
ಹಾವೇರಿ(ಮಾ.23): ತವರು ಕ್ಷೇತ್ರ ಶಿಗ್ಗಾವಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಆಗಮಿಸಿದ್ದಾರೆ. ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಗೋಟಗೋಡಿ ಗ್ರಾಮದ ಬಳಿಯ ಜಾನಪದ ವಿಶ್ವವಿದ್ಯಾಲಯಕ್ಕೆ ನಿನ್ನೆ(ಬುಧವಾರ) ಭೇಟಿ ನೀಡಿದ್ದರು. ಶ್ರೀಮತಿ ಗಂಗಮ್ಮ ಬೊಮ್ಮಾಯಿ ಜಾನಪದ ವಸ್ತು ಸಂಗ್ರಹಾಲಯ ಹಾಗೂ ಡಾ.ಬಿ.ಅರ್. ಅಂಬೇಡ್ಕರ್ ಕಲಾಭವನವನ್ನ ಸಿಎಂ ಬಸವರಾಜ ಬೊಮ್ಮಾಯಿ ಉದ್ಘಾಟಿಸಿದ್ದಾರೆ. ಬಳಿಕ ಶೈಕ್ಷಣಿಕ ಭವನ ಕಟ್ಟಡ ಕಾಮಗಾರಿಗೆ ಶಂಕುಸ್ಥಾಪನೆ ನೇರವೇರಿಸಿದ್ದಾರೆ.
ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ ಅವರು, ಅಂತರಾಷ್ಟ್ರೀಯ ಮಟ್ಟದ ಎಲ್ಲಾ ವಿಷಯಗಳ ಸಂಗ್ರಹ ಆಗಬೇಕು ಅನ್ನುವ ಉದ್ದೇಶದಿಂದ ಜಾನಪದ ವಿವಿ ಮಾಡಲಾಗಿದೆ. ಬರುವ ದಿನಗಳಲ್ಲಿ ಯಾವುದೇ ದೇಶದ ಜಾನಪದದ ವಿಷಯ ಇಲ್ಲಿ ಸಿಗಬೇಕು. ಮನುಷ್ಯನ ಬೆಳವಣಿಗೆ ಸಂಪೂರ್ಣವಾಗಿ ವ್ಯಕ್ತ ಆಗಿದ್ದರೆ ಅದು ಜನಪದದಿಂದ ಮಾತ್ರ. ಆಡುಭಾಷೆಯಲ್ಲಿ ಇರುವ ಹಾಡು, ಸಂಗೀತ ಅವತ್ತಿನ ಕಾಲದ ಬದುಕಿನ ಕಥೆ ಹೇಳ್ತಾವೆ. ರೈತಾಪಿ ವರ್ಗ, ನೇಕಾರರು, ದುಡಿಯುವ ವರ್ಗದ ವಿಷಯಗಳನ್ನು ಸಂಗ್ರಹ ಮಾಡಲಾಗಿದೆ. ನಾಗರಿಕತೆಯ ಬದಲಾವಣೆ, ಜಾನಪದ ಹೇಗೆ ಅದಕ್ಕೆ ಹೊಂದಿಕೊಂಡಿತ್ತು ಎಂಬುದು ಸಂಗ್ರಹ ಆಗಿದೆ. ಇಡೀ ಉತ್ತರ ಕರ್ನಾಟದ ಕಲಾವಿದರಿಗೆ ಇಲ್ಲಿ ಅವಕಾಶ ಸಿಗಬೇಕು ಅಂತ ತಿಳಿಸಿದ್ದಾರೆ.
ಲೋಕಾಯುಕ್ತ ದಾಳಿ: 40 ಸಾವಿರ ಲಂಚ ಪಡೆವಾಗ ಸಿಕ್ಕಿಬಿದ್ದ ರಾಣೆಬೆನ್ನೂರು ಪಿಎಸ್‌ಐ
ಕಲೆ ಜೀವಂತವಾಗಿರಬೇಕು ಅಂತ ಇಷ್ಟು ದೊಡ್ಡ ಕಲಾಮಂದಿರ ನಿರ್ಮಾಣ ಮಾಡಿದ್ದೇವೆ. ಇನ್ನೊಂದು ಹದಿನೈದು ದಿನಗಳಲ್ಲಿ ಕಲಾ ಮಂದಿರಕ್ಕೆ ಫರ್ನಿಚರ್ ಹಾಕಲಾಗುತ್ತದೆ. ಕೇಂದ್ರದ 1 ಕೋಟಿ ರೂಪಾಯಿ ಹಾಗೂ ರಾಜ್ಯ ಸರ್ಕಾರದ 1 ಕೋಟಿ ರೂಪಾಯಿ ವೆಚ್ಚದಲ್ಲಿ ಮ್ಯೂಸಿಯಮ್ ನಿರ್ಮಾಣ ಮಾಡಲಾಗಿದೆ ಅಂತ ಹೇಳಿದ್ದಾರೆ.
