ಮತದಾನ ಶೇ.100ರಷ್ಟಾಗಲಿ, ತುಮಕೂರು ಮಾದರಿಯಾಗಲಿ : ಶುಭಾ ಕಲ್ಯಾಣ್

By Kannadaprabha NewsFirst Published Apr 19, 2024, 2:42 PM IST
Highlights

26ರಂದು ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ಜಿಲ್ಲೆಯ ಎಲ್ಲ ಮತದಾರರು ತಪ್ಪದೇ ಮತದಾನ ಮಾಡಬೇಕು ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಶುಭಾ ಕಲ್ಯಾಣ್ ಹೇಳಿದರು.

 ತುಮಕೂರು :  26ರಂದು ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ಜಿಲ್ಲೆಯ ಎಲ್ಲ ಮತದಾರರು ತಪ್ಪದೇ ಮತದಾನ ಮಾಡಬೇಕು ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಶುಭಾ ಕಲ್ಯಾಣ್ ಹೇಳಿದರು.

ನಗರದ ಸರ್ಕಾರಿ ಜ್ಯೂನಿಯರ್ ಕಾಲೇಜು ಮೈದಾನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ, ಜಿಲ್ಲಾ ಸ್ವೀಪ್ ಸಮಿತಿ, ಕ್ರಿಕೆಟ್ ಕ್ಲಬ್, ವಿವಿಧ ಕ್ರೀಡಾ ಸಂಘಗಳ ಸಹಯೋಗದಲ್ಲಿ ಮತದಾನ ಜಾಗೃತಿ ಮೂಡಿಸಲು ಹಮ್ಮಿಕೊಂಡಿದ್ದ ಪಂಜಿನ ಮೆರವಣಿಗೆಯಲ್ಲಿ ಪಾಲ್ಗೊಂಡು ಮಾತನಾಡಿದರು.

26ರಂದು ಮತದಾರರು ನಿರ್ಭೀತಿಯಿಂದ ಮತವನ್ನು ಚಲಾಯಿಸಲು ಅನುಕೂಲವಾಗುವಂತೆ ಜಿಲ್ಲಾಡಳಿತದಿಂದ ಎಲ್ಲ ಸಿದ್ಧತೆ ಕೈಗೊಳ್ಳಲಾಗಿದೆ. ಮತದಾರರ ಮನೆಗೆ ಸ್ಕ್ಯಾನರ್ ಕೋಡ್ ಹೊಂದಿರುವ ಮಾರ್ಗಸೂಚಿಯನ್ನು ವಿತರಣೆ ಮಾಡಲಾಗುವುದು. ಇದರಿಂದ ಮತದಾರರು ತಮ್ಮ ಮತಗಟ್ಟೆ ವಿವರವನ್ನು ತಿಳಿಯಬಹುದಾಗಿದೆ ಎಂದರು.

ಚುನಾವಣೆ ಹಿನ್ನೆಲೆ ಜಿಲ್ಲಾಡಳಿತ, ಜಿಲ್ಲಾ ಸ್ವೀಪ್ ಸಮಿತಿ, ಜಿಲ್ಲಾ ಪಂಚಾಯಿತಿ ಸೇರಿದಂತೆ ವಿವಿಧ ಇಲಾಖೆಗಳು ಜಿಲ್ಲಾದ್ಯಂತ ಕಳೆದ 20 ದಿನಗಳಿಂದ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿವೆ. ಮತದಾನದ ಮಹತ್ವದ ಬಗ್ಗೆ ಅರಿವು ಮೂಡಿಸಲು ಶ್ರಮಿಸುತ್ತಿವೆ. ಎಲ್ಲ ಮತದಾರರು ಕಡ್ಡಾಯವಾಗಿ ಮತದಾನ ಮಾಡಿದಾಗ ಮಾತ್ರ ಶ್ರಮ ಸಾರ್ಥಕವಾಗುತ್ತದೆ. ಮತಗಟ್ಟೆ ಗಳಲ್ಲಿ 26ರ ಬೆಳಗ್ಗೆ 7ರಿಂದ ಸಂಜೆ 6 ಗಂಟೆಯವರೆಗೆ ಮತದಾನ ಮಾಡಲು ಅವಕಾಶವಿದೆ. ಎಲ್ಲ ಮತದಾರರು ಶೇ.100 ರಷ್ಟು ಮತದಾನ ಮಾಡುವ ಮೂಲಕ ಜಿಲ್ಲೆಯನ್ನು ಮಾದರಿಯಾಗಿಸಬೇಕು. ಕಳೆದ ಚುನಾವಣೆಗಳಲ್ಲಿ ನಗರ ಪ್ರದೇಶದ ಮತದಾರರು ಕಡಿಮೆ ಪ್ರಮಾಣದಲ್ಲಿ ಮತದಾನ ಮಾಡಿದ್ದು, ವಿದ್ಯಾವಂತ ಮತದಾರರೇ ಹೆಚ್ಚಿನ ಸಂಖ್ಯೆಯಲ್ಲಿರುವ ನಗರ ಪ್ರದೇಶದ ಮತದಾನದ ಪ್ರಮಾಣದಲ್ಲಿ ಈ ಬಾರಿ ಹೆಚ್ಚಳವಾಗಬೇಕು ಎಂದು ತಿಳಿಸಿದರು.

