
ರಾಜು ಕೊಂಡೆಬೆಟ್ಟು
ಚಿಕ್ಕೋಡಿ(ಮೇ.11): ಕೊರೋನಾ ಲಾಕ್‌ಡೌನ್ ಹಿನ್ನೆಲೆಯಲ್ಲಿ ಹೋಂ ಕ್ವಾರಂಟೈನ್‌ಗೆ ಒಳಗಾಗಿರುವ ಸುಮಾರು 83 ಕೂಲಿ ಕಾರ್ಮಿಕರು ಚಿಕ್ಕೋಡಿ ತಾಲೂಕಿನ ಸದಲಗಾ ಗ್ರಾಮದ ಮೊರಾರ್ಜಿ ವಸತಿ ಶಾಲೆಯಲ್ಲಿ ಕಳೆದ 45 ದಿನಗಳಿಂದ ನರಕಯಾತನೆ ಅನುಭವಿಸುತ್ತಿದ್ದಾರೆ. ತಮ್ಮನ್ನು ಸ್ವ ಗ್ರಾಮಗಳಿಗೆ ಕಳುಹಿಸಬೇಕೆಂದು ಒತ್ತಾಯಿಸುತ್ತಿದ್ದಾರೆ.
ಬೆಂಗಳೂರಿನಲ್ಲಿ ಕಟ್ಟಡ ಕೆಲಸ ಮಾಡುತ್ತಿದ್ದ ಉತ್ತರ ಭಾರತದ ಸುಮಾರು 68 ಜನ ಎರಡು ತಿಂಗಳ ಹಿಂದೆ ಕೆಲಸ ಕಳೆದುಕೊಂಡು ಪರದಾಡಿದ್ದಾರೆ. ಸಾರಿಗೆ ವ್ಯವಸ್ಥೆ ಇಲ್ಲದ್ದರಿಂದ ಕಾಲ್ನಡಿಗೆಯಲ್ಲಿಯೇ ಬೆಂಗಳೂರಿನಿಂದ ಚಿಕ್ಕೋಡಿವರೆಗೆ ಬಂದಿದ್ದರು. ಕಳೆದ ಮಾರ್ಚ್ 29 ರಂದು ತಾಲೂಕು ಆಡಳಿತ ಇವರನ್ನು ಗಡಿಭಾಗ ಯಕ್ಸಂಬಾ ಗ್ರಾಮದಲ್ಲಿ ತಡೆದು ಹೋಂ ಕ್ವಾರಂಟೈನ್‌ಗೆ ಒಳಪಡಿಸಿದ್ದರು. ಹೋಂ ಕ್ವಾರಂಟೈನ್ ಅವಧಿ ಮುಗಿದು ತಿಂಗಳಾದರೂ ಅವರನ್ನು ಇನ್ನೂ ಬಿಡುಗಡೆ ಮಾಡಿಲ್ಲ.
ಅನ್ನ ಸಾಂಬಾರ್ ಬೇಡ ನಮಗೆ ಬಿರಿಯಾನಿ ಕೊಡಿ: ಕ್ವಾರಂಟೈನ್‌ನಲ್ಲಿದ್ದವರ ಬೇಡಿಕೆ..!
ನೀರು ಆಹಾರ ತ್ಯಜಿಸಿದರೂ ಕ್ಯಾರೇ ಎನ್ನುತ್ತಿಲ್ಲ:
ಪ್ರಾರಂಭದಲ್ಲಿ ಇವರ ಮೇಲೆ ನಿಗಾ ಇಟ್ಟಿದ್ದ ಆಡಳಿತ ಕೈಬಿಟ್ಟಿರುವುದು ಕಾರ್ಮಿಕರಲ್ಲಿ ಭಯ ಶುರುವಾಗಿದೆ. ಇತ್ತೀಚೆಗೆ ಇವರು ಅನ್ನ ನೀರು ತ್ಯಜಿಸಿ ಪ್ರತಿಭಟನೆ ನಡೆಸಿದ್ದಾರೆ. ಇದನ್ನು ಸಿಬ್ಬಂದಿ ಮೇಲಧಿಕಾರಿ ಗಮನಕ್ಕೆ ತಂದ ನಂತರ ಪೊಲೀಸರ ಮನವೊಲಿಕೆ ನಂತರ ಆಹಾರ ಸೇವಿಸುವಂತೆ ಮಾಡಲಾಗಿದೆ.
