ವರದಿ : ರಾಕೇಶ್.ಎನ್.ಎಸ್.
ಬೆಂಗಳೂರು (ಆ.17): ಕೋವಿಡ್-19 ಲಸಿಕೆ ಅಭಿಯಾನದಲ್ಲಿ ರಾಜಧಾನಿ ಬೆಂಗಳೂರು ಉತ್ತಮ ಸಾಧನೆ ಮಾಡಿದ್ದರೂ ರಾಜ್ಯದ 18 ಜಿಲ್ಲೆಗಳಲ್ಲಿ ಅಲ್ಲಿನ ಅರ್ಧಕ್ಕಿಂತ ಹೆಚ್ಚು ಫಲಾನುಭವಿಗಳಿಗೆ ಲಸಿಕೆಯ ಒಂದೇ ಒಂದು ಡೋಸ್ ನೀಡಲು ಇನ್ನೂ ಸಾಧ್ಯವಾಗಿಲ್ಲ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ತವರು ಜಿಲ್ಲೆ ಹಾವೇರಿಯಲ್ಲಿ ರಾಜ್ಯದಲ್ಲೇ ಅತ್ಯಂತ ಕಡಿಮೆ ಲಸಿಕೆ ವಿತರಣೆಯಾಗಿದೆ.
ಬೆಂಗಳೂರು ನಗರದಲ್ಲಿ ಈವರೆಗೆ 90 ಲಕ್ಷಕ್ಕೂ ಹೆಚ್ಚು ಡೋಸ್ ಲಸಿಕೆ ವಿತರಣೆ ಆಗಿದ್ದು ತನ್ನ ಗುರಿಯ ಶೇ.95.36ರಷ್ಟುತಲುಪಿದೆ. ರಾಜ್ಯದಲ್ಲಿ ಈವರೆಗೆ ವಿತರಣೆಯಾಗಿರುವ ಕೋವಿಡ್ ಲಸಿಕೆಯಲ್ಲಿ ಬೆಂಗಳೂರು ನಗರದ ವ್ಯಾಪ್ತಿಯಲ್ಲೇ ಶೇ.27ರಷ್ಟುಲಸಿಕೆ ವಿತರಣೆಯಾಗಿದೆ. ಮೆಟ್ರೋ ಪಾಲಿಟನ್ ನಗರಗಳಲ್ಲಿ ರಾಷ್ಟ್ರ ರಾಜಧಾನಿ ನವದೆಹಲಿ (1.09 ಕೋಟಿ ಡೋಸ್) ಬಿಟ್ಟರೆ ಬೆಂಗಳೂರಿನಲ್ಲೇ ಅತಿ ಹೆಚ್ಚು ಮಂದಿಗೆ ಕೋವಿಡ್ ಲಸಿಕೆ ಸಿಕ್ಕಿದೆ.
ಕೋವಿಡ್‌ನಿಂದ ಅಪಾರ ಸಾವು- ನೋವು ಅನುಭವಿಸಿದ್ದ ಬೆಂಗಳೂರಿನಲ್ಲಿ ಲಸಿಕೆಯ ಕೊರತೆಯ ನಡುವೆಯೂ ಲಸಿಕಾಕರಣ ಉತ್ತಮವಾಗಿಯೇ ನಡೆದಿದೆ. ಅದೇ ರೀತಿ ಸದ್ಯ ಹೆಚ್ಚು ಪ್ರಕರಣ ವರದಿಯಾಗುತ್ತಿರುವ ದಕ್ಷಿಣ ಕನ್ನಡ, ಉಡುಪಿ, ಕೊಡಗು, ಮೈಸೂರು ಜಿಲ್ಲೆಗಳು ತಕ್ಕ ಮಟ್ಟಿಗೆ ಉತ್ತಮ ಸಾಧನೆ ಮಾಡಿವೆ. ಆದರೆ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಲಸಿಕಾಕರಣ ಇನ್ನೂ ವೇಗ ಪಡೆದುಕೊಂಡಿಲ್ಲ ಎಂಬುದನ್ನು ಆರೋಗ್ಯ ಇಲಾಖೆಯ ಅಂಕಿ- ಅಂಶಗಳು ಸಾರುತ್ತಿವೆ.