ಜಿಲ್ಲೆಯಲ್ಲಿ ಚುನಾವಣಾ ಮಾದರಿ ನೀತಿ ಸಂಹಿತೆ ಉಲ್ಲಂಘನೆ ಕಂಡು ಬಂದಲ್ಲಿ ಸಾರ್ವಜನಿಕರು ಕೂಡಲೇ ಸಹಾಯವಾಣಿ ಸಂಖ್ಯೆ 1950 ಅಥವಾ ಸಿ-ವಿಜಿಲ್ ಮೊಬೈಲ್ ಆಪ್ ಮೂಲಕ ದೂರು ದಾಖಲಿಸುವ ಮೂಲಕ ನ್ಯಾಯಸಮ್ಮತ ಚುನಾವಣೆ ನಡೆಸಲು ಜಿಲ್ಲಾಡಳಿತದೊಂದಿಗೆ ಕೈ ಜೋಡಿಸಬೇಕೆಂದು ಮನವಿ ಮಾಡಿದರು.

ಚುನಾವಣಾ ಸಾಮಾನ್ಯ ವೀಕ್ಷಕ ಹಾಗೂ ಗುಜರಾತ್ ರಾಜ್ಯದ ಐಎಎಸ್ ಅಧಿಕಾರಿ ಕೆ.ಎಸ್. ವಾಸವ ಮಾತನಾಡಿ, ಜಿಲ್ಲೆಯಲ್ಲಿ ವಿನೂತನ ರೀತಿಯಲ್ಲಿ ನಿರಂತರವಾಗಿ ಸ್ವೀಪ್ ಚಟುವಟಿಕೆಗಳನ್ನು ಹಮ್ಮಿಕೊಂಡು ಮತದಾರರಲ್ಲಿ ಜಾಗೃತಿ ಮೂಡಿಸುತ್ತಿರುವ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಪಾರದರ್ಶಕ ಚುನಾವಣೆ ನಡೆಸಲು ಎಲ್ಲರೂ ಸಹಕರಿಸಬೇಕು. ಮತದಾರರು 26ರಂದು ನಡೆಯುವ ಚುನಾವಣಾ ಪರ್ವದಲ್ಲಿ ಪಾಲ್ಗೊಂಡು ಉತ್ಸಾಹದಿಂದ ಮತದಾನ ಮಾಡುವ ಮೂಲಕ ದೇಶಕ್ಕೆ ಗರ್ವ ತರಬೇಕು ಎಂದರು.

ಜಿಲ್ಲಾ ಪಂಚಾಯತಿ ಸಿಇಒ ಹಾಗೂ ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷ ಜಿ.ಪ್ರಭು ಮಾತನಾಡಿ, ಕಳೆದ 2019ರ ಲೋಕಸಭಾ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಶೇ.77ರಷ್ಟು ಮತದಾನವಾಗಿದ್ದು, 26ರ ಚುನಾವಣೆಯಲ್ಲಿ ಶೇ.100ರಷ್ಟು ಮತದಾನವಾಗಬೇಕು. ಮತದಾರ ತನ್ನ ಮತವನ್ನು ಮಾರಿಕೊಳ್ಳದೆ, ಯಾವುದೇ ಆಸೆ-ಆಮಿಷಗಳಿಗೆ ಒಳಗಾಗದೆ ನಿರ್ಭೀತಿಯಿಂದ ಮತದಾನ ಮಾಡಬೇಕು. ಯಾರೇ ಆಗಲಿ 18 ವರ್ಷ ತುಂಬಿದವರೆಲ್ಲರಿಗೂ ಮತ ಚಲಾಯಿಸುವ ಸಮಾನ ಹಕ್ಕನ್ನು ನಮ್ಮ ಸಂವಿಧಾನ ನೀಡಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಶಿವಾನಂದ ಬಿ. ಕರಾಳೆ ಮಾತನಾಡಿದರು. ಸ್ವೀಪ್ ಸಮಿತಿ ನೋಡಲ್ ಅಧಿಕಾರಿ ಹಾಗೂ ಜಂಟಿ ಕೃಷಿ ಉಪನಿರ್ದೇಶಕ ಅಶೋಕ್, ವಿವಿಧ ಇಲಾಖಾಧಿಕಾರಿಗಳು, ಸಿಬ್ಬಂದಿಗಳು ಪಂಜಿನ ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದರು. ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷ ಜಿ. ಪ್ರಭು ಅವರ ಮಕ್ಕಳಾದ ಪ್ರಥಮ್, ಪೂರ್ವಶ್ ಅವರು ಮತದಾನ ಜಾಗೃತಿಯ ಬೆಳಕಿನ ಹೆಜ್ಜೆಯಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು.

