Lumpy skin disease : ಶಿವಮೊಗ್ಗ ಗಡಿ ಭಾಗದಲ್ಲಿ ಕಟ್ಟೆಚ್ಚರ

By Kannadaprabha News  |  First Published Oct 19, 2022, 7:52 AM IST
  • ಚರ್ಮಗಂಟು ರೋಗ: ಗಡಿ ಭಾಗದಲ್ಲಿ ಕಟ್ಟೆಚ್ಚರ
  • ಜಿಲ್ಲೆ ಮೂರು ತಾಲೂಕುಗಳಲ್ಲಿ ಜಾನುವಾರುಗಳಲ್ಲಿ ಕಂಡುಬಂದಿರುವ ರೋಗ
  • ಲಕ್ಷ ಡೋಸ್‌ ಲಸಿಕೆಗೆ ಬೇಡಿಕೆ
  • 139 ಗ್ರಾಮಗಳ 992 ಜಾನುವಾರುಗಳಲ್ಲಿ ರೋಗ ಪತ್ತೆ
  • ಈಗಾಗಲೇ 15 ಜಾನುವಾರುಗಳ ಬಲಿ: ರೈತರ ಆತಂಕ

ಗಣೇಶ್‌ ತಮ್ಮಡಿಹಳ್ಳಿ

 ಶಿವಮೊಗ್ಗ (ಅ.19) : ರಾಜ್ಯದ ವಿವಿಧ ಭಾಗದಲ್ಲಿ ಜಾನುವಾರುಗಳನ್ನು ಬಾಧಿಸುತ್ತಿರುವ ಚರ್ಮಗಂಟು ರೋಗ ಈಗ ಶಿವಮೊಗ್ಗ ಜಿಲ್ಲೆಗೂ ಕಾಲಿಟ್ಟಿದ್ದು, 139 ಗ್ರಾಮಗಳಲ್ಲಿ ಜಾನುವಾರುಗಳಲ್ಲಿ ಈ ರೋಗ ಕಾಣಿಕೊಂಡಿದೆ. 992 ಜಾನುವಾರುಗಳು ಈ ರೋಗಕ್ಕೆ ತುತ್ತಾಗಿದ್ದು, 15 ಜಾನುವಾರುಗಳು ಬಲಿಯಾಗಿವೆ. ಜಾನುವಾರುಗಳಲ್ಲಿ ಚರ್ಮಗಂಟು ರೋಗ ಜಿಲ್ಲೆಯ ಶಿಕಾರಿಪುರ, ಸೊರಬ, ಶಿವಮೊಗ್ಗ ತಾಲೂಕಿನ ಕೆಲ ಗ್ರಾಮಗಳಲ್ಲಿ ಕಾಣಿಸಿಕೊಂಡು 15 ಹಸುಗಳು ಬಲಿ ಆಗಿರುವುದು ರೈತರಲ್ಲಿ ಆತಂಕ ಸೃಷ್ಟಿಸಿದೆ. ಹೀಗಾಗಿ ಜಿಲ್ಲೆಯ ಗಡಿ ಭಾಗದಲ್ಲಿ ಪಶುಪಾಲನಾ ಇಲಾಖೆ ಕಟ್ಟೆಚ್ಚರ ವಹಿಸಿದ್ದು, ಮುನ್ನೆಚ್ಚರಿಕೆ ಕ್ರಮ ಕೈಗೊಂಡು ಒಂದು ಲಕ್ಷ ಡೋಸ್‌ ಲಸಿಕೆ ತರಿಸಿಕೊಳ್ಳಲು ಮುಂದಾಗಿದೆ.

Tap to resize

Latest Videos

ಚರ್ಮಗಂಟು ರೋಗ: ಒಂದೇ ತಿಂಗಳಲ್ಲಿ 960 ಪ್ರಕರಣ ಪತ್ತೆ!

