ಶಿವಮೊಗ್ಗ ಜಿಲ್ಲೆ ಪ್ರವಾಹದಿಂದ ತತ್ತರಿಸಿದ್ದು, ಈಗ ಗಣೇಶ ಮೂರ್ತಿಗಳಿಗೂ ಅಭಾಗ ಎದುರಾಗಿದೆ. ಗಣೇಶ ಹಬ್ಬ ಸಮೀಪಿಸಿದ್ದು, ಜನರು ಗಣೇಶ ಮೂರ್ತಿಗಾಗಿ ಪರದಾಡುವಂತಾಗಿದೆ. ಕಾಯಿ ಕಡಬು ತಿನ್ನುವ ಮೊದಲೇ ಗಣೇಶ ಮೂರ್ತಿಗಳು ಮಳೆಯ ಪ್ರವಾಹಕ್ಕೆ ಸಿಲುಕಿ ನೀರು ಪಾಲಾಗಿವೆ.
ಶಿವಮೊಗ್ಗ(ಆ.28): ನಗರದಲ್ಲಿ ಗಣೇಶನ ಮೂರ್ತಿಗಳು ಕಾಯಿ ಕಡಬು ತಿನ್ನುವ ಮೊದಲೇ ಮಳೆಯ ಪ್ರವಾಹಕ್ಕೆ ಸಿಲುಕಿ ನೀರು ಪಾಲಾಗಿವೆ. ಭಕ್ತರು ನೀರಿನಲ್ಲಿ ಗಣೇಶನನ್ನು ಮುಳುಗಿಸುವ ಮೊದಲೇ ತುಂಗೆ ತಾನೇ ಎಲ್ಲವನ್ನೂ ಮುಳುಗಿಸಿ ಗಣೇಶನ ಜೊತೆಗೆ ಕುಂಬಾರರ ಬದುಕನ್ನೂ ಮುಳುಗಿಸಿಬಿಟ್ಟಿದ್ದಾಳೆ.
ಇಡೀ ನಗರದಲ್ಲಿ ಮಾತ್ರವಲ್ಲ, ಅಕ್ಕಪಕ್ಕದ ಹಳ್ಳಿಗಳ ಮನೆ ಮನೆಗಳಲ್ಲಿ ಕುಳಿತು ಪೂಜಿಸಲ್ಪಡಬೇಕಾಗಿದ್ದ ವಿವಿಧ ರೂಪದ ಗಣೇಶ ತುಂಗೆಯ ನೀರಿನಲ್ಲಿ ಕರಗಿ ಹೋಗಿದ್ದಾನೆ. ಭಾರೀ ನಿರೀಕ್ಷೆಯಲ್ಲಿದ್ದ ಕುಂಬಾರರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಮಾತ್ರವಲ್ಲ, ಈ ಬಾರಿ ಗಣೇಶ ಮೂರ್ತಿಯ ಅಭಾವ ಸೃಷ್ಟಿಯಾಗುವುದು ಖಚಿತವಾಗಿದೆ.
ಗಣೇಶ ಮೂರ್ತಿಗಳು ಸಿದ್ಧವಾಗಿದ್ದವು:
ಪ್ರತಿ ವರ್ಷದಂತೆ ಈ ವರ್ಷವೂ ಗಣೇಶನ ಹಬ್ಬಕ್ಕೆ ಸಂಭ್ರಮದ ಸಿದ್ಧತೆ ನಡೆದಿದ್ದು, ಇದಕ್ಕಾಗಿ ನಗರದ ಕುಂಬಾರ ಗುಂಡಿಯಲ್ಲಿ ಕುಂಬಾರರು ಕೆಲ ತಿಂಗಳುಗಳ ಮೊದಲೇ ಶ್ರಮ ವಹಿಸಿ ಗೌರಿ ಗಣೇಶನ ಮೂರ್ತಿಗಳನ್ನು ಸಿದ್ಧಪಡಿಸಿದ್ದರು. ಸಾರ್ವಜನಿಕರಲ್ಲದೆ, ಕೆಲವು ಸಂಘ ಸಂಸ್ಥೆಗಳು ವಿಶೇಷ ವಿನ್ಯಾಸದ, ರೂಪದ ಗಣೇಶನನ್ನು ಸಿದ್ಧಪಡಿಸಿ ಕೊಡುವಂತೆ ತಿಂಗಳು ಮೊದಲೇ ಮುಂಗಡವಾಗಿ ಕಾದಿರಿಸಿದ್ದರು. ಅದರಂತೆ ತಯಾರಕರು ಸಹ ಇವರೆಲ್ಲರ ಅಭಿರುಚಿಗೆ ತಕ್ಕಂತೆ ಗಣೇಶನ ಮೂರ್ತಿಗಳನ್ನು ತಯಾರಿಸಿದ್ದರು.
