Chikkamagaluru: ಕಾಫಿ ತೋಟಕ್ಕೆ ಬಂದ ಚಿರತೆ ಅರಣ್ಯಾಧಿಕಾರಿಗಳ ಬಲೆಗೆ

By Suvarna News  |  First Published Oct 19, 2022, 8:29 AM IST

ಕಾಫಿ ತೋಟದಲ್ಲಿ ಚಿರತೆ ಪ್ರತ್ಯಕ್ಷವಾಗಿದ್ದು, ಸ್ಥಳೀಯರ ಮಾಹಿತಿ ಮೇರೆಗೆ ಅದನ್ನು ಸೆರೆ ಹಿಡಿದ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ದೇವೃಂದ ಗ್ರಾಮದಲ್ಲಿ ನಡೆದಿದೆ. 


ಚಿಕ್ಕಮಗಳೂರು (ಅ.19): ಕಾಫಿ ತೋಟದಲ್ಲಿ ಚಿರತೆ ಪ್ರತ್ಯಕ್ಷವಾಗಿದ್ದು, ಸ್ಥಳೀಯರ ಮಾಹಿತಿ ಮೇರೆಗೆ ಅದನ್ನು ಸೆರೆ ಹಿಡಿದ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ದೇವೃಂದ ಗ್ರಾಮದಲ್ಲಿ ನಡೆದಿದೆ. ತಾಲೂಕಿನ ದೇವವೃಂದ ಗ್ರಾಮದ ರಮೇಶ್ ಎಂಬುವರ ತೋಟದಲ್ಲಿ ನಿನ್ನೆ ಸಂಜೆ ಕಾಣಿಸಿಕೊಂಡ ಚಿರತೆಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

ಕಾರ್ಮಿಕರಲ್ಲಿ ಆತಂಕ‌ಕ್ಕೆ ಕಾರಣವಾಗಿದ್ದ ಚಿರತೆ: ತೋಟದಲ್ಲಿ ಕೂಲಿ ಕಾರ್ಮಿಕರು ಕೆಲಸ ಮಾಡುತ್ತಿದ್ದಾಗ ಕಾಫಿ ಗಿಡಗಳ ನಡುವೆ ಚಿರತೆ ಇರುವುದು ಕಂಡು ಬಂದಿದೆ. ಅದನ್ನು ಗಮನಿಸಿದ ಕಾರ್ಮಿಕರು ತೋಟದ ಮಾಲೀಕರು ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಕೂಡಲೆ ಸ್ಥಳಕ್ಕೆ ಆಗಮಿಸಿದ ಅರಣ್ಯಾಧಿಕಾರಿಗಳು ಚಿರತೆಯನ್ನು ಬಲೆ ಹಾಕಿ ಬಂಧಿಸಿದರು. 

Tap to resize

Latest Videos

ಮೂರು ವೀರಗಲ್ಲು ಸಂಶೋಧನೆ; ಹೊರನಾಡು ಇತಿಹಾಸದ ಮೇಲೆ ಹೊಸ ಬೆಳಕು

ಚಿರತೆ ಗಾಯಗೊಂಡಿದ್ದರಿಂದ ಅರಣ್ಯ ಇಲಾಖೆಯ ಸಿಬ್ಬಂದಿಗಳು  ಮೂಡಿಗೆರೆ ಪಶು ಆಸ್ಪತ್ರೆಗೆ ಕರೆ ತಂದು ಪ್ರಾಥಮಿಕ ಚಿಕಿತ್ಸೆ ಕೊಡಿಸಿದರು. ಚಿರತೆಯ ಆರೋಗ್ಯ ಸುಧಾರಿಸುವ ಲಕ್ಷಣ ಗಮನಿಸಿ ಸಂಬಂಧಿಸಿದ ಮೃಗಾಲಯ ಅಥವಾ ಕಾಡಿಗೆ ಬಿಡುವ ನಿರ್ಧಾರ ಕೈಗೊಳ್ಳುವುದು ಎಂದು ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ. ಆರ್‌ಎಫ್‌ಒ ಮೋಹನ್‌ ಕುಮಾರ್, ಉಪ ವಲಯ ಅರಣ್ಯಾಧಿ ಕಾರಿ ಚೇತನ್, ಶಿವಕುಮಾರ್, ಗಾರ್ಡ್ ಗಳಾದ ಕುಮಾರ್, ಗಿರೀಶ್, ಮೌಸೀಫ್ ಕಾರ್ಯಚರಣೆಯಲ್ಲಿ ಪಾಲ್ಗೊಂಡಿದ್ದರು.