ಜಿಲ್ಲಾದ್ಯಂತ 5,18,653 ದನಗಳು, 1,20,563 ಎಮ್ಮೆಗಳು ಸೇರಿ 6,39,216 ಜಾನುವಾರುಗಳಿದ್ದು, 992 ಜಾನುವಾರುಗಳು ಈ ರೋಗಕ್ಕೆ ತುತ್ತಾಗಿದ್ದು, 345 ಜಾನುವಾರುಗಳು ಗುಣಮುಖವಾಗಿವೆ. ಮೂರು ತಾಲೂಕಿನ ಕೆಲ ಗ್ರಾಮಗಳಲ್ಲಿ ಮಾತ್ರ ಚರ್ಮಗಂಟು ರೋಗ ಕಾಣಿಸಿಕೊಂಡಿದೆ.

ಗಡಿ ಭಾಗದಲ್ಲಿ ಕಟ್ಟೆಚ್ಚರ:

ಶಿವಮೊಗ್ಗದ ನೆರೆ ಜಿಲ್ಲೆಗಳಾದ ದಾವಣಗೆರೆ, ಹಾವೇರಿ ಜಿಲ್ಲೆಯಲ್ಲಿ ಚರ್ಮಗಂಟು ರೋಗ ವ್ಯಾಪಾಕವಾಗಿ ಹರಡುತ್ತಿರುವ ಕಾರಣ ಜಿಲ್ಲೆಯ ಗಡಿ ಪ್ರದೇಶದ ಗ್ರಾಮಗಳ ಜಾನುವಾರುಗಳಲ್ಲೂ ಚರ್ಮಗಂಟು ರೋಗಗಳು ಕಾಣಿಸಿಕೊಳ್ಳುತ್ತಿವೆ. ಶಿಕಾರಿಪುರ, ಸೊರಬ, ಶಿವಮೊಗ್ಗ ತಾಲೂಕಿನಲ್ಲಿ ಚರ್ಮಗಂಟು ರೋಗ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ. ಆದ್ದರಿಂದ ನಿಯಂತ್ರಣಕ್ಕೆ ಪಶು ಇಲಾಖೆಯಿಂದ ಗಡಿಪ್ರದೇಶದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.

ಹಾವೇರಿ ಜಿಲ್ಲೆ ಗಡಿ ಪ್ರದೇಶಗಳಾದ ಶಿಕಾರಿಪುರ ತಾಲೂಕಿನ 92 ಗ್ರಾಮಗಳಲ್ಲಿ, ಸೊರಬ ತಾಲೂಕಿನ 27 ಗ್ರಾಮಗಳು, ದಾವಣಗೆರೆ ಜಿಲ್ಲೆಯ ಗಡಿ ಪ್ರದೇಶಗಳಾದ ಶಿವಮೊಗ್ಗ ತಾಲೂಕಿನ 12 ಗ್ರಾಮಗಳು ಹಾಗೂ ಸಾಗರ ತಾಲೂಕಿನ 2, ಹೊಸನಗರ ತಾಲೂಕಿನ 5 ಗ್ರಾಮಗಳು, ಭದ್ರಾವತಿ ತಾಲೂಕಿನ 1 ಗ್ರಾಮದಲ್ಲಿ ಈ ಚರ್ಮಗಂಟು ಕಾಣಿಸಿಕೊಂಡಿರುವುದು ವರದಿಯಾಗಿದೆ. ಹೀಗಾಗಿ ಒಂದು ಗ್ರಾಮದ ಹಸುವಿನಲ್ಲಿ ರೋಗ ಕಂಡುಬಂದರೆ ಆ ಗ್ರಾಮ ಮತ್ತು ಸುತ್ತಲಿನ ಗ್ರಾಮದ ಹಸುಗಳಿಗೆ ಮುನ್ನೆಚ್ಚರಿಕೆ ಕ್ರಮವಾಗಿ ಲಸಿಕೆ ಹಾಕಲಾಗುತ್ತಿದೆ ಎನ್ನುತ್ತಾರೆ ಪಶುಪಾಲನಾ ಇಲಾಖೆ ಉಪನಿರ್ದೇಶಕ ಡಾ.ಶಿವಯೋಗಿ ಯಲಿ.

