KPSC, KEA ಒಂದೇ ತಾಯಿ ಮಕ್ಕಳಾ? ಕೊನೆಗೂ ಬಯಲಾಯ್ತು ವಿಎಓ ಅಕ್ರಮ; ಶಂಕರ್ ಬನ್ನೂರು ಅರೆಸ್ಟ್‌! ಹಿಂದೆ ಇದ್ದವರು ಯಾರು?

Published : Nov 01, 2026, 04:35 PM IST
KPSC, KEA SCAM Update

ಸಾರಾಂಶ

ಕೆಪಿಎಸ್‌ಸಿ ಮತ್ತು ಕೆಇಎ ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಸರಣಿ ಅಕ್ರಮಗಳು ಮತ್ತು ತಾಂತ್ರಿಕ ಲೋಪಗಳು ಬೆಳಕಿಗೆ ಬಂದಿವೆ. ಇತ್ತೀಚೆಗೆ ನಡೆದ ಗ್ರಾಮ ಆಡಳಿತ ಅಧಿಕಾರಿ (VAO) ಪರೀಕ್ಷೆಯಲ್ಲಿ ಬಿಗಿ ಭದ್ರತೆಯ ನಡುವೆಯೂ ಅಭ್ಯರ್ಥಿಯೊಬ್ಬ ಮೊಬೈಲ್ ಬಳಸಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದು ಸಿಕ್ಕಿಬಿದ್ದಿದ್ದಾನೆ.

ಇದು ಕೇವಲ ಅಭ್ಯರ್ಥಿಗಳ ಅಳಲಷ್ಟೇ ಅಲ್ಲ, ಈಗಾಗಲೇ ಹಲವು ಹಗರಣಗಳಲ್ಲಿ ಸಿಲುಕಿ ಮುಖಭಂಗ ಅನುಭವಿಸಿರುವ ಕೆಪಿಎಸ್‌ಸಿ ಒಂದೆಡೆಯಾದರೆ, ಸರಣಿ ತಾಂತ್ರಿಕ ವೈಫಲ್ಯಗಳಿಂದ ಸುದ್ದಿಯಾಗುತ್ತಿರುವ ಕೆಇಎ ಇನ್ನೊಂದೆಡೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಇತ್ತೀಚೆಗೆ ನಡೆಸಿದ ಗ್ರಾಮ ಆಡಳಿತ ಅಧಿಕಾರಿ ಪರೀಕ್ಷೆಯಲ್ಲೂ ಗಂಭೀರ ಸ್ವರೂಪದ ಅಕ್ರಮ ನಡೆದಿರುವುದು ಬಯಲಾಗಿದೆ. ಅಭ್ಯರ್ಥಿಯೊಬ್ಬ ಪರೀಕ್ಷಾ ಕೊಠಡಿಯೊಳಗೆ ಮೊಬೈಲ್ ಒಯ್ದು ಪರೀಕ್ಷೆ ಬರೆದಿದ್ದಾನೆ ಎಂದರೆ, ಇದನ್ನು ವ್ಯವಸ್ಥೆಯ ದೊಡ್ಡ ದುರಂತವೆನ್ನದೇ ಮತ್ತೇನು ಹೇಳಲು ಸಾಧ್ಯ? ಪ್ರಸ್ತುತ ಸ್ಪರ್ಧಾತ್ಮಕ ಪರೀಕ್ಷೆಗಳ ನಿರ್ವಹಣೆಯಲ್ಲಿ ಕೆಪಿಎಸ್‌ಸಿ ಮತ್ತು ಕೆಇಎ ಎರಡೂ ಒಂದೇ ತಾಯಿಯ ಮಕ್ಕಳಂತೆ ವರ್ತಿಸುತ್ತಿವೆಯೇ ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಮೂಡಿದೆ. ಈ ಕುರಿತ ಸಂಪೂರ್ಣ ವರದಿ ಇಲ್ಲಿದೆ.

ಹಗರಣಗಳ ಸುಳಿಯಲ್ಲಿ ಕೆಪಿಎಸ್‌ಸಿ!

ಇತ್ತೀಚಿನ ದಿನಗಳಲ್ಲಿ ಕೆಪಿಎಸ್‌ಸಿ ಹೆಸರು ಕೇಳಿದರೆ ಸಾಕು ಪರೀಕ್ಷಾರ್ಥಿಗಳು ಆಕ್ರೋಶ ವ್ಯಕ್ತಪಡಿಸುವಂತಾಗಿದೆ. ಸಂಸ್ಥೆಯು ಚೇತರಿಸಿಕೊಳ್ಳಲಾಗದಷ್ಟು ಹಗರಣಗಳ ಸುಳಿಯಲ್ಲಿ ಸಿಲುಕಿದೆ. ಬ್ಲೂಟೂತ್ ಬಳಕೆ, ಒಎಂಆರ್ ಶೀಟ್ ತಿದ್ದುಪಡಿ ಹಾಗೂ ಪಶುವೈದ್ಯಾಧಿಕಾರಿ ಹುದ್ದೆಗಳ ನೇಮಕಾತಿಯಲ್ಲಿ ನಡೆದ ಅಕ್ರಮಗಳಿಗೆ ಸಂಬಂಧಿಸಿದಂತೆ ಈಗಾಗಲೇ ಸಾಹುಕಾರ ಶಿವಶಂಕರಪ್ಪ, ಜ್ಞಾನೇಂದ್ರ, ಕನ್ನಾಳೆ ಸೇರಿದಂತೆ ಪ್ರಮುಖ ಆರೋಪಿಗಳನ್ನು ಬಂಧಿಸಲಾಗಿದೆ. ಈ ಸಾಲು ಸಾಲು ಹಗರಣಗಳಲ್ಲಿ ನ್ಯಾಯ ಯಾವಾಗ ಸಿಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

ಕೆಇಎಯಿಂದ ಸಾಲು ಸಾಲು ಲೋಪಗಳು!

ಇತ್ತೀಚೆಗೆ ಕೆಇಎ ನಡೆಸಿದ ಪೊಲೀಸ್ ಕಾನ್‌ಸ್ಟೇಬಲ್ ಪರೀಕ್ಷೆಯಲ್ಲೂ ಹಲವು ತಾಂತ್ರಿಕ ವೈಫಲ್ಯಗಳು ಕಂಡುಬಂದಿದ್ದವು. ಫೋಟೋ ರೆಕಗನೈಸೇಶನ್ ಪ್ರಕ್ರಿಯೆಯಲ್ಲಿ ಲೋಪ, ಸಮಯಕ್ಕೆ ಸರಿಯಾಗಿ ಪ್ರಶ್ನೆಪತ್ರಿಕೆ ವಿತರಿಸದಿರುವುದು ಹಾಗೂ ತಿಕೋಟಾ ಕೇಂದ್ರದಲ್ಲಿ ನಡೆದ ಘಟನೆಗಳು ಸಂಸ್ಥೆಯ ನಿರ್ವಹಣೆಯನ್ನು ಪ್ರಶ್ನಿಸುವಂತೆ ಮಾಡಿದ್ದವು. ಅಷ್ಟೇ ಅಲ್ಲದೆ, ಸಾವಿರಾರು ರೂಪಾಯಿ ಪರೀಕ್ಷಾ ಶುಲ್ಕ ಸಂಗ್ರಹಿಸಿದರೂ ಪರೀಕ್ಷಾ ಕೇಂದ್ರಗಳಲ್ಲಿ ಅಭ್ಯರ್ಥಿಗಳಿಗೆ ಕುಡಿಯುವ ನೀರು ಮತ್ತು ಕ್ಲಾಕ್ ರೂಂ ವ್ಯವಸ್ಥೆಯನ್ನೂ ಕಲ್ಪಿಸಿರಲಿಲ್ಲ. ಈ ಎಲ್ಲಾ ಲೋಪಗಳ ಕುರಿತು ಪರೀಕ್ಷಾ ಮಂಡಳಿಯು ಆತ್ಮಾವಲೋಕನ ಮಾಡಿಕೊಳ್ಳಬೇಕಾದ ಅನಿವಾರ್ಯತೆಯಿದೆ.