ಕರ್ನಾಟಕದ 11 ಜಿಲ್ಲೆಗಳಲ್ಲಿ ಕೊರೋನಾ ಪಾಸಿಟಿವಿಟಿ ರೇಟ್ ಹೆಚ್ಚಳ
ಒಟ್ಟು ಫಲಾನುಭವಿಗಳಲ್ಲಿ ಶೇ.69.69 ಮಂದಿ ಲಸಿಕೆ ಪಡೆದಿರುವ ಉಡುಪಿ ಜಿಲ್ಲೆ ರಾಜ್ಯದಲ್ಲಿ ದ್ವಿತೀಯ ಸ್ಥಾನದಲ್ಲಿದೆ. ಮೈಸೂರು ಶೇ. 64.03, ದಕ್ಷಿಣ ಕನ್ನಡ ಶೇ.61.97, ರಾಮನಗರ ಶೇ.61.14, ಕೊಡಗು ಶೇ.57.45, ಬೆಂಗಳೂರು ಗ್ರಾಮಾಂತರ ಶೇ. 56.22, ಚಿಕ್ಕಬಳ್ಳಾಪುರ ಶೇ. 52.66, ಮಂಡ್ಯ ಶೇ.52.25, ಉತ್ತರ ಕನ್ನಡ ಶೇ. 51.86 ಹಾಗೂ ಹಾಸನದಲ್ಲಿ ಶೇ.50.49ರಷ್ಟುಫಲಾನುಭವಿಗಳು ಲಸಿಕೆ ಪಡೆಯುವಲ್ಲಿ ಯಶಸ್ವಿ ಆಗಿದ್ದಾರೆ.
ದೇಶದಲ್ಲೇ ಅತಿ ಹೆಚ್ಚು ಸೋಂಕು ಕಂಡುಬಂದಿರುವ, ಮಹಾರಾಷ್ಟ್ರದೊಂದಿಗೆ ಗಡಿ ಹಂಚಿಕೊಂಡಿರುವ ಉತ್ತರ ಕರ್ನಾಟಕದ ಯಾವೊಂದು ಜಿಲ್ಲೆಯಲ್ಲಿಯೂ ಲಸಿಕೆ ಅಭಿಯಾನ ಪ್ರಾರಂಭವಾಗಿ 8 ತಿಂಗಳಾಗಿದ್ದರೂ ಶೇ. 50ಕ್ಕಿಂತ ಹೆಚ್ಚು ಲಸಿಕಾಕರಣ ನಡೆದಿಲ್ಲ.
ಸಿಎಂ ತವರು ಭಾರಿ ಹಿಂದೆ:
ಮುಖ್ಯಮಂತ್ರಿಗಳು ಪ್ರತಿನಿಧಿಸುವ ಶಿಗ್ಗಾಂವ್ ವಿಧಾನಸಭಾ ಕ್ಷೇತ್ರ ಇರುವ ಹಾವೇರಿ ಜಿಲ್ಲೆಯಲ್ಲಿ ರಾಜ್ಯದಲ್ಲೇ ಕನಿಷ್ಠ ಶೇ. 35.52 ಫಲಾನುಭವಿಗಳು ಲಸಿಕೆ ಪಡೆದಿದ್ದಾರೆ. ಉಳಿದಂತೆ ಕಲಬುರಗಿ (ಶೇ. 35.76), ರಾಯಚೂರು (ಶೇ.36.80), ದಾವಣಗೆರೆ (ಶೇ. 39.15) ಕನಿಷ್ಠ ಲಸಿಕಾಕರಣಕ್ಕೆ ಒಳಗಾಗಿರುವ ಜಿಲ್ಲೆಗಳಾಗಿವೆ.
