ಕೊರೋನಾ ವೈರಸ್ ಹರಡುವ ಹಿನ್ನೆಲೆಯಲ್ಲಿ ತಾಲೂಕಿನಲ್ಲಿ ಲಾಕ್‌ಡೌನ್ ನಿರ್ಬಂಧವನ್ನು ಮುಂದುವರಿಸಿಕೊಂಡು, ನಿರ್ಬಂಧ ಸಡಿಲಿಕೆಯ ಸಮಯದಲ್ಲಿ ನಿವಾಸಿಗಳು ಅಂತರ ಕಾಯ್ದುಕೊಂಡು ಸಾಮಗ್ರಿಗಳನ್ನು ಖರೀದಿಸಬೇಕು. ನಿರ್ಬಂಧದ ಸಮಯದಲ್ಲಿ ಎಲ್ಲರೂ ಮನೆಯಲ್ಲಿಯೇ ಇರುವಂತೆ ನೋಡಿಕೊಂಡು ಪೊಲೀಸ್ ಬಂದೋಬಸ್ತ್ ಕಟ್ಟುನಿಟ್ಟಾಗಿ ಮುಂದುವರಿಸಲು ಶಾಸಕ ಕೆ.ಜಿ. ಬೋಪಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನಿರ್ಧರಿಸಲಾಯಿತು.
ವಿರಾಜಪೇಟೆ(ಏ.08): ಕೊರೋನಾ ವೈರಸ್ ಹರಡುವ ಹಿನ್ನೆಲೆಯಲ್ಲಿ ತಾಲೂಕಿನಲ್ಲಿ ಲಾಕ್‌ಡೌನ್ ನಿರ್ಬಂಧವನ್ನು ಮುಂದುವರಿಸಿಕೊಂಡು, ನಿರ್ಬಂಧ ಸಡಿಲಿಕೆಯ ಸಮಯದಲ್ಲಿ ನಿವಾಸಿಗಳು ಅಂತರ ಕಾಯ್ದುಕೊಂಡು ಸಾಮಗ್ರಿಗಳನ್ನು ಖರೀದಿಸಬೇಕು. ನಿರ್ಬಂಧದ ಸಮಯದಲ್ಲಿ ಎಲ್ಲರೂ ಮನೆಯಲ್ಲಿಯೇ ಇರುವಂತೆ ನೋಡಿಕೊಂಡು ಪೊಲೀಸ್ ಬಂದೋಬಸ್ತ್ ಕಟ್ಟುನಿಟ್ಟಾಗಿ ಮುಂದುವರಿಸಲು ಶಾಸಕ ಕೆ.ಜಿ. ಬೋಪಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನಿರ್ಧರಿಸಲಾಯಿತು.
ಕೊರೋನಾ ವೈರಸ್ ತಡೆಗಟ್ಟುವಿಕೆಯ ಕಾರ್ಯದ ಪ್ರಗತಿ ಪರಿಶೀಲನಾ ಸಭೆಯು ತಾಲೂಕು ಕಚೇರಿಯ ಸಭಾಂಗಣದಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ನಡೆಯಿತು. ಸಭೆಯಲ್ಲಿ ಮಾತನಾಡಿದ ಶಾಸಕ ಬೋಪಯ್ಯ, ಕೊರೋನಾ ಸಂಪೂರ್ಣವಾಗಿ ನಿಯಂತ್ರಣಕ್ಕೆ ಬರುವವರೆಗೂ ಲಾಕ್‌ಡೌನ್ ನಿರ್ಬಂಧ ಹಾಗೂ ಪೊಲೀಸ್ ಬಂದೋಬಸ್ತ್ ಈಗಿನಂತೆಯೇ ಮುಂದುವರಿಯಬೇಕು.
ವಾಟ್ಸಾಪ್ ಅಡ್ಮಿನ್‌ಗಳೇ ಎಚ್ಚರವಿರಲಿ, ಗ್ರೂಪ್‌ಗಳ ಮೇಲೆ ನಿಗಾ
ಹೊರ ರಾಜ್ಯದಿಂದ ಕಾರ್ಮಿಕರಾಗಿ ತಾಲೂಕಿಗೆ ಬಂದಿರುವ ನಿರ್ಗತಿಕ ಕಾರ್ಮಿಕ ಫಲಾನುಭವಿಗಳನ್ನು ಗುರುತಿಸಿ ಸಹಿ ಪಡೆದು ಪಡಿತರ ಕಿಟ್‌ಗಳನ್ನು ವಿತರಿಸಬೇಕು. ವಿರಾಜಪೇಟೆಯ ತುರ್ತು ಚಿಕಿತ್ಸಾ ರೋಗಿಗಳು ಚಿಕಿತ್ಸೆಗಾಗಿ ಮೈಸೂರು, ಇತರ ಜಿಲ್ಲೆಗಳಿಗೆ ತೆರಳ ಬೇಕಾದರೆ ಇಲ್ಲಿನ ಸಾರ್ವಜನಿಕ ಆಸ್ಪತ್ರೆಯಿಂದಲೇ ಅಗತ್ಯ ಚಿಕಿತ್ಸೆಯ ರೋಗಿಗಳ ವಿವರಗಳ ಮಾಹಿತಿಯ ಅನುಮತಿ ಮೇರೆಗೆ ಆ್ಯಂಬುಲೆನ್ಸ್‌ನಲ್ಲಿ ತೆರಳಬಹುದಾಗಿದೆ. ಎಲ್ಲ ಅಧಿಕಾರಿಗಳು ಎಚ್ಚರ ವಹಿಸಿ ಕರ್ತವ್ಯ ನಿರ್ವಹಿಸಬೇಕಾಗಿದೆ. ಕಡುಬಡವರು, ನಿರ್ಗತಿಕರು, ನಿರ್ಗತಿಕ ಕಾರ್ಮಿಕರುಗಳಿಗೆ ಸೂಕ್ತ ಸಮಯದಲ್ಲಿ ಪಡಿತರ ಕಿಟ್‌ಗಳನ್ನು ವಿತರಿಸಬೇಕು. ಕೊಡಗು ಕೇರಳ ಸಂಪರ್ಕಿಸುವ ಕರಿಕೆ, ಕುಟ್ಟಹಾಗೂ ಮಾಕುಟ್ಟಪ್ರದೇಶದ ಚೆಕ್‌ಪೋಸ್ಟ್‌ಗಳಲ್ಲಿ ಹೊರ ರಾಜ್ಯದಿಂದ ಬಂದವರು ನುಸಳದಂತೆ ಕಠಿಣ ಕ್ರಮ ವಹಿಸುವಂತೆ ತಿಳಿಸಿದರು.
