ಅಮೇರಿಕಾದಲ್ಲಿರುವ ಕನ್ನಡಿಗನಿಗೆ ಕೂಡಲಸಂಗಮದಲ್ಲಿ ಲಿಂಗದೀಕ್ಷೆ

By Suvarna NewsFirst Published May 3, 2022, 8:43 PM IST
Highlights

* ತ್ರಿವೇಣಿಸಂಗಮದ ನಾಡು ಕೂಡಲಸಂಗಮದಲ್ಲಿ ಬಸವ ಜಯಂತಿ ಆಚರಣೆ 
* ಅಮೇರಿಕಾದಲ್ಲಿರುವ ಕನ್ನಡಿಗನಿಗೆ ಲಿಂಗದೀಕ್ಷೆ...
* ಉತ್ತರಪ್ರದೇಶ ಮೂಲದ ಮೌನೇಶ್ ಗೂ ಲಿಂಗದೀಕ್ಷೆ..
* ಬಸವ ಧಮ೯ ಪೀಠದ ಮಾದೇಶ್ವರ ಸ್ವಾಮೀಜಿ ನೇತೃತ್ವದಲ್ಲಿ ನಡೆದ ಲಿಂಗದೀಕ್ಷೆ

ವರದಿ:- ಮಲ್ಲಿಕಾರ್ಜುನ ಹೊಸಮನಿ, ಏಷ್ಯಾನೆಟ್ ಸುವಣ೯ನ್ಯೂಸ್, ಬಾಗಲಕೋಟೆ

ಬಾಗಲಕೋಟೆ, (ಮೇ.03):
ಬಸವಣ್ಣನವರ ಐಕ್ಯತಾಣ, ತ್ರಿವೇಣಿ ಸಂಗಮದ ನಾಡು ಕೂಡಲಸಂಗಮದಲ್ಲಿ ಅತ್ಯಂತ ಶೃದ್ದಾ ಭಕ್ತಿಯ ಜೊತೆಗೆ ಅತ್ಯಂತ ವಿಶಿಷ್ಟವಾಗಿ ಬಸವ ಜಯಂತಿ ದಿನಾಚರಣೆ ಕಾರ್ಯಕ್ರಮ ನೆರವೇರಿಸಲಾಯಿತು. ಬೆಳಿಗ್ಗೆಯಿಂದಲೇ ಸಾಕಷ್ಟು ಭಕ್ತರು ಕೂಡಲಸಂಗಮದ ಸಂಗಮೇಶ್ವರ ದೇವಸ್ಥಾನಕ್ಕೆ ಬಸವಣ್ಣನವರ ಐಕ್ಯ ಮಂಟಪಕ್ಕೆ ಭೇಟಿ ನೀಡಿ ದಶ೯ನ ಪಡೆದು ಪುನೀತರಾದರು.

ಅಮೇರಿಕಾದಲ್ಲಿರುವ ಕನ್ನಡಿಗನಿಗೆ ಲಿಂಗದೀಕ್ಷೆ

ಈ ಬಾರಿ ಬಸವ ಜಯಂತಿ ಆಚರಣೆಯನ್ನು ತ್ರೀವೇಣಿ ಸಂಗಮ ಹಾಗೂ ಧಾರ್ಮಿಕ ಕ್ಷೇತ್ರವಾಗಿರುವ ಬಾಗಲಕೋಟೆ ಜಿಲ್ಲೆಯ  ಕೂಡಲಸಂಗಮದಲ್ಲಿ ವಿನೂತನವಾಗಿ ಆಚರಿಸುವ ಮೂಲಕ ಗಮನ ಸೆಳೆಯಲಾಯಿತು. ಬಸವ ಧಮ೯ ಪೀಠದಿಂದ  ವಿದೇಶ & ಹೊರರಾಜ್ಯದಲ್ಲಿದ್ದ ಭಕ್ತರಿಗೆ  ಲಿಂಗದೀಕ್ಷೆ ನೀಡಿದ್ದು, ಈ ಬಾರಿಯ ವಿಶೇಷತೆಗೆ ಸಾಕ್ಷಿಯಾಯಿತು. ಅಮೇರಿಕಾದಲ್ಲಿದ್ದ ತುಮಕೂರು ಮೂಲದ ಕನ್ನಡಿಗ ಸಂತೋಷಕುಮಾರ್ ಮತ್ತು ಉತ್ತರ ಪ್ರದೇಶದ ಮೌನೇಶ ಎಂಬುವರಿಗೆ ಬಸವ ಜಯಂತಿ ಆಚರಣೆ ದಿನವೇ ಭಕ್ತರ ಮಧ್ಯೆ ಲಿಂಗದೀಕ್ಷೆಯನ್ನು  ನೀಡಲಾಯಿತು.

