
ಮಂಗಳೂರು: ಮಂಗಳೂರು- ಕಾಸರಗೋಡು ಮಾರ್ಗದ ಕುಂಬಳೆಯಲ್ಲಿ ಅಧಿಕೃತ ಟೋಲ್ ವಸೂಲಿ ಪ್ರಾರಂಭವಾಗುವ ಮುನ್ನವೇ ಕರ್ನಾಟಕ ಕೆಎಸ್ಸಾರ್ಟಿಸಿ ಬಸ್ ಗಳಲ್ಲಿ ಟಿಕೆಟ್ ದರ ಏರಿಕೆ ಮಾಡಲಾಗಿದೆ.
ಮಂಗಳವಾರ ಬೆಳಗ್ಗಿನಿಂದ ಟೋಲ್ ದರ ಒಳಗೊಂಡ ಪರಿಷ್ಕೃತ ಅಧಿಕ ದರ ವಸೂಲಿ ಬಸ್ ಗಳಲ್ಲಿ ಆರಂಭವಾಗಿದೆ. ಇದೇ ವೇಳೆ ಕೇರಳ ಕೆಎಸ್ಸಾರ್ಟಿಸಿ ಬಸ್ ಗಳಲ್ಲಿ ಟಿಕೆಟ್ ದರ ಹೆಚ್ಚಳಗೊಂಡಿಲ್ಲ.
ಕುಂಬಳೆಯಿಂದ ಮಂಗಳೂರಿಗೆ 67 ರು. ಇದ್ದದ್ದು ಇದೀಗ 75 ರು. ಆಗಿದ್ದು, ರಾಜ ಹಂಸ ಸಾರಿಗೆಗೆ 80 ರು. ಇದ್ದುದನ್ನು 10 ರು. ದರ ಏರಿಸಿ 90 ರು. ವಸೂಲಿ ಮಾಡುತ್ತಿದ್ದಾರೆ. ಕರ್ನಾಟಕ ರಾಜ್ಯ ಸಾರಿಗೆ ಬಸ್ ಟಿಕೆಟಿಗೆ 7 ರು. ಹೆಚ್ಚಳಗೊಳಿಸಿದ್ದು ಮಂಗಳವಾರದಿಂದಲೇ ವಸೂಲಿ ಆರಂಭಿಸಿರುವುದು ಪ್ರಯಾಣಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಇದೇ ವೇಳೆ ಕರ್ನಾಟಕ ಸಾರಿಗೆ ಇಲಾಖೆಯ ಮಂಗಳೂರು ವಿಭಾಗದ ಅಧಿಕಾರಿಗಳು ಕಾಸರಗೋಡು ಡಿಸಿಗೆ ಮನವಿ ಸಲ್ಲಿಸಿ ಟೋಲ್ ವಿನಾಯಿತಿಗೆ ಆಗ್ರಹಿಸಿದ್ದಾರೆ.
ಕಾಸರಗೋಡು- ಮಂಗಳೂರು ರೂಟಿನಲ್ಲಿ ಕರ್ನಾಟಕ ಸಾರಿಗೆ ಬಸ್ ಗಳು ಪರಿಪೂರ್ಣ ಸರ್ವೀಸ್ ರೂಟಿನಲ್ಲೇ ಸಂಚರಿಸುತ್ತಿದ್ದು, ಎಲ್ಲಿಯೂ ಹೆದ್ದಾರಿ ಬಳಸುತ್ತಿಲ್ಲ. ಕೇವಲ ಕುಂಬಳೆ ಟೋಲ್ ಗೇಟಿನಲ್ಲಷ್ಟೇ ಹೆದ್ದಾರಿ ಬಳಕೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಟೋಲ್ ವಿನಾಯಿತಿ ನೀಡಬೇಕು. ನೀಡದಿದ್ದರೆ ಹೆಚ್ಚುವರಿ ಬಾಧ್ಯತೆಯಾಗುವ ಹೊರೆಯನ್ನು ನಾವು ಟಿಕೆಟ್ ಮೂಲಕ ಪ್ರಯಾಣಿಕರಿಗೆ ಹೇರಬೇಕಾಗುತ್ತದೆ ಎಂದು ಜಿಲ್ಲಾಧಿಕಾರಿಗೆ ಸಲ್ಲಿಸಿದ ಮನವಿಯಲ್ಲಿ ಕರ್ನಾಟಕ ಕೆಎಸ್ಸಾರ್ಟಿಸಿ ಉಲ್ಲೇಖಿಸಿದೆ.
ಕರ್ನಾಟಕ ಕೆಎಸ್ಸಾರ್ಟಿಸಿಯ ಸುಮಾರು 35 ಬಸ್ ಗಳು ಕಾಸರಗೋಡು ರೂಟಿನಲ್ಲಿ ಸಂಚರಿಸುತ್ತಿವೆ. ಇದಕ್ಕೆ ದಿನವೊಂದಕ್ಕೆ 48 ಸಾವಿರ ರು. ಟೋಲ್ ಪಾವತಿಗೆ ಬೇಕಾಗಿದೆ. ಹೆಚ್ಚುವರಿಯಾದ ಈ ಟೋಲ್ ಶುಲ್ಕವನ್ನು ಹೆದ್ದಾರಿ ಬಳಸದಿದ್ದರೂ ಪಾವತಿಸಬೇಕಾದರೆ ಟಿಕೆಟ್ ದರ ಏರಿಕೆ ಅನಿವಾರ್ಯ ಎಂದು ಮಂಗಳೂರು ಕೆಎಸ್ಆರ್ಟಿಸಿ ಅಧಿಕಾರಿಗಳು ಹೇಳುತ್ತಿದ್ದಾರೆ.
ಇದೇ ರೂಟಿನಲ್ಲಿ ಕೇರಳ ಕೆಎಸ್ಸಾರ್ಟಿಸಿ ಬಸ್ ಗಳು ಸಂಚರಿಸುತ್ತಿದ್ದರೂ ಟೋಲ್ ನೆಪದಲ್ಲಿ ಟಿಕೆಟ್ ದರ ಹೆಚ್ಚಿಸಿಲ್ಲ. ಟಿಕೆಟ್ ದರ ಹೆಚ್ಚಳವಾಗಬೇಕಿದ್ದರೆ ಸಾರಿಗೆ ಸಚಿವರು ಇಲಾಖೆ ಸಭೆ ನಡೆಸಿ ನಿರ್ಣಯಿಸಿ ಬಳಿಕ ಆದೇಶವಾಗಬೇಕು ಎಂದು ಕಾಸರಗೋಡು ವಿಭಾಗಿಯ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.