ಗದಗ ಜಿಲ್ಲೆ ಜನರಿಗೆ ಜಲಸಂಕಟ: ಒಂದು ಹನಿ ನೀರಿಲ್ಲದಂತೆ ಬತ್ತಿ ಹೋದ 237 ಕೊಳವೆಬಾವಿಗಳು!

Sathish Kumar KH   | Kannada Prabha
Published : Jul 28, 2026, 03:19 PM IST
BOREWELL

ಸಾರಾಂಶ

ಗದಗ ಜಿಲ್ಲೆಯಲ್ಲಿ ಮಳೆಯ ತೀವ್ರ ಅಭಾವ ಮತ್ತು ಅಂತರ್ಜಲ ಮಟ್ಟದ ಕುಸಿತದಿಂದಾಗಿ, 9 ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿರುವ 1253 ಕೊಳವೆಬಾವಿಗಳ ಪೈಕಿ 237 ಸಂಪೂರ್ಣವಾಗಿ ಬತ್ತಿ ಹೋಗಿವೆ. ಈ ನೀರಿನ ಬಿಕ್ಕಟ್ಟು ಜನರ ಬದುಕುವ ಹಕ್ಕಿನ ಮೇಲೆ ಪರಿಣಾಮ ಬೀರುತ್ತಿದ್ದು, ಸ್ಥಗಿತಗೊಂಡ ಬೋರ್‌ವೆಲ್‌ಗಳನ್ನು ದುರಸ್ತಿಪಡಿಸಲು ಅಥವಾ ಪರ್ಯಾಯ ವ್ಯವಸ್ಥೆ ಮಾಡಲು ಒತ್ತಾಯ ಕೇಳಿಬಂದಿದೆ.

ವರದಿ-ಶಿವಕುಮಾರ ಕುಷ್ಟಗಿ

ಗದಗ (ಜು.28): ಮಳೆಯ ತೀವ್ರ ಅಭಾವ, ಅಂತರ್ಜಲ ಮಟ್ಟದ ನಿರಂತರ ಕುಸಿತದಿಂದಾಗಿ ಜಿಲ್ಲೆಯ ನಗರ ಹಾಗೂ ಪಟ್ಟಣ ಪ್ರದೇಶಗಳಲ್ಲಿ ಕುಡಿಯುವ ನೀರಿನ ಪ್ರಮುಖ ಆಸರೆಯಾಗಿದ್ದ ಕೊಳವೆಬಾವಿಗಳು (ಬೋರ್‌ವೆಲ್) ಬತ್ತುತ್ತಿವೆ. ಭೂಮಿಯ ಆಳದಲ್ಲಿದ್ದ ನೀರು ಸಂಪೂರ್ಣ ಬರಿದಾಗುತ್ತಿದ್ದು, ಆತಂಕ ಎದುರಾಗಿದೆ.

ಜಿಲ್ಲೆಯ ಒಟ್ಟು 9 ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಸ್ಥಳೀಯ ಸಂಸ್ಥೆಗಳ ವತಿಯಿಂದ ನಿರ್ವಹಿಸಲ್ಪಡುವ ಒಟ್ಟು 1253 ಕೊಳವೆಬಾವಿಗಳಿವೆ. ಪ್ರಸ್ತುತ ಭೀಕರ ಬರಗಾಲದ ಸನ್ನಿವೇಶದಲ್ಲಿ ಬರೋಬ್ಬರಿ 237 ಕೊಳವೆಬಾವಿಗಳು ಪೂರ್ಣ ಪ್ರಮಾಣದಲ್ಲಿ ಸ್ಥಗಿತಗೊಂಡಿದ್ದು, ಪ್ರಸ್ತುತ 1016 ಕೊಳವೆಬಾವಿಗಳು ಮಾತ್ರ ಜನರ ಬಾಯಾರಿಕೆ ತಣಿಸುತ್ತಿವೆ.