ಕೋವಿಡ್ ಹೆಚ್ಚಿರುವ 7 ಜಿಲ್ಲೆಗಳಲ್ಲಿ ಸಂಪರ್ಕಿತರ ಪತ್ತೆ ತೀವ್ರಕ್ಕೆ ಆದೇಶ
ಯಾದಗಿರಿ ಶೇ. 40.55, ವಿಜಯಪುರ ಶೇ. 40.98, ಬೆಳಗಾವಿ ಶೇ.41.94, ಬೀದರ್ ಶೇ. 43.45, ಕೊಪ್ಪಳ ಶೇ.44.48, ಬಾಗಲಕೋಟೆ ಶೇ.44.80, ಬಳ್ಳಾರಿ ಶೇ. 45.05, ತುಮಕೂರು ಶೇ. 47.63, ಚಿಕ್ಕಮಗಳೂರು ಶೇ.48.09, ಶಿವಮೊಗ್ಗ ಶೇ. 48.86, ಚಾಮರಾಜನಗರ ಶೇ.49.25, ಚಿತ್ರದುರ್ಗ ಜಿಲ್ಲೆಯಲ್ಲಿ ಶೇ.49.75ರಷ್ಟುಲಸಿಕಾಕರಣ ನಡೆದಿದೆ.
ರಾಜ್ಯದಲ್ಲಿ ಈವರೆಗೆ 40% ಮಂದಿಗೂ ಲಸಿಕೆ ಸಿಕ್ಕಿಲ್ಲ
ರಾಜ್ಯದಲ್ಲಿ ಡಿಸೆಂಬರ್ ಅಂತ್ಯದೊಳಗೆ ಎಲ್ಲರಿಗೂ ಲಸಿಕೆ ನೀಡಬೇಕು ಎಂಬ ಗುರಿಯನ್ನೇನೋ ಸರ್ಕಾರ ಹಾಕಿಕೊಂಡಿದೆ. ಆದರೆ ರಾಜ್ಯದಲ್ಲಿ ಈವರೆಗೆ ಕೇವಲ ಶೇ.40ರಷ್ಟುಮಂದಿಗೂ ಮೊದಲ ಡೋಸ್ ಲಸಿಕೆ ನೀಡಲು ಸಾಧ್ಯವಾಗಿಲ್ಲ. ಮೊದಲ ಡೋಸ್ ಆಗಿರುವವರಲ್ಲಿ ಶೇ. 10 ಮಂದಿ ಮಾತ್ರ ಎರಡೂ ಡೋಸ್ ಲಸಿಕೆ ಪಡೆಯಲು ಸಾಧ್ಯವಾಗಿದೆ. ಹಾಗೆಯೇ ವೈದ್ಯಕೀಯ ಸೌಲಭ್ಯಗಳಲ್ಲಿ ಹಿಂದುಳಿದಿರುವ, ಮರಣ ದರ ಹೆಚ್ಚಿರುವ ಜಿಲ್ಲೆಗಳು ಲಸಿಕಾಕರಣದಲ್ಲಿಯೂ ಹಿಂದುಳಿದಿರುವುದು ಮೂರನೇ ಅಲೆಯ ಸಾವು-ನೋವಿನ ಅಪಾಯದ ಸಾಧ್ಯತೆಯನ್ನು ಮತ್ತಷ್ಟುಹೆಚ್ಚಿಸಿದೆ.
