ಮುಂಡಗೋಡ: ಮಳಗಿ ಮಾರಿಕಾಂಬಾ ಜಾತ್ರಾ ಮಹೋತ್ಸವಕ್ಕೆ ಅದ್ಧೂರಿ ಚಾಲನೆ

9 ದಿನಗಳ ಕಾಲ ನೆರವೇರಲಿರುವ ಜಾತ್ರಾ ಮಹೋತ್ಸವ| ಉತ್ತರ ಕನ್ನೆ ಜಿಲ್ಲೆಯ ಮುಂಡಗೋಡ ತಾಲೂಕಿನ ಮಳಗಿ ಗ್ರಾಮ ದೇವತೆ ಶ್ರೀ ಮಾರಿಕಾಂಬಾ ದೇವಿ| 2 ವರ್ಷಕ್ಕೊಮ್ಮೆ 9 ದಿನಗಳ ಕಾಲ ನಡೆಯುವ ಜಾತ್ರೆ| 

Malagi Marikamba Fair Started at Mundgod in Uttara Kannada grg

ಸಂತೋಷ ದೈವಜ್ಞ

ಮುಂಡಗೋಡ(ಮಾ.24): ಐತಿಹಾಸಿಕ ಹಿನ್ನೆಲೆಯುಳ್ಳ ತಾಲೂಕಿನ ಮಳಗಿ ಗ್ರಾಮ ದೇವತೆ ಶ್ರೀ ಮಾರಿಕಾಂಬಾ ದೇವಿಯ 26 ನೇ ಜಾತ್ರಾ ಮಹೋತ್ಸವಕ್ಕೆ ಅದ್ಧೂರಿಯಾಗಿ ಚಾಲನೆ ದೊರೆತಿದ್ದು, ಮಾ. 31ರ ವರೆಗೆ 9 ದಿನಗಳ ಕಾಲ ಜರುಗಲಿದೆ.

ದೇವಿಯ ಪ್ರತಿಷ್ಠಾಪನೆಗೆ ಜಾತ್ರಾ ಗದ್ದುಗೆಯ ಸುತ್ತ ಸುಂದರವಾದ ಚೌತ ಮನೆ ನಿರ್ಮಿಸಲಾಗಿದ್ದು, ಭಕ್ತಾದಿಗಳಿಗೆ ಶಿಸ್ತುಬದ್ಧವಾಗಿ ಸಕಲ ಸೌಲಭ್ಯ ಕಲ್ಪಿಸಲಾಗಿದೆ. ಗ್ರಾಮದಿಂದ ಕಾರ್ಯ ನಿಮಿತ್ತ ದೂರದ ಊರಿಗೆ ವಲಸೆ ಹೋದವರೆಲ್ಲ ಮರಳಿ ಗ್ರಾಮ ಸೇರಿದ್ದು, ಗ್ರಾಮದ ಮನೆ ಮನೆಗಳಲ್ಲಿ ಕೂಡ ಈಗ ಹಬ್ಬದ ವಾತಾವರಣ ನಿರ್ಮಾಣವಾಗಿದೆ.

ಗ್ರಾಮದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯದಿಂದ ಹಿಡಿದು ಸಾಮಾಜಿಕ ಹಾಗೂ ಧಾರ್ಮಿಕ ಕಾರ್ಯಕ್ರಮಗಳನ್ನು ಪಕ್ಷ, ಜಾತಿ ಭೇದ ಮರೆತು ಪ್ರತಿಯೊಬ್ಬರೂ ಕೂಡ ಒಗ್ಗಟ್ಟಾಗಿ ಆಚರಿಸುವುದು ಇಲ್ಲಿಯ ವಿಶೇಷತೆ. ಅದೇ ರೀತಿ ಈಗ ಮಾರಿಕಾಂಬಾ ದೇವಿ ಜಾತ್ರೆಯನ್ನು ಕೂಡ ಸಕಲ ಸಿದ್ಧತೆಯೊಂದಿಗೆ ಒಗ್ಗೂಡಿ ಆಚರಿಸಲಾಗುತ್ತಿದ್ದು, ಮಳಗಿ ವ್ಯಾಪ್ತಿಯ ಸುತ್ತಮುತ್ತಲಿನ ಹತ್ತಾರು ಹಳ್ಳಿಗಳ ಜನ ಕೂಡ ಜಾತ್ರಾ ಕಾರ್ಯದಲ್ಲಿ ನಿರತರಾಗಿದ್ದಾರೆ.