ಹಲವು ಸಮಸ್ಯೆ, ಒಂದೇ ಕಾರಣ:

ಮಳೆ ಕೊರತೆಯ ಪರಿಣಾಮದಿಂದಾಗಿ ಅಂತರ್ಜಲ ಮಟ್ಟ 350ರಿಂದ 500 ಅಡಿಗಳಿಗೂ ಆಳಕ್ಕೆ ಕುಸಿದಿರುವುದರಿಂದ ನೀರೆತ್ತುವ ಮೋಟರ್‌ಗಳ ಮೇಲೆ ತೀವ್ರ ಒತ್ತಡ ಬಿದ್ದು ಸುಟ್ಟುಹೋಗುತ್ತಿರುವುದು ಮತ್ತು ನೀರಿಲ್ಲದೆ ಬೋರ್‌ವೆಲ್‌ಗಳು ಖಾಲಿಯಾಗುತ್ತಿರುವುದು ಈ ತಾಂತ್ರಿಕ ಬಿಕ್ಕಟ್ಟಿಗೆ ಮುಖ್ಯ ಕಾರಣವಾಗಿದ್ದು, ಅವುಗಳ ದುರಸ್ತಿ ನಿಗದಿತ ಸಮಯದಲ್ಲಿ ಆಗುತ್ತಿಲ್ಲ. ಇದಕ್ಕೆ ಒಂದೆಡೆ ಅನುದಾನದ ಕೊರತೆ, ಇನ್ನೊಂದೆಡೆ ಇಚ್ಛಾಶಕ್ತಿಯ ಕೊರತೆ ಪ್ರಮುಖ ಕಾರಣವಾಗಿದೆ.

ಕೊಳವೆಬಾವಿ ವಿವರ: 

ಗದಗ- ಬೆಟಗೇರಿ ಅವಳಿ ನಗರದಲ್ಲಿ ಜಿಲ್ಲೆಯಲ್ಲಿ ಅತಿ ಹೆಚ್ಚು 834 ಕೊಳವೆಬಾವಿಗಳನ್ನು ಹೊಂದಿದೆ. ಅದರೊಟ್ಟಿಗೆ 136 ಬೋರ್‌ವೆಲ್‌ಗಳು ಬಂದ್ ಆಗಿದ್ದು, ಜಿಲ್ಲೆಯಲ್ಲಿ ಅತಿ ಹೆಚ್ಚು ಕೊಳವೆಬಾವಿಗಳು ಬಂದ್ ಆಗಿರುವುದು ಗದಗ ಬೆಟಗೇರಿ ಅವಳಿ ನಗರದಲ್ಲಿ. ಉಳಿದಂತೆ ನರಗುಂದ ಪುರಸಭೆಯ 54 ಕೊಳವೆಬಾವಿಗಳಲ್ಲಿ 35 ಬೋರ್‌ವೆಲ್‌ಗಳಲ್ಲಿ ಬತ್ತಿವೆ. ಕೆಲವು ದುರಸ್ತಿಗಾಗಿ ಕಾಯುತ್ತಿವೆ. ರೋಣ ಪುರಸಭೆಯ 42ರಲ್ಲಿ 22 ಹಾಗೂ ಲಕ್ಷ್ಮೇಶ್ವರ ಪುರಸಭೆಯ 104ರಲ್ಲಿ 22 ಕೊಳವೆಬಾವಿಗಳು ದುರಸ್ತಿಯಲ್ಲಿವೆ. ಗಜೇಂದ್ರಗಡದಲ್ಲಿ 8, ಮುಂಡರಗಿಯಲ್ಲಿ 4, ನರೇಗಲ್ಲನಲ್ಲಿ 4, ಶಿರಹಟ್ಟಿಯಲ್ಲಿ 4 ಹಾಗೂ ಮುಳಗುಂದ ಪಟ್ಟಣ ಪಂಚಾಯ್ತಿಯಲ್ಲಿ 2 ಕೊಳವೆಬಾವಿಗಳು ಸಂಪೂರ್ಣ ಸ್ಥಗಿತಗೊಂಡಿವೆ.

