Latest Videos

ಕೃಷ್ಣಾ ನದಿಯಲ್ಲಿ ತೆಪ್ಪ ಮುಗುಚಿ 6 ಮಂದಿ ದಾರುಣ ಸಾವು!

By Sathish Kumar KHFirst Published Jul 2, 2024, 8:21 PM IST
Highlights

ಕೃಷ್ಣಾ ನದಿ ತೀರದಲ್ಲಿ ಇಸ್ಪೀಟ್ ಆಡ್ತಿದ್ದವರು ಪೊಲೀಸರಿಗೆ ಹೆದರಿ ತೆಪ್ಪದಲ್ಲಿ ತೆರಳಿದರು;  ಆದರೆ ತೆಪ್ಪ ಮುಗುಚಿ 6 ಜನ ಸತ್ತೇ ಹೋಗಿದ್ದಾರೆ.
 

ವಿಜಯಪುರ (ಜು.02): ಕೃಷ್ಣಾ ನದಿ ತೀರದಲ್ಲಿ ಇಸ್ಪೀಟ್ ಜೂಜಾಟವಾಡುತ್ತಾ ಕುಳಿತ್ತಿದ್ದ 8 ಜನರ ಗ್ಯಾಂಗ್ ಪೊಲೀಸರು ಬರುತ್ತಿದ್ದ ಸುಳಿವು ಸಿಕ್ಕಿ, ತೆಪ್ಪದಲ್ಲಿ ನದಿ ದಾಟಲು ಮುಂದಾಗಿದ್ದಾರೆ. ಆದರೆ, ನದಿಯಲ್ಲಿ ಹೋಗುವಾಗ ಜೋರಾದ ಗಾಳಿ ಬೀಸಿದ್ದರಿಂದ ತೆಪ್ಪ ಮುಗುಚಿ ಬಿದ್ದಿದೆ. ಇಬ್ಬರು ಈಜಿ ದಡ ಸೇರಿದರೆ ಉಳಿದ 6 ಜನರು ಸಾವನ್ನಪ್ಪಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಈ ಪೈಕಿ ಇಬ್ಬರ ಮೃತದೇಹ ಪತ್ತೆಯಾಗಿವೆ.

ಹೌದು, ಸಾವು ಎನ್ನುವುದು ಯಾವ ರೂಪದಲ್ಲಿ ಹೇಗೆ ಬರುತ್ತದೆ ಎಂಬುದೇ ಗೊತ್ತಾಗುವುದಿಲ್ಲ. ಮೋಜಿಗಾಗಿ ನದಿ ತೀರದಲ್ಲಿ ಕುಳಿತು 8 ಜನರ ಗುಂಪು ಇಸ್ಪೀಟ್ ಜೂಜಾಟ ಆಡುತ್ತಿದೆ. ಪ್ರತಿನಿತ್ಯ ಇಸ್ಪೀಟ್ ಆಡುತ್ತಾ ಸಮಯ ಕಳೆಯುವ ಜೊತೆಗೆ ಜೂಜಾಟದಿಂದ ದುಡಿಯದೇ ಮನೆಯವರಿಗೂ ಹೊರೆ ಆಗಿದ್ದರು. ಇವರಿಗೆ ಬುದ್ಧಿ ಕಲಿಸುವುದಕ್ಕೆ ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿ, ಒಮ್ಮೆ ಇಸ್ಪೀಟ್ ಅಡ್ಡೆ ಮೇಲೆ ದಾಳು ಮಾಡುವಂತೆ ಮನವಿ ಮಾಡಿದ್ದಾರೆ. ಗ್ರಾಮಸ್ಥರ ಮನವಿ ಮೇರೆಗೆ ಇಸ್ಪೀಟ್ ಅಡ್ಡೆ ಮೇಲೆ ದಾಳಿ ಮಾಡಲು ಪೊಲೀಸರು ಗ್ರಾಮಕ್ಕೆ ಬಂದಿದ್ದಾರೆ.