ಜಾನಪದ ವಿವಿ ಪ್ರವಾಸಿ ತಾಣ ಇದಾಗಬೇಕು. ವಿಭಿನ್ನವಾದ ಮ್ಯುಸಿಯಮ್ ಸಿದ್ದಪಡಿಸಲು ಹೇಳಿದ್ದೇನೆ. ಜಾನಪದ ವಿವಿಗೆ ಅಡಿಗಲ್ಲು ನಾವೇ ಹಾಕಿದ್ದು, ಬಹಳ ಸಂತೋಷದಿಂದ ಕಲಾಭವನ ಇಂದು ಉದ್ಘಾಟನೆ ಮಾಡಿದ್ದೇವೆ. ಜನರ ಮಧ್ಯ ಇದ್ದು ತಿಳಿದುಕೊಂಡು ಕಾರ್ಯನಿರ್ವಹಿಸುವ ಕುಲಪತಿ ಇಲ್ಲಿದ್ದಾರೆ. ಈ ವಿವಿ ನೌಕರಿ ಸೃಷ್ಟಿ ಮಾಡೋ ವಿವಿ ಅಲ್ಲ ನಮ್ಮ ಸಂಸ್ಕೃತಿ ಶ್ರೀಮಂತ ಮಾಡೋ ವಿವಿಯಾಗಿದೆ.ಜಾನಪದ ವಿವಿಯಲ್ಲಿ ಓದಿದ ಮಕ್ಕಳಿಗೆ ವಿಶೇಷ ಕೆಲಸ ಮಾಡಲು ಆರ್ಥಿಕ ನೆರವು ನೀಡುವ ಕೆಲಸ ನಮ್ಮ ಸರ್ಕಾರ ಮಾಡಲಿದೆ. ಎರಡನೇ ಹಂತದಲ್ಲಿ ದೊಡ್ಡ ಪ್ರಮಾಣದಲ್ಲಿ ಎಲ್ಲಾ ವ್ಯವಸ್ಥೆ ಮಾಡುತ್ತೇವೆ. ಏನು ಬೇಕು ಅದಕ್ಕೆ ಮಂಜುರಾತಿ ನೀಡುವೆ ಅಂತ ಭರವಸೆ ನೀಡಿದ್ದಾರೆ.
ಜಾನಪದ ವಿವಿ ಕ್ಯಾಂಪಸ್ ಇಲ್ಲ, ಕ್ಯಾಂಪಸ್ ರಹಿತ ವಿವಿ ಇದು. ಜನ ಸಮುದಾಯ ಇರೋ ಕಡೆನೇ ಈ ವಿವಿ ಇದೆ. ಪ್ರೊಫೆಸರ್‌ಗಳು ಜನರ ನಡುವೆ ಹೋಗಲಿ. ನಾಗರಿಕತೆ ಬೇರೆ, ಸಂಸ್ಕೃತಿ ಬೇರೆ. ಮನೆಯಲ್ಲಿ ಮೊದಲು ಒನಕೆ ಬಿಸಿಕಲ್ಲು ಇತ್ತು ಈಗ ಮಿಕ್ಸಿ ಬಂತು. ಬಿಸಿಕಲ್ಲೂ ಇಲ್ಲ, ಹಾಡೂ ಇಲ್ಲ. ಈಗೆಲ್ಲಾ ಮಿಕ್ಸಿ ಬಂದಿವೆ. ಟರ್ ಟರ್ ಅನ್ನುತ್ವೆ, ಇದರಲ್ಲಿ ಯಾವ ಸಂಗೀತವೂ ಇಲ್ಲ. ನಮ್ಮತ್ರ ಏನಿದೆ ಅದು ನಾಗರಿಕತೆ. ನಾವೇನಾಗಿದೇವೆ ಅದು ಸಂಸ್ಕೃತಿ. ಜಾನಪದ ವಿವಿ ಸಂಸ್ಕೃತಿ ಉಳಿಸುವ ಕೆಲಸ ಮಾಡಲಿ, ಭಾರತಕ್ಕೆ ಪ್ರಸಿದ್ಧಿ ಆಗಲಿ ಅಂತ ತಿಳಿಸಿದ್ದಾರೆ.