ತಮ್ಮ ಸಮುದಾಯದಿಂದ ಸಾಕಷ್ಟು ಕೊಡುಗೆ ಇದ್ದು ಈ ನಿಟ್ಟಿನಲ್ಲಿ ಉಪ ಮುಖ್ಯಮಂತ್ರಿ ಸ್ಥಾನ ನೀಡುವಂತೆ ಆಗ್ರಹಿಸಲಾಗಿದೆ.
ದಾವಣಗೆರೆ [ಡಿ.22]: ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುವಲ್ಲಿ ಮಹತ್ವದ ಪಾತ್ರ ವಹಿಸಿದ 42 ಕ್ಷತ್ರಿಯ ಸಮುದಾಯಗಳಿಗೆ ರಾಜಕೀಯ ಸ್ಥಾನಮಾನ ಕಲ್ಪಿಸುವ ಜೊತೆಗೆ ಸಮುದಾಯಕ್ಕೆ ಉಪ ಮುಖ್ಯಮಂತ್ರಿ ಸ್ಥಾನ ನೀಡುವಂತೆ ಕರ್ನಾಟಕ ಕ್ಷತ್ರಿಯ ಒಕ್ಕೂಟದ ಅಧ್ಯಕ್ಷ, ಹೈಕೋರ್ಟ್ ವಕೀಲ ಉದಯ ಸಿಂಗ್ ಮುಖ್ಯಮಂತ್ರಿಯನ್ನು ಒತ್ತಾಯಿಸಿದ್ದಾರೆ.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ, ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಪ್ರಮುಖ ಪಾತ್ರ ವಹಿಸಿದ 42 ಕ್ಷತ್ರಿ ಸಮುದಾಯಗಳಿಗೆ ಮಾನ್ಯತೆ ನೀಡುವ ಜೊತೆಗೆ ಕ್ಷತ್ರಿಯ ಸಮುದಾಯಕ್ಕೆ ಉಪ ಮುಖ್ಯಮಂತ್ರಿ ಸ್ಥಾನ ನೀಡಬೇಕು ಎಂದರು.
undefined
ಕ್ಷತ್ರಿಯ ಸಮುದಾಯದವರು ಬಿಜೆಪಿಯಲ್ಲಿ ಹೆಚ್ಚಾಗಿ ಗುರುತಿಸಿಕೊಂಡಿದ್ದು, ಪಕ್ಷದ ಎಲ್ಲಾ ಕಾರ್ಯಕ್ರಮದಲ್ಲಿಯೂ ಸೈನಿಕರಂತೆ ಭಾಗಿಯಾಗುತ್ತಲೇ ಇದ್ದಾರೆ. ರಾಜ್ಯದಲ್ಲೂ ಬಿಜೆಪಿ ಅಧಿಕಾರಕ್ಕೆ ಬರುವಲ್ಲಿ ಕ್ಷತ್ರಿಯ ಸಮುದಾಯದ ಕೊಡುಗೆ ದೊಡ್ಡದಿದೆ ಎಂದು ಅವರು ತಿಳಿಸಿದರು.
ಸಮ್ಮಿಶ್ರ ಸರ್ಕಾರ ಪತನಗೊಂಡು ಬಿಜೆಪಿ ಅಧಿಕಾರಕ್ಕೆ ಬರುವಲ್ಲಿ ಮೊದಲ ಹೆಜ್ಜೆ ಇಟ್ಟವರೇ ಕ್ಷತ್ರಿಯರು. ಈ ಹಿನ್ನೆಲೆಯಲ್ಲಿ ಉಪ ಮುಖ್ಯಮಂತ್ರಿ ಹುದ್ದೆಯನ್ನು ಕ್ಷತ್ರಿಯ ಸಮು ದಾಯಕ್ಕೆ ನೀಡಬೇಕು. ದಾವಣಗೆರೆಯ ನಮ್ಮ ಸಮುದಾಯದ ಹಿರಿಯ ಮುಖಂಡ ಯಶವಂತರಾವ್ ಜಾಧವ್ ವಿಧಾನ ಪರಿಷತ್‌ಗೆ ನೇಮಿಸಿ, ಮಂತ್ರಿಯಾಗಿ ಮಾಡಬೇಕು ಎಂದು ಅವರು ಆಗ್ರಹಿಸಿದರು.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಕಳೆದ ಎರಡೂವರೆ ದಶಕದಿಂದಲೂ ದಾವಣಗೆರೆ ನಗರ, ಜಿಲ್ಲೆಯಲ್ಲಿ ಪಕ್ಷವನ್ನು ಸಂಘಟಿಸುವಲ್ಲಿ ಯಶವಂತರಾವ್ ಜಾಧವ್ ಕೊಡುಗೆ ನೀಡಿದ್ದಾರೆ. ಪಕ್ಷ ಸಂಘಟನೆಯಲ್ಲೂ ಸದಾ ಮುಂಚೂಣಿಯಲ್ಲಿರುವ ಯಶವಂತರಾವ್‌ಗೆ ವಿಪ ಸದಸ್ಯರಾಗಿ ಮಾಡಿ, ಸಚಿವ ಸ್ಥಾನ ನೀಡಬೇಕು. ನಿಗಮ ಮಂಡಳಿಗಳ ನೇಮಕಾತಿಯಲ್ಲಿ ಕ್ಷತ್ರಿಯ ಸಮುದಾಯಕ್ಕೆ ಪ್ರಾಶಸ್ತ್ಯ ನೀಡಬೇಕು ಎಂದು ಅವರು ಒತ್ತಾಯಿಸಿದರು.
ಕಳೆದ 4 ವಿಧಾನಸಭೆ ಚುನಾವಣೆಗಳಲ್ಲಿ ಅಲ್ಪಮತಗಳ ಅಂತರದಲ್ಲಿ ಪ್ರಬಲ ಅಭ್ಯರ್ಥಿ ವಿರುದ್ಧ ಸೋಲನುಭವಿಸಿರುವ ಯಶವಂತರಾವ್ ಮಧ್ಯ ಕರ್ನಾಟಕದಲ್ಲಿ ಪಕ್ಷವನ್ನು ಬೇರು ಮಟ್ಟದಿಂದ ಸಂಘಟಿಸಿದವರು. ಇಲ್ಲಿ 5 ಸಲ ಬಿಜೆಪಿ ಸಂಸದರ ಆಯ್ಕೆ, ಆರು ಜನ ಬಿಜೆಪಿ ಶಾಸಕರ ಆಯ್ಕೆಯಾಗುವಲ್ಲಿ, ಜಿಪಂ, ತಾಪಂ, ಪಾಲಿಕೆ ಸೇರಿದಂತೆ ಸ್ಥಳೀಯ ಸಂಸ್ಥೆಗಳಲ್ಲಿ ಬಿಜೆಪಿ ಅಧಿಕಾರ ಹಿಡಿಯುವಲ್ಲಿ ಕ್ಷತ್ರಿಯರ ಕೊಡುಗೆ ದೊಡ್ಡದು ಎಂದು ಅವರು ತಿಳಿಸಿದರು.
ಈವರೆಗೂ 42 ಕ್ಷತ್ರಿಯ ಸಮುದಾಯಗಳನ್ನೂ ಊಟದ ಜೊತೆಗೆ ಉಪ್ಪಿನ ಕಾಯಿಯಂತೆ ರಾಜಕಾರಣದಲ್ಲಿ ಬಳಸಿಕೊಂಡು ಬರಲಾಗುತ್ತಿತ್ತು. ಇದೀಗ ಕರ್ನಾಟಕ ಕ್ಷತ್ರಿಯ ಒಕ್ಕೂಟವು ಈ ಎಲ್ಲಾ ಕ್ಷತ್ರಿಯ ಸಮುದಾಯಗಳ ಧ್ವನಿಯಾಗಿ ನಿಂತಿದ್ದು, ನಮ್ಮ ಸಮುದಾಯಕ್ಕೆ ಸಿಗಬೇಕಾದ ಸ್ಥಾನಮಾನ, ಅವಕಾಶಕ್ಕಾಗಿ ಧ್ವನಿ ಎತ್ತುವ ಜೊತೆಗೆ ಬಹಿರಂಗ ಹೋರಾಟವನ್ನೂ ನಡೆಸುತ್ತೇವೆ ಎಂದು ಅವರು ಎಚ್ಚರಿಸಿದರು.
ಯಾದವ ಮಹಾಸಭಾದ ಅಧ್ಯಕ್ಷ ಬಾಡದ ಆನಂದರಾಜ, ಕಲಾಲ್ ಸಮಾಜದ ಮಹಾಂತೇಶ ಕಲಾಲ್, ಬಣಜಾರ ಸಮುದಾಯದ ಹಾಲೇಕಲ್ಲು ಚಂದ್ರನಾಯ್ಕ, ಭಾವಸಾರ ಕ್ಷತ್ರಿಯ ಸಮಾಜದ ರಮೇಶ ತೇಲ್ಕರ್, ಗೋಂದಳಿ ಸಮಾಜದ ನರಸಿಂಗ ರಾವ್ ಗೋಂದಳಿ, ಮರಾಠ ಕ್ಷತ್ರಿಯ ಸಮಾಜದ ಪರಶುರಾಮ, ತಿಲಕ್, ಬಾಬು ಗೋಸಾಯಿ ಇತರರು ಇದ್ದರು.