ಇನ್ನೂ ಆರು ತಿಂಗಳ ಒಳಗಾಗಿ ಎತ್ತಿನ ಹೊಳೆ ಯೋಜನೆ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಆರ್. ರಾಜೇಂದ್ರ ಅಧಿಕಾರಿಗಳಿಗೆ ಸೂಚಿಸಿದರು.
ಮಧುಗಿರಿ : ಇನ್ನೂ ಆರು ತಿಂಗಳ ಒಳಗಾಗಿ ಎತ್ತಿನ ಹೊಳೆ ಯೋಜನೆ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಆರ್. ರಾಜೇಂದ್ರ ಅಧಿಕಾರಿಗಳಿಗೆ ಸೂಚಿಸಿದರು. ಗುರುವಾರ ತಾಲೂಕಿನ ಕಸಬಾ ಜಡೆಗೊಂಡನಹಳ್ಳಿ ಸಮೀಪ ಎತ್ತಿ ಹೊಳೆ ಯೋಜನೆ ಪೈಪ್ ಲೈನ್ ಹಾದು ಹೋಗಿದ್ದು ಅದರ ಗುಣಮಟ್ಟ ಹಾಗೂ ನೀರಿನ ಒತ್ತಡದ ಪರೀಕ್ಷೆ ಪರಿಶೀಲಿಸಿ ಸಂಬಂಧಪಟ್ಟ ಅಧಿಕಾರಿಗಳ ಬಳಿ ಮಾಹಿತಿ ಪಡೆದ ನಂತರ ಮಾತನಾಡಿದರು.
ಇತ್ತೀಚಿಗೆ ಈ ಯೋಜನೆಗೆ ಸಂಬಂಧಪಟ್ಟಂತೆ ಕೆಲವು ಕಾಮಗಾರಿಯ ಗುಣಮಟ್ಟ ನಿರ್ವಹಿಸದೆ ಇದ್ದ ಕಾರಣ ಪೈಪ್‌ಲೈನ್‌ಲ್ಲಿ ನೀರು ಸೋರಿಕೆಯಾಗಿ ಸುತ್ತಮುತ್ತ ಮಣ್ಣಿನ ಸವೆತ ಉಂಟಾಗಿದ್ದು ಎಲ್ಲರಿಗೂ ತಿಳಿದ ವಿಚಾರವಾಗಿದೆ. ಆದರೆ ನಮ್ಮ ಜಿಲ್ಲಾ ವ್ಯಾಪ್ತಿಯಲ್ಲಿ ಈ ರೀತಿಯಾಗದಂತೆ ಅಧಿಕಾರಿಗಳು ಮುತುವರ್ಜಿ ವಹಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು. ಇಲಾಖೆಯ ನಿಯಮನುಸಾರ ಆಗಾಗ್ಗೆ ಪರೀಕ್ಷೆ ನಡೆಸಿ ನೀರು ಸಮರ್ಪಕವಾಗಿ ಹರಿಯುವಂತೆ ನಿಗಾ ವಹಿಸಬೇಕು. ನಮ್ಮ ತಾಲೂಕಿನಲ್ಲಿ 53 ಕೆರೆಗಳಿಗೆ ನೀರು ತುಂಬಿಸುವ ಮಹತ್ವದ ಯೋಜನೆ ಎತ್ತಿನಹೊಳೆ ಯೋಜನೆಯಾಗಿದ್ದು. ಕಾಮಗಾರಿಯ ಒಳ ನೀರಿನ ಒತ್ತಡ ಸಾಮರ್ಥ್ಯ ಪರೀಕ್ಷಿಸಿ ಕಾಮಗಾರಿ ಶೀಘ್ರ ಮುಗಿಸಿ ಎಂದರು.
undefined
ಜೆಎನ್‌ಎಲ್‌ಎಂ ಕಾರ್ಯನಿರ್ವಾಹಕ ಎಂಜಿನಿಯರ್ ಬಿ. ಮುರುಳಿ ಮಾತನಾಡಿ, ನಾನು ಇಲ್ಲಿಗೆ ಬಂದ ನಂತರ ಇದು ಪ್ರಥಮ ಪ್ರಯೋಗವಾಗಿದೆ. ಪ್ರತಿ ಕಿಲೋಮೀಟರ್ ಒಂದರಂತೆ ಪೈಪ್ ಲೈನ್‌ಲ್ಲಿ ನೀರು ತುಂಬಿಸಿ ಒತ್ತಡ ಪರೀಕ್ಷೆ ಮಾಡಲಾಗುತ್ತಿದೆ. ಈ ರೀತಿ ಪ್ರಯೋಗ ಮಾಡಿದರೆ ಪೈಪ್‌ಲೈನ್‌ನಿಂದ ಎತ್ತರಕ್ಕೆ ಚಿಮ್ಮುವ ನೀರಿನ ರಭಸದ ಆಧಾರದ ಮೇಲೆ ಗುರುತ್ವಾಕರ್ಷಣೆಯ ಬಲದ ಮೂಲಕ ನೀರನ್ನು ಕೆರೆಗಳಿಗೆ ಹರಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಕಿರಿಯ ಕಾರ್ಯನಿರ್ವಾಹಕ ಎಂಜಿನಿಯರ್‌ಗಳಾದ ಕೆ.ಆರ್. ಜಯಪ್ರಸಾದ್, ಎಸ್. ಶ್ರೀಪೀಠಾ, ಯೋಜನಾ ವ್ಯವಸ್ಥಾಪಕ ಡಿ. ಶೇಷಗಿರಿ, ಎಂಇಐಎಲ್ ವ್ಯವಸ್ಥಾಪಕ ಡಿ. ಮುನಿಗಣೇಶ್, ಕಿರಿಯ ಗುಣಮಟ್ಟ ತಪಾಸಣಾಧಿಕಾರಿ ಎಸ್.ಕೆ. ಆದಂ ಶಾಫಿ, ಡಿಸಿಸಿ ಬ್ಯಾಂಕ್ ವ್ಯವಸ್ಥಾಪಕ ರಾಮಕೃಷ್ಣಪ್ಪ ಸೇರಿದಂತೆ ಇತರರಿದ್ದರು.