ಜಾಥಾಗೆ ಕಳೆ ತಂದ ಚುನಾವಣಾ ರಾಯಭಾರಿಗಳು

ಜಿಲ್ಲೆಯ ಚುನಾವಣಾ ರಾಯಭಾರಿಗಳಾದ ಕಂಬದ ರಂಗಯ್ಯ, ಸಾನಿಕಾ ಸುಲ್ತಾನ್, ಖುಷಿಕ್ ಮಂಜುನಾಥ್ ಎನ್‌ಎಸ್‌ಎಸ್ ವಿದ್ಯಾರ್ಥಿ, ಕ್ರಿಕೆಟ್ ಕ್ಲಬ್ ವಿದ್ಯಾರ್ಥಿಗಳು, ಜಿಲ್ಲಾ ಪಂಚಾಯಿತಿ, ಕೃಷಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಕ್ಷಣ ಇಲಾಖೆ ಸೇರಿದಂತೆ ವಿವಿಧ ಇಲಾಖಾಧಿಕಾರಿ, ಸಿಬ್ಬಂದಿಯೊಂದಿಗೆ ಪಂಜಿನ ಮೆರವಣಿಗೆಗೆ ಸಾಥ್ ನೀಡಿದರು.

ಪಂಜಿನ ಮೆರವಣಿಗೆಯು ನಗರದ ಸರ್ಕಾರಿ ಜ್ಯೂನಿಯರ್ ಕಾಲೇಜು ಮೈದಾನದಿಂದ ಭದ್ರಮ್ಮ ಛತ್ರ, ಚಾಮುಂಡೇಶ್ವರಿ ದೇವಸ್ಥಾನ ಮಾರ್ಗವಾಗಿ ನಗರದ ಪ್ರಮುಖ ರಸ್ತೆಗಳಲ್ಲಿ ಗಾಜಿನ ಮನೆವರೆಗೂ ಸಾಗಿ ಚುನಾವಣೆ ಪರ್ವ-ದೇಶದ ಗರ್ವ ಎಂಬ ಘೋಷವಾಕ್ಯ ಕೂಗುತ್ತಾ ಮತದಾನದ ಬಗ್ಗೆ ಜಾಗೃತಿ ಮೂಡಿಸಲಾಯಿತು.

ಗಾಯಕ ಹಾಗೂ ಚುನಾವಣಾ ರಾಯಭಾರಿ ಕಂಬದರಂಗಯ್ಯ “ಬನ್ನಿರೀ ಎಲ್ಲರೂ ಒಂದಾಗಿ ಸೇರೋಣ, ಮತದಾರಲ್ಲಿ ಜಾಗೃತಿ ಮೂಡಿಸೋಣ” ಎಂಬ ಮತದಾನ ಜಾಗೃತಿ ಗೀತೆ ಹಾಡುವ ಮೂಲಕ ಮತದಾನದ ಸಂಕಲ್ಪಕ್ಕೆ ದನಿಯಾದರು. ಮತ್ತೊಬ್ಬ ಚುನಾವಣಾ ರಾಯಭಾರಿ ಹರಿಕಥಾ ವಿದ್ವಾನ್ ಡಾ.ಲಕ್ಷ್ಮಣದಾಸ್ ಹಾಡಿದ “ಬನ್ನಿ, ಬನ್ನಿ ಸ್ವಾಮಿ, ಬನ್ನಿ-ಮತದಾನ ಮಾಡ ಬನ್ನಿ” ಎಂಬ ಕೀರ್ತನೆಯ ಧ್ವನಿಮುದ್ರಿಕೆಯು ಕಡ್ಡಾಯ ಮತದಾನದ ಮಹತ್ವದ ಬಗ್ಗೆ ತಿಳಿಸಿತು.

click me!