62 ವರ್ಷದಿಂದ ನಕ್ಕೇ ಇಲ್ಲ ರತಿ-ಮನ್ಮಥರು: ನಗಿಸಿದವರಿಗೆ 1.50 ಲಕ್ಷ ಬಹುಮಾನ!

By Kannadaprabha News  |  First Published Mar 10, 2020, 11:29 AM IST

62 ವರ್ಷಗಳಿಂದ ಯಾರೊಬ್ಬರೂ ನಗಿಸಿಲ್ಲ | ವರ್ಷದಿಂದ ವರ್ಷದಕ್ಕೆ ಹೆಚ್ಚಾಗುತ್ತಿದೆ ಬಹುಮಾನ ಮೊತ್ತ| ಹಾವೇರಿ ಜಿಲ್ಲೆ ರಾಣಿಬೆನ್ನೂರು ನಗರದಲ್ಲಿ ಕುಳ್ಳಿರಿಸಿದ ರತಿ-ಮನ್ಮಥ| 


ರಾಣಿಬೆನ್ನೂರು(ಮಾ.10): ನಗರದಲ್ಲಿ ಹೋಳಿ ಹಬ್ಬದ ಮುನ್ನಾ ದಿನ ರತಿ-ಮನ್ಮಥರ ನಗಿಸುವ ಕಾರ್ಯಕ್ರಮ ವೈಶಿಷ್ಟ್ಯಪೂರ್ಣವಾಗಿರುತ್ತದೆ. ಜೀವಂತ ರತಿ-ಮನ್ಮಥ (ಪಾತ್ರಧಾರಿಗಳು)ರನ್ನು ಕುಳ್ಳಿರಿಸಿ ಅವರನ್ನು ನಗಿಸುವ ಸ್ಪರ್ಧೆಯನ್ನು ಏರ್ಪಡಿಸಿರುತ್ತಾರೆ. ಇವರನ್ನು ನಗಿಸಿದವರಿಗೆ ಬರೋಬ್ಬರಿ 1.50 ಲಕ್ಷ ಬಹುಮಾನ. 

ಕಳೆದ ಆರ್ಧ ಶತಮಾನಗಳಿಗೂ ಹೆಚ್ಚು ಕಾಲ ಈ ಸ್ಪರ್ಧೆ ನಡೆಯುತ್ತಿದ್ದು, ಇದುವರೆಗೂ ನಗಿಸಲು ಯಾರಿಗೂ ಸಾಧ್ಯವಾಗದೇ ಇರುವುದರಿಂದ ಬಹುಮಾನ ಯಾರಿಗೂ ದಕ್ಕಿಲ್ಲ. ಹೌದು ಪ್ರತಿ ವರ್ಷದಂತೆ ಈ ಬಾರಿ ಮಾ. 10ರಂದು ಸಂಜೆ 7.30ರಿಂದ ರಾತ್ರಿ 12ರ ವರೆಗೆ ನಗರದ ದೊಡ್ಡ ಪೇಟೆ ರಾಮಲಿಂಗೇಶ್ವರ ದೇವಸ್ಥಾನದ ಮುಂಭಾಗದಲ್ಲಿ ಜೀವಂತ ರತಿ ಮನ್ಮಥರನ್ನು ಕುಳ್ಳಿರಿಸಲಾಗುತ್ತದೆ. ಆದರೆ ರತಿ ಕಾಮಣ್ಣರನ್ನು ನಗಿಸಲು ಉತ್ಸಾಹದಿಂದ ಇಲ್ಲಿಗೆ ಬರುವ ಜನ ತಾವೇ ನಗೆಪಾಟಲಿಗೀಡಾಗುವ ಪ್ರಸಂಗಗಳು ನೋಡುಗರಲ್ಲಿ ಮೋಜು ಉಂಟು ಮಾಡುತ್ತವೆ. 

Tap to resize

Latest Videos

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ರತಿ ಮನ್ಮಥರನ್ನು ನಗಿಸಲು ಜನರು ನಾನಾ ವಿಧದ ಕಸರತ್ತುಗಳನ್ನು ಮಾಡುತ್ತಾರೆ. ಆದರೆ ನಗಿಸಲು ಸಾಧ್ಯವಾಗುವುದಿಲ್ಲ. ಸ್ವಲ್ಪ ನಗಪ್ಪಾ ಕಾಮಣ್ಣಾ, ಏನ ಚಿಂತಿ ಐತಿ ನಿನಗ? ನಗರಸಭೆ ಅಧ್ಯಕ್ಷ ಗಾದಿ ಬೇಕೇನ್ ನೀನಗ? ಮುಖ್ಯಮಂತ್ರಿಗಳಿಗೆ ಹೇಳಿ ಕೊಡ್ಸೋಣ ಬೀಡು. ಯವ್ವಾ ರತಿದೇವಿ ನೀನರ್ ಸ್ವಲ್ಪ ನಕ್ಕರ ನಗು, ಬಹು ಮಾನದ ಹಣ ಪೂರಾ ನಿಮಗೆ ಕೊಡ್ತೇವಿ? ಸುಮ್ನಾ ಗಂಟು ಮೋರೆ ಹಾಕ್ಕೊಂಡ ಯಾಕ್ ಕುಂದರಿತಿ? ಎಂಬ ವೈವಿಧ್ಯಮಯ ಮಾತುಗಳು ಇಲ್ಲಿಗೆ ಆಗಮಿಸುವ ಜನರಿಂದ ಕೇಳಿ ಬರುತ್ತವೆ. 

ಕೆಲವರು ವಿಚಿತ್ರ ಹಾವಭಾವ ಕೂಡ ಪ್ರದರ್ಶಿಸುತ್ತಾ ಹಾಸ್ಯ ಚಟಾಕಿಗಳನ್ನು ಹಾರಿಸುತ್ತಾ ಬಹುಮಾನ ಗೆಲ್ಲಲು ಪ್ರಯತ್ನ ಪಟ್ಟರೂ ಫಲಿತಾಂಶ ಮಾತ್ರ ಶೂನ್ಯ. ರತಿ ಮನ್ಮಥರು ಇದಾವುದಕ್ಕೂ ತಲೆಕೆಡಿಸಿಕೊಳ್ಳದೆ ತಮ್ಮ ಪಾಡಿಗೆ ತಾವು ತದೇಕಚಿತ್ತದಿಂದ ಗಂಭೀರವದನರಾಗಿ ಕುಳಿತುಕೊಂಡಿರುತ್ತಾರೆ. ವಿವಿಧ ಪ್ರದೇಶಗಳ ಯುವ ಕರು ಹಲಗೆ ಬಾರಿಸುತ್ತ ಇಲ್ಲಿಗೆ ಬಂದು ಹೋಗುವುದನ್ನು ಕಂಡರೆ ಇಲ್ಲಿ ಒಂದು ಜಾತ್ರೆ ನಡೆದಿದೆಯೇನೋ ಎಂದೆ ನಿಸುತ್ತದೆ. 

ಜನರನ್ನು ನಿಯಂತ್ರಿಸುವ ಸಲುವಾಗಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗುತ್ತದೆ. ಕಳೆದ 21 ವರ್ಷಗಳಿಂದ ಕಾಮ (ಮನ್ಮಥ)ನ ವೇಷವನ್ನು 41 ರ ಹರೆಯದ ಗದಿಗೆಪ್ಪ ರೊಡ್ಡನವರ ಹಾಗೂ ರತಿ ವೇಷದಲ್ಲಿ 32ರ ಹರೆಯದ ಕುಮಾರ ಹಡಪದ ಯಶಸ್ವಿಯಾಗಿ ನಿರ್ವಹಿಸುತ್ತಾ ಬಂದಿದ್ದಾರೆ. ಉಳಿದ ದಿನಗಳಲ್ಲಿ ಇವರಿಬ್ಬರೂ ಸಾಕಷ್ಟು ಹಾಸ್ಯಪ್ರಜ್ಞೆ ಹೊಂದಿದ್ದು ರತಿ ಮನ್ಮಥರಾದಾಗ ಪರಕಾಯ ಪ್ರವೇಶ ಮಾಡಿದಂತೆ ನಗೆಯ ಲವಲೇಶವೂ ತಮ್ಮ ಹತ್ತಿರ ಸುಳಿಯದಂತೆ ಕುಳಿತುಕೊಳ್ಳುವ ಪರಿ ಸಾರ್ವಜನಿಕರಿಗೆ ಕುತೂಹಲದ ಜತೆಗೆ ಅಚ್ಚರಿ ಉಂಟು ಮಾಡುತ್ತದೆ. ಇದರ ನಿಗೂಢತೆ ರಹಸ್ಯವಾಗಿಯೇ ಉಳಿದಿದ್ದು ಜನರನ್ನು ಯಕ್ಷಪ್ರಶ್ನೆಯಾಗಿ ಕಾಡುತ್ತಿದೆ. 