ಕಟ್ಟುನಿಟ್ಟಿನ ತಪಾಸಣೆ ದಾಟಿ ಅಕ್ರಮ ಸಾಧ್ಯವಾಗಿದ್ದು ಹೇಗೆ?

ಕೆಇಎ ನಡೆಸುವ ಪರೀಕ್ಷೆಗಳಿಗೆ ಅಭ್ಯರ್ಥಿಗಳನ್ನು ತಾಂತ್ರಿಕವಾಗಿ ತೀವ್ರ ತಪಾಸಣೆಗೆ ಒಳಪಡಿಸಲಾಗುತ್ತದೆ. ಬೆಲ್ಟ್‌, ಕೈಗೆ ಕಟ್ಟಿದ ದಾರಗಳನ್ನು ಸಹ ತೆಗೆಸಿದ ನಂತರವೇ ಕೊಠಡಿಯೊಳಗೆ ಬಿಡಲಾಗುತ್ತದೆ. ಅಭ್ಯರ್ಥಿಯು ಗೇಟ್‌ನಿಂದ ಕೊಠಡಿಯವರೆಗೆ ಮೂರು ಹಂತಗಳಲ್ಲಿ (ಗೇಟ್‌ ಬಳಿ, ಪ್ರವೇಶ ಪತ್ರ ಪರಿಶೀಲನೆ ವೇಳೆ ಮತ್ತು ಫೋಟೋ ಗುರುತಿಸುವಿಕೆ ಸಮಯದಲ್ಲಿ) ತಪಾಸಣೆಗೆ ಒಳಗಾಗಬೇಕಿರುತ್ತದೆ. ಇಷ್ಟೆಲ್ಲಾ ಕಟ್ಟುನಿಟ್ಟಿನ ಭದ್ರತೆಯ ನಡುವೆಯೂ ಆರೋಪಿ ಶಂಕರ ಬನ್ನೂರು ಮೊಬೈಲ್ ಸಮೇತ ಪರೀಕ್ಷಾ ಕೊಠಡಿ ಪ್ರವೇಶಿಸಲು ಹೇಗೆ ಸಾಧ್ಯವಾಯಿತು? ಈ ಕೃತ್ಯದಲ್ಲಿ ಅವನೊಬ್ಬನೇ ಭಾಗಿಯಾಗಿದ್ದಾನೆಯೇ ಅಥವಾ ಇದರ ಹಿಂದೆ ಇತರ ಪ್ರಭಾವಿಗಳ ಕೈವಾಡವಿದೆಯೇ ಎಂಬ ಹಲವು ಅನುಮಾನಗಳು ಕಾಡುತ್ತಿವೆ.

ಶಂಕರ ಬನ್ನೂರು ಬಂಧನ!

ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸಿದ ಗ್ರಾಮ ಆಡಳಿತ ಅಧಿಕಾರಿ (VAO) ಪರೀಕ್ಷೆಯಲ್ಲಿ ರಾಜ್ಯಕ್ಕೇ ಪ್ರಥಮ ಸ್ಥಾನ ಪಡೆದಿದ್ದ ಹಾವೇರಿ ಮೂಲದ ಶಂಕರ ಬನ್ನೂರು ಎಂಬುವವರನ್ನು ಪರೀಕ್ಷಾ ಅಕ್ರಮದ ಆರೋಪದ ಮೇಲೆ ಪೊಲೀಸರು ಬಂಧಿಸಿದ್ದಾರೆ. ಶಂಕರ ಅವರು ಹಾವೇರಿ ಜಿಲ್ಲೆಯ ಶಿಗ್ಗಾವಿ ಪರೀಕ್ಷಾ ಕೇಂದ್ರದ ಕೊಠಡಿಯೊಂದರ ಕೊನೆಯ ಬೆಂಚ್‌ನಲ್ಲಿ ಕುಳಿತು, ರಹಸ್ಯವಾಗಿ ಮೊಬೈಲ್ ಫೋನ್ ಬಳಸಿದ್ದರು. ಗೂಗಲ್ ಲೆನ್ಸ್ (Google Lens) ಆ್ಯಪ್ ಮೂಲಕ ಪ್ರಶ್ನೆಪತ್ರಿಕೆಯನ್ನು ಸ್ಕ್ಯಾನ್ ಮಾಡಿ, ಉತ್ತರಗಳನ್ನು ಹುಡುಕಿ ಪರೀಕ್ಷೆ ಬರೆದಿರುವುದು ತನಿಖೆಯಲ್ಲಿ ಸಾಬೀತಾಗಿದೆ.

