* ಇನಾಂ ದತ್ತಾತ್ರೇಯ ಪೀಠದ ರಸ್ತೆ ಕುಸಿತ
* ಮೊದಲ ಮಳೆಗೆ ಚಂದ್ರದೋಣ ಪರ್ವತ ಪ್ರದೇಶದ ರಸ್ತೆ ಕುಸಿತ
* ಮಳೆ ಮುಂದುವರೆದರೆ ರಸ್ತೆ ಸಂಚಾರ ಬಂದ್ ಆಗುವ ಸಾಧ್ಯತೆ
ಚಿಕ್ಕಮಗಳೂರು, (ಜೂನ್.13) :ಮಲೆನಾಡಿನಲ್ಲಿ ಮುಂಗಾರು ಮಳೆ ಆರಂಭದಲ್ಲೇ ಅನಾಹುತ ಉಂಟು ಮಾಡಲು ಶುರುಮಾಡಿದೆ.ಕಳೆದೆರಡು ದಿನಗಳ ಹಿಂದೆ ಸುರಿದ ಅಡ್ಡ ಮಳೆಗೆ ದತ್ತಪೀಠ ಮಾರ್ಗದಲ್ಲಿ ರಸ್ತೆ ಕುಸಿತ ಸಂಭವಿಸಿದ್ದು, ಅಪಾಯದ ಮುನ್ಸೂಚನೆ ನೀಡಿದೆ.
ಮೊದಲ ಮಳೆಗೆ ಚಂದ್ರದೋಣ ಪರ್ವತ ಪ್ರದೇಶದ ರಸ್ತೆ ಕುಸಿತ
ಮೊದಲ ಮಳೆಗೆ ಚಂದ್ರದೋಣ ಪರ್ವತ ಪ್ರದೇಶದ ದತ್ತಪೀಠದ ರಸ್ತೆಯ ಅತ್ತಿಗುಂಡಿ ಹಾಗೂ ಗ್ರೀನ್ವುಡ್ ರೆಸಾರ್ಟ್ ಮಧ್ಯಭಾಗದಲ್ಲಿ ಒಂದು ಬದಿಯ ರಸ್ತೆ ಕುಸಿತಕ್ಕೊಳಗಾಗಿದ್ದು ದೊಡ್ಡ ಪ್ರಮಾಣದ ಕಂದಕ ನಿರ್ಮಾಣವಾಗಿದ್ದು ಇಂತಹ ಅಪಾಯದ ರಸ್ತೆಯಲ್ಲೇ ಪ್ರವಾಸಿಗರ ವಾಹನಗಳು ಸಂಚಾರ ಮಾಡುತ್ತಿವೆ.ಜಿಲ್ಲಾಡಳಿತ ಕೂಡಲೇ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳದಿದ್ದಲ್ಲಿ ರಸ್ತೆ ಕೊಚ್ಚಿಹೋಗಿ ದತ್ತಪೀಠದ ಕಡೆಗೆ ಸಂಪೂರ್ಣ ಸಂಪರ್ಕ ಕಡಿತಗೊಳ್ಳಲಿದೆ. ಪ್ರತಿ ವರ್ಷ ಮಳೆಗಾಲ ಆರಂಭವಾಗುವ ಮುನ್ನ ಪಿಡಿಬ್ಲ್ಯುಡಿ ರಸ್ತೆಯ ಎರಡೂ ಬದಿಯಲ್ಲಿ ಮಳೆ ನೀರು ಸರಾಗವಾಗಿ ಹರಿಯಲು ಅನುಕೂಲವಾಗುವಂತೆ ಚರಂಡಿಯನ್ನು ತೆಗೆಯುತ್ತಿತ್ತು. ಆದರೆ ಈ ಬಾರಿ ಮುಂಗಾರು ಸಮೀಸಿದ್ದರೂ ಇಲಾಖೆ ಯಾವುದೇ ಕ್ರಮ ಕೈಗೊಂಡಿಲ್ಲ.
ಮಳೆಗಾಲ ಶುರು: 31 ಭೂಕುಸಿತ ಪ್ರದೇಶಗಳನ್ನು ಗುರುತಿಸಿದ ಚಿಕ್ಕಮಗಳೂರು ಜಿಲ್ಲಾಡಳಿತ
ಎರಡು ದಿನಗಳ ಹಿಂದೆ ಗಿರಿ ಪ್ರದೇಶದಲ್ಲಿ ಸುಮಾರು 3 ಇಂಚಿನಷ್ಟು ಮಳೆಯಾಗಿದೆ. ಬೆಟ್ಟದ ಮೇಲೆ ಸುರಿದ ಮಳೆ ನೀರು ರಸ್ತೆ ಮೇಲೆ ಹರಿದಿದೆ. ಅಷ್ಟಕ್ಕೇ ರಸ್ತೆ ಕುಸಿದಿದ್ದು, ಇನ್ನು ಮುಂಗಾರಿನಲ್ಲಿ ಮೂರ್ನಾಲ್ಕು ತಿಂಗಳ ಕಾಲ ನಿರಂತರವಾಗಿ ಸುರಿವ ಮಳೆ ನೀರು ರಸ್ತೆ ಮೇಲೆ ಹರಿದರೆ ಪರಿಸ್ಥಿತಿ ಏನಾಗಬಹುದು ಎಂದು ಸ್ಥಳೀಯರು ಪ್ರಶ್ನಿಸುತ್ತಾರೆ. ಈ ಹಿನ್ನೆಲೆಯಲ್ಲಿ ಇಲಾಖೆ ಕೂಡಲೇ ಚರಂಡಿ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಬೇಕಿದೆ.ಈಗ ರಸ್ತೆ ಕುಸಿತ ಸಂಭವಿಸಿರುವ ಪ್ರದೇಶವು ಸೂಕ್ಷ್ಮವಾಗಿರುವ ಹಿನ್ನೆಲೆಯಲ್ಲಿ ಭಾರೀ ವಾಹನಗಳ ಸಂಚಾರ ಕೂಡಲೇ ಸ್ಥಗಿತಗೊಳಿಸಿ ಕುಸಿತಕ್ಕೊಳಗಾಗಿರುವ ರಸ್ತೆ ಅಂಚಿನಿಂದ ಕನಿಷ್ಟ ನಾಲ್ಕೈದು ಅಡಿ ದೂರದಲ್ಲೇ ಲಘುವಾಹನಗಳು ಸಂಚರಿಸಲು ಅನುವುಮಾಡಿಕೊಡಬೇಕು ಎಂದು ಒತ್ತಾಯಿಸಿದ್ದಾರೆ.
