
ಬೆಂಗಳೂರು(ಸೆ:21) ವಿಧಾನಸಭೆಯ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರು ಅಂಬೇಡ್ಕರ್ ಬಿಟ್ಟರೆ ತಾವೇ ಎಂದು ತಿಳಿದುಕೊಂಡಿದ್ದಾರೆ. ಮಾಜಿ ಸಿಎಂ ಸಿದ್ದರಾಮಯ್ಯ ಅಂತೂ ತಾವೇ ಎರಡನೇ ದೇವರಾಜ ಅರಸು ಎಂದು ಭಾವಿಸಿಕೊಂಡಿದ್ದಾರೆ. ಹೀಗಾಗಿ ರಾಜೀನಾಮೆ ನೀಡಿದ ಶಾಸಕರನ್ನು ಅನರ್ಹಗೊಳಿಸಿದ್ದಾರೆ ಎಂದು ಸಚಿವ ಕೆ.ಎಸ್. ಈಶ್ವರಪ್ಪ ವ್ಯಂಗ್ಯವಾಗಿ ಹೇಳಿದ್ದಾರೆ.
'ಭವಿಷ್ಯ ನಿಜವಾದರೆ ಆಗಲಿ, ಬಿಜೆಪಿ ಯಾವತ್ತೂ ಚುನಾವಣೆಗೆ ಸಿದ್ಧ'
ಶುಕ್ರವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಮೇಶ್ ಕುಮಾರ್ ಹಾಗೂ ಸಿದ್ದರಾಮಯ್ಯ ಅವರು ನಿಯಮಗಳನ್ನು ಪಾಲನೆ ಮಾಡಿಲ್ಲ. ಇಬ್ಬರೂ ಆದರ್ಶ ವ್ಯಕ್ತಿಗಳಂತೆ ಸಮಾಜದ ಎದುರು ಬಿಂಬಿಸಿಕೊಂಡರು. ರಮೇಶ್ ಕುಮಾರ್ ಅಂಬೇಡ್ಕರ್ ಬಿಟ್ಟರೆ ತಾವೇ ಎಂಬಂತೆ ಕಾನೂನಿನ ಪಾಠ ಹೇಳಲು ಯತ್ನಿಸಿದರು. ಸಿದ್ದರಾಮಯ್ಯ ಸಾಮಾಜಿಕ ನ್ಯಾಯದ ಹರಿಕಾರ ದೇವರಾಜ ಅರಸು ಅವರೊಂದಿಗೆ ಹೋಲಿಸಿಕೊಂಡು ಎರಡನೇ ಅರಸು ಎಂದು ಭಾವಿಸಿಕೊಂಡಿದ್ದಾರೆ. ಇವರಿಬ್ಬರು ಪರಸ್ಪರರನ್ನು ಹೊಗಳಿಕೊಂಡು ಸುಪ್ರೀಂಕೋರ್ಟ್ ನಿರ್ದೇಶನಕ್ಕೆ ವ್ಯತಿರಿಕ್ತವಾಗಿ ನಡೆದುಕೊಂಡರು. ಇವರು ಏನೇ ಮಾಡಿದರೂ 17 ಅನರ್ಹ ಶಾಸಕರಿಗೆ ಸುಪ್ರೀಂ ಕೋರ್ಟ್‌ನಲ್ಲಿ ನ್ಯಾಯ ದೊರೆಯಲಿದೆ. ಅನ್ಯಾಯಕ್ಕೆ ಎಂದೂ ಜಯ ಸಿಗುವುದಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕೋಮು ಗಲಭೆಗೆ ಪ್ರಚೋದನೆ ನೀಡಿರುವ ಸಚಿವ ಈಶ್ವರಪ್ಪ ವಿರುದ್ಧ ಕ್ರಮಕ್ಕೆ ಆಗ್ರಹ
ವಿಧಾನಸಭೆ ಸ್ಪೀಕರ್ ಆಗಿದ್ದ ರಮೇಶ್ ಕುಮಾರ್ ಸುಪ್ರೀಂಕೋರ್ಟ್ ನಿರ್ದೇಶನವನ್ನೇ ತಿರುಚಿ ಶಾಸಕರನ್ನು ಅನರ್ಹಗೊಳಿಸಿದರು. ಈಗ ಸುಪ್ರೀಂಕೋರ್ಟ್ ರಮೇಶ್ ಕುಮಾರ್ ಮಾಡಿದ್ದ ಅನ್ಯಾಯ ಸರಿಪಡಿಸುವ ವಿಶ್ವಾಸವಿದೆ. ಸಮ್ಮಿಶ್ರ ಸರ್ಕಾರದ ಆಡಳಿತದಿಂದ ಬೇಸತ್ತು ರಾಜೀನಾಮೆ ನೀಡಿದ್ದ ಶಾಸಕರಿಗೆ ನ್ಯಾಯ ದೊರೆಯಲಿದೆ ಎಂದು ತಿಳಿಸಿದರು.
ಬಳ್ಳಾರಿ ಜಿಲ್ಲೆ ವಿಭಜನೆಗೆ ಸ್ವಾಗತ
ಬಳ್ಳಾರಿ ಜಿಲ್ಲೆಯನ್ನು ವಿಭಜಿಸಿ ಹೊಸಪೇಟೆ(ವಿಜಯನಗರ)ಯನ್ನು ಪ್ರತ್ಯೇಕ ಜಿಲ್ಲೆಯಾಗಿ ರಚಿಸುವ ರಾಜ್ಯ ಸರ್ಕಾರದ ಕ್ರಮ ಸ್ವಾಗತಾರ್ಹ. ಹಿಂದೆ ಬಿಜೆಪಿ ಸರ್ಕಾರ ಇದ್ದಾಗ ಬಳ್ಳಾರಿ ಜಿಲ್ಲೆ ಸಾಕಷ್ಟು ಅಭಿವೃದ್ಧಿ ಹೊಂದಿತ್ತು. ಬಳಿಕ ಬಂದ ಸರ್ಕಾರಗಳು ಬಳ್ಳಾರಿ ಜಿಲ್ಲೆ ಬಗ್ಗೆ ನಿರ್ಲಕ್ಷ್ಯ ವಹಿಸಿದ ಪರಿಣಾಮ ಯಾವ ರೀತಿಯಲ್ಲೂ ಅಭಿವೃದ್ಧಿಯಾಗಿಲ್ಲ. ಹೀಗಾಗಿ ಪ್ರಸ್ತುತ ಅಭಿವೃದ್ಧಿಯ ದೃಷ್ಟಿಯಿಂದ ಜಿಲ್ಲೆಯ ವಿಭಜನೆ ಒಳ್ಳೆಯದು ಎಂದರು.