ಕನ್ನಡದ ಹೆಮ್ಮೆ, ಕರ್ನಾಟಕದ ಪರಂಪರೆ ಉಳಿಸಿ ಬೆಳೆಸೋಣ: ರಾಜ್ಯಪಾಲೆ ಡಾ.ಸುಧಾ ಯಾದವ್ ಕರೆ

Published : Nov 01, 2026, 07:06 PM IST
Dr. Sudha Yadav

ಸಾರಾಂಶ

ಕನ್ನಡ ರಾಜ್ಯೋತ್ಸವದ ಹಿನ್ನೆಲೆಯಲ್ಲಿ ರಾಜ್ಯಪಾಲರಾದ ಡಾ.ಸುಧಾ ಯಾದವ್ ಅವರು ನಾಡಿನ ಜನತೆಗೆ ಶುಭಾಶಯ ಕೋರಿದ್ದಾರೆ. ಕರ್ನಾಟಕದ ಭವ್ಯ ಇತಿಹಾಸ, ತಂತ್ರಜ್ಞಾನದ ಸಾಧನೆಗಳನ್ನು ಸ್ಮರಿಸಿರುವ ಅವರು, ಸಮೃದ್ಧ ರಾಜ್ಯ ನಿರ್ಮಾಣಕ್ಕೆ ಒಗ್ಗಟ್ಟಿನಿಂದ ಶ್ರಮಿಸಲು ಕರೆ ನೀಡಿದ್ದಾರೆ.

ಬೆಂಗಳೂರು: ಕರ್ನಾಟಕ ರಾಜ್ಯಪಾಲ ಡಾ.ಸುಧಾ ಯಾದವ್ ಅವರು ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿ ನಾಡಿನ ಸಮಸ್ತ ಜನತೆಗೆ ಹೃತ್ಪೂರ್ವಕ ಶುಭಾಶಯಗಳನ್ನು ಕೋರಿದ್ದಾರೆ.

ಏನಂದ್ರು ರಾಜ್ಯಪಾಲರು?

ತಮ್ಮ ಸಂದೇಶದಲ್ಲಿ..ಕರ್ನಾಟಕದ ಅಭಿವೃದ್ಧಿಗಾಗಿ ಶ್ರಮಿಸಿದ ಮಹಾನ್ ನಾಯಕರು, ದೂರದೃಷ್ಟಿಯುಳ್ಳ ಗಣ್ಯರು ಹಾಗೂ ಸಾಮಾನ್ಯ ಜನರ ದೃಷ್ಟಿಕೋನ, ಸಮರ್ಪಣೆ ಮತ್ತು ತ್ಯಾಗಗಳನ್ನು ಈ ಸಂದರ್ಭದಲ್ಲಿ ಕೃತಜ್ಞತೆಯಿಂದ ಸ್ಮರಿಸೋಣ. ನಮ್ಮ ಬೇರುಗಳನ್ನು ನೆನಪಿಸಿಕೊಳ್ಳಲು ಹಾಗೂ ರಾಜ್ಯದ ಸಾಧನೆಗಳನ್ನು ಗೌರವಿಸಲು ಇದು ಒಂದು ಮಹತ್ವದ ಸಂದರ್ಭವಾಗಿದೆ ಎಂದು ರಾಜ್ಯಪಾಲರು ತಿಳಿಸಿದ್ದಾರೆ.

ಕರ್ನಾಟಕವು ಭವ್ಯ ಇತಿಹಾಸ, ಶ್ರೀಮಂತ ಸಾಂಸ್ಕೃತಿಕ ಪರಂಪರೆ ಹಾಗೂ ವೈವಿಧ್ಯಮಯ ಸಂಪ್ರದಾಯಗಳನ್ನು ಹೊಂದಿರುವ ನಾಡಾಗಿದೆ. ಜ್ಞಾನ, ಕಲೆ, ಸಾಹಿತ್ಯ, ಆಧ್ಯಾತ್ಮ ಮತ್ತು ಸಾಮಾಜಿಕ ಸುಧಾರಣೆಯ ಕ್ಷೇತ್ರಗಳಲ್ಲಿ ಕರ್ನಾಟಕದ ಪರಂಪರೆಯು ಭಾರತದ ನಾಗರಿಕತೆಯ ಬೆಳವಣಿಗೆಗೆ ಮಹತ್ವದ ಕೊಡುಗೆ ನೀಡಿದೆ ಎಂದು ರಾಜ್ಯಪಾಲರು ಹೇಳಿದ್ದಾರೆ.

