ಶಾಲಾ ಕಾಲೇಜು ವಿದ್ಯಾರ್ಥಿಗಳು, ಬೆಂಗಳೂರು ಕೆಲಸಕ್ಕೆ ತೆರಳುವ ನೌಕರರು, ಪ್ರಯಾಣಿಕರು ಬಸ್ ನಿಲ್ದಾಣದ ಪೆಟ್ರೋಲ್ ಬಂಕ್ ಮುಂಭಾಗ ಧರಣಿ
ಕನಕಪುರ(ಆ.03): ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಸ್ವಕ್ಷೇತ್ರ ಕನಕಪುರದಲ್ಲಿ ಸಾರಿಗೆ ಬಸ್ ಗಳ ಸಮರ್ಪಕ ನಿರ್ವಹಣೆ ಇಲ್ಲದೆ ನಿತ್ಯ ಸಾರ್ವಜನಿಕರು, ಪ್ರಯಾಣಿಕರು ಪರದಾಡುವಂತಾಗಿದೆ ಎಂದು ಆರೋಪಿಸಿ ನಗರದ ಸಾರಿಗೆ ಸಬ್ ನಿಲ್ದಾಣದ ಎದುರು ವಿದ್ಯಾರ್ಥಿಗಳು ಹಾಗೂ ಪ್ರಯಾಣಿಕರು ಪ್ರತಿಭಟನೆ ನಡೆಸಿದರು.
ಬುಧವಾರ ಬೆಳಿಗ್ಗೆ ಶಾಲಾ ಕಾಲೇಜಿಗೆ ತೆರಳುವ ವಿದ್ಯಾರ್ಥಿಗಳು, ದಿನನಿತ್ಯ ಬೆಂಗಳೂರು ಕೆಲಸಕ್ಕೆ ತೆರಳುವ ನೌಕರರು, ಹಾಗೂ ಪ್ರಯಾಣಿಕರು ಬಸ್ ನಿಲ್ದಾಣದ ಪೆಟ್ರೋಲ್ ಬಂಕ್ ಮುಂಭಾಗ ಧರಣಿ ಕುಳಿತರು. ಇದರಿಂದ ವಾಹನ ಸಂಚಾರ ಅಸ್ತವ್ಯಸ್ಥಗೊಂಡಿತು. ಒಂದು ಗಂಟೆಗೂ ಹೆಚ್ಚು ಕಾಲ ಪ್ರತಿಭಟನೆ ನಡೆಸಿದ್ದರಿಂದ ಪ್ರಯಾಣಿಕರಿಗೆ ತೀವ್ರ ಪರದಾಡುವಂತಾಯಿತು.
ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇನಲ್ಲಿ ನಿಷೇಧದ ಮೊದಲ ದಿನವೇ 137 ಕೇಸ್, 68,500 ರು.ದಂಡ ವಸೂಲಿ
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಸ್ವಕ್ಷೇತ್ರದಲ್ಲಿಯೇ ಬಸ್ಸುಗಳು ಇಲ್ಲದೆ, ಕಳೆದ 8-10 ವರ್ಷಗಳಿಂದ ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ಜನ ಪರದಾಡುತ್ತಿದ್ದರೂ, ಹೇಳುವವರು, ಕೇಳುವವರು ಇಲ್ಲದಂತಾಗಿದೆ. ಇಲ್ಲಿನ ಸಾರಿಗೆ ಅವ್ಯವಸ್ಥೆ ಅಸಮರ್ಪಕ ಕೆಲಸ ನಿರ್ವಹಣೆ ಹಾಗೂ ಸಾರಿಗೆ ಬಸ್ ನಿಲ್ದಾಣದಲ್ಲಿನ ಮೂಲ ಸೌಲಭ್ಯಗಳ ಬಗ್ಗೆ ಹತ್ತಾರು ಬಾರಿ ಪ್ರತಿಭಟನೆ, ಧರಣಿ ನಡೆಸಿ ಅಧಿಕಾರಿಗಳ ಗಮನಕ್ಕೆ ತಂದಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಕೆಆರ್‌ಎಸ್ ಪಕ್ಷದ ತಾಲೂಕು