಟಿಅವರು ತಮ್ಮ ಕೈಕೆಳಗೆ ಕೆಲಸ ಮಾಡುವ ಪೊಲೀಸ್‌ ಪೇದೆ ಮಂಜು ತರೀಕೆರೆ ಅವರ ಸಾಹಿತ್ಯಾಸಕ್ತಿಯನ್ನು ಪ್ರೋತ್ಸಾಹಿಸುತ್ತಾ ಬಂದಿದ್ದಾರೆ. ಪೊಲೀಸ್‌ ಇಲಾಖೆಯಲ್ಲಿ ಹಲವು ಮಂದಿ ಸಾಹಿತ್ಯಾಸಕ್ತ ಅಧಿಕಾರಿಗಳು, ಸಿಬ್ಬಂದಿ ಇದ್ದಾರೆ. ಪೊಲೀಸ್‌ ಅಧಿಕಾರಿಯಾಗಿದ್ದ ವಿಜಯ್‌ ಸಾಸನೂರು ಸಾಹಿತ್ಯದ ಮೂಲಕವೂ ಹೆಸರು ಮಾಡಿದ್ದಾರೆ. ಅವರಂತೆಯೇ ಮಂಜು ತರೀಕೆರೆ ಉತ್ತಮ ಸಾಹಿತಿಯಾಗಲಿ ಎಂದು ಶುಭ ಹಾರೈಸಿದರು.

ಲೇಖಕ ಮಂಜು ತರೀಕೆರೆ ಮಾತನಾಡಿ, ಕರ್ತವ್ಯದ ನಂತರ ಬಿಡುವಿನ ವೇಳೆಯಲ್ಲಿ ಬರವಣಿಗೆ ಮಾಡಿ ಎರಡನೇ ಕೃತಿ ಪ್ರಕಟಿಸಿದ್ದೇನೆ. ಈ ನನ್ನ ಕಾರ್ಯಕ್ಕೆ ಲೋಕಾಯುಕ್ತ ವಿಶ್ವನಾಥ ಶೆಟ್ಟಿಅವರು ಬಹಳ ಸಹಾಯ ಮಾಡಿದ್ದಾರೆ. 24 ಸೆಕೆಂಡ್ಸ್‌ ಕಥೆ ಸಿನಿಮಾ ಸ್ಕ್ರಿಪ್ಟ್ ಮಾದರಿಯಲ್ಲಿದೆ. ಮಂಗಳ ಮುಖಿಯರ ಭಾವನೆ, ಬದುಕಿನ ಕಥಾ ಹಂದರ ಒಳಗೊಂಡಿದೆ ಎಂದರು. ಲೋಕಾಯುಕ್ತ ರಿಜಿಸ್ಟ್ರಾರ್‌ ನಂಜುಂಡಸ್ವಾಮಿ, ಇನ್ಸ್‌ಪೆಕ್ಟರ್‌ ಎ.ಪಿ.ಸಂತೋಷ್‌, ಲಯನ್ಸ್‌ ಕ್ಲಬ್‌ ಗವರ್ನರ್‌ ಲಯನ್‌ ವಿಜಯ್‌ ಕುಮಾರ್‌ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

click me!