ವಿರಾಜಪೇಟೆ ತಾಲೂಕು ಆಡಳಿತದಿಂದ ಮೂರು ದಿನಗಳ ಹಿಂದೆ ತಾಲೂಕಿನಲ್ಲಿ ಹೊರ ರಾಜ್ಯದಿಂದ ಬಂದ ಸುಮಾರು 1647 ನಿರ್ಗತಿಕ ಕಾರ್ಮಿಕರಿಗೆ ಪಡಿತರ ಕಿಟ್‌ಗಳನ್ನು ವಿತರಿಸಿದ ಬಗ್ಗೆ ಸಭೆಯಲ್ಲಿ ತಿಳಿಸಲಾಯಿತು.
ಸಭೆಯಲ್ಲಿ ತಾಲೂಕು ತಹಸೀಲ್ದಾರ್ ಕೆ.ಎಸ್. ನಂದೀಶ್, ನೋಡಲ್ ಅಧಿಕಾರಿ ನಂಜುಂಡಸ್ವಾಮಿ, ಡಿವೈಎಸ್‌ಪಿ ಸಿ.ಟಿ. ಜಯಕುಮಾರ್, ವಿರಾಜಪೇಟೆ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಎ.ಎಂ. ಶ್ರೀಧರ್, ಸಹಾಯಕ ಅಭಿಯಂತರ ಎನ್.ಪಿ. ಹೇಮ್‌ಕುಮಾರ್, ತಾಲೂಕು ಪಂಚಾಯಿತಿ ಅಧಿಕಾರಿಗಳು, ಪಶುಸಂಗೋಪನಾ ಇಲಾಖೆ ಅಧಿಕಾರಿ ತಿಮ್ಮಯ್ಯ, ಇಲ್ಲಿನ ಸಾರ್ವಜನಿಕ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ವಿಶ್ವನಾಥ್ ಸಿಂಪಿ, ವಿರಾಜಪೇಟೆ ತಾಲೂಕು ವೈದ್ಯಾಧಿಕಾರಿ ಡಾ. ಯತಿರಾಜು ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ತಾಲೂಕು ಕಚೇರಿಯ ಸಿಬ್ಬಂದಿ ಹಾಜರಿದ್ದರು.
ಕಾಸರಗೋಡಿನಿಂದ ಕಾಲ್ನಡಿಗೆಯಲ್ಲಿ ಬಂದ ಕಾರ್ಮಿಕರು ವಾಪಸ್
ಕೇರಳದ ಕಾಸರಗೋಡಿನಿಂದ ಕಾಲ್ನಡಿಗೆಯಲ್ಲಿ ಕೊಡಗು- ಕೇರಳ ಗಡಿ ಪ್ರದೇಶವಾದ ಮಾಕುಟ್ಟಚೆಕ್‌ಪೋಸ್ಟ್‌ಗೆ ಬಂದಿದ್ದ ಮೂರು ಮಂದಿ ಕಾರ್ಮಿಕರನ್ನು ಹಿಂದಕ್ಕೆ ಕಳಿಸಲಾಗಿದ್ದು ಕೇರಳದಲ್ಲಿಯೇ 14 ದಿನಗಳ ಆರೋಗ್ಯ ತಪಾಸಣೆ ಮಾಡಿ ದೃಢೀಕರಣ ಪತ್ರ ಪಡೆದ ನಂತರ ಕರ್ನಾಟಕಕ್ಕೆ ಮರಳುವಂತೆ ಅಧಿಕಾರಿಗಳು ಸೂಚನೆ ನೀಡಿದ್ದಾರೆ.
ಈ ಮೂರು ಮಂದಿ ಕಾರ್ಮಿಕರಾಗಿ ದುಡಿಯಲು ಕೆಲವು ತಿಂಗಳುಗಳ ಹಿಂದೆ ಕರ್ನಾಟಕದಿಂದ ಕೇರಳದ ಕಾಸರಗೋಡಿಗೆ ತೆರಳಿದ್ದರೆಂದು ಗಡಿಯಲ್ಲಿ ಅಧಿಕಾರಿಗಳು ನಡೆಸಿದ ತನಿಖೆಯಿಂದ ಗೊತ್ತಾಗಿದೆ. ಕೇರಳದ ಕಾಸರಗೋಡಿನಲ್ಲಿ ಕೊರೋನಾ ವೈರಸ್ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಮೂರು ಮಂದಿ ಕಾರ್ಮಿಕರಿಗೂ ಸೋಂಕು ತಗಲಿರಬಹುದೆಂಬ ಶಂಕೆಯಿಂದ ವಾಪಸ್ ಕಳುಹಿಸುವಂಥ ನಿರ್ಧಾರವನ್ನು ಅಧಿಕಾರಿಗಳು ಕೈಗೊಂಡಿದ್ದಾರೆ.