ಅಧ್ಯಕ್ಷ ಹೊಸದುರ್ಗ ಪ್ರಶಾಂತ್ ಮಾತನಾಡಿ, ಪ್ರಭಾವಿ ಮುಖಂಡರಿದ್ದರೂ ಸಮಸ್ಯೆ ಮಾತ್ರ ಬೆಟ್ಟದಷ್ಟಿದೆ. ನಾವೂ ಇಲ್ಲಿನ ಅವ್ಯವಸ್ಥೆ ಸರಿಪಡಿಸಲು ಒತ್ತಾಯಿಸಿ ಆಮರಣಾಂತರ ಉಪವಾಸ ಸತ್ಯಗ್ರಹ ಹೋರಾಟ ನಡೆಸಿದರು ಪ್ರಯೋಜನವಾಗಿಲ್ಲ ಎಂದು ಕಿಡಿಕಾರಿದ ಅವರು, ಸಾರಿಗೆ ಬಸ್ ನಿಲ್ದಾಣದಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ಇದೆ. ಪ್ರಯಾಣಿಕರ ಸಂಖ್ಯೆ ಹೆಚ್ಚಳದ ಜೊತೆಗೆ ಶಕ್ತಿ ಯೋಜನೆಯಿಂದ ಮತ್ತಷ್ಟುಅಧಿಕ ಮಹಿಳಾ ಪ್ರಯಾಣಿಕರು ಬರತೊಡಗಿದ್ದಾರೆ. ಕಳೆದ 8 ವರ್ಷಗಳಿಂದ ಇರುವ ಸಮಸ್ಯೆ ಇಂದಿಗೂ ಬಗೆಹರಿದಿಲ್ಲ.
ಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್ ವೇನಲ್ಲಿ ಮೊದಲ ಫೈನ್ ಕಟ್ಟಿದ ಬೈಕ್ ಸವಾರ ಇವರೇ..?
ಸಾರಿಗೆ ಸಂಸ್ಥೆ ಕನಕಪುರ ಘಟಕದಲ್ಲಿ ಕೆಟ್ಟು ಎಲ್ಲೆಂದರಲ್ಲಿ ನಿಲ್ಲುವ ಸ್ಕ್ರಾಪ್ ಬಸ್ಸುಗಳಿವೆ. ಅಲ್ಲದೆ, ಬಸ್ಸು, ಸಿಬ್ಬಂದಿ, ಅಧಿಕಾರಿಗಳ ಕೊರತೆಯಿಂದ ಯಾವುದೇ ಕೆಲಸ ಕಾರ್ಯಗಳು ಆಗುತ್ತಿಲ್ಲ. ಕೂಡಲೇ ಸರ್ಕಾರ ಉತ್ತಮ ಗುಣಮಟ್ಟದ ಸಾರಿಗೆ ಬಸ್ಸುಗಳನ್ನು ಒದಗಿಸಬೇಕು. ಅಧಿಕಾರಿ ಮತ್ತು ಸಿಬ್ಬಂದಿಗಳ ಕೊರತೆ ನೀಗಿಸಬೇಕು. ಇಲ್ಲಿರುವ ಸ್ಕ್ರಾಪ್ ಬಸ್ಸುಗಳನ್ನು ಗುಜರಿಗೆ ಕಳುಹಿಸಿ ಉತ್ತಮ ಸಂಚಾರ ಸರ್ಕಾರ ಮಾಡಿಕೊಡದಿದ್ದರೆ ಮುಂದೆ ಸಾರ್ವಜನಿಕರ ಶಾಪಕ್ಕೆ ಗುರಿಯಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.
ಪ್ರತಿಭಟನಾ ಸ್ಥಳಕ್ಕೆ ಜಿಲ್ಲಾ ಸಾರಿಗೆ ವಿಭಾಗಾಧಿಕಾರಿ ಪುರುಷೋತ್ತಮ, ಎಟಿಸಿ ಶುಭಾ, ಸಬ್ ಇನ್ಸ್‌ಪೆಕ್ಟರ್ ಉಷಾನಂದಿನಿ ಪ್ರತಿಭಟನಾಕಾರರನ್ನು ಸಮಾಧಾನಪಡಿಸಿ ಆಗಸ್ಟ್ 3 ಗುರುವಾರದಿಂದಲೇ ಬಸ್ ಸಂಚಾರದಲ್ಲಿ ಯಾವುದೇ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ ತರುವಾಯ ಪ್ರತಿಭಟನಾಕಾರರು ಧರಣಿ ಹಿಂಪಡೆದರು.