
ಮಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಮಂಗಳೂರು ವಿಭಾಗದಿಂದ ಮಂಗಳೂರು-ಎರ್ನಾಕುಲಂ ಮಾರ್ಗದಲ್ಲಿ ‘ವೋಲ್ವೋ ಮಲ್ಟಿ ಆಕ್ಸಿಲ್’ ಬಸ್ ಹಾಗೂ ಮಂಗಳೂರು-ತಿರುಪತಿ ಮತ್ತು ಮಂಗಳೂರು-ಹೈದರಾಬಾದ್ ಮಾರ್ಗದಲ್ಲಿ ಹೊಸದಾಗಿ ‘ಪಲ್ಲಕ್ಕಿ ನಾನ್ ಎಸಿ ಸ್ಲೀಪರ್’ ಬಸ್ ಗಳನ್ನು ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ಅ.12 ರಿಂದ ಪ್ರಾರಂಭಿಸಲಾಗಿದೆ. ಈ ಬಸ್‍ಗಳಿಗೆ ಮುಂಗಡ ಬುಕ್ಕಿಂಗ್ ವ್ಯವಸ್ಥೆ ಇರುತ್ತದೆ.
ಮಂಗಳೂರು-ಎರ್ನಾಕುಲಂ (ಮಲ್ಟಿ ಆಕ್ಸಿಲ್) ರಾತ್ರಿ 9 ಗಂಟೆಗೆ ಹೊರಡಲಿದ್ದು, ಪ್ರಯಾಣ ದರ 1,000 ರು., ಎರ್ನಾಕುಲಂ-ಮಂಗಳೂರು (ಮಲ್ಟಿ ಆಕ್ಸಿಲ್) ರಾತ್ರಿ 8.30 ಗಂಟೆಗೆ ಹೊರಡಲಿದ್ದು, ಪ್ರಯಾಣ ದರ 1,000 ರು., ಮಂಗಳೂರು-ತಿರುಪತಿ (ಪಲ್ಲಕ್ಕಿ ನಾನ್ ಎಸಿ ಸ್ಲೀಪರ್) ಮಧ್ಯಾಹ್ನ 12 ಗಂಟೆಗೆ ಹೊರಡಲಿದ್ದು, ಪ್ರಯಾಣ ದರ 1,600 ರು., ತಿರುಪತಿ-ಮಂಗಳೂರು (ಪಲ್ಲಕ್ಕಿ ನಾನ್ ಎಸಿ ಸ್ಲೀಪರ್) ಸಂಜೆ 5.30 ಗಂಟೆಗೆ ಹೊರಡಲಿದ್ದು, ಪ್ರಯಾಣ ದರ 1,600 ರು.
ಮಂಗಳೂರು- ಹೈದರಾಬಾದ್, (ಪಲ್ಲಕ್ಕಿ ನಾನ್ ಎಸಿ ಸ್ಲೀಪರ್) ಮಧ್ಯಾಹ್ನ 1 ಗಂಟೆಗೆ ಹೊರಡಲಿದ್ದು, ಪ್ರಯಾಣ ದರ 1,800 ರು., ಹೈದರಾಬಾದ್-ಮಂಗಳೂರು (ಪಲ್ಲಕ್ಕಿ ನಾನ್ ಎಸಿ ಸ್ಲೀಪರ್) ಮಧ್ಯಾಹ್ನ 4 ಗಂಟೆಗೆ ಹೊರಡಲಿದ್ದು, ಪ್ರಯಾಣ ದರ 1,800 ರು. ನಿಗದಿಪಡಿಸಲಾಗಿದೆ.
ಮಡಿಕೇರಿ : ಕರ್ನಾಟಕ ಲೋಕಾಯುಕ್ತ ಮಡಿಕೇರಿಯ ಲೋಕಾಯುಕ್ತ ಅಧಿಕಾರಿಗಳು ಅ. 14 ರಂದು ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ಪೊನ್ನಂಪೇಟೆ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಕರ್ನಾಟಕ ಲೋಕಾಯುಕ್ತ ಕಾಯಿದೆಯಡಿ ದೂರು ಅರ್ಜಿ ಸ್ವೀಕರಿಸಲಿದ್ದಾರೆ. ಭರ್ತಿ ಮಾಡಿದ ಮತ್ತು ನೋಟರಿಯಿಂದ ಆಫಿಡೆವಿಟ್ ಮಾಡಿಸಿದ ಅರ್ಜಿ ಸ್ವೀಕರಿಸಲಿದ್ದಾರೆ.
