* ಅನುಮತಿ ಇಲ್ಲದೆ ಬೋರ್‌ವೆಲ್ ಕೊರೆದರೆ ನೆರವು ನೀಡಲ್ಲ: ಈಶ್ವರಪ್ಪ
* ಹೆಚ್ಚುವರಿ ಬೆಳೆ ನಷ್ಟ ಪರಿಹಾರ ವಿತರಣೆ
* ಮಾನದಂಡಗಳ ಅನ್ವಯ ಕೆಲಸ ಆಗಬೇಕು
ಬೆಂಗಳೂರು(ಫೆ. 17) ಕೊಳವೆಬಾವಿಗಳನ್ನು ಕೊರೆಯುವ ಸಂಬಂಧ ರಚಿಸಿರುವ ಟಾಸ್ಕ್ ಫೋರ್ಸ್ ಸಮಿತಿ ಅನುಮತಿ ಇಲ್ಲದೆ ಕೊಳವೆಬಾವಿ (Borewell) ಕೊರೆದರೆ ಹಣ ಬಿಡುಗಡೆ ಮಾಡಲು ಬರುವುದಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ (KS Eshwarappa) ಹೇಳಿದ್ದಾರೆ.
ಬುಧವಾರ ಪ್ರಶ್ನೋತ್ತರ ಅವಧಿಯಲ್ಲಿ ಕಾಂಗ್ರೆಸ್ (Congress) ಸದಸ್ಯ ಎಸ್.ಎನ್.ನಾರಾಯಣಸ್ವಾಮಿ ಕೇಳಿದ ಪ್ರಶ್ನೆಗೆ ಉತ್ತರ ನೀಡಿದ ಅವರು, ಕೊಳವೆಬಾವಿ ಕೊರೆಯಲು ಕೆಲವು ಮಾನದಂಡಗಳಿವೆ. ಕೊಳವೆಬಾವಿ ಕೊರೆಯಲು ಟಾಸ್ಕ್ ಫೋರ್ಸ್ ಸಮಿತಿಯ ಅನುಮತಿಯನ್ನು ಪಡೆದುಕೊಳ್ಳಬೇಕು. ಆದರೆ, ಬಂಗಾರಪೇಟೆ ಕ್ಷೇತ್ರದಲ್ಲಿ ಟಾಸ್ಕ್‌ಪೋರ್ಸ್ ಸಮಿತಿಯ ಅನುಮತಿ ಇಲ್ಲದೆ ಕೊಳವೆಬಾವಿಗಳನ್ನು ಕೊರೆಯಲಾಗಿದೆ. ಕ್ರಿಯಾಯೋಜನೆ ರೂಪಿಸಿರುವ ಕಾಮಗಾರಿಗಳಿಗೆ ಹಣ ಪಾವತಿಸಲಾಗಿದೆ ಎಂದು ಹೇಳಿದರು.
undefined
Hijab Row : ಈಶ್ವರಪ್ಪ ವಜಾಕ್ಕೆ ಡೆಡ್ ಲೈನ್ ನೀಡಿದ ಸಿದ್ದರಾಮಯ್ಯ.. ಇಲ್ಲಾ ಅಹೋರಾತ್ರಿ ಧರಣಿ
ಸಚಿವರ ಉತ್ತರಕ್ಕೆ ಕೋಲಾರ (Kolar) ಜಿಲ್ಲೆಯ ಕಾಂಗ್ರೆಸ್ ಪ್ರತಿನಿಧಿಗಳು ಆಕ್ಷೇಪ ವ್ಯಕ್ತಪಡಿಸಿದರು. ತೀವ್ರ ನೀರಿನ ಅಭಾವ ಇರುವ ಕಾರಣ ಕೊಳವೆಬಾವಿಗಳನ್ನು ಕೊರೆಸಲಾಗುತ್ತದೆ. ಸರ್ಕಾರದ ನಿಯಮಗಳನ್ನು ಅನುಸರಿಸುತ್ತಾ ಹೋದರೆ ನೀರಿನ ಸಮಸ್ಯೆ ಉಲ್ಬಣವಾಗುತ್ತದೆ. ಹೀಗಾಗಿ ಕೊರೆದಿರುವ ಕೊಳವೆಬಾವಿಗಳಿಗೆ ಹಣ ನೀಡಬೇಕು ಎಂದು ಒತ್ತಾಯಿಸಿದರು. ಕೃಷ್ಣಬೈರೇಗೌಡ ಮಾತನಾಡಿ, ಕಳೆದ 20 ವರ್ಷಗಳಿಂದ ಕೋಲಾರ ಜಿಲ್ಲೆಯಲ್ಲಿ ಕೊಳವೆಬಾವಿ ಕೊರೆಯಲಾಗುತ್ತಿದೆ. ಅನುಮತಿ ಇಲ್ಲದೆ ಕೊರೆದಿರುವುದು ನಿಜ. ಆದರೆ, ಅಲ್ಲಿನ ಪರಿಸ್ಥಿತಿ ನೋಡಬೇಕು. ನಿಯಮಗಳನ್ನು ಗಮನಿಸುತ್ತಾ ಇದ್ದರೆ ತುರ್ತು ಸಮಯದಲ್ಲಿ ನೀರಿಗಾಗಿ ಜನರು ಏನು ಮಾಡಬೇಕು. ಈ ಬಗ್ಗೆ ಸರ್ಕಾರ ಸೂಕ್ತ ಗಮನಹರಿಸಬೇಕು ಎಂದು ಹೇಳಿದರು.
