Udupi; ಮನೆಯೊಳಗೆ ಅವಿತು ಚಿರತೆ ಕಣ್ಣಾಮುಚ್ಚಾಲೆ, ದಿನಪೂರ್ತಿ ಕಾರ್ಯಾಚರಣೆಗೆ ಸುಸ್ತೋಸುಸ್ತು

By Suvarna News  |  First Published Sep 7, 2022, 10:35 PM IST

ಉಡುಪಿ ಜಿಲ್ಲೆಯ ಹಿರಿಯಡ್ಕ ಪೇಟೆಯ ಸಮೀಪದಲ್ಲೇ ಇರುವ ಮನೆಯೊಂದರಲ್ಲಿ ಚಿರತೆ ಕಾಣಿಸಿಕೊಂಡಿತ್ತು. ಹಲವು ಪ್ರಯತ್ನಗಳ ಬಳಿಕ ಕಾರ್ಯಾಚರಣೆ ಯಶಸ್ವಿಯಾಯ್ತು.


ವರದಿ: ಶಶಿಧರ ಮಾಸ್ತಿಬೈಲು, ಏಷ್ಯಾನೆಟ್ ಸುವರ್ಣ ನ್ಯೂಸ್

ಉಡುಪಿ (ಸೆ.7): ಇಡೀ ದಿನ ಕಾರ್ಯಾಚರಣೆ ನಡೆಸುವ ಮೂಲಕ ಕೊನೆಗೂ ಚಿರತೆಯನ್ಬು ಸೆರೆಹಿಡಿಯಲಾಗಿದೆ. ಉಡುಪಿ ಜಿಲ್ಲೆಯ ಹಿರಿಯಡ್ಕ ಪೇಟೆಯ ಸಮೀಪದಲ್ಲೇ ಇರುವ ಮನೆಯೊಂದರಲ್ಲಿ ಚಿರತೆ ಕಾಣಿಸಿಕೊಂಡಿತ್ತು. ಜನವಸತಿ ಪ್ರದೇಶದಲ್ಲಿ ಚಿರತೆ ಕಾಣಿಸಿಕೊಂಡದ್ದರಿಂದ ಇಡೀ ದಿನ ಎಲ್ಲರೂ ಭಯದಲ್ಲೇ ದಿನ ಕಳೆಯುವಂತಾಯ್ತು. ಬುಧವಾರ ಬೆಳಿಗ್ಗೆ ಇಲ್ಲಿನ ಮನೆ ಯೊಂದಕ್ಕೆ ಚಿರತೆ ಹೊಗ್ಗಿರುವುದನ್ನು ಜನರು ಗಮನಿಸಿದ್ದರು. ಹಂಚಿನ ಮನೆಯೊಳಗೆ ಚಿರತೆ ಅವಿತಿರುವ ಮಾಹಿತಿಯನ್ನು ಅರಣ್ಯಾಧಿಕಾರಿಗಳಿಗೆ ನೀಡಲಾಗಿತ್ತು.  ಈ ಸಂಗತಿ ತಿಳಿದು ಸ್ಥಳೀಯರೆಲ್ಲ ಬಂದು ಮನೆಯ ಸುತ್ತಮುತ್ತ ಸೇರಿದ್ದರು. ಮೊದಲು ಕಂಡ ಚಿರತೆ ಇದ್ದಕ್ಕಿದ್ದಂತೆ ಕಣ್ಮರೆಯಾಗಿತ್ತು, ಮನೆಯ ಯಾವುದೋ ಒಂದು ಮೂಲೆಯಲ್ಲಿ ಅಡಗಿ ಕುಳಿತಿತ್ತು. ಚಿರತೆ ಸೆರೆ ಹಿಡಿಯಲು ಸಾರ್ವಜನಿಕರ ನೆರವಿನೊಂದಿಗೆ ಅರಣ್ಯ ಇಲಾಖೆಯವರು ಮುಂದಾದರು. ಆದರೆ ಎಷ್ಟೇ ಪ್ರಯತ್ನ ಪಟ್ಟರೂ ಮನೆಯೊಳಗೆ ಅವಿತು ಕುಳಿತಿದ್ದ ಚಿರತೆಯನ್ನು ಪತ್ತೆ ಹಚ್ಚಲು ಸಾಧ್ಯವಾಗಿಲ್ಲ. ಮನೆಯೊಳಗೆ ಎಲ್ಲೆಂದರಲ್ಲಿ ಅಡ್ಡಾಡಿ ಕೊನೆಗೂ ಸುಸ್ತಾದ ಚಿರತೆ ಯಾವುದೋ ಮೂಲೆಯಲ್ಲಿ ಅವಿತು ಕುಳಿತಿತ್ತು. ಅರವಳಿಕೆ ತಜ್ಞರು ಸ್ಥಳಕ್ಕೆ ಬಂದು ಚಿರತೆಗೆ ಚುಚ್ಚುಮದ್ದು ಹಾಕಲು ನಡೆಸಿದ ಒಂದೆರಡು ಪ್ರಯತ್ನಗಳು ವಿಫಲವಾದವು.