ನಗಿಸಿದವರಿಗೆ ವಿವಿಧ ಸಂಘ ಸಂಸ್ಥೆಗಳು ಸುಮಾರು ಲಕ್ಷಕ್ಕೂ ಅಧಿಕ (ಈ ಬಾರಿ ಬಹುಮಾನದ ಮೊತ್ತ 1.5 ಲಕ್ಷ) ನಗದು ಬಹುಮಾನ ನೀಡುವುದಾಗಿ ತಿಳಿಸಿದರೂ ಸಹ ಕಳೆದ 62 ವರ್ಷಗಳಿಂದ ಯಾರೊಬ್ಬರೂ ಜೀವಂತ ರತಿ ಕಾಮಣ್ಣರನ್ನು ನಗಿಸಿದ ಉದಾಹರಣೆಗಳಿಲ್ಲ. ನಿಜಕ್ಕೂ ಇದೊಂದು ದಾಖಲೆಯಾಗಿ ಮುಂದುವರಿದಿದೆ. ಇದರ ಮರ್ಮವನ್ನು ಅರಿಯಲು ರಾಜ್ಯದ ವಿವಿಧ ಮೂಲೆಗಳಿಂದ ಸಾಕಷ್ಟು ಜನ ಇಲ್ಲಿಗೆ ಆಗಮಿಸಿ ಬರಿಗೈಯಲ್ಲಿ ಹಿಂದಿರುಗುವಂತಾಗಿದೆ. 

* ಕಳೆದ ಆರ್ಧ ಶತಮಾನಗಳಿಗೂ ಹೆಚ್ಚು ಕಾಲ ಈ ಸ್ಪರ್ಧೆ ನಡೆಯುತ್ತಿದ್ದು, ಇದುವರೆಗೂ ನಗಿಸಲು ಯಾರಿಗೂ ಸಾಧ್ಯವಾಗಿಲ್ಲ 
* ರತಿ ಕಾಮಣ್ಣರನ್ನು ನಗಿಸಲು ಉತ್ಸಾಹದಿಂದ ಇಲ್ಲಿ ಗೆ ಬರುವ ಜನ ತಾವೇ ನಗೆಪಾಟಲಿಗೀಡಾಗುವ ಪ್ರಸಂಗಗಳು ನೋಡುಗರಲ್ಲಿ ಮೋಜು ಉಂಟು ಮಾಡುತ್ತವೆ. 
* ಕೆಲವರು ವಿಚಿತ್ರ ಹಾವಭಾವ ಕೂಡ ಪ್ರದರ್ಶಿಸುತ್ತಾ ಹಾಸ್ಯ ಚಟಾಕಿಗಳನ್ನು ಹಾರಿಸುತ್ತಾ ಬಹುಮಾನ ಗೆಲ್ಲಲು ಪ್ರಯತ್ನ ಪಟ್ಟರೂ ಫಲಿತಾಂಶ ಶೂನ್ಯ. 
* ಕಳೆದ 21 ವರ್ಷಗಳಿಂದ ಕಾಮನ ವೇಷ ಹಾಕಿದ 41 ರ ಹರೆಯದ ಗದಿಗೆಪ್ಪ ರೊಡ್ಡನವರ, ರತಿ ವೇಷ ಧರಿಸಿದ 32ರ ಹರೆಯದ ಕುಮಾರ ಹಡಪದ
 

click me!