ಬಸವ ಧಮ೯ ಪೀಠದ ಮಾದೇಶ್ವರ ಸ್ವಾಮೀಜಿಗಳ ನೇತೃತ್ವದಲ್ಲಿ ಲಿಂಗದೀಕ್ಷೆ ಧಾರ್ಮಿಕ ಕಾರ್ಯಕ್ರಮ ಜರುಗಿತು. ಕೂಡಲಸಂಗಮದ ಬಸವ ಧರ್ಮ ಪೀಠದ ಧ್ಯಾನ ಭವನದಲ್ಲಿ ಸಂತೋಷಕುಮಾರ್ ಹಾಗೂ ಮೌನೇಶ ಅವರಿಗೆ ಮಾದೇಶ್ವರ ಸ್ವಾಮೀಜಿ ಲಿಂಗದೀಕ್ಷೆ ನೀಡಿದರು. ಇಬ್ಬರಿಗೂ ವಿಭೂತಿ ಹಚ್ಚಿ, ಲಿಂಗವನ್ನು ಕೈಯಲ್ಲಿ ಇರಿಸಿ, ವಚನಗಳ ಪಠಣ ಮಾಡುವ ಮೂಲಕ ಧಾರ್ಮಿಕ ಬೋಧನೆ ನೀಡಿ,ಲಿಂಗದೀಕ್ಷೆ ನೀಡಿದರು. ಈ ಸಂದರ್ಭದಲ್ಲಿ ಲಿಂಗದೀಕ್ಷೆ ಪಡೆದವರಿಗೆ ಕೆಲವೊಂದು ವಿಧವಿಧಾನಗಳ ಅಚರಣೆಯ ಬಗ್ಗೆ ಭೋದನೆ ಮಾಡಲಾಯಿತು. 

 ಈ ಸಂದರ್ಭದಲ್ಲಿ ಭಕ್ತ ಸಮೂಹದಿಂದ ವಚನಗಳ ಪಠಣ ಹಾಗೂ ಸಾಮೂಹಿಕ ಪ್ರಾರ್ಥನೆ ಮಾಡುವ ಮೂಲಕ ಬಸವ ಜಯಂತಿ ಆಚರಣೆ ಮಾಡಲಾಯಿತು. ಇದೇ ಸಂದರ್ಭದಲ್ಲಿ ಮಾತನಾಡಿ ಮಾದೇಶ್ವರ ಸ್ವಾಮೀಜಿಗಳು, ಲಿಂಗದೀಕ್ಷೆಯನ್ನು ಪಡೆದಿರುವ ಸಂತೀಷಕುಮಾರ್ ಮೂಲತಃ ರಾಜ್ಯದ ತುಮಕೂರು ನಿವಾಸಿಯಾಗಿದ್ದವರು, ಆದರೆ ಕಳೆದ  ಹಲವು ವರ್ಷಗಳಿಂದ ಅಮೇರಿಕಾದಲ್ಲಿ ಇದ್ದಾರೆ. ಅವರ ಇಚ್ಚೆಯಂತೆ ಇಂದು ಅವರಿಗೆ ಲಿಂಗದೀಕ್ಷೆ ನೀಡಲಾಗಿದೆ ಎಂದರು, ಇನ್ನು ಉತ್ತರ ಪ್ರದೇಶದ ಮೌನೇಶ ಸಹ ಬಸವ ಧರ್ಮದ ಬಗ್ಗೆ ಬಹಳಷ್ಟು ಅಭಿಮಾನ ಹೊಂದಿ ಇಂದು ಲಿಂಗದೀಕ್ಷೆ ಪಡೆಯಲು ತಂದಿದ್ದಾರೆ, ಅವರಿಗೆ ಧಾರ್ಮಿಕ ವಿಧಾನದಂತೆ ಲಿಂಗದೀಕ್ಷೆ ನೀಡಲಾಗಿದೆ, ಮುಂಬರುವ ದಿನಗಳಲ್ಲಿ ದೈವಿ ಕಾರ್ಯಗಳಲ್ಲಿ ಅವರು ತಮ್ಮನ್ನು ತಾವು ತೊಡಗಿಸಿಕೊಳ್ಳಲಿದ್ದಾರೆ ಎಂದರು.

ನಂತರ ಬಸವಣ್ಣನವರ ಮೂರ್ತಿಯನ್ನು ತೊಟ್ಟಿಲಲ್ಲಿ ಇರಿಸಿ ಹೂಮಾಲೆ ಹಾಕಿ, ಆರತಿ ಎತ್ತಿ ವಚನಗಳ ಪಠಣ ಮಾಡುವ ಮೂಲಕ ಬಸವ ಜಯಂತಿ ಅಚರಣೆಯನ್ನು ಸಂಭ್ರಮದಿಂದ ನೆರವೇರಿಸಲಾಯಿತು. 

ಮಗುವಿಗೆ ನಾಮಕರಣ

ಕೂಡಲಸಂಗಮದಲ್ಲಿ ಪಂಚಮಸಾಲಿ ಪೀಠದ ಬಸವ ಜಯ ಮೃತ್ಯುಂಜಯ ಸ್ವಾಮಿಗಳ ನೇತೃತ್ವದಲ್ಲಿ ಅತ್ಯಂತ ವಿಶೇಷವಾಗಿ ಬಸವ ಜಯಂತಿ ಆಚರಣೆಯನ್ನು ನೆರವೇರಿಸಲಾಯಿತು. ಪ್ರತಿವರ್ಷದಂತೆ ಈ ಬಾರಿಯೂ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಅವರು ಬಸವ ಜಯಂತಿ ದಿನದಂದೇ ಜನಿಸಿದ ಹಸುಗೂಸಿಗೆ ನಾಮಕರಣ ಮಾಡುವ ಮೂಲಕ ವಬಸವ ಜಯಂತಿಯನ್ನು ವಿಶಿಷ್ಟವಾಗಿ ಆಚರಿಸಿದರು. ಇಂದು ಬೆಳಿಗ್ಗೆ ಹುನಗುಂದ ತಾಲೂಕಿನಲ್ಲಿ ಜನಿಸಿದ ಹೆಣ್ಣು ಮಗುವನ್ನು ಕೂಡಲಸಂಗಮದ ಸಂಗಮೇಶ್ವರ ದೇವಸ್ಥಾನದ ಆವರಣಕ್ಕೆ ಮಗುವಿನ ಪಾಲಕರ ಮತ್ತು ಮನೆಮಂದಿಯ ಸಮ್ಮುಖದಲ್ಲಿ ತೊಟ್ಟಿಲು ಕಾರ್ಯಕ್ರಮ ನೆರವೇರಿಸಿದರು. 

ಮೊದಲು ಮಗುವಿಗೆ ವಿಭೂತಿ ಹಚ್ಚು, ಕೊರಳಲ್ಲಿ ಲಿಂಗ ಧಾರಣೆ ಮಾಡಿ ನಂತರ ಮಗುವನ್ನು ತೊಟ್ಟಿಲಿಗೆ ಹಾಕಿದ ಸ್ವಾಮೀಜಿಯವರು, ಮಗುವಿಗೆ ಬಸವ ಸೌಹಾರ್ದ ಎಂಬ ನಾಮಕರಣ ಮಾಡಿದರು. ನಂತರ ನೆರೆದಿದ್ದ ಮಹಿಳೆಯರು ಬಂದು ತೊಟ್ಟಿಲ ಬಳಿ ನಿಂತು ಮಗುವಿಗೆ ಬಸವ ಸೌಹಾರ್ದ ಎಂದು ಮೂರು ಬಾರಿ ಕರೆಯುವ ಮೂಲಕ  ನಾಮಕರಣ ಕಾರ್ಯಕ್ರಮ ನೆರವೇರಿತು. ಇನ್ನು ಈ ಮೂಲಕ ಬಸವ ಜಯಂತಿ ದಿನದಂದೇ ಹುಟ್ಟಿದ ಮಗುವಿಗೆ ನಾಮಕರಣ ಮಾಡುವ ಮೂಲಕ ಬಸವ ಜಯಂತಿಯನ್ನು ಸಾರ್ಥಕಗೊಳಿಸಲಾಯಿತು.

