
ಮಂಡ್ಯ (ಆ.18): ಕಬಿನಿ ಜಲಾಶಯದಿಂದ ತಮಿಳುನಾಡಿಗೆ ನೀರು ಹರಿಸಲಾಗುತ್ತಿದೆ ಎಂಬ ವಿವಾದದ ಬೆನ್ನಲ್ಲೇ, ಇದೀಗ ಕಾವೇರಿ ಕೊಳ್ಳದ ಜೀವನಾಡಿ ಕೃಷ್ಣರಾಜ ಸಾಗರ (KRS) ಡ್ಯಾಂನಿಂದಲೂ ತಮಿಳುನಾಡಿಗೆ ಕದ್ದುಮುಚ್ಚಿ ನೀರು ಹರಿಸಲಾಗುತ್ತಿದೆಯೇ ಎಂಬ ಬಲವಾದ ಶಂಕೆ ವ್ಯಕ್ತವಾಗಿದೆ. ಜಲಾಶಯಕ್ಕೆ ಬರುತ್ತಿರುವ ಒಳಹರಿವು ಭಾರಿ ಪ್ರಮಾಣದಲ್ಲಿ ಕುಸಿದಿದ್ದರೂ, ಹೊರಹರಿವನ್ನು ದುಪ್ಪಟ್ಟು ಮಾಡಿರುವುದು ಮಂಡ್ಯದ ರೈತರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ಸರ್ಕಾರ ಮತ್ತು ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಕುಡಿಯುವ ನೀರು ಹಾಗೂ ನಾಲೆಗಳ ನೆಪ ಹೇಳಿ, ತಮಿಳುನಾಡಿಗೆ ಗುಟ್ಟಾಗಿ ನೀರು ಹರಿಸುತ್ತಿದ್ದಾರೆ ಎಂದು ರೈತ ಸಂಘಟನೆಗಳು ಗಂಭೀರವಾಗಿ ಆರೋಪಿಸಿವೆ.
ಕೆಆರ್‌ಎಸ್ ಜಲಾಶಯಕ್ಕೆ ಪ್ರಸ್ತುತ ಹರಿದು ಬರುತ್ತಿರುವ ನೀರಿನ ಪ್ರಮಾಣ ಕೇವಲ 1,961 ಕ್ಯೂಸೆಕ್. ಆದರೆ, ಡ್ಯಾಂನಿಂದ ಹೊರಬಿಡುತ್ತಿರುವ ನೀರಿನ ಪ್ರಮಾಣ ಬರೋಬ್ಬರಿ 4,917 ಕ್ಯೂಸೆಕ್ ಆಗಿದೆ. ಕಳೆದ ಕೆಲವು ದಿನಗಳ ಹಿಂದೆ ನಾಲೆಗಳಿಗೆ ಹಾಗೂ ಬೆಂಗಳೂರಿನ ಕುಡಿಯುವ ನೀರಿನ ಉದ್ದೇಶಕ್ಕೆ ಕೇವಲ 2,000 ದಿಂದ 2,500 ಕ್ಯೂಸೆಕ್ ನೀರನ್ನು ಮಾತ್ರ ಹರಿಸಲಾಗುತ್ತಿತ್ತು. ಆದರೆ, ಕಳೆದ ಆಗಸ್ಟ್ 15 ರಿಂದಲೇ ಯಾವುದೇ ಅಧಿಕೃತ ಮುನ್ಸೂಚನೆ ನೀಡದೆ ಹೊರಹರಿವನ್ನು ಏಕಾಏಕಿ 4,917 ಕ್ಯೂಸೆಕ್‌ಗೆ ಹೆಚ್ಚಿಸಲಾಗಿದೆ. ಜಲಾಶಯಕ್ಕೆ ಬರುವ ನೀರಿಗಿಂತ ಹೊರಹೋಗುವ ನೀರಿನ ಪ್ರಮಾಣವೇ ಹೆಚ್ಚಾಗಿರುವುದರಿಂದ ಡ್ಯಾಂ ನೀರಿನ ಮಟ್ಟ ದಿನೇ ದಿನೇ ಕುಸಿಯುತ್ತಿದೆ.
'ನಮ್ಮ ಭಾಗದ ರೈತರ ಕೃಷಿ ಬೆಳೆಗಳಿಗೆ ನೀರಿಲ್ಲದೆ ಪರದಾಡುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಆದರೆ ಅಧಿಕಾರಿಗಳು ಸ್ಥಳೀಯ ನಾಲೆಗಳಿಗೆ ನೀರು ಹರಿಸುತ್ತಿದ್ದೇವೆ ಎಂದು ಸುಳ್ಳು ಲೆಕ್ಕ ನೀಡಿ, ತಮಿಳುನಾಡಿನ ಮೆಟ್ಟೂರು ಜಲಾಶಯಕ್ಕೆ ನೀರು ತಲುಪುವಂತೆ ಮಾಡುತ್ತಿದ್ದಾರೆ' ಎಂದು ಸ್ಥಳೀಯ ರೈತರು ಕಿಡಿಕಾರಿದ್ದಾರೆ. ರಾಜ್ಯದಲ್ಲಿ ಮಳೆ ಪ್ರಮಾಣ ಕಡಿಮೆಯಾಗುತ್ತಿರುವ ಈ ಸಂದರ್ಭದಲ್ಲಿ ಡ್ಯಾಂನಲ್ಲಿರುವ ನೀರನ್ನು ಸಂರಕ್ಷಿಸದೆ, ನೆರೆ ರಾಜ್ಯಕ್ಕೆ ನೀರು ಬಿಡುತ್ತಿರುವುದನ್ನು ಕೂಡಲೇ ನಿಲ್ಲಿಸಬೇಕು; ಇಲ್ಲವಾದರೆ ಕಾವೇರಿ ಕೊಳ್ಳದಾದ್ಯಂತ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ರೈತ ಮುಖಂಡರು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.