ಶಿರಸಿ: ಬೇಡ್ತಿ-ವರದಾ ಜೋಡಣೆಗೆ ಇನ್ನಷ್ಟು ಚಿಂತನೆ ಅಗತ್ಯ, ಸ್ವರ್ಣವಲ್ಲೀ ಸ್ವಾಮೀಜಿ

ದೇವಿಯ ಇತಿಹಾಸ:

17-18ನೇ ಶತಮಾನದಲ್ಲಿ ಮಳಗಿ ಪಕ್ಕದ ಗ್ರಾಮ ಗೊಟಗೊಡಿಕೊಪ್ಪ ಗ್ರಾಮದ ಗದ್ದೆಯೊಂದರಲ್ಲಿ ರೈತರೊಬ್ಬರು ಉಳುಮೆ ಮಾಡುತ್ತಿದ್ದಾಗ ಮಣ್ಣಿನಡಿಗೆ ಕಟ್ಟಿಗೆಯ ಪೆಟ್ಟಿಗೆಯೊಂದು ಕಾಣಿಸಿಕೊಂಡಿದೆ. ಅದನ್ನು ತೆರೆದು ನೋಡಿದಾಗ ಅದರಲ್ಲಿ ದೇವಿಯ ಮೂರ್ತಿ ಪತ್ತೆಯಾಗಿದೆ. ಈ ವಿಷಯವನ್ನು ಗೊಟಗೊಡಿಕೊಪ್ಪ, ಕೊಳಗಿ, ಮಳಗಿ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರಿಗೆ ಮುಟ್ಟಿಸಲಾಗಿದೆ. ಸುದ್ದಿ ಹಬ್ಬುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಸುತ್ತಮುತ್ತಲಿನ 30 ಹಳ್ಳಿಯ ಮುಖ್ಯಸ್ಥರು ಸೇರಿ ಮಳಗಿ ಗ್ರಾಮದಲ್ಲಿ ದೇವಿಯನ್ನು ಪ್ರತಿಷ್ಠಾಪಿಸಲು ತೀರ್ಮಾನಿಸಿ ಮಳಗಿ ಗ್ರಾಮದ ದೊಡ್ಡ ಮನೆತನವಾದ ನಾಡಿಗ್‌ರನ್ನು ಇದರ ಮುಖ್ಯಸ್ಥರನ್ನಾಗಿ ನೇಮಕ ಮಾಡಿ ಅಂದಿನಿಂದಲೂ ನಾಡಿಗ್‌ ಮನೆತನದವರೇ ದೇವಿ ಪೂಜೆ ನೆರವೇರಿಸುತ್ತಾ ಬರುತ್ತಿದ್ದಾರೆ.

1972 ರಿಂದ ಜಾತ್ರೆ:

ದೇವಿಯ ಅನುಗ್ರಹ ಪ್ರಾಪ್ತಿಸಿಕೊಳ್ಳುವ ಉದ್ದೇಶದಿಂದ 2 ವರ್ಷಕ್ಕೊಮ್ಮೆ 9 ದಿನಗಳ ಕಾಲ ಗ್ರಾಮದೇವಿ ಮಾರಿಕಾಂಬೆ ಜಾತ್ರೆಯನ್ನು ನಡೆಸುವ ತೀರ್ಮಾನ ಕೈಗೊಂಡು ಅದರಂತೆ 1972 ರಿಂದಲೂ ಕೂಡ ಗ್ರಾಮದಲ್ಲಿ ಮಾರಿಕಾಂಬಾ ದೇವಿಯ ಜಾತ್ರಾ ಮಹೋತ್ಸವವನ್ನು ಪ್ರಾರಂಭಿಸಲಾಗಿದೆ. ಈಗಾಗಲೇ 25 ಜಾತ್ರೆಗಳು ನಡೆದಿದ್ದು, 26 ನೇ ಜಾತ್ರಾ ಮಹೋತ್ಸವವು ಅದ್ಧೂರಿಯಾಗಿ ನಡೆಯುತ್ತಿದೆ.

ಜಾತ್ರಾ ಸಂಪ್ರದಾಯ:

ಮೂರ್ತಿ ಲಭಿಸಿದ ಗೊಟಗೊಡಿಕೊಪ್ಪಕ್ಕೆ ದೇವಿಸರ ಎಂದು ಹೆಸರಿಸಲಾಗಿದ್ದು, ದೇವಿಯ ತವರು ಮನೆ ಗೊಟಗೊಡಿಕೊಪ್ಪದಲ್ಲಿ ದೇವಿಗೆ ಉಡಿ ತುಂಬುವ ಶಾಸ್ತ್ರ ನೆರವೇರಿಸುವ ಮೂಲಕ ಜಾತ್ರಾ ಕಾರ್ಯವನ್ನು ಪ್ರಾರಂಬಿಸಲಾಗುತ್ತದೆ. ಜಾತ್ರೆ ಮುಗಿಯುವ ವರೆಗೂ ಪ್ರತಿದಿನ ನಾಡಿಗ್‌ ಮನೆತನದವರಿಂದ ದೇವಿಗೆ ಪ್ರಥಮ ಪೂಜೆ ನೆರವೇರಿಸಲಾಗುತ್ತದೆ. ಇಷ್ಟಾರ್ಥಗಳನ್ನು ಈಡೇರಿಸುವ ದೇವಿ ಎಂದೇ ಹೆಸರಾಗಿರುವ ದೇವಿಗೆ ಬಹುತೇಕ ಭಕ್ತಾದಿಗಳು ಕುಂಬಳಕಾಯಿ ಬಲಿ ನೀಡುವ ಪದ್ಧತಿ ಇದೆ.

