ಬೆಂಗಳೂರು–ಹುಬ್ಬಳ್ಳಿ ನಡುವೆ ಸಂಚರಿಸುವ ಸೂಪರ್‌ಫಾಸ್ಟ್ ರೈಲು ಕುಷ್ಟಗಿಗೆ ವಿಸ್ತರಿಸಲು ಒತ್ತಾಯ!

Gowthami K   | Kannada Prabha
Published : Aug 21, 2026, 02:19 PM IST
Train

ಸಾರಾಂಶ

ಕುಷ್ಟಗಿ ರೈಲ್ವೆ ಹೋರಾಟ ಸಮಿತಿಯು, ಬೆಂಗಳೂರು–ಹುಬ್ಬಳ್ಳಿ ಸೂಪರ್‌ಫಾಸ್ಟ್ ರೈಲನ್ನು ಕುಷ್ಟಗಿವರೆಗೆ ವಿಸ್ತರಿಸಿ, ರಾಜಧಾನಿಗೆ ನೇರ ಸಂಪರ್ಕ ಕಲ್ಪಿಸಬೇಕೆಂದು ಸಂಸದ ರಾಜಶೇಖರ ಹಿಟ್ನಾಳ ನೇತೃತ್ವದಲ್ಲಿ ನೈಋತ್ಯ ರೈಲ್ವೆ ವಲಯದ ಪ್ರಧಾನ ವ್ಯವಸ್ಥಾಪಕರಿಗೆ ಮನವಿ ಸಲ್ಲಿಸಿದೆ. ಈ ವಿಸ್ತರಣೆಯಿಂದ ಕುಷ್ಟಗಿ ಹಾಗೂ ಸುತ್ತಮುತ್ತಲಿನ ತಾಲೂಕುಗಳ ಜನರಿಗೆ ಕಡಿಮೆ ವೆಚ್ಚದಲ್ಲಿ, ಸುರಕ್ಷಿತವಾಗಿ ಬೆಂಗಳೂರಿಗೆ ಪ್ರಯಾಣಿಸಲು ಅನುಕೂಲವಾಗಲಿದೆ.

ಕುಷ್ಟಗಿ: ಬೆಂಗಳೂರು–ಹುಬ್ಬಳ್ಳಿ ನಡುವೆ ಸಂಚರಿಸುವ ಸೂಪರ್‌ಫಾಸ್ಟ್ ರೈಲು ಸಂಖ್ಯೆ 20688/20687 ಅನ್ನು ಗದಗ ಹಾಗೂ ತಳಕಲ್ ಜಂಕ್ಷನ್ ಮೂಲಕ ಕುಷ್ಟಗಿವರೆಗೆ ವಿಸ್ತರಿಸಿ ಬೆಂಗಳೂರಿಗೆ ನೇರ ರೈಲು ಸಂಪರ್ಕ ಕಲ್ಪಿಸಬೇಕು ಎಂದು ಒತ್ತಾಯಿಸಿ ಕುಷ್ಟಗಿ ರೈಲ್ವೆ ಹೋರಾಟ ಸಮಿತಿಯವರು ಸಂಸದ ರಾಜಶೇಖರ ಹಿಟ್ನಾಳ ನೇತೃತ್ವದಲ್ಲಿ ನೈಋತ್ಯ ರೈಲ್ವೆ ವಲಯದ ಪ್ರಧಾನ ವ್ಯವಸ್ಥಾಪಕ ಪಿ. ಅನಂತ ಅವರಿಗೆ ಮನವಿ ಸಲ್ಲಿಸಿದರು.