ಹೈಸ್ಕೂಲ್ ಹುಡುಗಿ ಗರ್ಭಿಣಿ ಮಾಡಿದ ಯುವಕ, ಕಾಲೇಜಿಗೆ ಹೋಗಿ ಜನ್ಮ ಕೊಟ್ಟ ಬಾಲಕಿ

ಇಸ್ಪೀಟ್ ಆಡುತ್ತಿದ್ದವರಿಗೆ ಗ್ರಾಮದಲ್ಲಿದ್ದ ಒಬ್ಬ ಸ್ನೇಹಿತ ಕರೆ ಮಾಡಿ ಪೊಲೀಸರು ದಾಳಿ ಮಾಡಲು ಬಂದಿದ್ದು, ನೀವು ತಪ್ಪಿಸಿಕೊಳ್ಳಿ ಎಂದು ಮಾಹಿತಿ ನೀಡಿದ್ದಾನೆ. ಇದರಿಂದ ಪೊಲೀಸರು ಬರುವ ಸುಳಿವು ಸಿಗುತ್ತಿದ್ದಂತೆಯೇ 8 ಜನರೂ ಒಂದೇ ತೆಪ್ಪದಲ್ಲಿ ನದಿಯನ್ನು ದಾಟಿ ನಡುಗಡ್ಡೆಯ ಕಡೆಗೆ ಹೋಗಲು ಮುಂದಾಗಿದ್ದಾರೆ. ಆದರೆ, ನದಿಯ ನಡುಭಾಗಕ್ಕೆ ಹೋಗುತ್ತಿದ್ದಂತೆ ಗಾಳಿ ಹೆಚ್ಚಾಗಿದ್ದರಿಂದ ತೆಪ್ಪ ವಾಲಿಕೊಂಡು ಮಗುಚಿ ಬಿದ್ದಿದೆ. ಇದರಿಂದ ಎಲ್ಲರೂ ನೀರಿನಲ್ಲಿ ಬಿದ್ದಿದ್ದಾರೆ. ಅದರಲ್ಲಿ ಇಬ್ಬರು ಈಜಿಕೊಂಡು ದಡ ಸೇರಿದ್ದಾರೆ. ಆದರೆ ಉಳಿದ ಆರು ಜನರು ಈಜಿಕೊಂಡು ಬರಲಾಗದೇ ಸಾವನ್ನಪ್ಪಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. 

ಈ ಘಟನೆ ವಿಜಯಪುರ ಜಿಲ್ಲೆ ಕೊಲ್ಹಾರ ತಾಲೂಕಿನ ಬಳೂತಿ ಜಾಕವೆಲ್ ಬಳಿಯ ಕೃಷ್ಣಾ ನದಿಯಲ್ಲಿ ಮಂಗಳವಾರ ಮಧ್ಯಾಹ್ನ ನಡೆದಿದೆ. ಅಡ್ಡೆ ಮೆಲೆ ದಾಳಿ ಮಾಡಲು ಬಂದಿದ್ದ ಪೊಲೀಸರು ತೆಪ್ಪ ಮುಗುಚಿದ ದುರ್ಘಟನೆ ಬಗ್ಗೆ ಮಾಹಿತಿ ಪಡೆದು ಅಗ್ನಿಶಾಮಕ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಸ್ಥಳದಲ್ಲಿ ಕೊಲ್ಹಾರ ಪೊಲೀಸರು, ಅಗ್ನಿಶಾಮಕ ದಳ ಸಿಬ್ಬಂದಿ ಠಿಕಾಣಿ ಹೂಡಿದ್ದು, ಮೃತ ಶವಗಳಿಗಾಗಿ ಪತ್ತೆ ಕಾರ್ಯ ಆರಂಭಿಸಿದ್ದಾರೆ. ತೆಪ್ಪದಲ್ಲಿ ತೆರಳಿದ 6 ಜನರ ಪೈಕಿ ಇಬ್ಬರ ಮೃತದೇಹ ಪತ್ತೆಯಾಗಿದೆ. ಇದರಲ್ಲಿ ಪುಂಡಲಿಕ ಎಂಕಂಚಿ ( 34 ) ಮೃತ ವ್ಯಕ್ತಿ ಎಂದು ಗುರುತಿಸಲಾಗಿದೆ.

ಸ್ನೇಹಿತನ ಮದುವೆಗೆ ರಾಮಮಂದಿರ ಹಾಡು ಹಾಕಿದ್ದಕ್ಕೆ ಅನ್ಯಕೋಮಿನ ಗುಂಪಿನಿಂದ ಯುವಕನ ಮೇಲೆ ಹಲ್ಲೆ?

ಇನ್ನು ದುರ್ಘಟನೆಯ ಬೆನ್ನಲ್ಲಿಯೇ ವಿಜಯಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ  ಸೋನೆವಣೆ, ಎಎಸ್ಪಿ ಶಂಕರ ಮಾರಿಹಾರ  ಆಗಮಿಸಿದ್ದಾರೆ. ಇತರರ ಮೃತದೇಹಗಳ ಪತ್ತೆಗೆ ಶೋಧ ಕಾರ್ಯ ಮುಂದುವರೆಸಿದ್ದಾರೆ. ಈಗ ರಾತ್ರಿಯಾಗಿದ್ದು, ಈವರೆಗೂ ಅಗ್ನಿಶಾಮಕ ಸಿಬ್ಬಂದಿ ಶೋಧ ಕಾರ್ಯ ಮುಂದುವರೆಸಿದ್ದಾರೆ. ಇನ್ನು ತಡರಾತ್ರಿಯೂ ಲೈಟ್ ಹಾಕಿ ಕಾರ್ಯಾಚರಣೆ ಮಾಡುತ್ತಾರಾ ಅಥವಾ ಸ್ಥಗಿತಗೊಳಿಸಿ ಬೆಳಗ್ಗೆ ಕಾರ್ಯಾಚರಣೆ ಮುಂದುವರೆಸುತ್ತಾರಾ ಎಂಬ ಬಗ್ಗೆ ಪೊಲೀಸರು ಮಾಹಿತಿ ನೀಡಿಲ್ಲ.

click me!