ವಸತಿ ಶಾಲೆಯ ಸಿಬ್ಬಂದಿ ಜೂತೆಗೆ ಒಬ್ಬ ಡಾಕ್ಟರ್ ಮತ್ತು ಒಬ್ಬ ಪೊಲೀಸ್ ಪೇದೆ ಹಗಲಿನಲ್ಲಿ ಮಾತ್ರ ಕಂಡುಬರುತ್ತಾರೆ. ಆದರೆ ಕಾರ್ಮಿಕರು ಈಗಾಗಲೆ ಸಹನೆ ಕಳೆದುಕೊಂಡಿದ್ದು ರಾತ್ರಿಯಲ್ಲಿ ಸಿಬ್ಬಂದಿಗೆ ಭಯ ತಪ್ಪಿಲ್ಲ. ಆದಷ್ಟುಬೇಗ ಕಾರ್ಮಿಕರು ತಮ್ಮನ್ನು ತಮ್ಮ ಊರಿಗೆ ಕಳಿಸುವ ಕುರಿತು ನಿರೀಕ್ಷೆಯಲ್ಲಿದ್ದಾರೆ.
ಇಲ್ಲಿರುವ ಕಾರ್ಮಿಕರ ಪೈಕಿ ರಾಜಸ್ಥಾನದ 9, ಉತ್ತರ ಪ್ರದೇಶದ 4 ಮಧ್ಯಪ್ರದೇಶದ 55 ಹೀಗೆ ಒಟ್ಟು 68 ಜನ ನಲವತ್ತು ದಿನಗಳಿಂದ ಇದ್ದಾರೆ. ಇದೆ ತೆರನಾಗಿ ಕಳೆದ ಗುರುವಾರ ಖಾನಾಪುರ ದಿಂದ ಕಾಲ್ನಡಿಗೆಯಲ್ಲಿ ಹೊರಟಿದ್ದ ಜಾರ್ಖಂಡ್ ರಾಜ್ಯದ 12 ಜನ ಮತ್ತು ಪಶ್ಚಿಮ ಬಂಗಾಳದ ಮೂವರನ್ನು ಇದೇ ಶಾಲೆಯಲ್ಲಿ ಕ್ವಾರಂಟೈನ್ ಮಾಡಲಾಗಿದೆ. ಈ ಮೂಲಕ 83 ಜನ ಕ್ವಾರಂಟೈನ್‌ನಲ್ಲಿ ಇದ್ದಂತಾಗಿದೆ.
ಅಧಿಕಾರಿಗಳಿಗೆ ಮುತ್ತಿಗೆ:
ಮೇ 9ರಂದು ಪರೀಶಿಲನೆಗೆಂದು ಹೋಗಿದ್ದ ತಹಸೀಲ್ದಾರ ಮತ್ತು ಪೊಲೀಸ್ ಅಧಿಕಾರಿಗಳ ವಾಹನ ತಡೆದು ಈ ಕಾರ್ಮಿಕರು ಘೇರಾವ್ ಹಾಕಿದ್ದಾರೆ. ಭಾನುವಾರ ವರದಿ ಮಾಡಲು ಸ್ಥಳಕ್ಕೆ ಹೋದ ಪತ್ರಕರ್ತರನ್ನು ಅಧಿಕಾರಿಗಳೆಂದು ತಿಳಿದು ಮುಗಿಬಿದ್ದು ಕಣ್ಣೀರು ಹಾಕಿದರು.
ರಾಜಸ್ಥಾನದ ಪಾಲನಪುರದಲ್ಲಿ ನನ್ನ ಸಹೋದರನ ಕೂಲೆಯಾಗಿದೆ. ಹೇಗಾದರು ಮಾಡಿ ನನ್ನನ್ನು ಕಳುಹಿಸಿ ಎಂದು ಅರ್ಜುನ ಝಾಚ್ ಗೋಗರೆದರೆ, ಮನೆಯಲ್ಲಿ ತಾಯಿ ತೀರಿದ್ದಾರೆ, ಹೆಂಡತಿ ಮಕ್ಕಳು ಹಸಿವಿನಿಂದ ಬಳಲುತ್ತಿದ್ದಾರೆ ಎಂದು ಅನೇಕರು ತಮ್ಮ ತಮ್ಮ ಅಳಲು ತೋಡಿಕೊಂಡಿದ್ದಾರೆ.
ಇದೇ ರೀತಿ ಹಲವಾರು ದಿನಗಳಿಂದ ಸದಲಗಾದ ದರ್ಗಾ ಉರಸ್‌ನಲ್ಲಿ ವ್ಯಾಪಾರ ಮಾಡಲು ಬಂದ ಸುಮಾರು ಇಪ್ಪತ್ತು ಜನರನ್ನು ಅನಧಿಕೃತವಾಗಿ ಕ್ವಾರಂಟೈನ್‌ನಲ್ಲಿ ಇಡಲಾಗಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ. ಬೆಂಗಳೂರಿನಿಂದ ನಡೆದು ಬಂದ ರಾಜಸ್ಥಾನದ 17 ಕಾರ್ಮಿಕರು ಮೂರು ದಿನಗಳಿಂದ ರಾಜ್ಯ ಗಡಿ ಕೋಗನೂಳ್ಳಿ ರಾಷ್ಟ್ರೀಯ ಹೆದ್ದಾರಿ ಯಲ್ಲಿ ಮಲಗಿ ಒದ್ದಾಡುತ್ತಿದ್ದಾರೆ ಎನ್ನಲಾಗಿದೆ.
