Price Hike and Corona: 2900 ಕೋಟಿ ನಷ್ಟದಲ್ಲಿ ಕೆಎಸ್‌ಆರ್‌ಟಿಸಿ.. ಕೊರೋನಾ ಒಂದೇ ಅಲ್ಲ ಕಾರಣ

By Kannadaprabha News  |  First Published Feb 17, 2022, 3:40 AM IST

* ಕೋವಿಡ್‌: ಸಾರಿಗೆ ನಿಗಮಗಳಿಗೆ  ಈವರೆಗೆ 2900 ಕೋಟಿ ನಷ್ಟ!

* ಡೀಸೆಲ್‌ ದುಬಾರಿ, ಟಿಕೆಟ್‌ ಏರಿಕೆ ಇಲ್ಲ, ಪ್ರಯಾಣಿಕರ ಕೊರತೆ
*2 ವರ್ಷದ ನಂತರ ಈ ಬಾರಿ 1200 ಬಸ್‌ ಖರೀದಿಗೆ ಚಿಂತನೆ 


ಬೆಂಗಳೂರು(ಫೆ. 17)  ಸಾರಿಗೆ ಇಲಾಖೆಯ (Karnataka State Road Transport Corporation) ನಾಲ್ಕು ನಿಗಮಗಳಲ್ಲಿ ಕಳೆದ ಮೂರು ವರ್ಷದಲ್ಲಿ 2900 ಕೋಟಿ ರು. ನಷ್ಟವಾಗಿದ್ದು, ನಷ್ಟಕಡಿಮೆ ಮಾಡಲು ಬಸ್‌ ನಿಲ್ದಾಣದಲ್ಲಿನ ಮಳಿಗೆಗಳನ್ನು ಬಾಡಿಗೆ ನೀಡುವುದು ಸೇರಿದಂತೆ ಹಲವು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ (Govind Karjol)ತಿಳಿಸಿದ್ದಾರೆ.

ಬುಧವಾರ ಪ್ರಶ್ನೋತ್ತರ ಅವಧಿಯಲ್ಲಿ ಕಾಂಗ್ರೆಸ್‌ ಸದಸ್ಯ ಎನ್‌.ಎ.ಹ್ಯಾರೀಸ್‌ ಪ್ರಶ್ನೆಗೆ ಸಾರಿಗೆ ಸಚಿವ ಬಿ.ಶ್ರೀರಾಮುಲು (B. Sriramulu) ಪರವಾಗಿ ಉತ್ತರಿಸಿದ ಅವರು, ಕಳೆದ ಮೂರು ವರ್ಷದಲ್ಲಿ ನಾಲ್ಕು ನಿಗಮದಲ್ಲಿ 2900 ಕೋಟಿ ರು. ನಷ್ಟವಾಗಿದೆ. ಇದಕ್ಕೆ ಮೂರು ಕಾರಣಗಳಿದ್ದು, 2015ರಿಂದ ಬಸ್‌ದರ ಪರಿಷ್ಕರಣೆ ಮಾಡಿಲ್ಲ. ಡಿಸೇಲ್‌ ದರ ಹೆಚ್ಚಳವಾಗಿರುವುದು (Price Hike) ಮತ್ತು ಕೋವಿಡ್‌ನಿಂದಾಗಿ (Coronavirus) ಆರು ತಿಂಗಳ ಕಾಲ ಡಿಪೋದ ಕಾಂಪೌಂಡ್‌ನಿಂದ ಬಸ್‌ಗಳು ಹೊರಗೆ ಬಂದಿಲ್ಲ. ಹೀಗಾಗಿ ಇಲಾಖೆಗೆ ನಷ್ಟವಾಗಿದೆ ಎಂದು ಹೇಳಿದರು.

