ಕೊಡಗಿನಲ್ಲಿ ವಾಡಿಕೆಗಿಂತ ಶೇ.40ರಷ್ಟುಮಳೆ ಕೊರತೆ!

By Kannadaprabha NewsFirst Published Apr 21, 2020, 9:36 AM IST
Highlights

ಕೊಡಗು ಜಿಲ್ಲೆಯಲ್ಲಿ ವಾಡಿಕೆ ಮಳೆ ಕೈಕೊಟ್ಟಿದ್ದು, ಜನವರಿ ತಿಂಗಳ ಆರಂಭದಿಂದ ಏ.20ರ ವರೆಗೆ ಶೇ.40ರಷ್ಟುಮಳೆ ಕೊರತೆಯುಂಟಾಗಿದೆ. ಜಿಲ್ಲೆಯಲ್ಲಿ ಇದೀಗ ಬಿಸಿಲ ತಾಪ ಕೂಡ ಹೆಚ್ಚಾಗುತ್ತಿರುವುದರಿಂದ ಜಿಲ್ಲೆಯ ಪ್ರಮುಖ ಬೆಳೆ ಕಾಫಿ ಗಿಡಗಳು ಹಾಗೂ ಕಾಳು ಮೆಣಸು ಬಳ್ಳಿಗಳು ಸೊರಗಲಾರಂಭಿಸಿದೆ.

ಮಡಿಕೇರಿ(ಏ.21): ಕೊಡಗು ಜಿಲ್ಲೆಯಲ್ಲಿ ವಾಡಿಕೆ ಮಳೆ ಕೈಕೊಟ್ಟಿದ್ದು, ಜನವರಿ ತಿಂಗಳ ಆರಂಭದಿಂದ ಏ.20ರ ವರೆಗೆ ಶೇ.40ರಷ್ಟುಮಳೆ ಕೊರತೆಯುಂಟಾಗಿದೆ. ಜಿಲ್ಲೆಯಲ್ಲಿ ಇದೀಗ ಬಿಸಿಲ ತಾಪ ಕೂಡ ಹೆಚ್ಚಾಗುತ್ತಿರುವುದರಿಂದ ಜಿಲ್ಲೆಯ ಪ್ರಮುಖ ಬೆಳೆ ಕಾಫಿ ಗಿಡಗಳು ಹಾಗೂ ಕಾಳು ಮೆಣಸು ಬಳ್ಳಿಗಳು ಸೊರಗಲಾರಂಭಿಸಿದೆ.

ಜನವರಿಯಿಂದ ಇಲ್ಲಿಯ ವರೆಗೆ ಈ ಬಾರಿ ಮಡಿಕೇರಿ ತಾಲೂಕಿನಲ್ಲಿ 61.5 ಮಿ.ಮೀ ಮಳೆಯಾಗಿದ್ದು, ಶೇ.35.1, ಸೋಮವಾರಪೇಟೆ ತಾಲೂಕಿನಲ್ಲಿ 44.1 ಮಿ.ಮೀ ಮಳೆಯಾಗಿದ್ದು, ಶೇ.22.1 ಹಾಗೂ ವಿರಾಜಪೇಟೆ ತಾಲೂಕಿನಲ್ಲಿ 24.5 ಮಿ.ಮೀ ಮಳೆಯಾಗಿದ್ದು, ಶೇ.62.6ರಷ್ಟುಮಳೆ ಕೊರತೆಯುಂಟಾಗಿದೆ. ಜಿಲ್ಲೆಯಲ್ಲಿ ಈ ವರೆಗೆ 72.3 ಮಿ.ಮೀ ವಾಡಿಕೆ ಮಳೆಯಾಗಬೇಕಿತ್ತು. ಆದರೆ ಒಟ್ಟು 43.4 ಮಿ.ಮೀ ಮಾತ್ರ ಮಳೆಯಾಗಿದೆ. ಕಳೆದ ವರ್ಷದ ಇದೇ ಅವ​ಯಲ್ಲಿ 89.2 ಮಿ.ಮೀ ಮಳೆಯಾಗಿತ್ತು. 2018ರಲ್ಲಿ 123.2 ಮಿ.ಮೀ ಮಳೆಯಾಗಿತ್ತು.

ದೇಶಾದ್ಯಂತ 18,000 ಸೋಂಕಿತರು, 600ರ ಗಡಿಯತ್ತ ಸಾವು!

