ಎಕ್ಸ್‌ಪ್ರೆಸ್ ಹೈವೇಯ ಮೂಲಕ ಸಂಚರಿಸುವ ನಿಗಮದ ಕರ್ನಾಟಕ ಸಾರಿಗೆ ಬಸ್ಸುಗಳಲ್ಲಿ ಪ್ರಯಾಣಿಸುವ ತಲಾ ಪ್ರಯಾಣಿಕರಿಂದ 15 ರು., ರಾಜಹಂಸ ಬಸ್ಸುಗಳಲ್ಲಿ 18 ರು. ಹಾಗೂ ಮಲ್ಟಿಆಕ್ಸಲ್ ಸೇರಿದಂತೆ ಇತರೆ ಬಸ್ಸುಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರಿಂದ 20 ರು. ಬಳಕೆದಾರ ಶುಲ್ಕವನ್ನಾಗಿ ವಸೂಲು ಮಾಡುವುದು ಅನಿವಾರ್ಯವಾಗಿದೆ.
ಬೆಂಗಳೂರು(ಮಾ.15): ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ಹೈವೇಯಲ್ಲಿ ಟೋಲ್ ಸಂಗ್ರಹಕ್ಕೆ ಭಾರೀ ವಿರೋಧ ವ್ಯಕ್ತವಾಗುತ್ತಿರುವ ಬೆನ್ನಲ್ಲೇ ಪ್ರಯಾಣಿಕರಿಂದ 15ರಿಂದ 20 ರು.ಗಳಷ್ಟು ಬಳಕೆದಾರರ ಶುಲ್ಕ ಸಂಗ್ರಹಿಸುವ ನಿರ್ಧಾರವನ್ನು ಕೆಎಸ್‌ಆರ್‌ಟಿಸಿ ಕೈಗೊಂಡಿದೆ.
ಮಂಗಳವಾರದಿಂದಲೇ (ಮಾರ್ಚ್ 14) ಬೆಂಗಳೂರು- ಮೈಸೂರು ಎಕ್ಸ್‌ಪ್ರೆಸ್ ಹೈವೇಯಲ್ಲಿ ಟೋಲ್ ಸಂಗ್ರಹ ಆರಂಭಿಸಲಾಗಿದೆ. ಹೀಗಾಗಿ ಸದರಿ ವೆಚ್ಚವನ್ನು ಸರಿದೂಗಿಸಲು ಈ ಎಕ್ಸ್‌ಪ್ರೆಸ್ ಹೈವೇಯ ಮೂಲಕ ಸಂಚರಿಸುವ ನಿಗಮದ ಕರ್ನಾಟಕ ಸಾರಿಗೆ ಬಸ್ಸುಗಳಲ್ಲಿ ಪ್ರಯಾಣಿಸುವ ತಲಾ ಪ್ರಯಾಣಿಕರಿಂದ 15 ರು., ರಾಜಹಂಸ ಬಸ್ಸುಗಳಲ್ಲಿ 18 ರು. ಹಾಗೂ ಮಲ್ಟಿಆಕ್ಸಲ್ ಸೇರಿದಂತೆ ಇತರೆ ಬಸ್ಸುಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರಿಂದ 20 ರು.ಗಳನ್ನು ಬಳಕೆದಾರ ಶುಲ್ಕವನ್ನಾಗಿ ವಸೂಲು ಮಾಡುವುದು ಅನಿವಾರ್ಯವಾಗಿದೆ. ಈ ಬಳಕೆದಾರ ಶುಲ್ಕವು ಸಂಪೂರ್ಣವಾಗಿ ಎಕ್ಸ್‌ಪ್ರೆಸ್ ಹೈವೇ ಮೂಲಕ ಸಂಚರಿಸುವ ಬಸ್ಸುಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಮಾತ್ರ ಅನ್ವಯವಾಗುತ್ತದೆ. ಇನ್ನುಳಿದ ಸಾರಿಗೆಗಳಿಗೆ ಇದು ಅನ್ವಯಿಸುವುದಿಲ್ಲ. ಎಲ್ಲಾ ಟೋಲ್ ರಸ್ತೆಗಳಲ್ಲಿ ಈ ಪದ್ಧತಿಯನ್ನು ಅನುಸರಿಸಲಾಗುತ್ತಿದೆ ಎಂದು ಕೆಎಸ್‌ಆರ್‌ಟಿಸಿ ತಿಳಿಸಿದೆ.
ವಿರೋಧದ ಮಧ್ಯೆ ಬೆಂಗಳೂರು-ಮೈಸೂರು ಹೆದ್ದಾರಿ ಟೋಲ್ ಸಂಗ್ರಹ: ಕನ್ನಡಪರ ಸಂಘಟನೆಗಳಿಂದ ಪ್ರತಿಭಟನೆ
ಬೆಂಗಳೂರಿನಿಂದ ಮೈಸೂರು ಕಡೆಗೆ ಹೋಗುವ ವಾಹನಗಳಿಗೆ ಬೆಂಗಳೂರು ದಕ್ಷಿಣ ತಾಲೂಕಿನ ಕಣಮಿಣಿಕೆ ಬಳಿ ಹಾಗೂ ಮೈಸೂರಿನಿಂದ ಬೆಂಗಳೂರಿಗೆ ಬರುವ ವಾಹನಗಳಿಗೆ ರಾಮನಗರ ತಾಲೂಕಿನ ಶೇಷಗಿರಿಹಳ್ಳಿ ಪ್ಲಾಜಾ ಬಳಿ ಟೋಲ್ ಸಂಗ್ರಹಿಸಲಾಗುತ್ತಿದೆ. ಆದರೆ, ವಾಹನಗಳಿಂದ ಟೋಲ್ ಹೆಸರಿನಲ್ಲಿ ಲೂಟಿ ಮಾಡಲಾಗುತ್ತಿದ್ದು ಎಂದು ಆರೋಪಿಸಿರುವ ವಿವಿಧ ಸಂಘಟನೆಗಳು ಟೋಲ್ ಸಂಗ್ರಹಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿವೆ.