ಮಹಾರಾಷ್ಟ್ರ ನೀರು ಕೊಡ್ತಿಲ್ಲ ಎಂದ ಜತ್‌ಗೆ ಕರ್ನಾಟಕದಿಂದ ಜಲ..!

By Kannadaprabha NewsFirst Published Dec 3, 2022, 12:30 PM IST
Highlights

ಮಾನವೀಯ ದೃಷ್ಟಿಯಿಂದ ಕರ್ನಾಟಕ ಸರ್ಕಾರವು ಕೃಷ್ಣಾ ನದಿಯ ತುಬಚಿ ಏತ ನೀರಾವರಿ ಯೋಜನೆ ಮೂಲಕ ಮಹಾರಾಷ್ಟ್ರದ ಜತ್‌ ತಾಲೂಕಿನ 28 ಗ್ರಾಮಗಳಿಗೆ ನೀರು ಹರಿಸಿದೆ. ಸಂತಸಗೊಂಡ ಮಹಾರಾಷ್ಟ್ರ ಗಡಿ ಜನ. 

ಅಥಣಿ(ಡಿ.03):  ಮಹಾರಾಷ್ಟ್ರ ಸರ್ಕಾರ ನೀರು ನೀಡದೆ ಕಡೆಗಣಿಸಿದೆ. ನಮ್ಮನ್ನು ಕರ್ನಾಟಕ್ಕೆ ಸೇರಿಸಿಕೊಳ್ಳಿ ಎಂದಿದ್ದ ಮಹಾರಾಷ್ಟ್ರದ ಜತ್‌ ತಾಲೂಕಿನ ಜನರಿಗೆ ಇದೀಗ ಕರ್ನಾಟಕ ನೀರು ನೀಡಿದೆ. ಮಾನವೀಯ ದೃಷ್ಟಿಯಿಂದ ಕರ್ನಾಟಕ ಸರ್ಕಾರವು ಕೃಷ್ಣಾ ನದಿಯ ತುಬಚಿ ಏತ ನೀರಾವರಿ ಯೋಜನೆ ಮೂಲಕ ಮಹಾರಾಷ್ಟ್ರದ ಜತ್‌ ತಾಲೂಕಿನ 28 ಗ್ರಾಮಗಳಿಗೆ ನೀರು ಹರಿಸಿದೆ. 

ಪ್ರಸ್ತುತ ಈ ನೀರು ಈಗ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನೊಂದಿಗೆ ಗಡಿ ಹಂಚಿಕೊಂಡಿರುವ ಮಹಾರಾಷ್ಟ್ರದ ಸಂಖ ಗ್ರಾಮವನ್ನು ದಾಟಿ ಮುಂದೆ ಹೋಗುತ್ತಿದೆ. ಜತ್‌ ತಾಲೂಕಿನ ಹಲವಾರು ಗ್ರಾಮಗಳಲ್ಲಿರುವ ಕೆರೆಗಳಿಗೆ ಈ ನೀರು ಹೋಗಲಿದೆ. ಈ ಮೂಲಕ ಅಲ್ಲಿನ ಜನರಿಗೆ, ದನಕರುಗಳಿಗೆ ಕುಡಿಯಲು ಅನುಕೂಲವಾಗಲಿದೆ.

ಬೆಳಗಾವಿಗೆ ಮಹಾರಾಷ್ಟ್ರ ಸಚಿವರು ಬರಬೇಡಿ: ಸಿಎಂ ಬೊಮ್ಮಾಯಿ

ಜತ್ತ ತಾಲೂಕಿನ ಸಂಕ ಮತ್ತು ತಿಕ್ಕುಂಡಿ ಗ್ರಾಮಕ್ಕೆ ತುಬಚಿ-ಬಬಲೇಶ್ವರ ಏತ ನೀರಾವರಿ ಯೋಜನೆಯಿಂದ ಕಳೆದ ಎರಡು ದಿನಗಳಿಂದ ನೀರು ಬಿಟ್ಟಿರುವುದು ಜತ್‌ ತಾಲೂಕಿನಲ್ಲಿರುವ ಜನರಿಗೆ ಬಹಳಷ್ಟು ಅನುಕೂಲವಾಗಿದೆ.

ಸಿಂಧೂರ ಗ್ರಾಮ ಕೂಡ ಕರ್ನಾಟಕಕ್ಕೆ:

ಇನ್ನು ಜತ್ತ ತಾಲೂಕಿನ ಸಿಂಧೂರು ಗ್ರಾಮದಲ್ಲಿ 1ರಿಂದ 7ನೇ ತರಗತಿವರೆಗೂ ಒಂದೇ ಕನ್ನಡ ಶಾಲೆ ಇದೆ. ಅಲ್ಲಿಯ ಮಕ್ಕಳು ಕರ್ನಾಟಕದ ಅಥಣಿ ತಾಲೂಕಿನ ಕೊಟ್ಟಲಗಿ ಗ್ರಾಮಕ್ಕೆ ಕಲಿಯಲು ಹೋಗುತ್ತಿದ್ದಾರೆ. ಹಾಗಾಗಿ ಅತೀ ಶೀಘ್ರದಲ್ಲಿ ಕರ್ನಾಟಕ ಸೇರುವ ಬಗ್ಗೆ ಗ್ರಾಪಂನಲ್ಲಿ ಠರಾವು ಬರೆಯಲಾಗುವುದು ಎಂದು ಸಿಂಧೂರು ಜನರು ತಿಳಿಸಿದ್ದಾರೆ.
 

click me!