ಬರದ ಜೊತೆಗೆ ಭೀಕರ ತಾಪಮಾನದಿಂದ ಗುಮ್ಮಟನಗರಿ ವಿಜಯಪುರ ಜಿಲ್ಲೆಯ ಜನರು ಕಂಗೆಟ್ಟು ಹೋಗಿದ್ದರು. ಅದ್ರಲ್ಲು ೪೫ ಡಿಗ್ರಿವರೆಗೆ ಈ ಬಾರಿ ತಾಪಮಾನ ತಲುಪಿದ್ದರಿಂದ ಜನರು ಕಂಗಾಲಾಗಿದ್ದರು.
- ಷಡಕ್ಷರಿ ಕಂಪೂನವರ್ ಏಷ್ಯಾನೆಟ್ ಸುವರ್ಣ ನ್ಯೂಸ್
ವಿಜಯಪುರ (ಮೇ.12): ಬರದ ಜೊತೆಗೆ ಭೀಕರ ತಾಪಮಾನದಿಂದ ಗುಮ್ಮಟನಗರಿ ವಿಜಯಪುರ ಜಿಲ್ಲೆಯ ಜನರು ಕಂಗೆಟ್ಟು ಹೋಗಿದ್ದರು. ಅದ್ರಲ್ಲು ೪೫ ಡಿಗ್ರಿವರೆಗೆ ಈ ಬಾರಿ ತಾಪಮಾನ ತಲುಪಿದ್ದರಿಂದ ಜನರು ಕಂಗಾಲಾಗಿದ್ದರು. ಈ ನಡುವೆ ತಡರಾತ್ರಿ ಜಿಲ್ಲೆಯಾದ್ಯಂತ ಮಳೆ ಸುರಿದಿದ್ದು, ಮಳೆರಾಯ ತಂಪೇರಿದ್ದಾನೆ. ಆದ್ರೆ ಮಳೆಯ ಜೊತೆ ಜೊತೆಗೆ ಬಿರುಗಾಳಿ ಬೀಸಿದ್ದು ಜಿಲ್ಲೆಯ ಹಲವೆಡೆ ಅವಘಡಗಳು ಸಂಭವಿಸಿವೆ. ಬಿಸಿಲ ಬೇಗೆಯಿಂದ ಬೇಸತ್ತಿದ್ದ ಜನರಿಗೆ ಬಿರುಗಾಳಿ ಸಹಿತ ಮಳೆ ಶಾಕ್ ಕೊಟ್ಟಿದೆ.. ಜಿಲ್ಲೆಯಲ್ಲಿ ಮಳೆ, ಬಿರುಗಾಳಿಯಿಂದ ಎಲ್ಲೆಲ್ಲಿ ಏನೇನಾಯ್ತು ಕಂಪ್ಲಿಟ್ ಮಾಹಿತಿ ಇಲ್ಲಿದೆ
ಬಿರುಗಾಳಿ ಹೊಡೆತಕ್ಕೆ ನೆಲಕಚ್ಚಿದ ಲಿಂಬೆ ಬೆಳೆ..!
ಗುಮ್ಮಟನಗರಿ ವಿಜಯಪುರ ಜಿಲ್ಲೆಯಲ್ಲಿ ಬರದಿಂದ ಕಂಗೆಟ್ಟಿದ್ದ ರೈತರು ಈಗ ಬಿರುಗಾಳಿ ಸಹಿತ ಮಳೆಯಿಂದ ಕಂಗಾಲಾಗಿದ್ದಾರೆ. ನಿನ್ನೆ ತಡರಾತ್ರಿ ಸುರಿದ ಬಿರುಗಾಳಿ ಸಹಿತ ಮಳೆಯಿಂದ ಲಿಂಬೆ ಬೆಳೆ ನಾಶವಾಗಿದೆ. ಜಿಲ್ಲೆಯ ಇಂಡಿ ಪಟ್ಟಣದ ಹೊರವಲಯದ ಲಿಂಬೆ ತೋಟದಲ್ಲಿನ 30ಕ್ಕು ಅಧಿಕ ನಿಂಬೆ ಗಿಡಗಳು ಬಿರುಗಾಳಿಯಿಂದ ನೆಲಕಚ್ಚಿವೆ. ಸಂಜೀವ ವಾಘಮೋಡೆ ಎಂಬುವರಿಗೆ ಸೇರಿದ ನಿಂಬೆ ತೋಟದಲ್ಲಿ ಈ ಘಟನೆ ನಡೆದಿದ್ದು, ಬರದಿಂದ ಕಂಗೆಟ್ಟಿದ್ದ ರೈತನಿಗೆ ಈಗ ಬಿರುಗಾಳಿ ಸಹಿತ ಮಳೆ ಶಾಕ್ ಕೊಟ್ಟಿದೆ. ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಸಂಜೀವ್ ಮೂರುವರ್ಷಗಳ ಹಿಂದೆ ನಿಂಬೆ ಬೆಳೆ ಮಾಡಿದ್ದರು. ಆದ್ರೆ ತಡರಾತ್ರಿ ಸುರಿದ ಬಿರುಗಾಳಿ ಮಳೆಯಿಂದ ನಿಂಬೆ ಗಿಡಗಳಿಗೆ ಹಾನಿಯಾಗಿದೆ.. ಸ್ಥಳಕ್ಕೆ ತೋಟಗಾರಿಕಾ ಅಧಿಕಾರಿ ಭೇಟಿ ನೀಡಿ ಪರಿಶೀಲನೆ ಮಾಡಬೇಕು ಎಂದು ರೈತ ಸಂಜೀವ್ ಆಗ್ರಹಿಸಿದ್ದಾರೆ..