50% ಗುರಿ ತಲುಪಿದರೆ 3ನೇ ಅಲೆ ತಗ್ಗಿಸಬಹುದು
ಮೂರನೇ ಅಲೆಯ ಅಪಾಯವನ್ನು ತಕ್ಕ ಮಟ್ಟಿಗೆ ಕಡಿಮೆ ಮಾಡಲು ಗಡಿ ಭಾಗದ ಜಿಲ್ಲೆಗಳಲ್ಲಿ ಆದ್ಯತೆಯ ಮೇರೆಗೆ ಲಸಿಕಾಕರಣ ನಡೆಸಬೇಕು. ಕನಿಷ್ಠ ಪಕ್ಷ ಮುಂದಿನ ಹತ್ತು ಹದಿನೈದು ದಿನಗಳ ಕಾಲ ಲಸಿಕಾಕರಣದಲ್ಲಿ ಹಿಂದುಳಿದ ಜಿಲ್ಲೆಗಳಿಗೆ ಪ್ರಾಧಾನ್ಯತೆ ನೀಡಿ ಆ ಜಿಲ್ಲೆಗಳು ಕನಿಷ್ಠ ಶೇ. 50ರ ಗುರಿ ಸಾಧನೆ ಮಾಡುವ ನಿಟ್ಟಿನಲ್ಲಿ ಶ್ರಮಿಸಬೇಕಾಗಿದೆ. ಸೆಪ್ಟೆಂಬರ್ 15ರ ಹೊತ್ತಿಗೆ ಮೂರನೇ ಅಲೆ ಅಪ್ಪಳಿಸುವ ಸಾಧ್ಯತೆ ಇದೆ ಎಂದು ತಜ್ಞರು ಅಭಿಪ್ರಾಯ ಪಡುತ್ತಿದ್ದಾರೆ. ಮೊದಲ ಮತ್ತು ಎರಡನೇ ಅಲೆಯ ಆರಂಭದಲ್ಲಿ ಬೀದರ್, ಕಲಬುರಗಿ, ತುಮಕೂರು ಮುಂತಾದ ಗಡಿ ಜಿಲ್ಲೆಗಳಲ್ಲಿ ಹೆಚ್ಚಿನ ಪ್ರಕರಣ ದಾಖಲಾಗಿತ್ತು ಎಂಬುದನ್ನು ಗಮನಿಸಿದಾಗ ಆಗಸ್ಟ್ ಅಂತ್ಯದೊಳಗೆ ಇಂತಹ ಜಿಲ್ಲೆಗಳಿಗೆ ಒತ್ತು ನೀಡಿ ಲಸಿಕಾಕರಣ ನಡೆಸಿದರೆ ಸಂಭಾವ್ಯ ಅಪಾಯವನ್ನು ತಕ್ಕ ಮಟ್ಟಿಗೆ ಕಡಿಮೆ ಮಾಡಬಹುದು ಎಂದು ರಾಜ್ಯದ ಕೋವಿಡ್ ತಾಂತ್ರಿಕ ಸಲಹಾ ಸಮಿತಿಯ ಸದಸ್ಯರೊಬ್ಬರು ಅಭಿಪ್ರಾಯ ಪಟ್ಟಿದ್ದಾರೆ.
ಕೇರಳದೊಂದಿಗೆ ಗಡಿ ಹಂಚಿಕೊಂಡಿರುವ ಜಿಲ್ಲೆಗಳಲ್ಲಿ ಲಸಿಕಾಕರಣ ಪ್ರಕ್ರಿಯೆ ತಕ್ಕಮಟ್ಟಿಗೆ ವೇಗವಾಗಿ ನಡೆಯುತ್ತಿದೆ. ಆದರೆ ಮೊದಲ ಮತ್ತು ಎರಡನೇ ಅಲೆಯಲ್ಲಿ ರಾಜ್ಯದ ಕೋವಿಡ್ ಅಪಾಯವನ್ನು ಹೆಚ್ಚಿಸಿದ್ದ ಮಹಾರಾಷ್ಟ್ರದೊಂದಿಗೆ ಗಡಿ ಹಂಚಿಕೊಂಡಿರುವ ಜಿಲ್ಲೆಗಳಲ್ಲಿ ಲಸಿಕಾಕರಣ ಅಭಿಯಾನ ಕುಂಟುತ್ತಾ ಸಾಗಿದೆ. ಅದೇ ರೀತಿ ಅಂಧ್ರ ಪ್ರದೇಶದೊಂದಿಗೆ ಗಡಿ ಹಂಚಿಕೊಳ್ಳುವ ಚಿಕ್ಕಬಳ್ಳಾಪುರವನ್ನು ಹೊರತುಪಡಿಸಿ ತಮಿಳುನಾಡು, ತೆಲಂಗಾಣ, ಗೋವಾದ ಗಡಿಗೆ ತಾಕಿಕೊಂಡಿರುವ ಜಿಲ್ಲೆಗಳಲ್ಲಿಯೂ ಲಸಿಕೆ ಅಭಿಯಾನ ಇನ್ನೂ ಬಿರುಸು ಪಡೆದುಕೊಂಡಿಲ್ಲ.