ಬೆಂಗ್ಳೂರು ದಕ್ಷಿಣ ಶಾಸಕರಿಂದ ಕೆರೆ ಒತ್ತುವರಿ

By Kannadaprabha NewsFirst Published Feb 18, 2021, 7:44 AM IST
Highlights

ಎಂ.ಕೃಷ್ಣಪ್ಪಗೆ ಸೇರಿದೆ ಎನ್ನಲಾದ ಹೋಟೆಲ್‌ನಿಂದ ಉತ್ತರಹಳ್ಳಿ ಕೆರೆ ಒತ್ತುವರಿ| ಹೈಕೋರ್ಟ್‌ಗೆ ಸರ್ಕಾರ ಮಾಹಿತಿ| ಮಾ.17ರೊಳಗೆ ತೆರವಿಗೆ ಕೋರ್ಟ್‌ ಸೂಚನೆ| ರೈನ್ಬೋ ಹೋಟೆಲ್‌ ನಿರ್ಮಾಣಕ್ಕಾಗಿ ಕೆರೆಯ 1 ಎಕರೆ 9 ಗುಂಟೆ ಭೂಮಿ ಒತ್ತುವರಿ|  

ಬೆಂಗಳೂರು(ಫೆ.18): ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಎಂ.ಕೃಷ್ಣಪ್ಪ ಅವರಿಗೆ ಸೇರಿದೆ ಎನ್ನಲಾದ ರೈನ್ಬೋ ಹೋಟೆಲ್‌ ನಿರ್ಮಾಣಕ್ಕಾಗಿ ನಗರದ ಉತ್ತರಹಳ್ಳಿ ಕೆರೆಯ 1 ಎಕರೆ 9 ಗುಂಟೆ ಭೂಮಿ ಒತ್ತುವರಿಯಾಗಿದೆ ಎಂದು ರಾಜ್ಯ ಸರ್ಕಾರ ಹೈಕೋರ್ಟ್‌ಗೆ ತಿಳಿಸಿದೆ. ಸರ್ಕಾರದ ಈ ಹೇಳಿಕೆಯನ್ನು ದಾಖಲಿಸಿಕೊಂಡ ನ್ಯಾಯಾಲಯವು ಮಾ.17ರೊಳಗೆ ಒತ್ತುವರಿ ತೆರವುಗೊಳಿಸುವಂತೆ ನಿರ್ದೇಶನ ನೀಡಿದೆ.

ಕೆರೆ ಜಾಗ ಒತ್ತುವರಿ ಹಿನ್ನೆಲೆಯಲ್ಲಿ ನಗರದ ಪ್ರಜಾ ಹಕ್ಕುಗಳ ವೇದಿಕೆ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್‌. ಓಕ ನೇತೃತ್ವದ ವಿಭಾಗೀಯ ಪೀಠ ಬುಧವಾರ ವಿಚಾರಣೆ ನಡೆಸಿತು. ವಿಚಾರಣೆ ವೇಳೆ ಸರ್ಕಾರದ ಪರ ವಕೀಲರು, ಭೂಮಾಪನ ಇಲಾಖೆ ಅಧಿಕಾರಿಗಳ ಸರ್ವೇ ವರದಿಯನ್ನು ನ್ಯಾಯಪೀಠಕ್ಕೆ ಒದಗಿಸಿದರು. ಜತೆಗೆ, ಸರ್ವೇ ವರದಿ ಪ್ರಕಾರ ಹೋಟೆಲ್‌ ಕಟ್ಟಡ ನಿರ್ಮಾಣ, ರಸ್ತೆ ಹಾಗೂ ಪಾರ್ಕ್ ನಿರ್ಮಾಣಕ್ಕಾಗಿ ತ್ತರಹಳ್ಳಿ ಕೆರೆಯ ಒಟ್ಟು 1 ಎಕರೆ 9 ಗುಂಟೆ ಭೂಮಿಯನ್ನು ಒತ್ತುವರಿಯಾಗಿದೆ ಎಂಬ ಮಾಹಿತಿಯನ್ನು ನೀಡಿದರು. ನ್ಯಾಯಪೀಠ ಒತ್ತುವರಿ ತೆರವಿಗೆ ಮಾ.17ರ ಗಡುವು ನೀಡಿ ವಿಚಾರಣೆ ಮುಂದೂಡಿತು.

ಬಿಬಿಎಂಪಿಗೆ ತಲೆನೋವಾದ ಮೀನು..!

ಪ್ರಕರಣವೇನು?

ಬನಶಂಕರಿ 5ನೇ ಹಂತ ನಿರ್ಮಾಣಕ್ಕಾಗಿ ಬಿಡಿಎ 1988ರಲ್ಲಿ ನೋಟಿಫೈ ಮಾಡಿದ್ದ ಉತ್ತರಹಳ್ಳಿಯ ಸರ್ವೇ 103/1ರಲ್ಲಿನ 36 ಗುಂಟೆ ಹಾಗೂ 103/2ರಲ್ಲಿನ 39 ಗುಂಟೆ ಭೂಮಿಯನ್ನು ಎಂ.ಕೃಷ್ಣಪ್ಪ ಅವರು 1994ರಲ್ಲಿ ಅಕ್ರಮವಾಗಿ ಖರೀದಿಸಿದ್ದರು. ಬಳಿಕ 2007ರಲ್ಲಿ ಈ ಭೂಮಿಯನ್ನು ಅಕ್ರಮವಾಗಿ ಡಿನೋಟಿಫೈ ಮಾಡಿಸಿಕೊಂಡಿದ್ದರು. ಈ ಜಮೀನಿನ ಪಕ್ಕದಲ್ಲಿದ್ದ ಉತ್ತರಹಳ್ಳಿ ಕೆರೆಗೆ ಸೇರಿದ ಸರ್ವೆ ನಂಬರ್‌ 111ರಲ್ಲಿನ 15.16 ಎಕರೆ ಭೂಮಿಯನ್ನು ರೈನ್ಬೋ ಹೋಟೆಲ್‌ ನಿರ್ಮಾಣಕ್ಕಾಗಿ ಒತ್ತುವರಿ ಮಾಡಿದ್ದಾರೆ ಎಂದು ಆರೋಪಿಸಿ ಅರ್ಜಿದಾರರು ನ್ಯಾಯಾಲಯದಲ್ಲಿ ದಾವೆ ಹೂಡಿದ್ದಾರೆ. ಒತ್ತುವರಿ ತೆರವು ಮಾಡುವಂತೆ ಸರ್ಕಾರಕ್ಕೆ ಆದೇಶಿಸಬೇಕು ಎಂದು ಕೋರಿದ್ದರು.
 

click me!