ಮಳೆಗಾಲದಲ್ಲಿ ಹೆಚ್ಚು ಭೇಟಿ ನೀಡುವ ಪ್ರವಾಸಿಗರು
ಮಳೆಗಾಲದ ಸೌಂದರ್ಯವನ್ನು ಅನುಭವಿಸಲೆಂದೇ ಮುಂಗಾರಿನಲ್ಲಿ ಪ್ರವಾಸಿಗರು ಗಿರಿ ತಪ್ಪಲಿಗೆ ಹೆಚ್ಚಿನ ಸಂಖ್ಯೆಯಲ್ಲಿ ಲಗ್ಗೆ ಇಡುತ್ತಾರೆ. ಇದರಿಂದ ಪ್ರತಿ ವರ್ಷ ರಸ್ತೆ ಮೇಲೆ ಒತ್ತಡ ಹೆಚ್ಚಾಗುತ್ತಿದೆ. ಆಗಾಗ ಟ್ರಾಫಿಕ್ ಜಾಮ್ ಉಂಟಾಗುತ್ತಲೇ ಇರುತ್ತದೆ. ಈ ಕಾರಣಕ್ಕೆ ರಸ್ತೆ ಕುಸಿಯುವ ಸಾಧ್ಯತೆಗಳು ಹೆಚ್ಚಿರುವ ಹಿನ್ನೆಲೆಯಲ್ಲಿ ಪ್ರವಾಸಿ ವಾಹನಗಳ ನಿಯಂತ್ರಕ್ಕೆ ಅಗತ್ಯ ಕ್ರಮಗಳನ್ನೂ ಜಿಲ್ಲಾಡಳಿತ ಕೈಗೊಳ್ಳುವ ಅಗತ್ಯವಿದೆ.ಕಳೆದ ಶನಿವಾರ ಮತ್ತು ಭಾನುವಾರ ಸಹ ಕವಿಕಲ್ ಗಂಡಿ ಸಮೀಪದ ಸಂಗೀತ ಫಾಲ್ಸ್ ಮತ್ತು ಹೊನ್ನಮ್ಮನಹಳ್ಳ ದಲ್ಲಿ ಪ್ರವಾಸಿಗರು ಭಾರೀ ಸಂಖ್ಯೆಯಲ್ಲಿ ಕಂಡುಬಂದಿದ್ದಾರೆ.
ಇದರಿಂದ ರಸ್ತೆ ಸಂಚಾರಕ್ಕೆ ಆಗಾಗ ಅಡ್ಡಿಯಾಗುತ್ತಲೇ ಇರುತ್ತೆ. ಗಿರಿ ಭಾಗದಲ್ಲಿ ಮಳೆಯಾಗುವ ಸಂದರ್ಭದಲ್ಲಿ ರಸ್ತೆ ಕುಸಿತಗಳು ಸಂಭವಿಸುತ್ತವೆ. ಈ ಕಾರಣಕ್ಕೆ ಕೆಲವೊಂದು ನಿಯಂತ್ರಣ ಕ್ರಮಗಳನ್ನು ಕೈಗೊಳ್ಳಲು ಯೋಜನೆ ರೂಪಿಸಿದ್ದೇವೆ ಎಂದು ಜಿಲ್ಲಾಧಿಕಾರಿ ಕೆ.ಎನ್.ರಮೇಶ್ ತಿಳಿಸಿದ್ದಾರೆ.ಈಗಾಗಲೇ ಖಾಸಗಿ ವಾಹನಗಳ ನಿಲುಗಡೆಗೆ ಜಮೀನನ್ನು ಸಹ ಗುರುತಿಸಲಾಗಿದೆ. ಆದರೆ ಕಾಮಗಾರಿ ಆರಂಭಕ್ಕೆ ಸಣ್ಣ ಪುಟ್ಟ ತೊಡಕುಗಳಿದ್ದು ಅದರ ನಿವಾರಣೆಗೆ ಕ್ರಮ ಕೈಗೊಳ್ಳಲಾಗಿದೆ. ಅನುದಾನಕ್ಕೂ ಸಹ ಸರ್ಕಾರಿ ಆದೇಶವನ್ನು ಮಾಡಿಸಲಾಗಿದೆ ಎಂದು ತಿಳಿಸಿದರು.