ಬಾವಿಗೆ ಬಿದ್ದ ಚಿರತೆ ರಕ್ಷಣೆ: ತಾಲೂಕಿನ ಸಾಲ್ಕೋಡ್‌ ಗ್ರಾಮದ ಕೆರೆಕೋಣ ಸಮೀಪದ ಮನೆಯ ಬಾವಿಯಲ್ಲಿ ಆಕಸ್ಮಿಕವಾಗಿ ಬಿದ್ದಿದ್ದ ಒಂದೂವರೆ ವರ್ಷದ ಚಿರತೆಯನ್ನು ಅರಣ್ಯ ಸಿಬ್ಬಂದಿ ರಕ್ಷಿಸಿ ಕಾಡಿಗೆ ಬಿಟ್ಟಘಟನೆ ಸೋಮವಾರ ನಡೆದಿದೆ. ಬಾವಿಯಲ್ಲಿ ಬಿದ್ದ ಚಿರತೆ ಬಾವಿಯಿಂದ ಮೇಲೆ ಬರಲು ಹರಸಾಹಸ ಪಡುತ್ತಿತ್ತು. ಇದನ್ನು ಗಮನಿಸಿದ ಸಾರ್ವಜನಿಕರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕಾಗಮಿಸಿದ ಅರಣ್ಯ ಇಲಾಖಾ ಅಧಿಕಾರಿಗಳು ಸಾರ್ವಜನಿಕರ ಸಹಕಾರದ ಮೇರೆಗೆ ಏಣಿ ಹಾಗೂ ಬಲೆ ಮುಂತಾದ ಸಲಕರಣೆ ಬಳಸಿ ಸುರಕ್ಷಿತವಾಗಿ ಮೇಲಕ್ಕೆತ್ತಿದರು. ಬಳಿಕ ಕಾಡಿಗೆ ಬಿಟ್ಟರು. ಆರ್‌ಎಫ್‌ಒ ವಿಕ್ರಂ ರೆಡ್ಡಿ ಮಾರ್ಗದರ್ಶನದಲ್ಲಿ ಸಿಬ್ಬಂದಿ ಕಾರ್ಯಾಚರಣೆ ನಡೆಸಿದರು.

ಹಾಡಹಗಲೇ ಚಿರತೆ ದರ್ಶನ: ಶಿರಾಳಕೊಪ್ಪ -ಶಿಕಾರಿಪುರ ರಸ್ತೆಯ ಭದ್ರಾಪುರ ತೋಟದಲ್ಲಿ ಹಾಡಹಗಲೇ ಕೆಲಸಗಾರರಿಗೆ ಚಿರತೆ ದರ್ಶನವಾಗಿರುವ ಘಟನೆ ನಡೆದಿದೆ. ವೈದ್ಯ ಗಂಗಾಧರ ನಾಯರ್‌ ತೋಟದಲ್ಲಿ ಬುಧವಾರ ಕೆಲಸಗಾರರು ತೋಟದಲ್ಲಿ ಹುಲ್ಲು ಸವರುತ್ತಿದ್ದರು. ಈ ವೇಳೆ ಹುಲ್ಲಿನ ಮರೆಯಲ್ಲಿ ಮಲಗಿದ್ದ ಚಿತರೆ ಕಂಡು ಕೆಲಸಗಾರರು ಭಯದಿಂದ ಕಿರುಚಿದ್ದಾರೆ. ಆಗ ಚಿರತೆ ಅಲ್ಲಿಂದ ಓಡಿಹೋಗಿದೆ. ಈ ಹಿಂದೆ ಈ ಭಾಗದಲ್ಲಿ ಚಿರತೆ ಇದೆ ಎಂದು ಭದ್ರಾಪುರ ಗ್ರಾಮಸ್ಥರು ಹಾಗೂ ಸುತ್ತಮುತ್ತಲ ಹೊಲಗದ್ದೆಯವರಿಗೆ ರಾತ್ರಿ ಮತ್ತು ನಸುಕಿನಲ್ಲಿ ಚಿರತೆ ಕಂಡ ಬಗ್ಗೆ ಮಾತುಗಳು ಕೇಳಿಬಂದಿದ್ದವು. 

ಚಿಕ್ಕಮಗಳೂರಿನಲ್ಲಿ ಕಾಫಿತೋಟದ ಮಾಲೀಕರು-ಕಾರ್ಮಿಕರ ನಡುವೆ ಕೋಲ್ಡ್ ವಾರ್?

ಆದರೆ ಬುಧವಾರ ಹಗಲು ಸಮಯದಲ್ಲಿಯೇ ಚಿರತೆ ಕಂಡ ಕಾರಣ ಕೆಲಸಗಾರರು ಕೆಲಸ ಬಿಟ್ಟು ಮನೆಗೆ ತೆರಳಿದ್ದಾರೆ. ಈ ಕುರಿತು ವೈದ್ಯ ಗಂಗಾಧರ ಪತ್ರಿಕೆಯೊಂದಿಗೆ ಮಾತನಾಡಿ, ರಾತ್ರಿ ಸಮಯದಲ್ಲಿ ನಾವು ಒಬ್ಬರೇ ತೋಟಕ್ಕೆ ಹೋಗಿ ಬರುತ್ತಿದ್ದೆವು. ಈಗ ಹಗಲಿನಲ್ಲಿಯೇ ಕಂಡಿರುವ ಚಿರತೆ ನೋಡಿ ರಾತ್ರಿ ಇರಲಿ, ಹಗಲನಲ್ಲೇ ಕೂಲಿ ಕೆಲಸಕ್ಕೆ ಹೋಗಲು ಭಯಪಡುವಂತಾಗಿದೆ. ಆದ್ದರಿಂದ ಅರಣ್ಯ ಇಲಾಖೆ ಅಧಿಕಾರಿ-ಸಿಬ್ಬಂದಿ ಈ ಕುರಿತು ಗಮನಹರಿಸಿ ಚಿರತೆಯನ್ನು ಪತ್ತೆ ಮಾಡಬೇಕು, ಚಿರತೆ ಸೆರೆಹಿಡಿದು ಗ್ರಾಮಸ್ಥರು ಹಾಗೂ ಹೊಲಗದ್ದೆ ಜನರ ಭಯ ದೂರ ಮಾಡಬೇಕು ಎಂದು ಹೇಳಿದ್ದಾರೆ.

click me!