Belagavi : ಫಾರ್ಮರ್ಸ್ ಸಕ್ಕರೆ ಕಾರ್ಖಾನೆಯಿಂದ ರೈತರ ಹೆಸರಲ್ಲಿ ಸಾಲ

By Kannadaprabha NewsFirst Published Jan 31, 2023, 6:27 AM IST
Highlights

ಕಾಗವಾಡ ಶಾಸಕ ಶ್ರೀಮಂತ ಪಾಟೀಲ ಅವರ ಒಡೆತನದ ಅಥಣಿ ಫಾರ್ಮ​ರ್‍ಸ್ ಸಕ್ಕರೆ ಕಾರ್ಖಾನೆಯಲ್ಲಿ ಕಬ್ಬು ಪೂರೈಸುವ ರೈತರಿಗೆ ತೂಕದಲ್ಲಿ ಮೋಸ ಮಾಡುವುದಲ್ಲದೇ ಅನೇಕ ರೈತರ ಮತ್ತು ಕಾರ್ಖಾನೆಯ ಕಾರ್ಮಿಕರ ಗಮನಕ್ಕೆ ತರದೇ ಅವರ ಹೆಸರಿನಲ್ಲಿ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಕೋಟ್ಯಂತರ ರುಪಾಯಿಗಳ ಸಾಲ ಪಡೆದುಕೊಳ್ಳಲಾಗಿದೆ

  ಅಥಣಿ :  ಕಾಗವಾಡ ಶಾಸಕ ಶ್ರೀಮಂತ ಪಾಟೀಲ ಅವರ ಒಡೆತನದ ಅಥಣಿ ಫಾರ್ಮ​ರ್‍ಸ್ ಸಕ್ಕರೆ ಕಾರ್ಖಾನೆಯಲ್ಲಿ ಕಬ್ಬು ಪೂರೈಸುವ ರೈತರಿಗೆ ತೂಕದಲ್ಲಿ ಮೋಸ ಮಾಡುವುದಲ್ಲದೇ ಅನೇಕ ರೈತರ ಮತ್ತು ಕಾರ್ಖಾನೆಯ ಕಾರ್ಮಿಕರ ಗಮನಕ್ಕೆ ತರದೇ ಅವರ ಹೆಸರಿನಲ್ಲಿ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಕೋಟ್ಯಂತರ ರುಪಾಯಿಗಳ ಸಾಲ ಪಡೆದುಕೊಳ್ಳಲಾಗಿದೆ ಎಂದು ನ್ಯಾಯವಾದಿ ಹಾಗೂ ಆಮ್… ಆದ್ಮಿ ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂಪತಕುಮಾರ ಶೆಟ್ಟಿಆರೋಪ ಮಾಡಿದರು.

ಅಥಣಿ ಪಟ್ಟಣದಲ್ಲಿ ಮತ್ತು ಕಾಗವಾಡ ಮತಕ್ಷೇತ್ರಗಳ ಸಮಗ್ರ ಅಭಿವೃದ್ಧಿಗಾಗಿ ಸಮಾನ ಮನಸ್ಕರ ಸಭೆಯ ನೇತೃತ್ವ ವಹಿಸಿ ಮಾತನಾಡಿದ ಅವರು, ಕಬ್ಬು ಪೂರೈಸುವ ರೈತರಿಗೆ ಕನಿಷ್ಠ ಬೆಂಬಲ ಬೆಲೆ ನೀಡುವಲ್ಲಿ ಯ ಮಾಲೀಕರು ಹಿಂದೇಟು ಹಾಕುತ್ತಿದ್ದಾರೆ. ಜನಪ್ರತಿನಿಧಿಗಳ ಒಡೆತನದಲ್ಲಿರುವ ಕಾರ್ಖಾನೆಗಳಲ್ಲಿ ಹೆಚ್ಚು ಮೋಸವಾಗುತ್ತಿದೆ. ಅಥಣಿ ಫಾರ್ಮ​ರ್‍ಸ್ ಸಕ್ಕರೆ ಕಾರ್ಖಾನೆ ತೂಕದಲ್ಲಿ ಮೋಸವಾಗುತ್ತಿತ್ತು. ಅದನ್ನು ತಡೆಗಟ್ಟುವಲ್ಲಿ ಕ್ರಮ ಕೈಗೊಳ್ಳಬೇಕು. ರೈತರ ಮತ್ತು ಕಾರ್ಮಿಕರ ಹೆಸರಿನಲ್ಲಿ ಫೋರ್ಜರಿ ಸಹಿಗಳನ್ನು ಮಾಡಿ ಕೋಟ್ಯಂತರ ರು.ಗಳ ಸಾಲ ಪಡೆಯಲಾಗಿದೆ. ರಾಷ್ಟ್ರೀಕೃತ ಬ್ಯಾಂಕ್‌ ಸಿಬ್ಬಂದಿ ಸಹಕಾರದೊಂದಿಗೆ ರೈತರ ನಕಲಿ ಖಾತೆಗಳನ್ನು ಸೃಷ್ಟಿಸಿ ಸಾಲ ಪಡೆದುಕೊಂಡಿದ್ದಾರೆ. ಸಾಲ ಪಡೆದುಕೊಳ್ಳದ ರೈತರಿಗೆ ಸಾಲ ತುಂಬುವಂತೆ ನೋಟಿಸ್‌ ಬಂದಿರುವುದರಿಂದ ಈ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಈ ಬಗ್ಗೆ ಅನೇಕ ರೈತ ಸಂಘದ ಮುಖಂಡರು ಮತ್ತು ರೈತರು ಸಂಬಂಧಪಟ್ಟಅಧಿಕಾರಿಗಳಿಗೆ ಇದರ ಬಗ್ಗೆ ಸೂಕ್ತ ತನಿಖೆ ನಡೆಸಿ ಕಬ್ಬು ಪೂರೈಸಿದ ರೈತರಿಗೆ ಮತ್ತು ಕಾರ್ಮಿಕರಿಗೆ ಮೋಸವಾಗದಂತೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