ಧರೆಗುರುಳಿದ ವಿದ್ಯುತ್ ಕಂಬಗಳು, ಕರೆಂಟ್ ಕಟ್..!
ಮಳೆಯ ಜೊತೆಗೆ ತಡರಾತ್ರಿ ಬೀಸಿದ ಬಿರುಗಾಳಿ ಯಡವಟ್ಟುಗಳನ್ನ ಸೃಷ್ಟಿಸಿದೆ. ಅದ್ರಲ್ಲು ಸಿಂದಗಿ ತಾಲೂಕಿನ ಹಂದಿಗನೂರು ಗ್ರಾಮದಲ್ಲಿ ಬಿರುಗಾಳಿ ಮಳೆಗೆ ವಿದ್ಯುತ್ ಕಂಬಗಳೇ ಧರೆಗುರುಳಿವೆ. 15ಕ್ಕು ಅಧಿಕ ವಿದ್ಯುತ್ ಕಂಬಗಳು ಮುರಿದು ಬಿದ್ದುದ್ದು, ಜನರು ಕರೆಂಟ್ ಇಲ್ಲದೆ ತಡರಾತ್ರಿ ಸಂಕಟ ಅನುಭವಿಸಿದ್ದಾರೆ. ರಾತ್ರಿ ಬಿರುಗಾಳಿಗೆ ಗ್ರಾಮದಲ್ಲಿದ್ದ ಬೃಹತ್ ಹುಣಸೆ ಮರ ವಿದ್ಯುತ್ ಕಂಬದ ಮೇಲೆ ಬಿದ್ದಿದ್ದು ಪರಿಣಾಮ ವಿದ್ಯುತ್ ಕಂಬಗಳು ಮುರಿದು ನೆಲಕಚ್ಚಿವೆ. ಈ ನಡುವೆ ಮನೆಯೊಂದರ ಮೇಲೆ ವಿದ್ಯುತ್ ಕಂಬ ಬಿದ್ದಿದ್ದು ಮನೆ ಜಖಂ ಆಗಿದೆ. ವಿದ್ಯುತ್ ಕಂಬಗಳಿಗೆ ಹಾನಿಯುಂಟಾಗಿದ್ದರಿಂದ ಹಂದಿಗನೂರು ಗ್ರಾಮದಲ್ಲಿ ಕಳೆದ ರಾತ್ರಿಯಿಂದಲೂ ವಿದ್ಯುತ್ ಸಂಪರ್ಕ ಕಟ್ ಆಗಿದ್ದು, ಜನರು ಪರದಾಡುವಂತಾಗಿದೆ..
ಬಿಜೆಪಿ ಅಂದುಕೊಂಡಷ್ಟು ರಾಮಮಂದಿರ ಪರಿಣಾಮ ಬೀರಿಲ್ಲವೇ?: ಮೋದಿ ಏಕ್‌ದಂ ಅಗ್ರೆಸಿವ್ ಆಗಿದ್ದು ಏಕೆ?
ಆಕಳು-ಕುರಿಗಳ ಸಾವು, ಹಾರಿಹೋದ ಕೋಳಿ ಶೆಡ್.!
ಬಿರುಗಾಳಿ ಮಳೆಯ ಜೊತೆಗೆ ಜಿಲ್ಲೆಯಲ್ಲಿ ಸಿಡಿಲು ಸಹ ಅಬ್ಬರಿಸಿದೆ. ವಿಜಯಪುರ ತಾಲೂಕಿನ ಕವಲಗಿ ಗ್ರಾಮದಲ್ಲಿ ಸಿಡಿಲಿಗೆ ಆಕಳು ಬಲಿಯಾಗಿದೆ. ಹಣಮಂತ ಚಲವಾದಿ ಎಂಬುವರು ಜಮೀನಿನಲ್ಲಿ ಕಟ್ಟಿ ಹಾಕಿದ್ದ ಆಕಳಿಗೆ ಸಿಡಿಲು ಬಡಿದಿದ್ದು, ಸ್ಥಳದಲ್ಲೆ ಸಾವನ್ನಪ್ಪಿದೆ. ಇತ್ತ ನಿಡಗುಂದಿ ತಾಲೂಕಿನ ಹಾಲಿಹಾಳ ಗ್ರಾಮದಲ್ಲಿ ಮಳೆಯ ಜೊತೆಗೆ ಸಿಡಿಲು ಸಹ ಆರ್ಭಟಿಸಿದೆ. ಪರಿಣಾಮ ಸಾಬಣ್ಣ ಬಸನಗೌಡ ಬೇವಿನಕಟ್ಟಿ ಎಂಬುವರಿಗೆ ಸೇರಿದ ಎರೆಡು ಕುರಿಗಳು ಸಾವನ್ನಪ್ಪಿವೆ. ಇನ್ನೂ ಬಳಬಟ್ಟಿ ಗ್ರಾಮದಲ್ಲಿ ಬಿರುಗಾಳಿಗೆ ಕೋಳಿ ಶೆಡ್ ಹಾರಿ ಹೋಗಿದೆ. ಕೋಳಿ ಸಾಕಾಣಿಕೆಗಾಗಿ ಮಲ್ಲಪ್ಪ ಬಸಪ್ಪ ಕೊಪ್ಪ ಎಂಬುವರು ಕೋಳಿ ಶೆಡ್ ನಿರ್ಮಾಣ ಮಾಡಿದ್ದರು. ಆದ್ರೆ ತಡರಾತ್ರಿ ಬೀಸಿದ ಬಿರುಗಾಳಿಗೆ ಶೆಡ್ ಕಿತ್ತುಕೊಂಡು ಹೋಗಿದೆ.