ಸಿಸಿಟಿವಿಯಲ್ಲಿ ಅಕ್ರಮ ಸೆರೆ!

ಪರೀಕ್ಷಾ ಕೇಂದ್ರದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಶಂಕರ ಪರೀಕ್ಷಾ ಕೊಠಡಿಯೊಳಗೆ ಮೊಬೈಲ್ ಬಳಸಿ ಅಕ್ರಮ ಎಸಗಿರುವುದು ಸ್ಪಷ್ಟವಾಗಿ ಸೆರೆಯಾಗಿದೆ. ವಿಎಓ ಪರೀಕ್ಷೆಗಿಂತ ಕೇವಲ 15 ದಿನಗಳ ಮುಂಚೆ ನಡೆದಿದ್ದ ಕೆಎಸ್‌ಆರ್‌ಪಿ ಕಾನ್‌ಸ್ಟೇಬಲ್ ಪರೀಕ್ಷೆಯಲ್ಲಿ ಶಂಕರ ಕೇವಲ 25 ಅಂಕ ಗಳಿಸಿ ಅನುತ್ತೀರ್ಣರಾಗಿದ್ದರು. ಆದರೆ ಕಠಿಣವಾಗಿದ್ದ ವಿಎಓ ಪರೀಕ್ಷೆಯಲ್ಲಿ ಯಾವುದೇ ತಪ್ಪುಗಳಿಲ್ಲದೆ 151.25 ಅಂಕ ಪಡೆದು ರಾಜ್ಯಕ್ಕೆ ಟಾಪರ್ ಆಗಿದ್ದು ಕೆಇಎ ಅಧಿಕಾರಿಗಳಲ್ಲಿ ತೀವ್ರ ಅನುಮಾನ ಮೂಡಿಸಿತ್ತು. ವಿದ್ಯಾರ್ಥಿ ಸಂಘಟನೆಗಳ ಆಕ್ರೋಶ ಹಾಗೂ ಕೆಇಎ ನೀಡಿದ ದೂರಿನ ಮೇರೆಗೆ ಹಾವೇರಿ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ನಡೆದ ಪ್ರಾಥಮಿಕ ತನಿಖೆಯಲ್ಲಿ ಅಕ್ರಮ ನಡೆದಿರುವುದು ದೃಢಪಟ್ಟ ಹಿನ್ನೆಲೆಯಲ್ಲಿ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.

PREV
Read more Articles on
click me!

Recommended Stories

HMT ಇತಿಹಾಸಕ್ಕೆ ಹೊಸ ಕಳೆ; ವಾಚ್‌ಗೆ ನಾಡಿನ ಅಸ್ಮಿತೆ 'ಗಂಡಭೇರುಂಡ'ದ ಸ್ಪರ್ಶ, ಎಚ್‌ಡಿಕೆ ಸಾಥ್!
ಕರ್ನಾಟಕ ರಾಜ್ಯೋತ್ಸವದಲ್ಲಿ ಕನ್ನಡಿಗರ ಹೃದಯ ಗೆದ್ದ ದಿನೇಶ್ ಕಾರ್ತಿಕ್ ಶುಭಾಶಯ..! RCB ಮನೆಮಗನ ಕನ್ನಡ ಪ್ರೀತಿಗೆ ಫ್ಯಾನ್ಸ್‌ ಫಿದಾ!