
ಗದಗ: ಲಕ್ಕುಂಡಿ ಗ್ರಾಮ ಪಂಚಾಯ್ತಿ ರಿತ್ತಿ ಕುಟುಂಬದ ಪ್ರಾಮಾಣಿಕತೆಗೆ ಭರ್ಜರಿ ಗೌರವ ನೀಡಿದೆ. ವಿಶೇಷ ಗ್ರಾಮ ಸಭೆ ಹಾಗೂ ಗ್ರಾಮ ಪಂಚಾಯ್ತಿಯ ಸಾಮಾನ್ಯ ಸಭೆಯಲ್ಲಿ ಮಹತ್ವದ ತೀರ್ಮಾನಗಳನ್ನು ಕೈಗೊಂಡು, ರಿತ್ತಿ ಕುಟುಂಬಕ್ಕೆ 30x40 ಅಳತೆಯ ನಿವೇಶನ ನೀಡಲು ಸರ್ವಾನುಮತದಿಂದ ಅನುಮೋದನೆ ನೀಡಲಾಗಿದೆ. ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಮಾರುತಿ ನಗರದಲ್ಲಿ ನಿವೇಶನ ನೀಡುವ ಕುರಿತು ಅಧಿಕೃತ ನಿರ್ಧಾರ ಕೈಗೊಳ್ಳಲಾಗಿದೆ.
ಇದಷ್ಟೇ ಅಲ್ಲದೆ, ನಿವೇಶನದ ಮೇಲೆ ಮನೆ ನಿರ್ಮಾಣಕ್ಕೆ ವಿಶೇಷ ಅನುದಾನ ಒದಗಿಸುವಂತೆ ಶಾಸಕರು ಹಾಗೂ ಸಚಿವರಿಗೆ ಮನವಿ ಮಾಡುವ ಇಂಗಿತವನ್ನು ಸಭೆಯಲ್ಲಿ ಅಂಗೀಕರಿಸಲಾಗಿದೆ. ಪ್ರಾಮಾಣಿಕತೆಯ ಪ್ರತೀಕವಾಗಿ ಗುರುತಿಸಿಕೊಂಡ ರಿತ್ತಿ ಕುಟುಂಬವನ್ನು ಗ್ರಾಮ ಪಂಚಾಯ್ತಿಯ ವತಿಯಿಂದ ಗೌರವಿಸಿ ಸನ್ಮಾನಿಸುವ ನಿರ್ಧಾರವೂ ಕೈಗೊಳ್ಳಲಾಗಿದೆ.
ನಿಧಿ ನೀಡುವ ಮೂಲಕ ಎಲ್ಲರ ಮನ ಗೆದ್ದ 14 ವರ್ಷದ ಬಾಲಕ ಪ್ರಜ್ವಲ್ ಬಗ್ಗೆ ಸಭೆಯಲ್ಲಿ ವಿಶೇಷ ಚರ್ಚೆ ನಡೆಯಿತು. ಪ್ರಜ್ವಲ್ ವಯಸ್ಕನಾದ ನಂತರ ಸರ್ಕಾರಿ ಅಥವಾ ಯೋಗ್ಯ ನೌಕರಿ ನೀಡುವ ಕುರಿತು ಪ್ರಸ್ತಾಪಿಸಲಾಯಿತು. ಜೊತೆಗೆ, ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಏಳು ಸರ್ಕಾರಿ ಶಾಲೆಗಳಲ್ಲಿ ಪ್ರಜ್ವಲ್ ಅವರ ಭಾವಚಿತ್ರ ಅಳವಡಿಸಿ, ಮಕ್ಕಳಿಗೆ ಪ್ರಾಮಾಣಿಕತೆ ಮತ್ತು ಸತ್ಯನಿಷ್ಠೆಯ ಮಹತ್ವವನ್ನು ತಿಳಿಸುವ ಚಿಂತನೆಯನ್ನೂ ಸಭೆ ಮುಂದಿಟ್ಟಿದೆ. ಈ ಎಲ್ಲ ವಿಷಯಗಳಿಗೂ ವಿಶೇಷ ಗ್ರಾಮ ಸಭೆಯಲ್ಲಿ ಅಧಿಕೃತ ಅನುಮೋದನೆ ದೊರೆತಿದೆ.
ಗ್ರಾಮ ಪಂಚಾಯ್ತಿಯ ಈ ನಿರ್ಧಾರದಿಂದ ಖುಷಿಗೊಂಡ ರಿತ್ತಿ ಕುಟುಂಬ, ಸನ್ಮಾನ ಸ್ವೀಕರಿಸುವ ವೇಳೆ ತಮ್ಮ ಸಂತಸವನ್ನು ಹಂಚಿಕೊಂಡಿತು. ಏಷ್ಯನೆಟ್ ಸುವರ್ಣ ನ್ಯೂಸ್ ಎದುರು ಮಾತನಾಡಿದ ಪ್ರಜ್ವಲ್ ಅವರ ಅಜ್ಜಿ ಗಿರಿಜವ್ವ ಸಂತಸದ ಕಣ್ಣೀರು ಹಾಕಿದರು. ನಿಧಿ ನೀಡಿದ ನಂತರ ಎದುರಾದ ಆತಂಕ, ಭಯ ಹಾಗೂ ಅನಿಶ್ಚಿತತೆಗಳ ಬಗ್ಗೆ ಈ ಹಿಂದೆ ಕಣ್ಣೀರಿಡುತ್ತಲೇ ತಮ್ಮ ನೋವನ್ನು ಹಂಚಿಕೊಂಡಿದ್ದ ಕಸ್ತೂರೆವ್ವ ಹಾಗೂ ಗಿರಿಜವ್ವ, ಇದೀಗ ಆನಂದಭಾಷ್ಪ ಸುರಿಸುತ್ತಾ ಸಂತೋಷ ವ್ಯಕ್ತಪಡಿಸಿದರು.
ಈ ಪ್ರಕರಣವನ್ನು ಜನರ ಮುಂದೆ ತಂದ ಏಷ್ಯನೆಟ್ ಸುವರ್ಣ ನ್ಯೂಸ್ ವರದಿಗೆ ಲಕ್ಕುಂಡಿ ಗ್ರಾಮ ಪಂಚಾಯ್ತಿ ಅಧ್ಯಕ್ಷ ಕೆಂಚಪ್ಪ ಪೂಜಾರ್ ಶ್ಲಾಘನೆ ವ್ಯಕ್ತಪಡಿಸಿದರು. “ಮಾಧ್ಯಮಗಳ ಪ್ರಾಮಾಣಿಕ ವರದಿಯಿಂದಲೇ ರಿತ್ತಿ ಕುಟುಂಬದ ನ್ಯಾಯಯುತ ಹೋರಾಟಕ್ಕೆ ಸ್ಪಂದನೆ ದೊರಕಿದೆ” ಎಂದು ಅವರು ಹೇಳಿದರು. ಜೊತೆಗೆ, ರಿತ್ತಿ ಕುಟುಂಬಕ್ಕೆ ಗ್ರಾಮ ಪಂಚಾಯ್ತಿ ಸದಾ ಬೆಂಬಲವಾಗಿ ನಿಲ್ಲಲಿದೆ ಎಂಬ ಭರವಸೆಯನ್ನೂ ನೀಡಿದರು. ಒಟ್ಟಿನಲ್ಲಿ, ಲಕ್ಕುಂಡಿ ಗ್ರಾಮ ಪಂಚಾಯ್ತಿಯ ಈ ತೀರ್ಮಾನ ಪ್ರಾಮಾಣಿಕತೆಯನ್ನು ಗೌರವಿಸುವ ಸಮಾಜಕ್ಕೆ ಮಾದರಿಯಾಗಿದ್ದು, ಪ್ರಜ್ವಲ್ ಅವರಂತಹ ಬಾಲಕರಿಂದ ಮುಂದಿನ ತಲೆಮಾರಿಗೆ ಸತ್ಯ ಮತ್ತು ನೈತಿಕತೆಯ ಪಾಠ ಕಲಿಸುವ ಮಹತ್ವದ ಹೆಜ್ಜೆಯಾಗಿದೆ.