ಬೇಡಕಿಹಾಳ ಬಳಿ ಇರುವ ಸಕ್ಕರೆ ಕಾರ್ಖಾನೆಯ ನೂರಾರು ಕಾರ್ಮಿಕರ ಸಮಸ್ಯೆಯೂ ಇದೆ ಆಗಿದ್ದು ಕಳೆದ ಎರಡು ದಿನಗಳಿಂದ ಅವರ ಆರೋಗ್ಯ ತಪಾಸಣೆ ನಡೆಯುತ್ತಿದೆ. ಮತ್ತೊಂದೆಡೆ ತಾಲೂಕಿನ ನೇಜ ಗ್ರಾಮದ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಬಿಹಾರದ 55 ಕಾರ್ಮಿಕರ ಗೋಳು ಹೇಳತೀರದಾಗಿದೆ.
ಶಾಸಕ ಗಣೇಶ ಹುಕ್ಕೇರಿ ಭೇಟಿ:
ಭಾನುವಾರ ಶಾಸಕ ಗಣೇಶ ಹುಕ್ಕೇರಿ ಮತ್ತು ತಹಸೀಲ್ದಾರ ಭೇಟಿಯಾಗಿ ಆಹಾರ ಮತ್ತು ಅಗತ್ಯ ಸೇವೆ ನೀಡಿದ್ದಾರೆ. ಸರ್ಕಾರ ಮತ್ತು ಜಿಲ್ಲಾಡಳಿತ ತಕ್ಷಣ ಗಮನ ಹರಿಸಬೇಕೆಂದು ಒತ್ತಾಯಿಸಿದ್ದಾರೆ. ಸರ್ಕಾರದಿಂದ ಅಧಿಕಾರಿಗಳಿಗೆ ಸರಿಯಾದ ನಿರ್ದೇಶನ ಇಲ್ಲದೆ ತೊಂದರೆ ಯಾಗುತ್ತಿದೆ ಎನ್ನಲಾಗಿದೆ.
ಸಮಸ್ಯೆ ಇರುವುದು ನಿಜ. ನಮ್ಮ ಕಡೆ ಏನೂ ಅಧಿಕಾರ ಇಲ್ಲ ಎಂದು ಅಸಹಾಯಕರಾಗಿದ್ದೇವೆ ಎಂದು ಸಿಪಿಐ ಆರ್.ಆರ್.ಪಾಟೀಲ ಅವರು ಹೇಳಿದ್ದಾರೆ.
ಕಾರ್ಮಿಕರನ್ನು ಕಳುಹಿಸಲು ತಾಂತ್ರಿಕ ತೊಂದರೆಯಾಗಿದ್ದು ಜಿಲ್ಲಾಧಿಕಾರಿ ಅವರಿಗೆ ಈಗಾಗಲೇ ಪತ್ರ ಬರೆಯಲಾಗಿತ್ತು. ಈಗಷ್ಟೆ ಆದೇಶ ಬಂದಿದ್ದು ಮುಂದಿನ ಕ್ರಮಕ್ಕಾಗಿ ನೋಡಲ್ ಅಧಿಕಾರಿ ನೇಮಕ ಮಾಡಿದ್ದೇವೆ. ಆನ್‌ಲೈನ್‌ನಲ್ಲಿ ಕೇವಲ ಆರು ಜನರಿಗೆ ಮಾತ್ರ ಪಾಸ್ ಬಂದಿದೆ. ಆಯಾ ರಾಜ್ಯದವರು ನೀವು ಮೊದಲು ಪಾಸ್ ಕೊಡಿ ಎನ್ನುತ್ತಿದ್ದಾರೆ. ನಮ್ಮ ರಾಜ್ಯದವರು ಆ ರಾಜ್ಯಗಳಿಂದ ಮೊದಲು ಬರಲಿ ಎನ್ನುತ್ತಿದ್ದಾರೆ ಎಂದು ಚಿಕ್ಕೋಡಿ ತಹಸೀಲ್ದಾರ್ ಎಸ್.ಎಸ್. ಸಂಪಗಾಂವೆ ಅವರು ಹೇಳಿದ್ದಾರೆ.