Tap to resize

Latest Videos

undefined

ನಷ್ಟವನ್ನು ಕಡಿಮೆ ಮಾಡಲು ಹಲವು ಕ್ರಮಗಳನ್ನು ಹಾಕಿಕೊಳ್ಳಲಾಗುತ್ತಿದೆ. ಬಸ್‌ನಿಲ್ದಾಣದಲ್ಲಿ ಮಳಿಗೆಗಳನ್ನು ನಿರ್ಮಿಸುವುದು, ಪೆಟ್ರೋಲ್‌ ಬಂಕ್‌ಗಳ ನಿರ್ಮಾಣ, ಬಸ್‌ನಿಲ್ದಾಣದ ಮೇಲೆ ಆಸ್ಪತ್ರೆ ಸೇರಿದಂತೆ ಇತರೆ ಕಾರ್ಯಗಳಿಗೆ ಬಾಡಿಗೆ ನೀಡುವ ಕ್ರಮ ಕೈಗೊಳ್ಳಲಾಗುತ್ತಿದೆ. ಬಹಳಷ್ಟುಮಂದಿ ಖಾಸಗಿ ಬಸ್‌ ಹೋಗುತ್ತಾರೆ ಅಥವಾ ಟಂಟಂಗಳನ್ನು ಹತ್ತುತ್ತಾರೆ. ಜನರು ಸರ್ಕಾರಿ ಸಾರಿಗೆ ಸೇವೆಗಳನ್ನು ಉಪಯೋಗಿಸಬೇಕು. ಸರ್ಕಾರಿ ಬಸ್‌ ಹತ್ತುವ ಮನಸ್ಥಿತಿ ಕಡಿಮೆ ಇದೆ ಎಂದು ಹೇಳಿದರು. ಈ ವೇಳೆ ಮಧ್ಯಪ್ರವೇಶಿಸಿದ ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ, ಸರ್ಕಾರದಲ್ಲಿ ಹಲವು ಬಿಳಿ ಆನೆಗಳಿವೆ ಎಂದು ಛೇಡಿಸಿದರು.

BMTC: ಬೆಂಗ್ಳೂರಲ್ಲಿ ಮತ್ತೆ ಡಬಲ್‌ ಡೆಕ್ಕರ್‌ ಬಸ್‌ ಗತವೈಭವ..!

2 ವರ್ಷದ ನಂತರ ಈ ಬಾರಿ 1200 ಬಸ್‌ ಖರೀದಿಗೆ ಚಿಂತನೆ: ಕಾರಜೋಳ:  ಕೋವಿಡ್‌ನಿಂದಾಗಿ ಸಾರಿಗೆ ಸಂಸ್ಥೆಯು ಆರ್ಥಿಕ ಸಂಕಷ್ಟದಲ್ಲಿರುವುದರಿಂದ ಎರಡು ವರ್ಷದಿಂದ ಬಸ್‌ ಖರೀದಿಸಿಲ್ಲ. ಆದರೆ, 2022-23ನೇ ಸಾಲಿನಲ್ಲಿ 1200 ಹೊಸ ಬಸ್‌ಗಳ ಖರೀದಿಗೆ ಚಿಂತಿಸಲಾಗಿದ್ದು, ಮೊದಲ ಹಂತದಲ್ಲಿ 300 ಬಸ್‌ಗಳ ಖರೀದಿಸಲು ಉದ್ದೇಶಿಸಲಾಗಿದೆ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಹೇಳಿದ್ದಾರೆ. ಬುಧವಾರ ಪ್ರಶ್ನೋತ್ತರ ಅವಧಿಯಲ್ಲಿ ಕಾಂಗ್ರೆಸ್‌ ಸದಸ್ಯ ಡಿ.ಎಸ್‌.ಹೂಲಗೇರಿ ಪ್ರಶ್ನೆಗೆ ಸಾರಿಗೆ ಸಚಿವ ಬಿ.ಶ್ರೀರಾಮುಲು ಪರವಾಗಿ ಉತ್ತರಿಸಿದರು.

