ಹಳಿತಪ್ಪಿದ ಬೆಂಗಳೂರು ಉಪನಗರ ರೈಲು ಯೋಜನೆ

Kannadaprabha News   | Kannada Prabha
Published : Aug 04, 2025, 07:09 AM IST
Train

ಸಾರಾಂಶ

ಬೆಂಗಳೂರು ಉಪನಗರ ರೈಲು ಯೋಜನೆ (ಬಿಎಸ್‌ಆರ್‌ಪಿ) ಕಾಮಗಾರಿ ಗುತ್ತಿಗೆಯನ್ನು ಎಲ್‌ ಆ್ಯಂಡ್‌ ಟಿ ಕಂಪನಿ ರದ್ದುಪಡಿಸಿದೆ.

ಬೆಂಗಳೂರು : ಬೆಂಗಳೂರು ಉಪನಗರ ರೈಲು ಯೋಜನೆ (ಬಿಎಸ್‌ಆರ್‌ಪಿ) ಕಾಮಗಾರಿ ಗುತ್ತಿಗೆಯನ್ನು ಎಲ್‌ ಆ್ಯಂಡ್‌ ಟಿ ಕಂಪನಿ ರದ್ದುಪಡಿಸಿದೆ. ಅಗತ್ಯ ಭೂಮಿ ಹಸ್ತಾಂತರಕ್ಕೆ ಕರ್ನಾಟಕ ರೈಲು ಮೂಲಸೌಕರ್ಯ ಅಭಿವೃದ್ಧಿ ಕಂಪನಿ (ಕೆ-ರೈಡ್) ತೋರಿದ ನಿರ್ಲಕ್ಷ್ಯವೇ ಕೆಲಸ ಸ್ಥಗಿತಕ್ಕೆ ಕಾರಣ ಎಂದು ಕಂಪನಿ ದೂರಿದ್ದರೆ, ಎಲ್‌ ಆ್ಯಂಡ್‌ ಟಿ ಸಮರ್ಪಕವಾಗಿ ಕೆಲಸ ಮಾಡದೆ ಕಾನೂನು ಬಾಹಿರವಾಗಿ ಗುತ್ತಿಗೆಯಿಂದ ಹಿಂದೆ ಸರಿದಿದೆ ಎಂದು ಕೆ-ರೈಡ್‌ ಹೇಳುತ್ತಿದೆ.

ಯೋಜನೆ ಅನುಷ್ಠಾನ ಹೊಣೆ ಹೊತ್ತಿರುವ ಕೆ-ರೈಡ್‌ಗೆ ಖಾಯಂ ವ್ಯವಸ್ಥಾಪಕ ನಿರ್ದೇಶಕರು ಇಲ್ಲದಿರುವುದು, ನೈಋತ್ಯ ರೈಲ್ವೆಯ ಜೊತೆಗೆ ಸಮನ್ವಯತೆ ಕೊರತೆ, ಭೂ ಹಸ್ತಾಂತರ ವಿಳಂಬದಿಂದ ಸಮಸ್ಯೆ ಎದುರಿಸುತ್ತಿದ್ದ ಸಬ್‌ ಅರ್ಬನ್‌ ರೈಲು ಯೋಜನೆ ಈಗ ಕೆ-ರೈಡ್‌ ಮತ್ತು ಎಲ್‌ ಆ್ಯಂಡ್‌ ಟಿ ಕಂಪನಿಯ ನಡುವೆ ಪರಸ್ಪರ ಆರೋಪ ಪ್ರತ್ಯಾರೋಪಕ್ಕೆ ವೇದಿಕೆ ಆದಂತಾಗಿದೆ.

ಬಿಎಸ್‌ಆರ್‌ಪಿ ಯೋಜನೆಯಲ್ಲಿ 25.01 ಕಿಮೀ ಉದ್ದದ ಎರಡನೇ ಕಾರಿಡಾರ್‌ ಚಿಕ್ಕಬಾಣಾವರ - ಬೈಯಪ್ಪನಹಳ್ಳಿ (ಸಂಪಿಗೆ ) ಹಾಗೂ 46.24ಕಿಮೀ ಉದ್ದದ ಹೀಲಲಿಗೆ - ರಾಜಾನುಕುಂಟೆ ನಿರ್ಮಾಣ ಗುತ್ತಿಗೆಯನ್ನು ಎಲ್‌ ಆ್ಯಂಡ್‌ ಟಿ ಕಂಪನಿ ಪಡೆದಿತ್ತು. ಜುಲೈ 31ರಂದು ಎರಡೂ ಗುತ್ತಿಗೆಯನ್ನು ಎಲ್‌ ಆ್ಯಂಡ್‌ ಟಿ ಕಂಪನಿ ರದ್ದುಪಡಿಸಿದೆ ಎಂದು ಕೆ-ರೈಡ್ ಹೇಳಿದೆ.