2025ರ ಮೇ.15ರಿಂದ ಕುಷ್ಟಗಿಯಿಂದ ಹುಬ್ಬಳ್ಳಿಗೆ ನಿತ್ಯ ರೈಲು ಸಂಚಾರ

ಪ್ರಮುಖರು ಮಾತನಾಡಿ, ಕುಷ್ಟಗಿ ಪಟ್ಟಣಕ್ಕೆ ರೈಲು ಸಂಪರ್ಕ ಕಲ್ಪಿಸಬೇಕೆಂಬ ಜನರ ಏಳು ದಶಕಗಳ ಬೇಡಿಕೆ ಗದಗ–ವಾಡಿ ರೈಲ್ವೆ ಯೋಜನೆಯ ಮೂಲಕ ಈಡೇರಿದೆ. 2025ರ ಮೇ.15ರಿಂದ ಕುಷ್ಟಗಿಯಿಂದ ಹುಬ್ಬಳ್ಳಿಗೆ ನಿತ್ಯ ರೈಲು ಸಂಚಾರ ಆರಂಭವಾಗಿದ್ದು, ಇದರಿಂದ ತಾಲೂಕಿನ ಜನರಿಗೆ ಅನುಕೂಲವಾಗಿದೆ. ಆದರೆ ಕುಷ್ಟಗಿಯಿಂದ ಬೆಂಗಳೂರಿಗೆ ನೇರ ರೈಲು ಸಂಪರ್ಕ ಇಲ್ಲದಿರುವುದರಿಂದ ಸಾರ್ವಜನಿಕರು ಸರ್ಕಾರಿ ಹಾಗೂ ಖಾಸಗಿ ಬಸ್‌ ಅವಲಂಬಿಸುವಂತಾಗಿದೆ. ಪ್ರತಿದಿನ ಬೆಂಗಳೂರಿಗೆ ತೆರಳುವ ಜನರಿಗೆ ಹೆಚ್ಚಿನ ಹಣ ವ್ಯಯಿಸಿ ಪ್ರಯಾಣಿಸಬೇಕಾಗಿದ್ದು ಕುಷ್ಟಗಿಯಿಂದ ಬೆಂಗಳೂರಿಗೆ ನೇರ ರೈಲು ಸೇವೆ ಆರಂಭಿಸಬೇಕು ಎಂದು ತಿಳಿಸಿದರು.

ಪ್ರತ್ಯೇಕವಾಗಿ ಹೊಸ ರೈಲು ಆರಂಭಿಸುವ ಬದಲು ಬೆಂಗಳೂರು–ಹುಬ್ಬಳ್ಳಿ ನಡುವೆ ಈಗಾಗಲೇ ಸಂಚರಿಸುತ್ತಿರುವ ಸೂಪರ್‌ಫಾಸ್ಟ್ ರೈಲು ಸಂಖ್ಯೆ 20688/20687 ಅನ್ನು ಗದಗ ಹಾಗೂ ತಳಕಲ್ ಜಂಕ್ಷನ್ ಮಾರ್ಗವಾಗಿ ಕುಷ್ಟಗಿವರೆಗೆ ವಿಸ್ತರಿಸಬಹುದು. ಇದರಿಂದ ರೈಲ್ವೆ ಇಲಾಖೆಗೆ ಹೆಚ್ಚುವರಿ ಪ್ರಯಾಣಿಕರು ದೊರೆಯುವುದರ ಜತೆಗೆ ಕುಷ್ಟಗಿ ಭಾಗದ ಜನರ ಬಹುದಿನಗಳ ಬೇಡಿಕೆಯೂ ಈಡೇರಲಿದೆ ಎಂದರು.

ಬೆಂಗಳೂರಿನಿಂದ ರಾತ್ರಿ ಹೊರಟು ಬೆಳಗ್ಗೆ ಕುಷ್ಟಗಿ ತಲುಪುವ ಹಾಗೂ ಸಂಜೆ ಕುಷ್ಟಗಿಯಿಂದ ಬೆಂಗಳೂರಿನತ್ತ ಪ್ರಯಾಣಿಸುವ ವ್ಯವಸ್ಥೆ ಕಲ್ಪಿಸಿದರೆ ಸಾರ್ವಜನಿಕರಿಗೆ ರಾತ್ರಿ ಪ್ರಯಾಣದ ಸೌಲಭ್ಯ ದೊರೆಯಲಿದೆ. ಪ್ರಸ್ತುತ ಬಸ್‌ಗಳಲ್ಲಿ ಪ್ರಯಾಣಿಸುವವರಿಗೆ ಹೋಲಿಸಿದರೆ ರೈಲು ಪ್ರಯಾಣ ಸುರಕ್ಷಿತ, ಕಡಿಮೆ ವೆಚ್ಚದ ಹಾಗೂ ಹೆಚ್ಚು ಆರಾಮದಾಯಕವಾಗಲಿದೆ ಎಂದು ತಿಳಿಸಿದರು.