ಮಸೀದಿಗಳಲ್ಲಿ ಮೈಕ್‌ ಬಳಕೆ ನಿರ್ಬಂಧ ಕಾನೂನು ಜಾರಿಯಾಗದಿದ್ದಲ್ಲಿ ಸಾವಿರ ಠಾಣೆಗಳಲ್ಲಿ ದೂರು: ಮುತಾಲಿಕ್‌

ಜಾತ್ರಾ ಸಮಾರಂಭದ ವಿವರ:

ಮಾ. 23 ರಂದು ರಾತ್ರಿ 8.30 ಕ್ಕೆ ಗರ್ಭಗುಡಿಯ ಹೊರಾಂಗಣದ ಗದ್ದುಗೆ ಮೇಲೆ ದೇವಿಯ ಪ್ರತಿಷ್ಠಾಪನಾ ಪೂಜಾ ವಿನಿಯೋಗಗಳು ಲಗ್ನ (ಮಾಂಗಲ್ಯಧಾರಣೆ) ಕಾರ್ಯಕ್ರಮ ಜರುಗಿದ್ದು, ಮಾ. 24 ರಂದು ಬೆಳಗ್ಗೆ 9.30 ಕ್ಕೆ ದೇವಿಯ ರಥಾರೋಹಣ ಮೆರವಣಿಗೆ ಪ್ರಾರಂಭವಾಗಿ ಪ್ರಮುಖ ಬೀದಿಗಳ ಮೂಲಕ ಸಂಚರಿಸಲಿದ್ದು, ಬಳಿಕ ಜಾತ್ರಾ ಸ್ಥಳದ ಗದ್ದುಗೆ ಮೇಲೆ ದೇವಿಯ ಪ್ರತಿಷ್ಠಾಪನೆ ನಡೆಯಲಿದೆ. ಮಧ್ಯಾಹ್ನ ಅನ್ನಸಂತರ್ಪಣೆ ನಡೆಯುತ್ತದೆ. ಮಾ. 25 ರಿಂದ 30ರ ವರೆಗೆ ನಿತ್ಯ ಬೆಳಗ್ಗೆ 8 ಗಂಟೆಯಿಂದ ರಾತ್ರಿ 9 ಗಂಟೆಯ ವರೆಗೆ ಹಣ್ಣು-ಕಾಯಿ, ಕಾಣಿಕೆ, ಹರಕೆ, ಬೇವಿನ ಉಡಿಗೆ, ತುಲಾಭಾರ ಮುಂತಾದ ಸೇವೆಗಳು ನಡೆಯುತ್ತವೆ. 31 ರಂದು ಬೆಳಗ್ಗೆ 8 ರಿಂದ 12 ಗಂಟೆವರೆಗೆ ಮಾತ್ರ ಹಣ್ಣು ಕಾಯಿ ಸೇವೆ ನಡೆಯಲಿದ್ದು, ಬಳಿಕ ಜಾತ್ರೆಯ ಸಮಾರೋಪ ಸಮಾರಂಭ ಹಾಗೂ ಹರಾಜು ಕಾರ್ಯಕ್ರಮ ನಡೆಯುತ್ತದೆ ಎಂದು ಜಾತ್ರಾ ಸಮಿತಿ ಅಧ್ಯಕ್ಷ ನಾಗರಾಜ ಅಂಡಗಿ ತಿಳಿಸಿದರು.

ವಿಸರ್ಜನಾ ಮೆರವಣಿಗೆ:

9 ದಿನಗಳ ಕಾಲ ಸಡಗರ ಸಂಭ್ರಮದಿಂದ ನಡೆಯುವ ದೇವಿಯ ಜಾತ್ರೆ ಕೊನೆಯ ದಿನದಂದು ದೇವಿಯ ವಿಸರ್ಜನಾ ಮೆರವಣಿಗೆ ಹೊರಟು ಪ್ರಮುಖ ಬೀದಿಗಳ ಮೂಲಕ ಸಂಚರಿಸುತ್ತದೆ. ಬಳಿಕ ದೇವಿಯ ಮೂರ್ತಿ ಸಿಕ್ಕ ಸ್ಥಳವಾದ ಗೊಟಗೊಡಿಕೊಪ್ಪ ದೇವಿಸರಕ್ಕೆ ತೆರಳಿ ಬಳಿಕ ಧಾರ್ಮಿಕ ವಿಧಿ ವಿಧಾನದೊಂದಿಗೆ ಮೂರ್ತಿ ಬಿಚ್ಚಿ ವಿಸರ್ಜನಾ ಕಾರ್ಯ ಪೂರ್ಣಗೊಳಿಸಲಾಗುತ್ತದೆ.

Latest Videos
Follow Us:
Download App:
  • android
  • ios