Tap to resize

Latest Videos

ಸಂಜೆಯ ವೇಳೆಗೆ ಕೊನೆಗೂ ಚಿರತೆಗೆ ಚುಚ್ಚುಮದ್ದು ನೀಡಿ ಪ್ರಜ್ಞೆ ತಪ್ಪಿಸುವಲ್ಲಿ ಅರಣ್ಯ ಅಧಿಕಾರಿಗಳು ಯಶಸ್ವಿಯಾದರು. ಆದರೂ ಮುನ್ನೆಚ್ಚರಿಕಾ ಕ್ರಮವಾಗಿ ಹೆಲ್ಮೆಟ್ ಧರಿಸಿ ಮನೆಯೊಳಗೆ ತೆರಳಿ ಮತ್ತೊಮ್ಮೆ ಚುಚ್ಚುಮದ್ದು ಹಾಕಿ ಚಿರತೆಯನ್ನು ಸುರಕ್ಷಿತವಾಗಿ ಮನೆಯಿಂದ ರಕ್ಷಿಸಲಾಗಿದೆ. ಏಳೆಂಟು ಗಂಟೆಗಳ ಕಾರ್ಯಾಚರಣೆಯ ಬಳಿಕ ಚಿರತೆ ಪತ್ತೆಯಾಗಿದೆ. 

ಮೊದಲೇ ಸಿದ್ಧಪಡಿಸಿದ್ದ ಬೋನಿನೊಳಗೆ ಚಿರತೆಯನ್ನು ಹಾಕಿ ಕೊಂಡೊಯ್ಯಲಾಗಿದೆ. ಸುಮಾರು ಮೂರು ವರ್ಷ ಪ್ರಾಯದ ಈ ಗಂಡು ಚಿರತೆಗೆ ಮೈತುಂಬಾ ಗಾಯಗಳಾಗಿವೆ. ಐದಾರು ದಿನಗಳ ಮುಂಚೆಯೇ ಈ ಮನೆಯೊಳಗೆ ಚಿರತೆ ನುಗ್ಗಿರುವ ಸಾಧ್ಯತೆ ಇದ್ದು, ಸರಿಯಾದ ಆಹಾರ ಸಿಗದೇ ಕಂಗಾಲಾಗಿತ್ತು. ಮನೆಯ ಮೇಲ್ಚಾವಣಿಯಯತ್ತ ನುಗ್ಗಿ ಹೊರಹೋಗಲು ವಿಫಲ ಯತ್ನ ನಡೆಸಿತ್ತು. ಇದರಿಂದ ಹಂಚುಗಳೆಲ್ಲಾ ಉದುರಿ ಬಿದ್ದಿದ್ದವು.