ಬಿಸಿಲಿನ ತಾಪ ಹಾಗೂ ಮಳೆ ಕೊರತೆಯಿಂದಾಗಿ ಜಿಲ್ಲೆಯ ಕಾಳು ಮೆಣಸು ಬಳ್ಳಿಗಳು ಸೊರಗುವ ಸಾಧ್ಯತೆ ಇರುತ್ತದೆ. ಕಾಳುಮೆಣಸು ಕೊತ್ತು ಬಿಡುವುದು ಕೂಡ ವಿಳಂಬವಾಗುತ್ತದೆ. ಇದರಿಂದ ಸರಿಯಾದ ಸಮಯದಲ್ಲಿ ಪರಾಗಸ್ಪರ್ಶ ಆಗದೆ, ಮುಂದಿನ ಇಳುವರಿ ಕುಂಠಿತಗೊಳ್ಳುವ ಸಾಧ್ಯತೆಗಳಿರುತ್ತದೆ. ಈಗ ಮಳೆ ಬಂದಿಲ್ಲ ಎಂದರೆ ಮೆಣಸು ಬಳ್ಳಿಗೆ ಸೂಕ್ತ ಪ್ರಮಾಣದಲ್ಲಿ ನೀರನ್ನು ನೀಡಬೇಕು. ಈಗಾಗಲೇ ಕೆಲವರು ನೀರನ್ನು ಸಿಂಪಡನೆ ಮಾಡುತ್ತಿದ್ದಾರೆ. ಆದರೆ ಕೆಲವರಿಗೆ ನೀರಿನ ಸಮಸ್ಯೆ ಇದರಿಂದ ಸಮಸ್ಯೆಯಾಗುತ್ತದೆ ಎನ್ನುತ್ತಾರೆ ಕೃಷಿ ತಜ್ಞರು.

ದೇಶದ 65% ಸೋಂಕಿತರಲ್ಲಿ ಕೊರೋನಾ ಲಕ್ಷಣವೇ ಇರಲಿಲ್ಲ: ಆತಂಕ ಹುಟ್ಟಿಸಿದ ವರದಿ!

ಬೇಸಿಗೆ ಅವ​ಧಿಯಲ್ಲಿ ಕಾಫಿ ಗಿಡಗಳು, ಮೆಣಸು ಬಳ್ಳಿಗಳು ಹಾಗೂ ಅಡಿಕೆ ಮರಗಳು ಕೂಡ ಒಣಗುತ್ತದೆ. ಆದ್ದರಿಂದ ನೀರು ಸಿಂಪಡನೆ ಮಾಡುವುದು ಅತ್ಯವಶ್ಯವಾಗುತ್ತದೆ. ಕೊಡಗು ಜಿಲ್ಲೆಯ ಕೆಲವೆಡೆಗಳಲ್ಲಿ ಏ. 22ರ ವರೆಗೆ ಅಲ್ಲಲ್ಲಿ ಮಳೆಯಾಗುವ ಸಾಧ್ಯತೆಗಳಿದೆ ಎಂದು ಗೋಣಿಕೊಪ್ಪ ಕೃಷಿ ವಿಜ್ಞಾನ ಕೇಂದ್ರದ ಪ್ರಮುಖರು ತಿಳಿಸಿದ್ದಾರೆ.

ನೀರು ಸಿಂಪಡಣೆ:

ಜಿಲ್ಲೆಯಲ್ಲಿ ಬಿಸಿಲಿನ ಪ್ರಮಾಣ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಕಾಫಿ ಹಾಗೂ ಕಾಳುಮೆಣಸು ತೋಟಗಳಿಗೆ ಬೆಳೆಗಾರರು ಸ್ಟ್ರಿಂಕ್ಲರ್‌ ಮೂಲಕ ನೀರು ಸಿಂಪಡಣೆ ಮಾಡುತ್ತಿರುವ ದೃಶ್ಯಗಳು ಕಂಡುಬರುತ್ತಿದೆ. ಆದರೆ ಸಣ್ಣ ಬೆಳೆಗಾರರಿಗೆ ನೀರು ಸಿಂಪಡಣೆ ಮಾಡುವಷ್ಟುಸೌಲಭ್ಯವಿಲ್ಲ ಹಾಗೂ ಕೆಲವು ಕಡೆಗಳಲ್ಲಿ ನೀರಿನ ಸಮಸ್ಯೆ ಇರುವ ಹಿನ್ನೆಲೆಯಲ್ಲಿ ನೀರು ಹಾಯಿಸದೆ ಹಾಗೆಯೇ ಬಿಡುವಂತಾಗಿದೆ. ಇದರಿಂದಾಗಿ ಕಾಫಿ ಗಿಡ ಹಾಗೂ ಕಾಳು ಮೆಣಸು ಬಳ್ಳಿಗಳು ಸೊರಗುತ್ತಿದೆ.