ಮೀಸಲಾತಿ ವಿಚಾರದಲ್ಲಿ ಬಸವಣ್ಣ,  ಸಿಎಂ ಬೊಮ್ಮಾಯಿಗೆ ಸದ್ಬುದ್ದಿ ನೀಡಲಿ

ಪಂಚಮಸಾಲಿ 2ಎ ಮೀಸಲಾತಿ ನೀಡುವ ವಿಚಾರವಾಗಿ ಪ್ರತಿಕ್ರಿಯೆ ನೀಡಿರಯವ ಕೂಡಲಸಂಗಮದ ಪಂಚಮಸಾಲಿ ಪೀಠದ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಅವರು, ರಾಜ್ಯದಲ್ಲಿ ನಮ್ಮ ಹೋರಾಟ ಈಗ ಮತ್ತೇ 14ನೇ ದಿನಕ್ಕೆ ಕಾಲಿಟ್ಟಿದೆ, ಈ ಹಿಂದೆ ಮುಖ್ಯಮಂತ್ರಿ ಆಗಿದ್ದ ಯಡಿಯೂರಪ್ಪನವರು ಬೇಡಿಕೆ ಈಡೇರಿಸದೆ ಅಧಿಕಾರ ಕಳೆದುಕೊಂಡರು, ಈಗ ಸಿಎಂ ಬಸವರಾಜ್ ಬೊಮ್ಮಾಯಿ ಸಹ ಭರವಸೆ ನೀಡಿದ್ದಾರೆ, ನಮ್ಮ ಬೇಡಿಕೆ ಈಡೇರಿಸುತ್ತಾರೆ ಅನ್ನೋ ವಿಶ್ವಾಸ ನಮಲ್ಲಿದೆ, ಒಂದೊಮ್ಮೆ ಬೇಡಿಕೆ ಈಡೇರಿಸದೇ ಹೋದರೆ ಬಸವಣ್ಣ ಅವರಿಗೆ ಒಳ್ಳೆಯ ಬುದ್ದಿ ನೀಡಲಿ ಎಂದು ಹೇಳಿದರು. ಈಗ ಸಾಕಷ್ಟು ರಾಜಕೀಯ ಬದಲಾವಣೆ ಇದೆ ಅಂತ ಕೇಳಿದ್ದೀವಿ, ಆದರೆ ನಾವು ಎಲ್ಲರಿಗೂ ಒಳ್ಳೆಯದು ಬಯಸುತ್ತೇವೆ. ನಾವೀಗ ಬಸವಣ್ಣ ದೇವರ ಮೊರೆ ಹೋಗಿದ್ದೇವೆ,  ಬಸವಣ್ಣ ನಮ್ಮಬೇಡಿಕೆ ಈಡೇರಿಸುವಂತಾ ಸದ್ಬುದ್ಧಿಯನ್ನು ಸಿಎಂ ಬಸವರಾಜ್ ಬೊಮ್ಮಾಯಿ ಅವರಿಗೆ ನೀಡಲಿ, ಇಲ್ಲದೆ ಹೋದರೆ ಬಸವಣ್ಣ ಯಾವ ರೀತಿ ಪರಿವರ್ತನೆ ಮಾಡುತ್ತಾನೆ ಅನ್ನೋದು ನಮಗೆ ಗೊತ್ತಿಲ್ಲ ಎಂದರು.

ಅಮಿತ್ ಶಾ ಕ್ರಮಕೈಗೊಳ್ಳಲಿ....
ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಅವರು, ರಾಜ್ಯಕ್ಕೆ ಆಗಮಿಸಿರೋ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ವಿಚಾರವಾಗಿ ಮಾತನಾಡಿ,  ಮೀಸಲಾತಿ ನೀಡಿಕೆ ವಿಚಾರದಲ್ಲಿ ಈಗಾಗಲೇ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೂ ಮನವಿ ನೀಡಿದ್ದೇವೆ, ಅವರೀಗ ರಾಜ್ಯ ಪ್ರವಾಸದಲ್ಲಿದ್ದಾರೆ, ಈ ಬಗ್ಗೆ ವಿಚಾರ ಮಾಡಲಿ, ಆದಷ್ಟು ಶೀಘ್ರ ಮೀಸಲಾತಿ ನೀಡುವಂತಾಗಲಿ. ಈಗಾಗಲೇ ಮೀಸಲಾತಿ ವಿಚಾರದಲ್ಲಿ ಕೆಲವೊಂದು ರಾಜ್ಯಗಳಲ್ಲಿ ಸಾಕಷ್ಟು ಹಿನ್ನಡೆಯಾಗಿರೋದನ್ನ ನೋಡಿದ್ದೀವಿ, ನಮ್ಮ ರಾಜ್ಯದಲ್ಲಿ ಬಿಜೆಪಿ ಪಕ್ಷ ಅಧಿಕಾರಕ್ಕೆ ಬರಲು ನಮ್ಮ ಬಹುಸಂಖ್ಯಾತ ಪಂಚಮಸಾಲಿ ಸಮಾಜದ  ಸಾಕಷ್ಟು ಶ್ರಮವಿದೆ, ಹೀಗಾಗಿ ದುಡಿದಿದ್ದರ ಕೂಲಿಯನ್ನು ಕೇಳುತ್ತಿದ್ದೇವೆ, ಹಣದ, ಅನುದಾನದ ಕೂಲಿ ಕೇಳುತ್ತಿಲ್ಲ, ಶೈಕ್ಷಣಿಕ ಮೀಸಲಾತಿ ಕೂಲಿ ಕೇಳುತ್ತಿದ್ದೇವೆ ಆದಷ್ಟು ಶೀಘ್ರ ಪಂಚಮಸಾಲಿ ಸಮುದಾಯಕ್ಕೆ 2 ಎ ಮೀಸಲಾತಿ ನೀಡಲು ರಾಜ್ಯ ಸರ್ಕಾರಕ್ಕೆ ಸೂಚನೆ ನೀಡುವಂತಾಗಲಿ ಎಂದು ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು.

click me!