ಜಾನುವಾರು ಸಂತೆ ಹಾಗೂ ಸಾಗಣಿಕೆ ನಿಷೇಧ:

ಜಿಲ್ಲೆಯಲ್ಲೂ ಜಾನುವಾರುಗಳಿಗೆ ಚರ್ಮಗಂಟು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಜಾನುವಾರುಗಳ ಸಂತೆ ಹಾಗೂ ಸಾಗಣಿಕೆ ನಿಷೇಧಿಸಲಾಗಿದೆ. ಜಾನುವಾರುಗಳಿಗೆ ಚರ್ಮಗಂಟು ರೋಗ ವ್ಯಾಪಕವಾಗಿ ಹರಡುತ್ತಿದೆ. ಇದರಿಂದ ರೈತರು ಕಂಗಾಲಾಗಿದ್ದಾರೆ. ಈ ಹಿನ್ನೆಲೆ ಮುನ್ನಚ್ಚರಿಕೆ ಕ್ರಮವಾಗಿ ಜಾನುವಾರುಗಳ ಸಂತೆಯನ್ನು ರದ್ದುಪಡಿಸಿದೆ. ಜೊತೆಗೆ ಜಾನುವಾರು ಸಾಗಾಣಿಕೆ ಮಾಡುವುದನ್ನು ನಿಷೇಧಿಸಿದೆ.

ಚರ್ಮಗಂಟು ಹೇಗೆ ಹರಡುತ್ತದೆ?

ರೋಗಪೀಡಿತ ಜಾನುವಾರಿಗಳ ಬಾಯಿ, ಮೂಗಿನಿಂದ ಸುರಿಯುವ ಲೋಳೆಯಂತಹ ದ್ರವ ಬಿದ್ದ ಕಡೆ ಆರೋಗ್ಯವಂತ ರಾಸುಗಳು ಆಹಾರ ಸೇವಿಸಿದರೆ ರೋಗ ಹರಡುತ್ತದೆ. ಜಾಣುವಾರುಗಳು ಕುಡಿಯುವ ನೀರಿನಲ್ಲಿ ರೋಗ ಬಂದ ಹಸುವಿನ ಜೊಲ್ಲು, ಇತರ ದ್ರವ ಸೇರಿದ್ದರೂ ರೋಗ ಹರಡುತ್ತದೆ. ರೋಗಪೀಡಿತ ಜಾನುವಾರು ಸಂಪರ್ಕದ ಕೀಟ, ನೋಣ, ಸೊಳ್ಳೆ ಇತರ ಜಾನುವಾರುಗಳಿಗೆ ಕಡಿದಾಗಲೂ ರೋಗ ಹರಡುತ್ತದೆ.

ಚರ್ಮಗಂಟಿಗೂ, ಹಾಲಿಗೂ ಸಂಬಂಧವಿಲ್ಲ: ಹಸುವಿಗೆ ಗಂಟಿನರೋಗ ಬಂದಿದೆ ಎಂದಾಕ್ಷಣ ಅದುಕೊಡುವ ಹಾಲಿಗೂ, ರೋಗಕ್ಕೂ ಸಂಬಂಧವಿಲ್ಲ. ಕರೆದ ಹಾಲನ್ನು ಕಾಯಿಸಿ, ಸಂಸ್ಕರಿಸುವ ಕಾರಣ ಸಮಸ್ಯೆ ಆಗಲ್ಲ. ಜಿಲ್ಲೆಯಲ್ಲಿ ಜಾನುವಾರಿಗಳಿಗೆ ಚರ್ಮಗಂಟು ಕಾಣಿಸಿಕೊಳ್ಳುತ್ತಿರುವುದರಿಂದ ಸಾಕಷ್ಟುಜನರಲ್ಲಿ ತಪ್ಪು ಮಾಹಿತಿ ರವಾನೆಯಾಗಿದೆ. ಚರ್ಮಗಂಟು ರೋಗಕ್ಕೆ ತುತ್ತಾದ ಹಸುವಿನ ಹಾಲು ಕುಡಿದರೆ ಮನುಷ್ಯನಿಗೂ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ ಎಂಬ ತಪ್ಪು ಭಾವನೆ ಮೂಡಿದೆ. ಆದರೆ, ಚರ್ಮಗಂಟು ರೋಗಕ್ಕೂ, ಹಸುವಿನ ಹಾಲಿಗೂ ಯಾವುದೇ ಸಂಬಂಧ ಇಲ್ಲ. ಇದರಿಂದ ಮನುಷ್ಯ ಮೇಲೆ ಯಾವುದೇ ದುಷ್ಪರಿಣಾಮ ಬೀರಲ್ಲ ಎಂದು ಪಶು ಇಲಾಖೆ ಉಪನಿರ್ದೇಶಕ ಡಾ.ಶಿವಯೋಗಿ ಯಲಿ ಸ್ಪಷ್ಟಪಡಿಸಿದ್ದಾರೆ.