(ಜ.1ರಿಂದ ಏ.20)

ತಾಲೂಕು : ವಾಡಿಕೆ ಸುರಿದ ಮಳೆ ಕೊರತೆ

ಮಡಿಕೇರಿ : 94.8 61.5ಮಿ.ಮೀ ಶೇ.35.1

ಸೋ.ಪೇಟೆ : 56.6 44.1ಮಿ.ಮೀ ಶೇ.22.1

ವಿರಾಜಪೇಟೆ : 65.5 24.5 ಮಿ.ಮೀ ಶೇ.62.6

ಕೊಡಗು ಜಿಲ್ಲೆ : 72.3 43.4 ಮಿ.ಮೀ ಶೇ.40

ಜಿಲ್ಲೆಯಲ್ಲಿ ಉರಿ ಬಿಸಿಲು

ಕೊಡಗು ಜಿಲ್ಲೆಯಲ್ಲಿ ಇದೀಗ ಉರಿ ಬಿಸಿಲಿನ ಪ್ರಮಾಣ ಏರುತ್ತಿದೆ. ಏ. 20ರಂದು ಜಿಲ್ಲೆಯಲ್ಲಿ 32 ಡಿಗ್ರಿ ಸೆಲ್ಸಿಯಸ್‌ ತಾಪಮಾನವಿದ್ದು, ಜನರು ಮನೆಯಿಂದ ಹೊರಗಡೆ ಓಡಾಡಲಾಗದಷ್ಟುಬಿಸಿಲಿದೆ. ಮೇ ತಿಂಗಳಲ್ಲೂ ಬಿಸಿಲಿನ ತಾಪ ಹೆಚ್ಚಾಗಿರುವ ಸಾಧ್ಯತೆಯಿದೆ. ಬಿಸಿಲಿನ ಝಳಕ್ಕೆ ಜಿಲ್ಲೆಯ ಕಾಫಿ ಗಿಡಗಳು ಹಾಗೂ ಕಾಳು ಮೆಣಸು ಬಳ್ಳಿಗಳು ಸೊರಗಲಾರಂಭಿಸಿದೆ.

ಕೊಡಗು ಜಿಲ್ಲೆಯಲ್ಲಿ ಮಳೆ ಕೊರತೆಯುಂಟಾಗಿದೆ. ಇದರಿಂದ ಕಾಳು ಮೆಣಸು ಬಳ್ಳಿ ಸೊರಗುತ್ತದೆ. ಕೊತ್ತು ಬಿಡುವುದು ವಿಳಂಭವಾದರೆ ಪರಾಗಸ್ಪರ್ಶ ಸರಿಯಾದ ಸಮಯದಲ್ಲಿ ಆಗುವುದಿಲ್ಲ. ಪರಿಣಾಮ ಮುಂದಿನ ಇಳುವರಿ ಕಡಿಮೆಯಾಗುವ ಸಾಧ್ಯತೆಗಳಿರುತ್ತದೆ. ಮೆಣಸು ಬಳ್ಳಿಗಳಲ್ಲಿ ಗೆದ್ದಲು ಆರಂಭವಾಗುತ್ತದೆ. ಮುಂದಿನ ದಿನಗಳಲ್ಲಿ ಕೆಲವೆಡೆಗಳಲ್ಲಿ ಮಳೆಯಾಗುತ್ತದೆ. ಮಳೆ ಬಂದಿಲ್ಲದಿದ್ದರೆ ಬೆಳೆಗಾರರು ಮೆಣಸು ಬಳ್ಳಿಗಳಿಗೆ ನೀರು ಕೊಡುವುದು ಅತ್ಯವಶ್ಯಕ ಎಂದು ಕೆವಿಕೆ ಗೋಣಿಕೊಪ್ಪ ಸಸ್ಯ ಸಂರಕ್ಷಣೆ ವಿಜ್ಞಾನಿ ವೀರೇಂದ್ರ ಕುಮಾರ್‌ ತಿಳಿಸಿದ್ದಾರೆ.

-ವಿಘ್ನೇಶ್‌ ಎಂ. ಭೂತನಕಾಡು

click me!