ಬಣ್ಣ ಹಚ್ಚುವ ಮುನ್ನವೇ ನೀರಲ್ಲಿ ಕರಗಿದ ಗಣಪ:
ಇನ್ನೇನು ಮೂರ್ತಿಗಳಿಗೆ ಬಣ್ಣಗಳನ್ನು ಹಚ್ಚುವ ಕೊನೆಯ ಹಂತದಲ್ಲಿತ್ತು. ಆ ಸಂದರ್ಭದಲ್ಲಿ ಯಾರೂ ನಿರೀಕ್ಷಿಸದ ರೀತಿಯ ಅವಘಡವೊಂದು ನಡೆದು ಹೋಯಿತು. ಎಲ್ಲರ ಅಂದಾಜನ್ನು ತಲೆಕೆಳಗು ಮಾಡಿದ ಆಶ್ಲೇಷಾ ಮಳೆ ಆರ್ಭಟಿಸಿತು. ಐದಾರು ದಿನಗಳಲ್ಲಿಯೇ ಇಡೀ ಕುಂಬಾರಗುಂಡಿಯನ್ನು ಆವರಿಸಿಕೊಂಡು ಬಿಟ್ಟಿತು. ಇನ್ನೂ ಪಸೆ ಆರದ, ಬಣ್ಣ ಹಚ್ಚದ ಗಣಪ ನೀರಿನಲ್ಲಿ ಕರಗಿ ಹೋದ. ಕುಂಬಾರರ ಆಸೆ, ನಿರೀಕ್ಷೆ, ಕನಸುಗಳು ಇದರೊಂದಿಗೆ ಅಕ್ಷರಶಃ ನೀರು ಪಾಲಾಗಿ ಹೋಯಿತು. ತಿಂಗಳುಗಟ್ಟಲೆ ಪಟ್ಟಿದ್ದ ಕುಂಬಾರರ ಶ್ರಮ ತುಂಗೆಯ ಹೊಡೆತಕ್ಕೆ ಒಂದೇ ನಿಮಿಷದಲ್ಲಿ ವ್ಯರ್ಥವಾಯಿತು.
ಇಡೀ ವರ್ಷದ ಆದಾಯ ಒಮ್ಮೆಗೇ ನೀರಲ್ಲಿ ಮುಳುಗಿತು:
ನಗರದ ಕುಂಬಾರ ಗುಂಡಿಯಲ್ಲಿ ಅನೇಕ ಕುಂಟುಂಬಗಳವರು ತಮ್ಮ ಹಿರಿಯರಿಂದ ಬಳುವಳಿಯಾಗಿ ಬಂದ ಕುಂಬಾರ ವೃತ್ತಿಯನ್ನೇ ಈಗಲೂ ಸಹ ಮುಂದುವರಿಸಿಕೊಂಡು ಬರುತ್ತಿದ್ದಾರೆ. ಇಡೀ ವರ್ಷದ ಆದಾಯವನ್ನು ಇದೊಂದೇ ತಿಂಗಳಲ್ಲಿ ನಿರೀಕ್ಷಿಸುತ್ತಾರೆ. ಹೀಗಾಗಿ ಇದಕ್ಕಾಗಿ ಎಲ್ಲ ರೀತಿಯ ಸಿದ್ಧತೆಗಳನ್ನು ನಡೆಸುತ್ತಾರೆ. ಇಡೀ ವರ್ಷದ ಶ್ರಮವನ್ನು ಒಂದೆರಡು ತಿಂಗಳಿಗೆ ಧಾರೆ ಎರೆಯುತ್ತಾರೆ.
ಸಾವಿರಾರು ವಿಗ್ರಹ ನೀರು ಪಾಲು:
ಚಿಕ್ಕದ್ದರಿಂದ ಹಿಡಿದು ದೊಡ್ಡ ದೊಡ್ಡ ಗಣೇಶನಿಗೆ ತಮ್ಮ ಕಲ್ಪನೆಯ ಆಧಾರದಲ್ಲಿ ವಿವಿಧ ರೂಪವನ್ನು ನೀಡುತ್ತಾರೆ. ಈ ಬಾರಿಯೂ ನೂರಾರು, ಸಾವಿರಾರು ಗಣಪಗಳು ಇಲ್ಲಿ ಸದ್ದುಗದ್ದಲವಿಲ್ಲದೆ ಸಿದ್ಧಗೊಂಡಿದ್ದವು. ಈ ಬಾರಿ ಉತ್ತಮ ಆದಾಯವನ್ನು ಪಡೆಯಬಹುದು ಎಂಬ ನಿರೀಕ್ಷೆಯಲ್ಲಿ ಈ ತಯಾರಕರು ಇದ್ದರು. ಮೂರ್ತಿಗಳೆಲ್ಲವು ನೀರು ಪಾಲಾಗಿದ್ದರಿಂದ ಕುಂಬಾರರು ನಷ್ಟವನ್ನು ಅನುಭವಿಸುವಂತಾಗಿದೆ. ಮಾತ್ರವಲ್ಲ, ಮುಂದಿನ ಇಡೀ ವರ್ಷದ ಕತೆಯೇನು ಎಂಬ ಚಿಂತೆ ಇವರನ್ನು ಕಾಡುತ್ತಿದೆ.
ಮುನಿದ ತುಂಗೆಯಿಂದ ಮುಳುಗಿದ ಬದುಕು:
ಒಟ್ಟಾರೆ ಮುನಿದ ತುಂಗೆ ಕುಂಬಾರರ ಬದುಕಿಗ ಕೊಳ್ಳಿ ಇಟ್ಟಂತೆ ಭಾಸವಾಗುತ್ತಿದೆ. ಯಾರದೋ ತಪ್ಪಿಗೆ ಇನ್ನಾರೋ ಶಿಕ್ಷೆ ಅನುಭವಿಸುವಂತಾಗಿದೆ. ಬೇಸಿಗೆಯಲ್ಲಿ ತಣ್ಣನೆ ನೀರಿಗಾಗಿ ಮಡಕೆ ಸೃಷ್ಟಿಸುವ, ಭಕ್ತಿಭಾವದ ಗಣಪನನ್ನು ಧರೆಗೆ ಕರೆ ತರುವ ಕುಂಬಾರರು ಇಂದು ಯಾರಿಗೂ ಕಾಣಿಸದಂತೆ ಕಣ್ಣೀರು ಒರೆಸಿಕೊಳ್ಳುತ್ತಾ ಅಳಿದುಳಿದ ಗಣಪನಿಗೆ ಬಣ್ಣ ಹಚ್ಚುತ್ತಿದ್ದಾರೆ.
ಗಣೇಶ ಮೂರ್ತಿಯ ಅಭಾವ ಸಾಧ್ಯತೆ?
ತುಂಗೆಯ ಪ್ರವಾಹದಿಂದ ಕುಂಬಾರರು ಆರ್ಥಿಕ ಸಂಕಷ್ಟಎದುರಿಸುತ್ತಿರುವುದು ಒಂದೆಡೆಯಾದರೆ, ಇನ್ನೊಂದೆಡೆ ಈ ಬಾರಿ ಗಣೇಶ ಮೂರ್ತಿಯ ಅಭಾವ ಸೃಷ್ಟಿಯಾಗುವುದು ಖಚಿತವಾಗಿದೆ.
ಪ್ರತಿ ವರ್ಷದ ಬೇಡಿಕೆಯನ್ನು ಅನುಸರಿಸಿ ಕುಂಬಾರರು ಗಣೇಶ ಮೂರ್ತಿಯನ್ನು ಸಿದ್ಧಪಡಿಸುತ್ತಿದ್ದರು. ಆದರೆ ಪ್ರವಾಹದಿಂದ ಸಿದ್ಧಪಡಿಸಿದ ಗಣೇಶ ಮೂರ್ತಿಗಳೆಲ್ಲವೂ ನೀರಿನಲ್ಲಿ ಕರಗಿ ಹೋಗಿರುವುದರಿಂದ ಹೊಸದಾಗಿ ಅಷ್ಟೇ ಸಂಖ್ಯೆಯ ಮೂರ್ತಿಗಳನ್ನು ತಯಾರಿಸಲು ಇವರಿಂದ ಸಾಧ್ಯವಾಗುತ್ತಿಲ್ಲ. ಜೊತೆಗೆ ಜೇಡಿ ಮಣ್ಣೂ ಸಿಗುತ್ತಿಲ್ಲ. ಹೀಗಾಗಿ ರಸ್ತೆ ರಸ್ತೆಯಲ್ಲಿ, ಗಲ್ಲಿ ಗಲ್ಲಿಗಳಲ್ಲಿ ಗಣೇಶನ ಮೂರ್ತಿಯನ್ನು ಸ್ಥಾಪಿಸುತ್ತಿದ್ದ ಯುವ ಸಂಘಟನೆಗಳು ಈ ಬಾರಿ ತಮ್ಮ ಗಣೇಶನಿಗಾಗಿ ಭಾರೀ ಪೈಪೋಟಿ ನಡೆಸಬೇಕಾದೀತು.
-ವಿದ್ಯಾ, ಶಿವಮೊಗ್ಗ