ಸರ್ಕಾರಿ ಕಚೇರಿಗಳಲ್ಲಿ ಅಧಿಕೃತ ಕೆಲಸಗಳಲ್ಲಿ ವಿಳಂಬ ಹಾಗೂ ಇನ್ನಿತರ ತೊಂದರೆ ನೀಡುತ್ತಿರುವ ಸರ್ಕಾರಿ ಅಧಿಕಾರಿ/ ನೌಕರರ ವಿರುದ್ಧ ಸಾರ್ವಜನಿಕರು ದೂರುಗಳನ್ನು ನಿಗದಿತ ಪತ್ರದಲ್ಲಿ ನೀಡಬಹುದಾಗಿದೆ. ಸಾರ್ವಜನಿಕರು ಈ ಅವಕಾಶ ಸದುಪಯೋಗಪಡಿಸಿಕೊಳ್ಳಲು ಕೋರಿದೆ. ಹೆಚ್ಚಿನ ವಿವರಗಳಿಗೆ ಮಡಿಕೇರಿ ಲೋಕಾಯುಕ್ತ ಪೊಲೀಸ್ ಕಚೇರಿ, ಗೌಳಿಬೀದಿ, ಮಡಿಕೇರಿ ದೂ.ಸಂ.08272-295297 ನ್ನು ಸಂಪರ್ಕಿಸಬಹುದು ಎಂದು ಕರ್ನಾಟಕ ಲೋಕಾಯುಕ್ತ ಪೊಲೀಸ್ ಉಪಾಧೀಕ್ಷಕರು ತಿಳಿಸಿದ್ದಾರೆ.
ಸಮುದ್ರದ ಸುಳಿಗೆ ಸಿಲುಕಿದ ಪ್ರವಾಸಿಗನ ರಕ್ಷಣೆ
ಗೋಕರ್ಣ: ಸಮುದ್ರದ ಸುಳಿಗೆ ಸಿಲುಕಿ ಜೀವಾಪಾಯದಲ್ಲಿದ್ದ ಪ್ರವಾಸಿಗನನ್ನು ಸ್ಥಳೀಯ ಮೀನುಗಾರರು ರಕ್ಷಿಸಿದ ಘಟನೆ ದುಬ್ಬನಸಶಿ ಕಡಲ ತೀರದ ಬಳಿ ಭಾನುವಾರ ಸಂಜೆ ನಡೆದಿದೆ.
ಬೆಂಗಳೂರಿನಿಂದ ಒಟ್ಟು ನಾಲ್ಕು ಜನ ಪ್ರವಾಸಿಗರು ಇಲ್ಲಿಗೆ ಬಂದಿದ್ದು, ಸಮುದ್ರದಲ್ಲಿ ಈಜಾಡಲು ತೆರಳಿದ ವೇಳೆ ಓರ್ವ ಸುಳಿಗೆ ಸಿಲುಕಿ ಅಪಾಯದಲ್ಲಿದ್ದ. ಇದನ್ನು ಗಮನಿಸಿದ ಸ್ಥಳೀಯ ಮೀನುಗಾರರಾದ ಸಂತೋಷ್ ಚೋಡನಕರ್, ರತೀಶ್ ಪೆಡ್ನೇಕರ್ ತಕ್ಷಣ ಧಾವಿಸಿ ರಕ್ಷಿಸಿದ್ದು, ನಂತರ ಖಾಸಗಿ ಆ್ಯಂಬುಲೆನ್ಸ್ ಮುಖಾಂತರ ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ರವಾನಿಸಿ ಪ್ರಥಮ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗೆ ಅಂಕೋಲಾ ತಾಲೂಕು ಆಸ್ಪತ್ರೆಗೆ ಕಳುಹಿಸಿಕೊಡಲಾಗಿದೆ. ಅನಿಲ ಎಂಬವವರು ಜೀವಾಪಾಯದಿಂದ ಪಾರಾಗಿ ಬಂದವರಾಗಿದ್ದಾರೆ. ಪೊಲೀಸರು ಸ್ಥಳಕ್ಕೆ ಆಗಮಿಸಿ ಮಾಹಿತಿ ಪಡೆದು ಸಹಕಾರ ನೀಡಿದ್ದಾರೆ.