ಕುಡಿಯುವ ನೀರು ಮಾನವ ಹಕ್ಕು:  ಕುಡಿಯುವ ನೀರು ಮೂಲಭೂತ ಹಾಗೂ ಪ್ರತಿಯೊಬ್ಬ ನಾಗರಿಕನ ನೈಸರ್ಗಿಕ ಹಕ್ಕಾಗಿದೆ. ಭಾರತೀಯ ಸಂವಿಧಾನದ ವಿಧಿ 21ರ (ಬದುಕುವ ಹಕ್ಕು) ಅಡಿಯಲ್ಲಿ ಸ್ವಚ್ಛ ಹಾಗೂ ಅಗತ್ಯ ಕುಡಿಯುವ ನೀರನ್ನು ಪಡೆಯುವುದು ಮೂಲಭೂತ ಹಕ್ಕಾಗಿದೆ ಎಂದು ಸರ್ವೋಚ್ಚ ನ್ಯಾಯಾಲಯ ತನ್ನ ಹಲವು ತೀರ್ಪುಗಳಲ್ಲಿ ಸ್ಪಷ್ಟಪಡಿಸಿದೆ. ಜತೆಗೆ ವಿಶ್ವಸಂಸ್ಥೆಯು 2010ರಲ್ಲಿ ಅಂಗೀಕರಿಸಿದ ನಿರ್ಣಯದಂತೆ ಪ್ರತಿಯೊಬ್ಬ ಮಾನವನಿಗೂ ಸುರಕ್ಷಿತ ಕುಡಿಯುವ ನೀರು ಪಡೆಯುವ ಮಾನವ ಹಕ್ಕಿದೆ. ಪ್ರಸ್ತುತ ಕೊಳವೆಬಾವಿಗಳನ್ನು ಸಕಾಲಕ್ಕೆ ದುರಸ್ತಿ ಮಾಡದೆ ಸಾರ್ವಜನಿಕರಿಗೆ ನೀರು ನಿರಾಕರಿಸುತ್ತಿರುವುದು ಸಂವಿಧಾನ ನೀಡಿದ ಜೀವಿಸುವ ಹಕ್ಕು ಹಾಗೂ ಮಾನವ ಹಕ್ಕುಗಳ ನೇರ ಉಲ್ಲಂಘನೆಯಾಗಿದೆ.

ಹೆಚ್ಚು ನೀರಿರುವ ಕೊಳವೆಬಾವಿ ವಿವರ

ಗದಗ ಬೆಟಗೇರಿ 4, ಗಜೇಂದ್ರಗಡ 5, ಲಕ್ಷ್ಮೇಶ್ವರ 4, ನರಗುಂದ 3, ರೋಣ 4, ಮುಳಗುಂದ 3, ನರೇಗಲ್ಲ 3, ಶಿರಹಟ್ಟಿ 3 ಹೆಚ್ಚು ನೀರಿರುವ ಕೊಳವೆಬಾವಿಗಳನ್ನು ಗುರುತಿಸಲಾಗಿದೆ. ಮುಂಡರಗಿಯಲ್ಲಿ ಯಾವುದೇ ಹೆಚ್ಚಿನ ಇಳುವರಿ ಹೊಂದಿದ ಬೋರ್‌ವೆಲ್‌ಗಳನ್ನು ಇದುವರೆಗೂ ಗುರುತಿಸಿಲ್ಲ.

ದುರಸ್ತಿ ಮಾಡಿ:

ಪ್ರಸಕ್ತ ಮಳೆ ಕೊರತೆಯಿಂದಾಗಿ ಇರುವ ಬೋರ್‌ವೆಲ್‌ಗಳು ಬತ್ತುತ್ತಿವೆ. ಕೆಲವು ಸ್ಥಗಿತಗೊಂಡಿವೆ. ಅವುಗಳನ್ನು ದುರಸ್ತಿ ಮಾಡಿಸಬೇಕು ಇಲ್ಲವೇ ಹೆಚ್ಚು ನೀರು ಹೊಂದಿರುವ ಖಾಸಗಿ ಕೊಳವೆಬಾವಿಗಳನ್ನು ಬಾಡಿಗೆ ರೂಪದಲ್ಲಿ ಪಡೆದು ಜನರಿಗೆ ಸಕಾಲದಲ್ಲಿ ಅಗತ್ಯವಿರುವಷ್ಟು ನೀರು ಪೂರೈಕೆ ಮಾಡಬೇಕು ಎಂದು ಕಾರ್ಮಿಕ ಮುಖಂಡ ಎಂ.ಎಸ್. ಹಡಪದ ತಿಳಿಸಿದರು.

PREV
Read more Articles on
click me!

Recommended Stories

ಬೆಂಗಳೂರಿಗರಿಗೆ ಶಾಕ್: ಹೆಬ್ಬಾಳ-ಸರ್ಜಾಪುರ ಕೆಂಪು ಮೆಟ್ರೋ ಯೋಜನೆಗೆ ಸದ್ಯಕ್ಕಿಲ್ಲ ಒಪ್ಪಿಗೆ! ಕೇಂದ್ರದ ಅಸಲಿ ಸತ್ಯ!
ಮೈಸೂರಿನ 'ಚಿನ್ನದ ಹುಡುಗಿ'ಯ ಕಂಚಿನ ಸಾಧನೆ! ಬಾಲ್ಯದ ಕಷ್ಟಗಳನ್ನು ಮೆಟ್ಟಿ ನಿಂತು ಕಾಮನ್‌ವೆಲ್ತ್‌ನಲ್ಲಿ ಇತಿಹಾಸ ಬರೆದ ಎಸ್.ಕೆ. ಶಿಲ್ಪಾ!