ಅದೃಷ್ಟವಶಾತ್ ಈ ಮನೆಯಲ್ಲಿ ಯಾರು ವಾಸವಿಲ್ಲದ ಕಾರಣ ಯಾವುದೇ ಅಪಾಯ ಸಂಭವಿಸಿಲ್ಲ.
ಇದೀಗ ಸೆರೆ ಹಿಡಿದಿರುವ ಚಿರತೆಗೆ ಚಿಕಿತ್ಸೆಯನ್ನು ನೀಡಿ ನಂತರ ಕಾಡಿಗೆ ಬಿಡಲು ಅರಣ್ಯಾಧಿಕಾರಿಗಳು ತೀರ್ಮಾನಿಸಿದ್ದಾರೆ. ದಿನವಿಡೀ ಕಾರ್ಯಾಚರಣೆ ನಡೆಸುವ ಮೂಲಕ ಕೊನೆಗೂ ಚಿರತೆ ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

Tumakuru; ಚಿರತೆ ಚರ್ಮ ಸಾಗಾಟ ಮಾಡ್ತಿದ್ದ ಇಂಜಿನಿಯರಿಂಗ್ ಪದವೀಧರ ಅರೆಸ್ಟ್

ಈ ಹಿಂದೆ ಪಶ್ಚಿಮ ಘಟ್ಟದ ತಪ್ಪಲು ಪ್ರದೇಶಗಳಲ್ಲಿ ಮಾತ್ರ ಚಿರತೆಯ ಕಾಟ ಇರುತ್ತಿತ್ತು. ಇದೀಗ ಆಹಾರ ಅರಸಿಕೊಂಡು ನಗರದ ಕಡೆಗೆ ಚಿರತೆಗಳು ಬರುತ್ತಿದ್ದು ಉಡುಪಿ ಜಿಲ್ಲೆಯ ಅನೇಕ ಕಡೆಗಳಲ್ಲಿ ಕಾಣಿಸಿಕೊಳ್ಳುತ್ತಿದೆ. ಪ್ರತಿದಿನ ಜಿಲ್ಲೆಯ ಯಾವುದಾದರೂ ಒಂದು ಭಾಗದಲ್ಲಿ ಚಿರತೆ ಕಾಣಿಸಿಕೊಳ್ಳುತ್ತಿದೆ. ಇದರಿಂದ ಸಾರ್ವಜನಿಕರು ಮಾತ್ರವಲ್ಲ ಅರಣ್ಯ ಇಲಾಖೆಯವರು ಕೂಡ ತಲೆಕೆಡಿಸಿಕೊಂಡಿದ್ದಾರೆ.

Cheetah Operation: ಬೆಳಗಾವಿಯ ಗಾಲ್ಫ್‌ ಮೈದಾನದಲ್ಲಿ ಎಲ್ಲಿದೆ ಚಿರತೆ?

ಚಿರತೆಯ ಕಾಟ ಇರುವಲ್ಲೆಲ್ಲಾ ಬೋನುಗಳ ವ್ಯವಸ್ಥೆ ಮಾಡುವುದು, ಅರವಳಿಕೆ ತಜ್ಞರು ತೆರಳುವುದು ಸಮಸ್ಯೆಯಾಗುತ್ತಿದೆ. ಅರಣ್ಯ ಇಲಾಖೆಗೆ ಮತ್ತಷ್ಟು ಸವಲತ್ತುಗಳನ್ನು ನೀಡಿ ಕಾಡುಪ್ರಾಣಿಗಳಿಂದ ಜನರನ್ನು ರಕ್ಷಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕಾಗಿದೆ. ಪದೇಪದೇ ಜನ ವಸತಿ ಪ್ರದೇಶಗಳಲ್ಲಿ ಚಿರತೆ ಕಾಣಿಸಿಕೊಳ್ಳುತ್ತಿರುವುದು ದೊಡ್ಡ ತಲೆ ನೋವಾಗಿದೆ.

click me!