ಸಂಪಿಗೆ ಕಾರಿಡಾರ್‌ ಕಾಮಗಾರಿ ಪೂರ್ಣಗೊಳಿಸಲು 2026ರ ಸೆಪ್ಟೆಂಬರ್‌ 30 ರವೆಗೆ ಅವಕಾಶ ವಿಸ್ತರಿಸಲಾಗಿತ್ತು. ಗುತ್ತಿಗೆಯ ನಿಬಂಧನೆ ಪ್ರಕಾರ ಈ ಅವಧಿಯನ್ನು ವಿಸ್ತರಿಸಲು ಅವಕಾಶವೂ ಇತ್ತು. ಎಲ್‌ ಆ್ಯಂಡ್‌ ಟಿ ಕಂಪನಿ ಕೇಳಿದ್ದ ಎಲ್ಲ ಬೇಡಿಕೆಗಳನ್ನು ಕೆ-ರೈಡ್‌ ಒಪ್ಪಿತ್ತು. ಕೆ-ರೈಡ್‌ ನಿಂದ ಭೂಮಿಯ ಹಸ್ತಾಂತರ ವಿಳಂಬ ಆದಲ್ಲಿ ಕಾಮಗಾರಿ ಸಮಯ ವಿಸ್ತರಣೆ ಮತ್ತು ದೂರುಗಳನ್ನು ಪರಿಹರಿಸುವ ಕಾರ್ಯವಿಧಾನವಿದೆ. ಒಪ್ಪಂದದ ಚೌಕಟ್ಟಿನೊಳಗೆ ಪರಿಹಾರವನ್ನೂ ಅನುಮತಿಸುತ್ತದೆ. ಆದರೆ, ಎಲ್‌ ಆ್ಯಂಡ್‌ ಟಿ ಏಕಪಕ್ಷೀಯವಾಗಿ ಮತ್ತು ಕಾನೂನುಬಾಹಿರವಾಗಿ ಕೊನೆಗೊಳಿಸಲು ನಿರ್ಧರಿಸಿದೆ ಎಂದು ದೂರುತ್ತಿದೆ.

ಜತೆಗೆ ಒಪ್ಪಂದದ ಷರತ್ತು ಅನುಮತಿಸದಿದ್ದರೂ ಕಾಮಗಾರಿಯ ಅವಧಿಯೊಳಗೆ ಗುತ್ತಿಗೆಯ ವೆಚ್ಚ ಪರಿಷ್ಕರಿಸುವ ಮತ್ತು ಇಪಿಸಿ (ಎಂಜಿನಿಯರಿಂಗ್‌, ಪ್ರೊಕ್ಯೂರ್‌ಮೆಂಟ್‌ ಕನ್ಸ್ಟ್ರಕ್ಷನ್ ವರೆಗೆ ಸಂಪೂರ್ಣ ಕಾಮಗಾರಿ ಗುತ್ತಿಗೆ) ಒಪ್ಪಂದವನ್ನು ಬಿಒಕ್ಯೂ (ಬಿಲ್ ಆಫ್‌ ಕ್ವಾಂಟಿಟೀಸ್‌) ಅಂದರೆ ಕಚ್ಚಾವಸ್ತುಗಳಿಂದ ಹಿಡಿದು ಕಾರ್ಮಿಕವರೆಗೆ ಪ್ರತ್ಯೇಕ ಬಿಲ್ ನೀಡುವಂತ ಒಪ್ಪಂದವಾಗಿ ಪರಿವರ್ತಿಸುವ ಅಸಮಂಜಸ ಬೇಡಿಕೆಗಳನ್ನು ಎಲ್‌ ಆ್ಯಂಡ್‌ ಟಿ ಇಟ್ಟಿದೆ ಎಂದು ಕೆ-ರೈಡ್‌ ಆರೋಪ ಮಾಡುತ್ತಿದೆ.