ಕೋವಿಡ್‌ ಕಾರಣದಿಂದಾಗಿ ಬಸ್‌ಗಳು ಕಾರ್ಯಾಚರಣೆಗೊಂಡಿಲ್ಲ. ಪರಿಣಾಮ ಆರ್ಥಿಕ ಸಂಕಷ್ಟಎದುರಿಸಬೇಕಾಯಿತು. ಎರಡು ವರ್ಷ ಯಾವುದೇ ಹೊಸ ಬಸ್‌ ಖರೀದಿಸಿಲ್ಲ. 2022-23ನೇ ಸಾಲಿನಲ್ಲಿ ಆರ್ಥಿಕ ಮತ್ತು ಇತರೆ ಸ್ಥಿತಿಗತಿಗೆ ಅನುಗುಣವಾಗಿ 1200 ಹೊಸ ಬಸ್‌ಗಳನ್ನು ಖರೀದಿಸುವ ಆಲೋಚನೆ ಇದೆ. ಮೊದಲ ಹಂತದಲ್ಲಿ 300 ಬಸ್‌ಗಳನ್ನು ಖರೀದಿಸುವ ಉದ್ದೇಶ ಇದೆ. ಲಭ್ಯತೆಗೆ ಅನುಗುಣವಾಗಿ ಲಿಂಗಸುಗೂರು ಘಟಕಕ್ಕೆ ಹೊಸ ಬಸ್‌ಗಳನ್ನು ಒದಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಅಡಿಕೆ ಕೊಯ್ಯುವ ಹೈಟೆಕ್‌ ದೋಟಿ  ಖರೀದಿಗೆ ಸಬ್ಸಿಡಿ, ಸಚಿವ ಮುನಿರತ್ನ:  ಅಡಿಕೆ ಕೊಯ್ಯಲು ನೂತನ ತಂತ್ರಜ್ಞಾನ ದೋಟಿ ಖರೀದಿಗೆ ಸರ್ಕಾರವು ಸಹಾಯಧನ ನೀಡಲು ಕ್ರಮ ಕೈಗೊಳ್ಳಲಿದೆ ಎಂದು ತೋಟಗಾರಿಕೆ ಸಚಿವ ಮುನಿರತ್ನ ಭರವಸೆ ನೀಡಿದ್ದಾರೆ. ಬುಧವಾರ ಪ್ರಶ್ನೋತ್ತರ ಅವಧಿಯಲ್ಲಿ ಕಾಂಗ್ರೆಸ್‌ ಸದಸ್ಯ ಟಿ.ಡಿ.ರಾಜೇಗೌಡ ಕೇಳಿದ ಪ್ರಶ್ನೆಗೆ ಉತ್ತರ ನೀಡುತ್ತಿದ್ದ ವೇಳೆ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಮಧ್ಯಪ್ರವೇಶಿಸಿ, ಮರದ ಕೆಳಗೆ ನಿಂತು ಅಡಿಕೆ ಕೊಯ್ಯಲು ಹೊಸ ತಂತ್ರಜ್ಞಾನ ದೋಟಿ ಬಂದಿದೆ. ಅದನ್ನು ಸಹಾಯಧನಕ್ಕೆ ಸೇರಿಸಬೇಕು. ಅಡಿಕೆ ಕೊಯ್ಯುವವರು ಈಗ ಸಿಗುತ್ತಿಲ್ಲ. ಅಲ್ಲದೇ, ಪ್ರಸ್ತುತ ಅಡಿಕೆ ಕೊಯ್ಯುವ ವ್ಯವಸ್ಥೆಯಿಂದ ಅಪಾಯದ ಸಾಧ್ಯತೆ ಇರುತ್ತದೆ. ಹೀಗಾಗಿ ದೋಟಿ ಖರೀದಿಗೆ ಸಹಾಯಧನ ನೀಡಿದರೆ ಸಹಾಯವಾಗುತ್ತದೆ ಎಂದು ಸಲಹೆ ನೀಡಿದರು. ಗೃಹ ಸಚಿವ ಆರಗ ಜ್ಞಾನೇಂದ್ರ ಕೂಡ ಸಬ್ಸಿಡಿಗೆ ಸೇರಿಸಬೇಕು ಎಂದು ಒತ್ತಾಯಿಸಿದರು. ಸಭಾಧ್ಯಕ್ಷರ ಹಾಗೂ ಗೃಹ ಸಚಿವರ ಸಲಹೆಯನ್ನು ಸ್ವೀಕರಿಸಿದ ಸಚಿವರು, ಈ ಸಂಬಂಧ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

click me!