ಕುಷ್ಟಗಿಗೆ ಬೆಂಗಳೂರು ರೈಲು ಸಂಪರ್ಕ ಕಲ್ಪಿಸಿದರೆ ಕುಷ್ಟಗಿ ತಾಲೂಕಿನ ಜನರಿಗೆ ಮಾತ್ರವಲ್ಲದೆ ಗಜೇಂದ್ರಗಡ, ಇಲಕಲ್, ಯಲಬುರ್ಗಾ, ಕುಕನೂರು ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳ ಜನರಿಗೂ ಅನುಕೂಲವಾಗಲಿದೆ. ಗದಗ ಜಿಲ್ಲೆಯ ವಿವಿಧ ಭಾಗಗಳ ಪ್ರಯಾಣಿಕರೂ ಈ ರೈಲು ಸೇವೆ ಬಳಸಿಕೊಳ್ಳಬಹುದಾಗಿದೆ.

ಕುಷ್ಟಗಿಯಿಂದ ಬೆಂಗಳೂರಿಗೆ ನೇರ ರೈಲು ಸಂಪರ್ಕ ಕಲ್ಪಿಸುವಂತೆ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹಾಗೂ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣಗೂ ಈಗಾಗಲೇ ಮನವಿ ಸಲ್ಲಿಸಲಾಗಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಕೊಪ್ಪಳ ಸಂಸದ ರಾಜಶೇಖರ ಹಿಟ್ನಾಳ, ಹೋರಾಟ ಸಮಿತಿ ಪ್ರಮುಖ ಭರತೇಶ ಜೋಷಿ, ಎನ್‌.ಎಸ್‌.ಘೋರ್ಪಡೆ, ಮಂಜುನಾಥ ಎಂ, ಉಮೇಶ ಮಂಗಳೂರು, ಸುರೇಶಗೌಡ ಕುಂಟನಗೌಡರ, ಮಲ್ಲಣ್ಣ ಪಲ್ಲೇದ, ವಿರೇಶ ಕರಡಿ ಸೇರಿದಂತೆ ಅನೇಕರು ಇದ್ದರು.

ಕುಷ್ಟಗಿ ರೈಲ್ವೆ ಹೋರಾಟ ಸಮಿತಿಯವರು ಬೆಂಗಳೂರು–ಹುಬ್ಬಳ್ಳಿ ನಡುವೆ ಸಂಚರಿಸುವ ಸೂಪರ್‌ಫಾಸ್ಟ್ ರೈಲು ಸಂಖ್ಯೆ 20688/20687 ಅನ್ನು ಗದಗ ಹಾಗೂ ತಳಕಲ್ ಜಂಕ್ಷನ್ ಮೂಲಕ ಕುಷ್ಟಗಿವರೆಗೆ ವಿಸ್ತರಿಸಿ ಬೆಂಗಳೂರಿಗೆ ನೇರ ರೈಲು ಸಂಪರ್ಕ ಕಲ್ಪಿಸಬೇಕು ಎಂದು ಒತ್ತಾಯಿಸಿ ಕೊಪ್ಪಳ ಸಂಸದ ರಾಜಶೇಖರ ಹಿಟ್ನಾಳ ನೇತೃತ್ವದಲ್ಲಿ ನೈಋತ್ಯ ರೈಲ್ವೆ ವಲಯದ ಪ್ರಧಾನ ವ್ಯವಸ್ಥಾಪಕ ಪಿ. ಅನಂತ ಅವರಿಗೆ ಮನವಿ ಸಲ್ಲಿಸಿದರು.

PREV
Read more Articles on
click me!

Recommended Stories

ಚಿಕ್ಕಮಗಳೂರು: ಚಿರತೆ ಹಿಡಿಯಲು ಎಣ್ಣೆ ಕುಡಿದು ಬಂದ ಅರಣ್ಯ ಸಿಬ್ಬಂದಿ, ಗ್ರಾಮಸ್ಥರಿಂದ ಘೇರಾವ್, ಚಿರತೆ ಸೆರೆ!
ಸಕಲೇಶಪುರ ಘಾಟ್‌ ವಿಭಾಗದಲ್ಲಿ ಪ್ರಾಯೋಗಿಕ ಸಂಚಾರ ಯಶಸ್ವಿ, ಶೀಘ್ರವೇ ಬೆಂಗಳೂರು-ಮಂಗಳೂರು ವಂದೇ ಭಾರತ್‌ ಆರಂಭ