ಸಚಿವರು ಕಾಂಗ್ರೆಸ್ ಸದಸ್ಯರ ಒತ್ತಾಯಕ್ಕೆ ಮಣಿಯದಿದ್ದಾಗ ನಾರಾಯಣಸ್ವಾಮಿ ಮತ್ತು ನಂಜೇಗೌಡ ಅವರು ಬಾವಿಗಿಳಿದು ಧರಣಿ ನಡೆಸಲು ಮುಂದಾದರು. ಈ ವೇಳೆ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಅವರು ಸದಸ್ಯರ ವಿರುದ್ಧ ಗರಂ ಆದರು. ತೀವ್ರ ಒತ್ತಾಯ ಕೇಳಿಬಂದಾಗ ಸಚಿವ ಈಶ್ವರಪ್ಪ ಅವರು, ಮುಖ್ಯಮಂತ್ರಿಗಳ ಜತೆ ಕುಳಿತು ಚರ್ಚಿಸಿ ಸಮಸ್ಯೆಯನ್ನು ಬಗೆಹರಿಸಲಾಗುವುದು ಎಂದು ಹೇಳಿದರು. ತದನಂತರ ಸಭಾಧ್ಯಕ್ಷರು ಎಲ್ಲರ ಮನವೊಲಿಕೆ ಮಾಡಿದರು.
18 ಲಕ್ಷ ರೈತರಿಗೆ ಹೆಚ್ಚುವರಿ .1135 ಕೋಟಿ ಬೆಳೆ ನಷ್ಟಪರಿಹಾರ ವಿತರಣೆ: ಪ್ರಸಕ್ತ ಸಾಲಿನ ಬೆಳೆ ಹಾನಿಯಿಂದ ಸಂಕಷ್ಟಕ್ಕೀಡಾದ ರೈತರಿಗೆ ರಾಜ್ಯ ಸರ್ಕಾರದಿಂದ ಹೆಚ್ಚುವರಿಯಾಗಿ 1,135 ಕೋಟಿ ರೂ. ಪರಿಹಾರ ಧನವನ್ನು ನೀಡಲಾಗಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದರು.
ಜೆಡಿಎಸ್ ಸದಸ್ಯ ಸಿ.ಎನ್.ಮಂಜೇಗೌಡ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, 2021-22ನೇ ಸಾಲಿನಲ್ಲಿ ಭಾರೀ ಮಳೆ ಮತ್ತು ಪ್ರವಾಹದಿಂದ 18.02 ಲಕ್ಷ ರೈತರು ಬೆಳೆ ನಷ್ಟಹೊಂದಿದ್ದಾರೆ. 12.54 ಲಕ್ಷ ಹೆಕ್ಟೇರ್ ಬೆಳೆ ಹಾನಿಯಾಗಿದೆ. ಕೇಂದ್ರ ಸರ್ಕಾರದ ಸೂಚನೆಯಂತೆ ಬೆಳೆಹಾನಿ ಗೊಳಗಾದ ರೈತರಿಗೆ 1252 ಕೋಟಿ ರು. ಇನ್‌ಪುಟ್ ಸಬ್ಸಿಡಿ ಮತ್ತು ರಾಜ್ಯ ಸರ್ಕಾರದಿಂದ ಹೆಚ್ಚುವರಿಯಾಗಿ 1,135 ಕೋಟಿ ರು. ಪರಿಹಾರವನ್ನು ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಲಾಗಿದೆ. ರಾಜ್ಯ ಸರ್ಕಾರದ ಹೆಚ್ಚುವರಿ ಪರಿಹಾರ ಧನದಲ್ಲಿ ಪ್ರತಿ ಹೆಕ್ಟೇರ್‌ಗೆ ಮಳೆಯಾಶ್ರಿತ ಜಮೀನಿಗೆ 6800 ರು., ನಿರಾವರಿ ಜಮೀನಿಗೆ 11,500 ರು., ಬಹುವಾರ್ಷಿಕ ಬೆಳೆ ಜಮೀನಿಗೆ 10 ಸಾವಿರ ರು. ನೀಡಲಾಗಿದೆ ಎಂದು ತಿಳಿಸಿದರು.
ಮನುಸ್ಮೃತಿ ಬಂದರೆ ಈಶ್ವರಪ್ಪ ಕುರಿ ಕಾಯಬೇಕಾಗುತ್ತದೆ: ಈಶ್ವರಪ್ಪ ಕೈಯಲ್ಲಿ ಆರ್‌ಎಸ್‌ಎಸ್‌ನವರೇ ಈ ಮಾತು ಹೇಳಿಸಿರಬಹುದು. ಈಶ್ವರಪ್ಪ ಅವರಿಗೆ ಗೊತ್ತಿದೆಯೋ ಇಲ್ಲವೋ. ಮನುಸ್ಮೃತಿ ಬಂದರೆ ಈಶ್ವರಪ್ಪ ಸಚಿವರಾಗಿ ಇರಲು ಆಗುತ್ತಾ? ಕುರಿ ಕಾಯ್ಕೊಂಡು ಇರಬೇಕಾಗುತ್ತದೆ. ಇಲ್ಲದಿದ್ದರೆ ಕಸ ಗುಡಿಸಿಕೊಂಡೇ ಬೇರೇನೋ ಮಾಡಿಕೊಂಡು ಜೀತದಾಳು ಆಗಿ ಇರಬೇಕಾಗುತ್ತದೆ ಎಂದು ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ.