ಅಧ್ಯಕ್ಷ ಪಟ್ಟದಕ್ಕದೇ ಆದ ಅವಮಾನದಿಂದ ಕಾಂಗ್ರೆಸ್ ಸೇರಿದ್ದ ಚಿನ್ನೂರು| 4 ವರ್ಷಗಳ ಹಿಂದೆ ನಡೆದಿದ್ದ ಹೈಡ್ರಾಮಾ| ಭಾಗ್ಯನಗರದಲ್ಲಿಯೂ ಕಾಂಗ್ರೆಸ್‌ಗೆ ಪಟ್ಟವೇ?| ಕೊಪ್ಪಳ ನಗರಸಭೆಯ ಅಧ್ಯಕ್ಷ ಪಟ್ಟವನ್ನು ಪತ್ನಿಗೆ ಕೊಡಿಸುವಲ್ಲಿ ಯಶಸ್ವಿಯಾದ ಗವಿಸಿದ್ದಪ್ಪ ಚಿನ್ನೂರು|
ಸೋಮರಡ್ಡಿ ಅಳವಂಡಿ
ಕೊಪ್ಪಳ(ಅ.30): 4 ವರ್ಷಗಳ ಹಿಂದೆ ಶತಾಯಗತಾಯ ಶ್ರಮಿಸಿ, ಅಧ್ಯಕ್ಷನಾಗಲೇಬೇಕು ಎಂದು ಪಟ್ಟು ಹಿಡಿದು ವಿಫಲವಾಗಿದ್ದ ಗವಿಸಿದ್ದಪ್ಪ ಚಿನ್ನೂರು ಅವರು ಬಿಜೆಪಿ ತೊರೆದು ಕಾಂಗ್ರೆಸ್‌ಗೆ ಸೇರಿದ್ದರು. ಈಗ ಅವರ ಪತ್ನಿ ಲತಾ ಚಿನ್ನೂರು ಕೊಪ್ಪಳ ನಗರಸಭೆಯ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಅದು ಕಾಂಗ್ರೆಸ್ ಪಕ್ಷದಿಂದ. ಗವಿಸಿದ್ದಪ್ಪ ಚಿನ್ನೂರು ಅವರು ಹಠಕ್ಕೆ ಬಿದ್ದು, ಕೊಪ್ಪಳ ನಗರಸಭೆಯ ಅಧ್ಯಕ್ಷ ಪಟ್ಟವನ್ನು ಪತ್ನಿಗೆ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಏನಾಗಿತ್ತು?
ಕಳೆದ ಬಾರಿಯ ಅವಧಿಯಲ್ಲಿ ಗವಿಸಿದ್ಧಪ್ಪ ಚಿನ್ನೂರು ಬಿಜೆಪಿಯಲ್ಲಿಯೇ ನಗರಸಭೆ ಸದಸ್ಯರಾಗಿದ್ದರು. ಅಧ್ಯಕ್ಷರಾಗಲೇಬೇಕು ಎಂದು ಶತಾಯ ಶ್ರಮಿಸಿದರು. ನಾಮಪತ್ರ ಸಲ್ಲಿಸಿ, ಕೊನೆಗಳಿಗೆಯಲ್ಲಾದ ಬೆಳವಣಿಗೆಯಿಂದ ಅವರಿಗೆ ಅಧ್ಯಕ್ಷ ಸ್ಥಾನ ಕೈ ತಪ್ಪಿತು, ಅದು ಬಿಜೆಪಿ ಸದಸ್ಯರಿಂದಲೇ.
ಇದರಿಂದ ಬೇಸರಗೊಂಡಿದ್ದ ಅವರು ಮೋಸ ಮಾಡಿದ ಬಿಜೆಪಿ ಸದಸ್ಯರ ವಿರುದ್ಧ ಪಕ್ಷದ ಮೂಲಕ ಕಾನೂನು ಹೋರಾಟ ನಡೆಸಿದ್ದರು. ಆದರೆ, ಇನ್ನೇನು ಪಕ್ಷಾಂತರಿಗಳಿಗೆ ಶಿಕ್ಷೆಯಾಯಿತು ಎನ್ನುವಾಗಲೇ ಬಿಜೆಪಿ ನಾಯಕರೇ ಕೈ ಚಲ್ಲಿದರು. ಇದರಿಂದ ರೋಸಿ ಹೋಗಿದ್ದ ಅವರು ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದರು. ಕಾಂಗ್ರೆಸ್‌ದಿಂದಲೇ ಅವರ ಪತ್ನಿ ಲತಾ ಅವರನ್ನು ಅಖಾಡಕ್ಕೆ ಇಳಿಸಿ, ಜಯ ಸಾಧಿಸಿದ್ದಾರೆ.
ಕೊಪ್ಪಳ ನಗರಸಭೆ ಅಧ್ಯಕ್ಷೆ, ಉಪಾಧ್ಯಕ್ಷರ ಆಯ್ಕೆಯಾದರೂ ಘೋಷಣೆ ಇಲ್ಲ
ಈಗ ಅಧ್ಯಕ್ಷ, ಉಪಾಧ್ಯಕ್ಷರ ಮೀಸಲಾತಿ ಘೋಷಣೆಯಾಗಿ ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿದ್ದು ವರವಾಯಿತು ಗವಿಸಿದ್ದಪ್ಪ ಚಿನ್ನೂರು ಅವರಿಗೆ. ಹೀಗಾಗಿ, ಶಾಸಕ ರಾಘವೇಂದ್ರ ಹಿಟ್ನಾಳ ಅವರ ಬೆನ್ನುಬಿದ್ದು ಪತ್ನಿಯನ್ನು ಅಧ್ಯಕ್ಷರನ್ನಾಗಿ ಮಾಡುವಲ್ಲಿ ಯಶಸ್ವಿಯಾದರು. ಆದರೆ, ಇದರ ಹಿಂದೆ ಏನೇನು ಆಟ ನಡೆದಿದೆಯೋ ದೇವರೇ ಬಲ್ಲ ಎನ್ನುತ್ತಿದ್ದಾರೆ ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರು.
ಭಾಗ್ಯನಗರ ಪಪಂ ಕಾಂಗ್ರೆಸ್‌ಗೆ
ಈ ನಡುವೆ ಕೊಪ್ಪಳ ನಗರಸಭೆಯಲ್ಲಿ ಅಧಿಕಾರ ಗಿಟ್ಟಿಸಿಕೊಂಡವರು ಭಾಗ್ಯನಗರ ಪಟ್ಟಣ ಪಂಚಾಯಿತಿಯಲ್ಲಿ ಇಬ್ಬರು ಬಿಜೆಪಿ ಸದಸ್ಯರನ್ನು ಕಾಂಗ್ರೆಸ್ ತೆಕ್ಕೆಗೆ ತೆಗೆದುಕೊಂಡು ಬರುವ ಆಂತರಿಕ ಒಪ್ಪಂದ ಆಗಿದೆ. ಹೀಗಾಗಿ, ಭಾಗ್ಯನಗರ ಪಟ್ಟಣ ಪಂಚಾಯಿತಿಯಲ್ಲಿ ಬಿಜೆಪಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದರೂ ಆ ಪಕ್ಷಕ್ಕೆ ಅಧಿಕಾರ ದಕ್ಕುವುದು ತೀರಾ ಕಡಿಮೆ ಎನ್ನುವ ಚರ್ಚೆ ಕೊಪ್ಪಳ ನಗರಸಭೆಯ ಪಡಸಾಲೆಯಲ್ಲಿ ನಡೆಯುತ್ತಿದೆ.