ಅಥಣಿ ಜೋಡಿ ಕೆರೆಗಳ ಅಭಿವೃದ್ಧಿಗಾಗಿ ನಿರಂತರ ಹೋರಾಟ:

ಪಟ್ಟಣದ ಸೌಂದರ್ಯವನ್ನು ಹೆಚ್ಚಿಸುವ ಐತಿಹಾಸಿಕ ಜೋಡಿ ಕೆರೆಗಳನ್ನು ಕೆರೆಗಳ ಅಭಿವೃದ್ಧಿ ಪ್ರಾಧಿಕಾರದ ನಿಯಮದಂತೆ ಅಭಿವೃದ್ಧಿಪಡಿಸಬೇಕು. ಕೆರೆಯ ಸ್ಥಳದಲ್ಲಿ ಮತ್ತು ನೈಸರ್ಗಿಕವಾಗಿ ಹರಿದು ಹೋಗುವ ಹಳ್ಳಗಳ ಜಾಗದಲ್ಲಿ ಅಕ್ರಮವಾಗಿ ಕಟ್ಟಡಗಳನ್ನು ಕಟ್ಟಲಾಗುತ್ತಿದೆ. ಅವುಗಳನ್ನು ತೆರವುಗೊಳಿಸುವಲ್ಲಿ ಸಂಬಂಧಪಟ್ಟಅಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಕೆರೆಗಳ ಅಭಿವೃದ್ಧಿ ಮತ್ತು ಹಳ್ಳಗಳ ಒತ್ತುವರಿ ಮಾಡಿರುವ ವಿರುದ್ಧ ನಮ್ಮ ಹೋರಾಟ ನಿರಂತರವಾಗಿ ಇರುತ್ತದೆ ಎಂದು ಹೇಳಿದರು.

ಅಥಣಿಯ ಶಿವಯೋಗಿಗಳ ಗಚ್ಚಿನಮಠವು ಸ್ವತಂತ್ರ ಮಠವಾಗಿದ್ದು, ಚಿತ್ರದುರ್ಗ ಶಾಖಾ ಮಠದಿಂದ ಬೇರ್ಪಡಿಸುವ ನಿಟ್ಟಿನಲ್ಲಿ ಭಕ್ತರು ಹೋರಾಟಕ್ಕೆ ಸಿದ್ಧವಾದರೆ ನಮ್ಮದು ಸಂಪೂರ್ಣ ಬೆಂಬಲ ನೀಡುತ್ತೇವೆ. ಅಥಣಿ ಪುರಸಭೆಯನ್ನು ನಗರಸಭೆಯನ್ನಾಗಿ ಪರಿವರ್ತಿಸಲು ನಮ್ಮ ಬೆಂಬಲವಿದೆ. ಅಥಣಿ ಮತ್ತು ಕಾಗವಾಡ ಕ್ಷೇತ್ರಗಳ ಸಮಗ್ರ ಅಭಿವೃದ್ಧಿಗಾಗಿ ನಾವು ಸೂಕ್ತ ಪ್ರಣಾಳಿಕೆ ಸಿದ್ಧಪಡಿಸಲು ಜನಾಭಿಪ್ರಾಯ ಕೇಳುತ್ತಿದ್ದೇವೆ ಎಂದು ತಿಳಿಸಿದರು.

ಈ ವೇಳೆ ಅಥಣಿ ಜಿಲ್ಲಾ ಹೋರಾಟ ಸಮಿತಿ ಅಧ್ಯಕ್ಷ ಪ್ರಶಾಂತ ತೋಡಕರ, ಮನೋಹರ ಹಂಜಿ, ಅಪ್ಪಾಸಾಹೇಬ ಅಲಿಬಾದಿ, ಮಾಜಿ ಸೈನಿಕ ಗುರಪ್ಪ ಮಗದುಮ್ಮ, ರಾಮಚಂದ್ರ ಬೋರಾಡೆ, ಶಿವಾನಂದ ಕೋತ ಸೇರಿದಂತೆ ಇನ್ನಿತರರು ತಮ್ಮ ಸಲಹೆ ಸೂಚನೆಗಳನ್ನು ತಿಳಿಸಿದರು. 

click me!