ಈ ನಡುವೆ ಗುತ್ತಿಗೆ ಒಪ್ಪಂದದಂತೆ ಎಲ್‌ ಆ್ಯಂಡ್‌ ಟಿ ಕೋರಿಕೆಯ ಮೇರೆಗೆ ‘ಸೌಹಾರ್ದಯುತ ಇತ್ಯರ್ಥ ಸಮಿತಿ’ ಹಕ್ಕಿನ ಚರ್ಚೆ ನಡೆಯುತ್ತಿದ್ದರೂ ಕೂಡ ಕಂಪನಿಯು ಕಾನೂನುಬಾಹಿರವಾಗಿ ಒಪ್ಪಂದ ರದ್ದುಪಡಿಸಿದೆ. ಅಗತ್ಯ ಕಾರ್ಮಿಕರು ಇದ್ದಾಗೂ ಕೂಡ ನಿರೀಕ್ಷಿತ ಮಟ್ಟದಲ್ಲಿ ಕಾಮಗಾರಿಯ ಪ್ರಗತಿ ಸಾಧಿಸಿಲ್ಲ. ಕಾರಿಡಾರ್ 2 ಮತ್ತು 4 ರಲ್ಲಿ ಎಲ್ ಆ್ಯಂಡ್‌ ಟಿ ಕಂಪನಿ ಯೋಜನಾ ವ್ಯವಸ್ಥಾಪಕರನ್ನು ಆಗಾಗ್ಗೆ ಬದಲಾಯಿಸುತ್ತಿತ್ತು, ಇದು ಕೆಲಸದ ಪ್ರಗತಿಯ ಮೇಲೂ ಪರಿಣಾಮ ಬೀರಿದೆ. ಹಲವು ಬಾರಿ ಕಂಪನಿಗೆ ಪತ್ರ ಬರೆದು ಕಾಮಗಾರಿ ವೈಫಲ್ಯದ ಬಗ್ಗೆ ಎಚ್ಚರಿಸಿದರೂ ಕ್ರಮವಹಿಸಿಲ್ಲ ಎಂದು ಕೆ-ರೈಡ್‌ ದೂರಿದೆ.

₹505 ಕೋಟಿ ನಷ್ಟ ಭರಿಸುವಂತೆ ಎಲ್‌ ಆ್ಯಂಡ್‌ ಟಿ ಕೋರ್ಟ್‌ಗೆ ಮೊರೆ

ಮಲ್ಲಿಗೆ ಕಾರಿಡಾರ್‌ ಗುತ್ತಿಗೆಯಿಂದ ಈವರೆಗೆ ಆಗಿರುವ ಸುಮಾರು ₹505 ಕೋಟಿ ನಷ್ಟವನ್ನು ಕೆ-ರೈಡ್‌ ಭರಿಸಬೇಕು ಎಂದು ಎಲ್‌ ಆ್ಯಂಡ್‌ ಟಿ ನಗರದ ವಾಣಿಜ್ಯ ನ್ಯಾಯಾಲಯದ ಮೆಟ್ಟಿಲೇರಿದೆ. 2022ರಿಂದ ಈವರೆಗೆ ಕೆ-ರೈಡ್‌ ಕೇವಲ ಸುಳ್ಳು ಭರವಸೆ ನೀಡುತ್ತಲೆ ಬಂದಿದೆ. ಅಗತ್ಯ ಜಮೀನು ಹಸ್ತಾಂತರ ಮಾಡಿಲ್ಲ. ಬ್ಯಾಂಕ್‌ ಗ್ಯಾರಂಟಿ ₹25.79 ಕೋಟಿ, ಮೊಬಿಲೈಸೇಶನ್‌ ಗ್ಯಾರಂಟಿ 9.47 ಕೋಟಿ, ಸೆಕ್ಯೂರಿಟಿ ಗ್ಯಾರಂಟಿ ₹ 42.99 ಕೋಟಿ ನೀಡಬೇಕು ಜತೆಗೆ ನಷ್ಟವಾದ ₹505.89 ಕೋಟಿ ನೀಡಬೇಕು ಎಂದು ಬೇಡಿಕೆ ಇಟ್ಟಿದೆ.

PREV
Read more Articles on
click me!

Recommended Stories

ರಾಯಚೂರು: ರಸ್ತೆಯಲ್ಲಿ ಹೋಗುತ್ತಿದ್ದ ಹಾವು ಹಿಡಿದು ಬೈಕ್ ಸವಾರ ಹುಚ್ಚಾಟ, ವಿಡಿಯೋ ವೈರಲ್
ರೈತನಿಗೆ ಪರಿಹಾರ ನೀಡದ ಶಿವಮೊಗ್ಗ ಡಿಸಿ ಕಚೇರಿ, ಕಾರು ಜಪ್ತಿಗೆ ಕೋರ್ಟ್ ಆದೇಶ! ಏನಿದು ಪ್ರಕರಣ?