‘ಚರ್ಮಗಂಟು’ ತಡೆಗೆ 7 ಲಕ್ಷ ಲಸಿಕೆ ಪೂರೈಕೆ: ಸಚಿವ ಪ್ರಭು ಚವ್ಹಾಣ್‌

ಲಕ್ಷ ಡೋಸ್‌ ಲಸಿಕೆಗೆ ಬೇಡಿಕೆ

ಮೂರು ತಾಲೂಕುಗಳಲ್ಲಿ ಜಾನುವಾರುಗಳಲ್ಲಿ ಚರ್ಮರೋಗ ಕಂಡು ಬಂದಿರುವುದರಿಂದ ಸದ್ಯ ರೋಗ ನಿಯಂತ್ರಣಕ್ಕೆ ಗೋಟ್‌ಫಾಕ್ಸ್‌ ವಾಕ್ಸಿನ್‌ ಲಸಿಕೆ ಬಳಸಿಕೊಳ್ಳಲಾಗುತ್ತಿದೆ. ಜಿಲ್ಲೆಯಲ್ಲಿ ಸಾಕಷ್ಟುಪ್ರಮಾಣದಲಿ ್ಲ ದಾಸ್ತಾನು ಇರಿಸಿಕೊಳ್ಳಲು ಮುಂದಾಗಿದ್ದು, ಲಸಿಕೆ ಕೊರತೆ ಇರುವುದರಿಂದ ಒಂದು ಲಕ್ಷ ಡೋಸ್‌ ಲಸಿಕೆ ಬೇಡಿಕೆ ಇಡಲಾಗಿದೆ. ಒಂದು ಗ್ರಾಮದ ಹಸುವಿನಲ್ಲಿ ರೋಗ ಕಂಡು ಬಂದರೆ ಆ ಗ್ರಾಮ ಮತ್ತು ಸುತ್ತಲಿನ ಗ್ರಾಮದ ಹಸುಗಳಿಗೆ ಮುನ್ನೆಚ್ಚರಿಕೆ ಕ್ರಮವಾಗಿ ಲಸಿಕೆ ಹಾಕಲಾಗುತ್ತಿದೆ. ಸಾಮೂಹಿಕವಾಗಿ ಹಾಕುವಂತಹ ಗಂಭೀರ ಸ್ಥಿತಿಗೆ ತಲುಪಿಲ್ಲ. ಆದರೂ, ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳುತ್ತಿದ್ದೇವೆ. ಗಡಿಭಾಗದ ಗ್ರಾಮಗಳಲ್ಲಿ ಹೆಚ್ಚು ಲಸಿಕೆ ಹಾಕಲು ಗುರಿ ಹಾಕಿಕೊಳ್ಳಲಾಗಿದೆ. ಸದ್ಯ 30 ಸಾವಿರ ಲಸಿಕೆ ಲಭ್ಯವಿದ್ದು, ಇನ್ನೂ ಒಂದು ಲಕ್ಷ ಲಸಿಕೆ ನೀಡುವಂತೆ ಬೇಡಿಕೆ ಇಡಲಾಗಿದೆ. ಈಗಾಗಲೇ ಜಿಲ್ಲೆಯ 12 ಗೋಶಾಲೆಗಳಲ್ಲಿರುವ 4900 ಜಾನುವಾರಿಗಳಿಗೆ ಲಸಿಕೆ ನೀಡಲಾಗಿದೆ

- ಶಿವಯೋಗಿ ಯಲಿ, ಉಪನಿರ್ದೇಶಕ, ಪಶುಪಾಲನಾ ಇಲಾಖೆ

click me!