ಕರ್ನಾಟಕವು ತಂತ್ರಜ್ಞಾನ, ಶಿಕ್ಷಣ, ವಿಜ್ಞಾನ, ನಾವೀನ್ಯತೆ, ಏರೋಸ್ಪೇಸ್, ಕೈಗಾರಿಕೆಗಳು ಮತ್ತು ಉದ್ಯಮಶೀಲತೆಯ ಪ್ರಮುಖ ಕೇಂದ್ರವಾಗಿ ಗುರುತಿಸಿಕೊಂಡಿದೆ. ನಮ್ಮ ರಾಜ್ಯವು ರಾಷ್ಟ್ರದ ಪ್ರಗತಿಗೆ ನಿರಂತರವಾಗಿ ಮಹತ್ವದ ಕೊಡುಗೆ ನೀಡುತ್ತಿದೆ. ಇಂತಹ ಮಹಾನ್ ರಾಜ್ಯದೊಂದಿಗೆ ನಂಟು ಹೊಂದಿರುವುದು ಹಾಗೂ ಇಲ್ಲಿನ ಜನರ ಆತ್ಮೀಯತೆ, ಉದಾರತೆ ಮತ್ತು ಪ್ರೀತಿಯನ್ನು ಅನುಭವಿಸುತ್ತಿರುವುದು ನನಗೆ ಹೆಮ್ಮೆಯ ವಿಷಯವಾಗಿದೆ ಎಂದು ರಾಜ್ಯಪಾಲರು ತಿಳಿಸಿದ್ದಾರೆ.

ರಾಜ್ಯದ ಪ್ರಗತಿಗಾಗಿ ಎಲ್ಲರೂ ಒಗ್ಗಟ್ಟಿನಿಂದ ಶ್ರಮಿಸುವಂತೆ ಕರೆ ನೀಡಿದ ಡಾ. ಸುಧಾ ಯಾದವ್ ಅವರು, ನನ್ನ ಪ್ರೀತಿಯ ಕರ್ನಾಟಕದ ಜನರೇ, ಈ ಐತಿಹಾಸಿಕ ಸಂದರ್ಭದಲ್ಲಿ ಅಭಿವೃದ್ಧಿ ಹೊಂದಿದ, ಎಲ್ಲರನ್ನೂ ಒಳಗೊಂಡ ಹಾಗೂ ಸಮೃದ್ಧ ಕರ್ನಾಟಕವನ್ನು ನಿರ್ಮಿಸುವ ನಮ್ಮ ಬದ್ಧತೆಯನ್ನು ಮತ್ತೊಮ್ಮೆ ದೃಢಪಡಿಸೋಣ. ನಮ್ಮ ಅಮೂಲ್ಯ ಪರಂಪರೆಯನ್ನು ಸಂರಕ್ಷಿಸೋಣ, ನಾವೀನ್ಯತೆಯನ್ನು ಪ್ರೋತ್ಸಾಹಿಸೋಣ, ಯುವಜನತೆಯನ್ನು ಸಬಲೀಕರಣಗೊಳಿಸೋಣ ಹಾಗೂ ಅಭಿವೃದ್ಧಿಯ ಫಲಗಳು ಸಮಾಜದ ಪ್ರತಿಯೊಂದು ವರ್ಗಕ್ಕೂ ತಲುಪುವಂತೆ ಶ್ರಮಿಸೋಣ ಎಂದು ಕರೆ ನೀಡಿದ್ದಾರೆ.

ಕನ್ನಡ ರಾಜ್ಯೋತ್ಸವದ ಈ ಶುಭ ಸಂದರ್ಭದಲ್ಲಿ ರಾಜ್ಯದ ಸಮಸ್ತ ಜನತೆಗೆ ರಾಜ್ಯಪಾಲರು ಮತ್ತೊಮ್ಮೆ ಹೃತ್ಪೂರ್ವಕ ಶುಭಾಶಯಗಳನ್ನು ಸಲ್ಲಿಸಿದ್ದು, ತಮ್ಮ ಸಂದೇಶವನ್ನು “ಜೈ ಭಾರತ್! ಜೈ ಕರ್ನಾಟಕ!” ಎಂಬ ಘೋಷಣೆಯೊಂದಿಗೆ ಮುಕ್ತಾಯಗೊಳಿಸಿದ್ದಾರೆ.

PREV
Read more Articles on
click me!

Recommended Stories

ಬೆಂಗಳೂರಿನಿಂದ ಮುಂಬೈ, ಚೆನ್ನೈ, ಹೈದರಾಬಾದ್ ನಗರಗಳಿಗೆ ಬುಲೆಟ್ ಟ್ರೈನ್: 4000 ಕಿಮೀ ಯೋಜನೆಗೆ ಮೋದಿ ಅಂಕಿತ!
ರಾಜ್ಯದೆಲ್ಲೆಡೆ ಏರ್ಪೋರ್ಟ್‌ ಮಾದರಿ ರೈಲು ನಿಲ್ದಾಣಗಳ ಅಭಿವೃದ್ಧಿ: ರೈಲ್ವೆ ಸಚಿವ ವಿ. ಸೋಮಣ್ಣ